ಬೆಂಗಳೂರು: 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ(ICC Champions Trophy) ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಫೆ.19 ರಂದು ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿದೆ. ಈ ಮೂಲಕ ಟೂರ್ನಿಗೆ ಚಾಲನೆ ಲಭಿಸಲಿದೆ. ಇದುವರೆಗಿನ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದ ಬ್ಯಾಟರ್ ಯಾರೆಂಬ ಮಾಹಿತಿ ಇಲ್ಲಿದೆ.
ಸೌರವ್ ಗಂಗೂಲಿ
ಭಾರತ ತಂಡದ ಮಾಜಿ ನಾಯಕ ಹಾಗೂ ಆಟಗಾರ ಸೌರವ್ ಗಂಗೂಲಿ ಅವರು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಒಟ್ಟು 13 ಪಂದ್ಯಗಳನ್ನಾಡಿರುವ ಗಂಗೂಲಿ 17 ಸಿಕ್ಸರ್ ಮತ್ತು 66 ಬೌಂಡರಿ ಬಾರಿಸಿದ್ದಾರೆ. 141* ಗರಿಷ್ಠ ವೈಯಕ್ತಿಕ ಗಳಿಕೆಯಾಗಿದೆ.

ಕ್ರಿಸ್ ಗೇಲ್
'ಯುನಿವರ್ಸ್ ಬಾಸ್' ಖ್ಯಾತಿಯ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ 15 ಸಿಕ್ಸರ್ ಮತ್ತು 101 ಬೌಂಡರಿ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಒಟ್ಟು 17 ಪಂದ್ಯಗಳನ್ನು ಆಡಿದ್ದಾರೆ. 791 ರನ್ ಗಳಿಸಿ ಟೂರ್ನಿಯ ಅತ್ಯಧಿಕ ರನ್ ಸರದಾರ ಎಂಬ ದಾಖಲೆಯನ್ನೂ ಹೊಂದಿದ್ದಾರೆ.

ಇಯಾನ್ ಮಾರ್ಗನ್
ಇಂಗ್ಲೆಂಡ್ ತಂಡ ಮಾಜಿ ನಾಯಕ ಇಯಾನ್ ಮಾರ್ಗನ್ ಅವರು ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಯಾದಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2009-2017ರ ಅವಧಿಯಲ್ಲಿ 13 ಪಂದ್ಯಗಳನ್ನಾಡಿ 14 ಸಿಕ್ಸರ್ ಮತ್ತು 40 ಬೌಂಡರಿ ಬಾರಿಸಿದ್ದಾರೆ.

ಶೇನ್ ವಾಟ್ಸನ್
ಆಸ್ಟ್ರೇಲಿಯಾ ತಂಡದ ಮಾಜಿ ಸ್ಟಾರ್ ಆಲ್‌ರೌಂಡರ್ ಶೇನ್ ವಾಟನ್ಸ್ 17 ಪಂದ್ಯಗಳನ್ನಾಡಿ 12 ಸಿಕ್ಸರ್ ಮತ್ತು 44 ಬೌಂಡರಿ ಬಾರಿಸಿದ್ದಾರೆ. ಅತ್ಯಧಿಕ ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ. ತಲಾ 2 ಶತಕ ಮತ್ತು ಅರ್ಧಶತಕ ಸಿಡಿಸಿದ್ದಾರೆ.

ಪಾಲ್ ಕಾಲಿಂಗ್‌ವುಡ್
ಇಂಗ್ಲೆಂಡ್ ತಂಡದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಪಾಲ್ ಕಾಲಿಂಗ್‌ವುಡ್ ಈ ಯಾದಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 2004-2009 ಅವಧಿಯಲ್ಲಿ 11 ಪಂದ್ಯಗಳನ್ನಾಡಿ 11 ಸಿಕ್ಸರ್ ಮತ್ತು 33 ಬೌಂಡರಿ ಬಾರಿಸಿದ್ದಾರೆ. ಒಟ್ಟಾರೆಯಾಗಿ 403 ರನ್ ಕಲೆ ಹಾಕಿದ್ದಾರೆ.
