Basanagouda Patil Yatnal: ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಮತ್ತೆ ನೋಟಿಸ್
Basanagouda Patil Yatnal: ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗಿನಿಂದ ಯತ್ನಾಳ್ ಟೀಕಿಸುತ್ತಲೇ ಇದ್ದರು. ಬಹಿರಂಗವಾಗಿಯೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಯತ್ನಾಳ್‌ಗೆ ಶಿಸ್ತುಪಾಲನಾ ಸಮಿತಿ ಮೊದಲ ಶೋಕಾಸ್ ನೋಟಿಸ್ ನೀಡಿತ್ತು. ಇದೀಗ ಮತ್ತೊಮ್ಮೆ ನೋಟಿಸ್ ನೀಡಲಾಗಿದೆ.
![ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಮತ್ತೆ ನೋಟಿಸ್](https://cdn-vishwavani-prod.hindverse.com/media/original_images/Yatnal.jpg)
![Profile](https://vishwavani.news/static/img/user.png)
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಸದಾ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸೋಮವಾರ ಮತ್ತೆ ನೋಟಿಸ್ ನೀಡಿದೆ. ಈ ಹಿಂದೆಯೂ ಯತ್ನಾಳ್ ಅವರಿಗೆ ನೋಟಿಸ್ ನೀಡಲಾಗಿತ್ತು. ಅದಕ್ಕೆ ಅವರು ಉತ್ತರವನ್ನೂ ನೀಡಿದ್ದರು. ಆದರೆ ವಿಜಯೇಂದ್ರ ವಿರುದ್ಧ ನಿರಂತವಾಗಿ ಹೇಳಿಕೆ ನೀಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಹೀಗಾಗಿ ಇದೀಗ ಮತ್ತೊಮ್ಮೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ 72 ಗಂಟೆಗಳಲ್ಲೇ ಉತ್ತರಿಸುವಂತೆ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿದ್ದು, ಒಂದು ವೇಳೆ ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗಿನಿಂದ ಯತ್ನಾಳ್ ಟೀಕಿಸುತ್ತಲೇ ಇದ್ದರು. ಬಹಿರಂಗವಾಗಿಯೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಯತ್ನಾಳ್‌ಗೆ ಶಿಸ್ತುಪಾಲನಾ ಸಮಿತಿ ಮೊದಲ ಶೋಕಾಸ್ ನೋಟಿಸ್ ನೀಡಿತ್ತು. ಹೀಗಾಗಿ ಯತ್ನಾಳ್ ಶಿಸ್ತು ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಿದ್ದರು. ಬಳಿಕ ಆ ನೋಟಿಸ್ ಕ್ಯಾರೇ ಎನ್ನದೇ ವಿಜಯೇಂದ್ರ ವಿರುದ್ಧ ಟೀಕಿಸುವುದನ್ನು ಮುಂದುವರಿಸಿದ್ದರು. ಹೀಗಾಗಿ ಈ ಹಿಂದೆ ನೋಟಿಸ್ ನೀಡಿದ್ದರೂ ನಿಮ್ಮ ನಡವಳಿಕೆಯಲ್ಲಿ ಬದಲಾವಣೆಯಾಗಿಲ್ಲ. ಈಗ ಕಳುಹಿಸಿರುವ ನೋಟಿಸ್‌ಗೆ 72 ಗಂಟೆ ಒಳಗೆ ಕಾರಣ ನೀಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಮಿತಿ ಹೇಳಿದೆ.
ಕೇಂದ್ರ ಸಚಿವ ವಿ.ಸೋಮಣ್ಣ ಅವರ ಗೃಹ ಪ್ರವೇಶ ಹಿನ್ನೆಲೆಯಲ್ಲಿ ಎರಡೂ ಬಣದ ನಾಯಕರು ದೆಹಲಿಗೆ ತೆರಳಿದ್ದರು. ಆದರೆ ಗೃಹ ಪ್ರವೇಶ ನೆಪದಲ್ಲಿ ಯತ್ನಾಳ್ ಬಣ ಗೌಪ್ಯ ಸಭೆ ನಡೆಸಿದೆ. ಇನ್ನು ಯತ್ನಾಳ್ ಕಡೆ ತಟಸ್ಥ ಬಣವೂ ಸಹ ತಿರುಗಿದ್ದು, ಎರಡೂ ಬಣಗಳು ಮಹತ್ವದ ಸಭೆ ಮಾಡಿವೆ ಎನ್ನಲಾಗಿದೆ. ಈ ನಡುವೆ ಯತ್ನಾಳ್‌ಗೆ ನೋಟಿಸ್ ನೀಡಲಾಗಿದೆ. ದೆಹಲಿಯಲ್ಲಿದ್ದ ಯತ್ನಾಳ್ ಅವರು ಈಗ ಹೈದರಾಬಾದ್ ನತ್ತ ಪ್ರಯಾಣ ಬೆಳೆಸಿದ್ದು, ಬಿಜೆಪಿ ಶಿಸ್ತು ಸಮಿತಿ ನೀಡಿದ ನೋಟಿಸ್ ಇನ್ನೂ ಅವರ ಕೈಸೇರಿಲ್ಲ ಎಂದು ತಿಳಿದುಬಂದಿದೆ.
