Omar Abdullah: ಪಾಕಿಸ್ತಾನದಿಂದ ಮತ್ತೆ ದಾಳಿ; ಕದನ ವಿರಾಮ ಏನಾಯ್ತು ಎಂದ ಒಮರ್ ಅಬ್ದುಲ್ಲಾ
India-Pak ceasefire: ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳ ಅಂತರದಲ್ಲಿ ಅದನ್ನು ಉಲ್ಲಂಘಿಸುವ ಮೂಲಕ ಪಾಕಿಸ್ತಾನ ತಾನು ಎಂದಿಗೂ ಬದಲಾಗುವುದಿಲ್ಲ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿದೆ. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದಾಳಿಯಿಂದ ಶಾಕ್‌ಗೆ ಒಳಗಾಗಿದ್ದಾರೆ.

ಒಮರ್ ಅಬ್ಲುಲ್ಲಾ

ಶ್ರೀನಿಗರ: ಕದನ ವಿರಾಮ ಜಾರಿಗೆ (India-Pak ceasefire) ಬಂದ ಕೆಲವೇ ಗಂಟೆಗಳ ಅಂತರದಲ್ಲಿ ಅದನ್ನು ಉಲ್ಲಂಘಿಸುವ ಮೂಲಕ ಪಾಕಿಸ್ತಾನ ತಾನು ಎಂದಿಗೂ ಬದಲಾಗುವುದಿಲ್ಲ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿದೆ. ಹೌದು, ಮೇ 10ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದು ಮೇ 10ರ ಸಂಜೆ 5 ಗಂಟೆಯಿಂದಲೇ ಜಾರಿಗೆ ಬರುವುದಾಗಿಯೂ ಎರಡೂ ದೇಶಗಳು ತಿಳಿಸಿದ್ದವು. ಆದರೆ ಕತ್ತಲಾಗುತ್ತಿದ್ದಂತೆ ತನ್ನ ನೈಜ ಬಣ್ಣವನ್ನು ಬಯಲು ಮಾಡಿದ ಮಾಕಿಸ್ತಾನ ಭಾರತದತ್ತ ಮತ್ತೆ ದಾಳಿ ಅರಂಭಿಸಿದೆ. ಜಮ್ಮು ಕಾಶ್ಮೀರ ಗುರಿಯಾಗಿಸಿಕೊಂಡು ಡ್ರೋನ್, ಶೆಲ್ ದಾಳಿ ನಡೆಸಿದೆ. ಆ ಮೂಲಕ ಪಾಕ್ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದೆ. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಈ ದಾಳಿಯಿಂದ ಶಾಕ್‌ಗೆ ಒಳಗಾಗಿದ್ದಾರೆ.
ಪಾಕ್‌ನ ಕದನ ವಿರಾಮ ಉಲ್ಲಂಘನೆಯನ್ನು ಒಮರ್ ಅಬ್ದುಲ್ಲಾ ತಮ್ಮ ಎಕ್ಸ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ʼʼಕದನ ವಿರಾಮ ಏನಾಯ್ತು? ಶ್ರೀನಗರದಾದ್ಯಂತ ಸ್ಫೋಟದ ಸದ್ದು ಕೇಳಿಸಿದೆʼʼ ಎಂದು ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಪಾಕ್‌ನ ದಾಳಿ ಹಿನ್ನೆಲೆಯಲ್ಲಿ ಗಡಿ ಭಾಗದ ಹಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮತ್ತೆ ಬ್ಲ್ಯಾಕ್‌ಔಟ್ ಜಾರಿಗೊಳಿಸಲಾಗಿದೆ.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಎಕ್ಸ್ ಪೋಸ್ಟ್:
What the hell just happened to the ceasefire? Explosions heard across Srinagar!!!
— Omar Abdullah (@OmarAbdullah) May 10, 2025
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಜಾರಿಗೆ ಬಂದ ಕೆಲವೇ ಗಂಟೆಗಳ ಅಂತರದಲ್ಲಿ ಪಾಕ್ ಕನಡೆಯಿಂದ ಉಲ್ಲಂಘನೆ ನಡೆದಿದೆ. ಆ ಮೂಲಕ ಹಲವರ ಆತಂಕ ನಿಜವಾಗಿದೆ.
ಸ್ಫೋಟದ ಸದ್ದು ಕೇಳಿದ ಬೆನ್ನಲ್ಲೇ ಶ್ರೀನಗರದಲ್ಲಿ ಸೈರನ್ ಮೊಳಗಿದೆ. ಉತ್ತರ ಕಾಶ್ಮೀರದ ಬಾರಮುಲ್ಲಾ ಮತ್ತು ಮಧ್ಯ ಕಾಶ್ಮೀರದ ಬುದ್‌ಗಾಮ್‌ನಲ್ಲೂ ಇದೇ ರೀತಿಯ ಶಬ್ದ ಕೇಳಿಸಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಭಾರತೀಯ ಸೇನೆ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಈ ದಾಳಿಯ ಹಿಂದೆ ಪಾಕ್ ಸೇನೆ ಇದೆಯೇ ಅಥವಾ ಉಗ್ರರ ಕೈವಾಡವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಜಮ್ಮು ಕಾಶ್ಮೀರದ ಜತೆಗೆ ಗಡಿ ರಾಜ್ಯಗಳಾದ ಪಂಜಾಬ್, ರಾಜಸ್ಥಾನ, ಗುಜರಾತ್‌ನಲ್ಲಿಯೂ ಪಾಕಿಸ್ತಾನದಿಂದ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ. ಸೇನೆಗೆ ಕೇಂದ್ರ ಸಂಪೂರ್ಣ ಅಧಿಕಾರ ನೀಡಿರುವುದರಿಂದ ಪಾಕ್ ಮೇಲೆ ಪ್ರತಿದಾಳಿ ನಡೆಯುವುದು ನಿಶ್ಚಿತ ಎಂದು ಮೂಲಗಳು ಸ್ಪಷ್ಟಪಡಿಸಿವೆ.