ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಬುಮ್ರಾ
ವೃತ್ತಿಜೀವನ ಅಂತ್ಯದ ಭೀತಿಯಲ್ಲಿರುವ ರೋಹಿತ್ ಶರ್ಮ ಮಂಗಳವಾರ ಮುಂಬೈ ರಣಜಿ ತಂಡದೊಂದಿಗೆ ವಾಂಖೆಡೆಯಲ್ಲಿ ಅಭ್ಯಾಸ ನಡೆಸಿದ್ದರು.
ದುಬೈ: ಆಸ್ಟ್ರೇಲಿಯ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಒಟ್ಟು 32 ವಿಕೆಟ್ ಉಡಾಯಿಸಿದ್ದ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ತಿಂಗಳ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯದ ಅನ್ನಾಬೆಲ್ ಸದರ್ಲೆಂಡ್ ಮಹಿಳಾ ವಿಭಾಗದ ಪ್ರಶಸ್ತಿಗೆ ಪಾತ್ರರಾದರು.
ಡಿಸೆಂಬರ್ ತಿಂಗಳಲ್ಲಿ ಮೂರು ಟೆಸ್ಟ್ ಪಂದ್ಯ ಆಡಿದ್ದ ಬುಮ್ರಾ 22 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಬುಮ್ರಾ ಜತೆ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಡೇನ್ ಪ್ಯಾಟರ್ಸನ್ ರೇಸ್‌ನಲ್ಲಿದ್ದರು. ಇವರನ್ನು ಹಿಂದಿಕ್ಕಿ ಪ್ರಶಸ್ತಿ ಗೆಲ್ಲುವಲ್ಲಿ ಬುಮ್ರಾ ಯಶಸ್ವಿಯಾಗಿದ್ದಾರೆ.
ಅನ್ನಾಬೆಲ್ ಸದರ್ಲೆಂಡ್ ಭಾರತದೆದುರಿನ ಸರಣಿಯಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. 3ನೇ ಏಕದಿನದಲ್ಲಿ ಸೆಂಚುರಿ ಬಾರಿಸಿ ಮಿಂಚಿದ್ದರು (110). ಬಳಿಕ ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲೂ ಅಜೇಯ 105 ರನ್ ಹೊಡೆಯುವ ಮೂಲಕ ಸತತ 2 ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ್ದರು.
ರಣಜಿ ಆಡಲು ಮುಂದಾದ ಹಿರಿಯ ಆಟಗಾರರು
ತವರಿನ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಸರಣಿ ಸೋಲು ಕಂಡಿದ್ದರು. ಸೋಲಿನ ಬಳಿಕ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಇನ್ನು ಮುಂದೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ, ಅಥವಾ ಉಳಿಸಿಕೊಳ್ಳಬೇಕಾದರೆ ಕಡ್ಡಾಯವಾಗಿ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಹೇಳಿದ್ದರು.
ಇತ್ತೀಚೆಗೆ ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಇಲ್ಲಿಯೂ ರಾಷ್ಟ್ರೀಯ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕೆಂದು ನಿರ್ಧಾರ ಕೈಗೊಳ್ಳಲಾಯಿತು. ಇದೀಗ ಜ.23ರಿಂದ ಆರಂಭಗೊಳ್ಳಲಿರುವ ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯಕ್ಕೆ ಪ್ರಕಟಗೊಂಡ ಡೆಲ್ಲಿ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಕೊನೆ ಬಾರಿ ರಣಜಿ ಆಡಿದ್ದು 2012ರಲ್ಲಿ.
ವೃತ್ತಿಜೀವನ ಅಂತ್ಯದ ಭೀತಿಯಲ್ಲಿರುವ ರೋಹಿತ್ ಶರ್ಮ ಮಂಗಳವಾರ ಮುಂಬೈ ರಣಜಿ ತಂಡದೊಂದಿಗೆ ವಾಂಖೆಡೆಯಲ್ಲಿ ಅಭ್ಯಾಸ ನಡೆಸಿದ್ದರು. ಜ.23ರಂದು ಜಮ್ಮು-ಕಾಶ್ಮೀರ ಎದುರು ಮುಂಬೈ ತಂಡ ರಣಜಿ ಪಂದ್ಯ ಆಡಲಿದ್ದು, ರೋಹಿತ್ ಕಣಕ್ಕಿಳಿಯುವ ಸಾಧ್ಯತೆ ಇದೆ.