ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಇಂದು ಸಂಜೆ ಕದನ ವಿರಾಮಕ್ಕೆ(Ceasefire violation) ಒಪ್ಪಿಗೆ ಸೂಚಿಸಿ ಉಭಯ ರಾಷ್ಟ್ರಗಳ ನಡುವಿನ ಯುದ್ಧದ ವಾತಾವರಣಕ್ಕೆ ತಾತ್ಕಾಲಿಕ ಅಂತ್ಯ ಹಾಡಿತ್ತು. ಆದರೆ ತನ್ನ ಚಾಳಿ ಬಿಡದ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುವ ಮೂಲಕ ಕಿತಾಪತಿ ಮಾಡಿದೆ. ಜಮ್ಮು-ಕಾಶ್ಮೀರದ ವಿವಿಧ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿಕ ಪಾಕ್ ಸೇನೆ ಅಪ್ರಚೋದಿತ ದಾಳಿ ನಡೆಸಿದೆ. ಅಖ್ನೂರ್, ರಜೌರಿ ಮತ್ತು ಪೂಂಛ್‌ನಲ್ಲಿ ಈ ದಾಳಿ ನಡೆದಿರುವ ವರದಿಯಾಗಿದೆ. ಎಲ್‌ಒಸಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಜಮ್ಮು-ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್‌ನ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಪಾಕ್ ದಾಳಿ ನಡೆಸಿದೆ.
ಬಾರಾಮುಲ್ಲಾ, ಉಧಂಪುರ ಮತ್ತು ಕಥುವಾಗಳಲ್ಲಿ ಪ್ರಸ್ತುತ ಸಂಪೂರ್ಣ ಕತ್ತಲು ಆವರಿಸಿದೆ. ಶನಿವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಸೇನಾ ಪ್ರಧಾನ ಕಚೇರಿಯ ಬಳಿ ನಾಲ್ಕು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆರುಳಿಸಲಾಗಿದೆ. ಮತ್ತೊಂದೆಡೆ ಪೋಖ್ರಾನ್‌ನಲ್ಲೂ ಎಂಟು ಡ್ರೋನ್‌ಗಳು ಕಾಣಿಸಿಕೊಂಡವು. ಜಮ್ಮು-ಕಾಶ್ಮೀರದಾದ್ಯಂತ ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡ ನಂತರ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಮತ್ತೆ ಬ್ಲ್ಯಾಕ್ ಔಟ್ ಜಾರಿಗೊಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Omar Abdullah: ಪಾಕಿಸ್ತಾನದಿಂದ ಮತ್ತೆ ದಾಳಿ; ಕದನ ವಿರಾಮ ಏನಾಯ್ತು ಎಂದ ಒಮರ್ ಅಬ್ದುಲ್ಲಾ
ಶನಿವಾರ ತಡರಾತ್ರಿ ಕಚ್‌ನ ಸೂಕ್ಷ್ಮ ಪ್ರದೇಶಗಳ ಬಳಿ ಕನಿಷ್ಠ ಒಂಬತ್ತು ಡ್ರೋನ್‌ಗಳು ಕಂಡುಬಂದಿವೆ. ಅಧಿಕಾರಿಗಳ ಪ್ರಕಾರ, ಹರಾಮಿ ನಲಾ-ಜಖೌ ಪ್ರದೇಶದ ಬಳಿ ಆರು ಡ್ರೋನ್‌ಗಳು ಕಂಡುಬಂದಿದ್ದರೆ, ಖಾವ್ಡಾ ಬಳಿ ಇನ್ನೂ ಮೂರು ಪತ್ತೆಯಾಗಿವೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಮುನ್ನೆಚ್ಚರಿಕೆ ಕ್ರಮವಾಗಿ ಕಚ್ ಜಿಲ್ಲೆಯಾದ್ಯಂತ ಸಂಪೂರ್ಣ ಬ್ಲ್ಯಾಕ್ ಔಟ್ ಘೋಷಿಸಿದರು. ಭುಜ್‌ನಲ್ಲಿ ನಿವಾಸಿಗಳನ್ನು ಎಚ್ಚರಿಸಲು ಸೈರನ್‌ಗಳನ್ನು ಮೊಳಗಿಸಲಾಯಿತು ಮತ್ತು ಭದ್ರತಾ ಪಡೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಏತನ್ಮಧ್ಯೆ, ಗಂಡರ್‌ಬಾಲ್‌ನಲ್ಲಿಯೂ ಹಲವಾರು ಡ್ರೋನ್‌ಗಳು ಕಂಡುಬಂದಿವೆ.