ನವದೆಹಲಿ: ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಮ್ ಅವರನ್ನು ಅವರ ಅಭಿಮಾನಿಗಳು 'ಕಿಂಗ್' ಎಂದು ಕರೆಯುತ್ತಾರೆ. ಆದರೆ ಕೆಟ್ಟ ಫಾರ್ಮ್‌ನಲ್ಲಿದ್ದಾಗ ಕೆಲವು ಮಾಜಿ ಕ್ರಿಕೆಟಿಗರು ಅವರನ್ನು ಕೆಣಕಲು ಇದನ್ನು ಬಳಸಿಕೊಂಡಿದ್ದರು. 2023ರ ಆಗಸ್ಟ್‌ನಲ್ಲಿ ನೇಪಾಳ ವಿರುದ್ಧ 151 ರನ್ ಗಳಿಸಿದ ನಂತರ ಅವರು ಅಂತರರಾಷ್ಟ್ರೀಯ ಶತಕ ಸಿಡಿಸಲು ಸಾಧ್ಯವಾಗಿಲ್ಲ. ಇದೀಗ ಪಾಕಿಸ್ತಾನ ತಂಡ ತ್ರಿಕೋನ ಸರಣಿಯಲ್ಲಿ ಫೈನಲ್ ತಲುಪಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ನಂತರ, ಬಾಬರ್ ಆಝಮ್ ತನ್ನನ್ನು ʻಕಿಂಗ್ʼ ಎಂದು ಕರೆಯಬೇಡಿ ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಸರಣಿಯಲ್ಲಿ ಬಾಬರ್ ಆಝಮ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದಾರೆ. ಅವರು ಚಾಂಪಿಯನ್ಸ್ ಟ್ರೋಫಿಯಲ್ಲೂ ಅದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅವರು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ ಆದರೆ ಸ್ಯಾಮ್ ಆಯೂಬ್ ಗಾಯದಿಂದಾಗಿ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಬಾಬರ್ ಆಝಮ್ ಇನಿಂಗ್ಸ್ ಆರಂಭಿಸುತ್ತಿದ್ದಾರೆ.
Champions Trophy: ʻಭಾರತ ತಂಡಕ್ಕಿಂತ ಪಾಕಿಸ್ತಾನ ಬಲಿಷ್ಠವಾಗಿದೆʼ-ಮೊಹಮ್ಮದ್ ಆಮಿರ್!
ನನ್ನನ್ನು ಕಿಂಗ್ ಎಂದು ಕರೆಯಬೇಡಿ: ಬಾಬರ್ ಆಝಮ್
ಮಾಧ್ಯಮಗಳ ಜೊತೆ ಮಾತನಾಡಿದ ಬಾಬರ್ ಅಝಮ್, "ನನ್ನನ್ನು ಕಿಂಗ್ ಎಂದು ಕರೆಯುವುದನ್ನು ದಯವಿಟ್ಟು ನಿಲ್ಲಿಸಿ. ನಾನು ಕಿಂಗ್ ಅಲ್ಲವೇ ಅಲ್ಲ, ನಾನು ಆ ಸ್ಥಾನದಲ್ಲಿಲ್ಲ. ಇದೀಗ ನಾನು ಹೊಸ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನಾನು ಈ ಹಿಂದೆ ಏನು ಮಾಡಿದ್ದೇನೆ, ಅದೆಲ್ಲವೂ ಇದೀಗ ಮುಗಿದು ಹೋದ ಕಥೆ. ಪ್ರತಿಯೊಂದು ಪಂದ್ಯವು ಹೊಸ-ಹೊಸ ಸವಾಲನ್ನು ನೀಡುತ್ತದೆ. ನಾನು ಕಡ್ಡಾಯವಾಗಿ ವರ್ತಮಾನ ಮತ್ತು ಭವಿಷ್ಯದ ಕಡೆಗೆ ನಾನು ಗಮನ ನೀಡುತ್ತೇನೆ," ಎಂದು ತಿಳಿಸಿದ್ದಾರೆ.
ತ್ರಿಕೋನ ಸರಣಿಯಲ್ಲಿ ಬಾಬರ್ ಆಝಮ್ ವೈಫಲ್ಯ
ಪ್ರಸ್ತುತ ನಡೆಯುತ್ತಿರುವ ಏಕದಿನ ತ್ರಿಕೋನ ಸರಣಿಯಲ್ಲಿ ಬಾಬರ್ ಆಝಮ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಅವರು ನ್ಯೂಜಿಲೆಂಡ್ ವಿರುದ್ಧ 10 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ಸುಲಭವಾಗಿ ಗೆದ್ದಿತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ನಾಯಕ ಮೊಹಮ್ಮದ್ ರಿಝ್ವಾನ್ ಮತ್ತು ಆಲ್‌ರೌಂಡರ್ ಸಲ್ಮಾನ್ ಅಗಾ ಅವರ ಶತಕಗಳ ನೆರವಿನಿಂದ ಪಾಕಿಸ್ತಾನ ತಂಡ 353 ರನ್‌ಗಳ ಗುರಿಯನ್ನು ತಲುಪಿ ಆರು ವಿಕೆಟ್‌ಗಳಿಂದ ಗೆಲುವು ಪಡೆದಿತ್ತು.
PAK vs NZ: ನ್ಯೂಜಿಲೆಂಡ್ ಎದುರು ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲು!
ತಂಡದ ಪ್ರದರ್ಶನದ ಬಗ್ಗೆ ಆಝಮ್ ಸಂತಸ
"ನನ್ನ ಹಿಂದಿನ ಪ್ರದರ್ಶನ ಎಲ್ಲವೂ ಭೂತಕಾಲದ ವಿಷಯ. ನನ್ನ ಹಿಂದಿನ ಪ್ರದರ್ಶನದಲ್ಲೇ ನಾನು ಸಿಲುಕಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ನನಗೆ ಸಾಧ್ಯವಾಗುವುದಿಲ್ಲ. ಪ್ರತಿದಿನವೂ ಹೊಸ ಸವಾಲು ಮತ್ತು ನಾವು ಹೊಸ ಯೋಜನೆಯನ್ನು ರೂಪಿಸಬೇಕು. ಇಂದಿನಂತೆ ದೊಡ್ಡ ಗುರಿಯನ್ನು ಯಶಸ್ವಿಯಾಗಿ ಸಾಧಿಸುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ದುರದೃಷ್ಟವಶಾತ್ ನಾನು ಇನಿಂಗ್ಸ್ ಅನ್ನು ಮುಗಿಸಲು ಸಾಧ್ಯವಾಗಲಿಲ್ಲ. ಆದರೆ ರಿಝ್ವಾನ್ ಮತ್ತು ಸಲ್ಮಾನ್ ಅದ್ಭುತವಾಗಿ ಆಡಿದ್ದಾರೆ. ಇಂಥಾ ಪ್ರದರ್ಶನಗಳು ತಂಡದ ವಿಶ್ವಾಸವನ್ನು ಹೆಚ್ಚಿಸುತ್ತವೆ," ಎಂದು ಪಾಕ್ ಮಾಜಿ ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ.