ಯೋಜನೆ ಮಂಜೂರು ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ; ಗ್ರಾಮ ಪಂಚಾಯತ್ ಕಚೇರಿಗೆ ಬೆಂಕಿ ಹಚ್ಚಿಯೇ ಬಿಟ್ಟ ಭೂಪ
ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯ ಮಂಗ್ರೋಲ್ ಗ್ರಾಮ ಪಂಚಾಯತ್ ಕಚೇರಿಯಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದಾನೆ. ಸ್ಥಳೀಯ ನಿವಾಸಿ ಗೋಪಾಲ್ ಪೆಟ್ರೋಲ್ ಸುರಿದು ಪಂಚಾಯತ್ ಕಚೇರಿಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ತಮ್ಮನ್ನು ಪಂಚಾಯತ್ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಗೋಪಾಲ್ ಈ ಕೃತ್ಯ ಎಸಗಿದ್ದಾನೆ. ಪ್ರಕರಣ ತಬಿಖೆ ನಡೆಯುತ್ತಿದೆ.
ಗ್ರಾಮ ಪಂಚಾಯತ್ ಕಚೇರಿಗೆ ಬೆಂಕಿ ಹಚ್ಚಿದ ಗೋಪಾಲ್ -
ಭೋಪಾಲ್, ಡಿ. 26: ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯ ಮಂಗ್ರೋಲ್ ಗ್ರಾಮ ಪಂಚಾಯತ್ ಕಚೇರಿಯಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದು, ಘಟನೆಯ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ಥಳೀಯ ನಿವಾಸಿ ಗೋಪಾಲ್ ಪೆಟ್ರೋಲ್ ಸುರಿದು ಪಂಚಾಯತ್ ಕಚೇರಿಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ತಮ್ಮನ್ನು ಪಂಚಾಯತ್ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಗೋಪಾಲ್ ಈ ಕೃತ್ಯ ಎಸಗಿದ್ದಾನೆ. ಸದ್ಯ ಅತನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೋಪಾಲ್ ಪಂಚಾಯತ್ ಕಟ್ಟಡಕ್ಕೆ ಪೆಟ್ರೋಲ್ ಸುರಿದು ಬೆಂಕಿ ಕಡ್ಡಿ ಗೀರುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಅಗ್ನಿ ಜ್ವಾಲೆ ಒಮ್ಮಲೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಸ್ಥಳಕ್ಕೆ ಧಾವಿಸಿದ ಸಾಲಖೇಡಿ ಪೊಲೀಸ್ ಠಾಣೆಯ ಸಿಬ್ಬಂದಿ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕಾರಣವೇನು?
ಸದ್ಯ ಪೊಲೀಸರ ವಶದಲ್ಲಿರುವ ಗೋಪಾಲ್ ತನ್ನ ಕೃತ್ಯಕ್ಕೆ ಏನು ಕಾರಣ ಎನ್ನುವುದನ್ನು ವಿವರಿಸಿದ್ದಾನೆ. ಗ್ರಾಮ ಪಂಚಾಯತ್ ಆಡಳಿತ ತನ್ನ ಯಾವ ಬೇಡಿಕೆಯನ್ನೂ ಈಡೇರಿಸದೆ ನಿರಂತರವಾಗಿ ನಿರ್ಲಕ್ಷ್ಯ ತೋರಿದ್ದರಿಂದಲೇ ಅಧಿಕಾರಿಗಳ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ʼʼಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಸೇರಿದಂತೆ ಹಲವು ಸರ್ಕಾರದ ಯೋಜನೆಗಳನ್ನು ತಮಗೆ ಮಂಜೂರು ಮಾಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೆ. ಆದರೆ ಇದನ್ನು ಯಾರೂ ಗಣನೆಗೆ ತೆಗೆದುಕೊಂಡಿಲ್ಲ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ನನ್ನ ಅಪ್ರಾಪ್ತ ಪುತ್ರ ದಿನಗೂಲಿ ಮಾಡಬೇಕಾಗಿದೆʼʼ ಎಂದು ಹೇಳಿದ್ದಾನೆ.
ಎನ್‌ಡಿಟಿವಿಯ ಎಕ್ಸ್ ಪೋಸ್ಟ್:
Video: Man Sets Panchayat Office Ablaze, Accuses Officials Of Neglect https://t.co/fp5hKCsEg3 pic.twitter.com/DA11GaCSeg
— NDTV (@ndtv) December 26, 2025
ಅಧಿಕಾರಿಗಳು ತಮ್ಮನ್ನು ನಿರ್ಲಕ್ಷಿಸಿದ್ದರಿಂದ ಈ ಕ್ರಮ ಕೈಗೊಂಡಿದ್ದಾಗಿ ತನ್ನ ಕೃತ್ಯವನ್ನು ಸಮರ್ತಿಸಿಕೊಂಡಿದ್ದಾನೆ. ಈ ವೇಳೆ ತಾನು ಮದ್ಯ ಸೇವಿಸಿದ್ದಾಗಿ ಹೇಳಿದ್ದಾನೆ. ಸದ್ಯ ಪೊಲೀಸರು ಘಟನೆಯನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ತನಿಖಾ ಅಧಿಕಾರಿ ಜೆ.ಸಿ. ಯಾದವ್ ಮಾತನಾಡಿ, ʼʼಗೋಪಾಲ್‌ನ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆʼʼ ಎಂದು ತಿಳಿಸಿದ್ದಾರೆ. ʼʼಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ವಿವರವಾಗಿ ಪರಿಶೀಲಿಸುತ್ತಿದ್ದೇವೆʼʼ ಎಂದಿದ್ದಾರೆ.
ವೀಸಾ ಸಂದರ್ಶನಕ್ಕಾಗಿ ದಾಖಲೆ ಮರೆತ ಮಹಿಳೆಗೆ ನೆರವಾದ ಬ್ಲಿಂಕ್‌ಇಟ್
ಆರೋಪಿಯ ಹೇಳಿಕೆಗಳನ್ನು ಪರಿಶೀಲಿಸಲು ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪಗಳಾಗಿವೆಯೇ ಎಂದು ನಿರ್ಣಯಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಆವಾಸ್ ಯೋಜನೆ?
ದೇಶದ ಬಡ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ 2016ರ ಏಪ್ರಿಲ್ 1ರಂದು ಪರಿಚಯಿಸಿದ್ದೇ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ. ಗ್ರಾಮೀಣ ಪ್ರದೇಶದಲ್ಲಿನ ವಸತಿಹೀನರಿಗೆ ಸೂರು ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಬಯಲು ಪ್ರದೇಶಗಳಲ್ಲಿ1.2 ಲಕ್ಷ ರುಪಾಯಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 1.3 ಲಕ್ಷ ರುಪಾಯಿ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳು ಪಕ್ಕಾ ಮನೆಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ಮೂಲಕ ಎಲ್ಲರಿಗೂ ವಸತಿ ಖಚಿತಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.