ಇನ್ನು ಯತ್ನಾಳ್‌ಗೆ ನೋಟಿಸ್ ನೀಡಿದ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯ ನಿವಾಸದಲ್ಲಿ ಅಮಿತ್ ಶಾ ಅವರನ್ನು ವಿಜಯೇಂದ್ರ ಭೇಟಿಯಾಗಲಿದ್ದಾರೆ.
ಈ ಸುದ್ದಿಯನ್ನೂ ಓದಿ | Muda Case: ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ, ಸಚಿವ ಬೈರತಿ ಸುರೇಶ್‌ಗೆ ತಾತ್ಕಾಲಿಕ ರಿಲೀಫ್; ಇಡಿ ಸಮನ್ಸ್‌ಗೆ ತಡೆ ಮುಂದುವರಿಕೆ
ಸದನದಲ್ಲಿ ರಚನಾತ್ಮಕ ವಿಪಕ್ಷವಾಗಿ ಕಾಂಗ್ರೆಸ್ ವರ್ತಿಸಬೇಕು: ಪ್ರಲ್ಹಾದ್ ಜೋಶಿ
![Pralhad Joshi](https://cdn-vishwavani-prod.hindverse.com/media/images/Pralhad_Joshi_gJVS3Ai.width-800.jpg)
ನವದೆಹಲಿ: ಕಾಂಗ್ರೆಸ್ (Congress Party) ದೆಹಲಿ ಚುನಾವಣೆಯಿಂದಾದರೂ ಪಾಠ ಕಲಿಯಬೇಕು. ಸದನದಲ್ಲಿ ಅನಗತ್ಯ ಗದ್ದಲ ಎಬ್ಬಿಸಿ ಸ್ಥಗಿತಗೊಳಿಸುವುದನ್ನು ನಿಲ್ಲಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಸಂಸತ್ ಆವರಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಸದನದಲ್ಲಿ ಒಂದು ಪಕ್ವ ವಿಪಕ್ಷವಾಗಿ ವರ್ತಿಸಲಿ ಎಂದು ಅವರು ಸಲಹೆ ನೀಡಿದರು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ಶೂನ್ಯ ಸಂಪಾದನೆ ಸಾಧಿಸಿದೆ. ಇದು ಅವರ ಹಿಂಸಾಚಾರ ಪ್ರಚೋದನೆಗೆ ಸಿಕ್ಕ ಪ್ರತ್ಯುತ್ತರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು. ದೆಹಲಿಯಲ್ಲಿ ಹ್ಯಾಟ್ರಿಕ್ ಆಡಳಿತ ನಡೆಸಿದಂತಹ ಕಾಂಗ್ರೆಸ್ ಪಕ್ಷ ಈಗ ಹ್ಯಾಟ್ರಿಕ್ ಆಗಿಯೇ ಶೂನ್ಯ ಸಂಪಾದನೆ ಮಾಡಿದೆ. ಶೇ.45-50 ರಷ್ಟು ಮತ ಪಡೆಯುತ್ತಿದ್ದವರು ಈಗ ಇಂಥ ಹೀನಾಯ ಸ್ಥಿತಿ ತಲುಪಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಕಾಂಗ್ರೆಸ್, ಲೋಕಸಭೆಯಲ್ಲಿ ಮತ್ತು ವಿಧಾನಸಭೆಗಳಲ್ಲಿ ಒಂದು ರಚನಾತ್ಮಕ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕು. ಆಡಳಿತ ಪಕ್ಷದೊಂದಿಗೆ ಒಂದು ಪಕ್ವ ವಿಪಕ್ಷವಾಗಿ ಇರಬೇಕು. ಮುಂದಿನ ದಿನಗಳಲ್ಲಿ ಆದರೂ ಕಾಂಗ್ರೆಸ್ ನಾಯಕರು ಈ ನಿಟ್ಟಿನಲ್ಲಿ ಹೆಜ್ಜೆಯಿಡಲಿ ಎಂದು ಸಚಿವ ಜೋಶಿ ಸಲಹೆ ಮಾಡಿದರು.
ಹಿಂಸಾಚಾರ ಪ್ರಚೋದನೆ, ಸದನದಲ್ಲಿ ಅನಗತ್ಯ ಗದ್ದಲ, ಸುಗಮವಾಗಿ ಸದನ ನಡೆಯಲು ಬಿಡದೇ ಇರುವುದು ಇದೆಲ್ಲವನ್ನೂ ಮತದಾರರು ಗಮನಿಸಿದ್ದಾರೆ. ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಈಗ ಜನರೇ ಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Indian Navy Recruitment 2025: ಭಾರತೀಯ ನೌಕಾಪಡೆಯಲ್ಲಿದೆ 270 ಹುದ್ದೆ; ಹೀಗೆ ಅಪ್ಲೈ ಮಾಡಿ
ಸದನ ಸ್ಥಗಿತಗೊಳಿಸುವುದನ್ನು ನಿಲ್ಲಿಸಲಿ
ಸಂಸತ್ ಅಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಗದ್ದಲ ಎಬ್ಬಿಸಿ ಸದನ ಸ್ಥಗಿತಗೊಳಿಸುವುದನ್ನು ಕಾಂಗ್ರೆಸ್ ಇನ್ನಾದರೂ ನಿಲ್ಲಿಸಲಿ. ಬದಲಿಗೆ ಒಂದು ರಚನಾತ್ಮಕ ವಿಪಕ್ಷವಾಗಿ ಚರ್ಚೆ ನಡೆಸುವತ್ತ ಗಮನ ಹರಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದಾರೆ.