IND vs PAK: ಪಾಕ್ ಮೈದಾನದಲ್ಲಿ ಹಾರಾಡಿದ ಭಾರತದ ತ್ರಿವರ್ಣ ಧ್ವಜ
ನ್ಯೂಜಿಲ್ಯಾಂಡ್ ಮತ್ತು ಪಾಕ್ ನಡುವಣ ಪಂದ್ಯದ ವೇಳೆ ಭಾರತದ ರಾಷ್ಟ್ರಧ್ವಜವು ಸ್ಟೇಡಿಯಂನಲ್ಲಿ ಹಾರುತ್ತಿರುವುದು ಕಂಡು ಬಂದಿದೆ. ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಹಿಂದೆ, ಅದೇ ಸ್ಥಳದಲ್ಲಿ ಭಾರತದ ಧ್ವಜ ಕಾಣಿಸದ ವೀಡಿಯೊವೊಂದು ವೈರಲ್ ಆಗಿತ್ತು.


ಕರಾಚಿ: ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾಕದೇ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡ ಪಾಕ್ ಕ್ರಿಕೆಟ್ ಮಂಡಳಿ, ಬುಧವಾರ ಆರಂಭಗೊಂಡ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನ ಪಂದ್ಯದಲ್ಲಿ ಭಾರತದ ಧ್ವಜವನ್ನು ಮೈದಾನದಲ್ಲಿ ಹಾಕುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.
ಇಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ಮತ್ತು ಪಾಕ್ ನಡುವಣ ಪಂದ್ಯದ ವೇಳೆ ಭಾರತದ ರಾಷ್ಟ್ರಧ್ವಜವು ಸ್ಟೇಡಿಯಂನಲ್ಲಿ ಹಾರುತ್ತಿರುವುದು ಕಂಡು ಬಂದಿದೆ. ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಹಿಂದೆ, ಅದೇ ಸ್ಥಳದಲ್ಲಿ ಭಾರತದ ಧ್ವಜ ಕಾಣಿಸದ ವೀಡಿಯೊವೊಂದು ವೈರಲ್ ಆಗಿತ್ತು.
ಬಹು-ರಾಷ್ಟ್ರಗಳ ಈವೆಂಟ್‌ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಧ್ವಜಗಳನ್ನು ಆತಿಥೇಯ ರಾಷ್ಟ್ರ ತಮ್ಮ ಸ್ಟೇಡಿಯಂನಲ್ಲಿ ಹಾಕುವುದು ಐಸಿಸಿ ನಿಯವಾಗಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತೀಯ ಧ್ವಜವನ್ನು ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರದ ಧ್ವಜವನ್ನು ಹಾಕಿತ್ತು. ಬಳಿಕ ಸ್ಪಷ್ಟನೆಯನ್ನು ಕೂಡ ನೀಡಿತ್ತು. ಭಾರತ ತಂಡ ಪಾಕ್ ನೆಲದಲ್ಲಿ ಪಂದ್ಯ ಆಡುತ್ತಿಲ್ಲ ಹೀಗಾಗಿ ನಾವು ಪಾಕ್‌ನಲ್ಲಿ ಭಾರತದ ಧ್ವಜ ಹಾಕಲಿಲ್ಲ. ಆದರೆ, ದುಬೈನಲ್ಲಿ ಭಾರತದ ಧ್ವಜವನ್ನು ಹಾಕಿದ್ದೇವೆ ಎಂದು ಹೇಳಿತ್ತು. ಇದೀಗ ಪಾಕ್‌ನಲ್ಲಿ ನಡೆಯುತ್ತಿರುವ ಉದ್ಘಾಟನ ಪಂದ್ಯದ ವೇಳೆ ಭಾರತೀಯ ಧ್ವಜ ಕೂಡ ಕಾಣಿಸಿಕೊಂಡಿದೆ.
Indian flag flying high at Karachi 🇮🇳 pic.twitter.com/crO2CfceUx
— Johns. (@CricCrazyJohns) February 19, 2025
ಭಾರತದ ಜೆರ್ಸಿಯಲ್ಲಿ ಪಾಕ್ ಹೆಸರು
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಹೊಸ ಜೆರ್ಸಿ ಮಂಗಳವಾರ ಬಿಡುಗಡೆಯಾಗಿತ್ತು. ವಿಶೇಷವೇನೆಂದರೆ, ಜೆರ್ಸಿಯಲ್ಲಿ ಆತಿಥ್ಯ ರಾಷ್ಟ್ರ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿದೆ. ಆದರೆ ಕೆಲ ಭಾರತೀಯ ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬದ್ಧ ಎದುರಾಳಿ ಪಾಕ್ ಹೆಸರು ಕೈಬಿಡಬೇಕು ಎಂದಿದ್ದಾರೆ. ಆದರೆ ಇದು ಅಸಾಧ್ಯ.
ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯ. ಇಲ್ಲಿ ಯಾವುದೇ ದೇಶದ ಮಧ್ಯೆ ದ್ವೇಷ, ರಾಜತಾಂತ್ರಿಕ ಸಮಸ್ಯೆ ಇದ್ದರೂ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಆಡುವ ದೇಶಗಳು ತಮ್ಮ ಜೆರ್ಸಿಯಲ್ಲಿ ಆತಿಥ್ಯ ದೇಶದ ಹೆಸರನ್ನು ನಮೂದಿಸಲೇ ಬೇಕು. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಲೋಗೊ ಜತೆ ಪಾಕ್ ಹೆಸರು ಸಹ ಭಾರತದ ಜೆರ್ಸಿ ಮೇಲೆ ಕಾಣಿಸಿಕೊಂಡಿದೆ.
ಇದನ್ನೂ ಓದಿ Rishabh Pant: ಚಾಂಪಿಯನ್ಸ್ ಟ್ರೋಫಿಯಿಂದ ಪಂತ್ ಹೊರಬೀಳುವ ಸಾಧ್ಯತೆ
ಭಾರತ ಮತ್ತು ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯ ಫೆ.23 ಭಾನುವಾರದಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳ ಅಭಿಮಾನಿಗಳು ತುದಿಗಾಲ್ಲಿ ನಿಂತು ಕಾಯುತ್ತಿದ್ದಾರೆ. ಪಂದ್ಯದ ಟಿಕೆಟ್ ಕೂಡ ಒಂದೇ ಗಂಟೆಯಲ್ಲಿ ಸೋಲ್ಡ್‌ಔಟ್ ಆಗಿತ್ತು. ಹೆಚ್ಚುವರಿ ಟಿಕೆಟ್ ಕೂಡ ಕ್ಷಣ ಮಾತ್ರದಲ್ಲಿ ಸೇಲ್ ಆಗಿದೆ.