CM Siddaramaiah: ಇಂದು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರದ ಸಾಧನಾ ಸಮಾವೇಶ, 1 ಲಕ್ಷ ಜನ ಸೇರುವ ಸಾಧ್ಯತೆ
CM Siddaramaiah: ಇಂದಿನ ಸಾಧನಾ ಸಮಾವೇಶದ ಮೂಲಕ ಹಳೇ ಮೈಸೂರು ಭಾಗದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಶಕ್ತಿ ಪ್ರದರ್ಶನ ನಡೆಸಲಾಗುತ್ತಿದೆ. ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲು ಪ್ಲಾನ್ ಕೂಡ ಮಾಡಲಾಗುತ್ತಿದ್ದು, 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಸಾಧ್ಯತೆ ಇದೆ.


ಮೈಸೂರು: ಶನಿವಾರ ಮೈಸೂರಿನಲ್ಲಿ (Mysuru) ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ (Sadhana Samavesha) ಭರ್ಜರಿ ತಯಾರಿಯೊಂದಿಗೆ ಸಿದ್ಧಗೊಂಡಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ 2,600 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಲೋಕಾರ್ಪಣೆಯನ್ನು ಸಿಎಂ ಸಿದ್ಧರಾಮಯ್ಯ ನೆರವೇರಿಸಲಿದ್ದಾರೆ.
ಇಂದಿನ ಸಾಧನಾ ಸಮಾವೇಶದ ಮೂಲಕ ಹಳೇ ಮೈಸೂರು ಭಾಗದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಶಕ್ತಿ ಪ್ರದರ್ಶನ ನಡೆಸಲಾಗುತ್ತಿದೆ. ಈ ಸಮಾವೇಶದ ಜವಾಬ್ದಾರಿಯನ್ನು ಸಿಎಂ ಆಪ್ತ ಮತ್ತು ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಅವರಿಗೆ ನೀಡಲಾಗಿದೆ. ಸಾಧನಾ ಸಮಾವೇಶಕ್ಕೆ ಈಗಾಗಲೇ ಮೈಸೂರು, ಚಾಮರಾಜನಗರ ಜಿಲ್ಲೆ ಶಾಸಕರ ಜೊತೆ ಸಭೆ ನಡೆಸಲಾಗಿದೆ. ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲು ಪ್ಲಾನ್ ಕೂಡ ಮಾಡಲಾಗಿದೆ. 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಬೃಹತ್ ವೇದಿಕೆ ಸಜ್ಜಾಗಿದ್ದು, ಮಹಾರಾಜ ಮೈದಾನದಲ್ಲಿ ಜರ್ಮನ್ ಟೆಂಟ್‌ನಲ್ಲಿ ಬೃಹತ್ ಗಾತ್ರದ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆಯ ಮಧ್ಯದಲ್ಲಿ ಸಿಎಂ ಸಿದ್ದರಾಮಯ್ಯ ನಡೆದುಕೊಂಡು ಹೋಗೋದಕ್ಕೆ ಸ್ಪೆಷಲ್ ಟ್ರ‍್ಯಾಕ್ ನಿರ್ಮಿಸಲಾಗಿದ್ದು, ಸುಮಾರು 200 ಮೀಟರ್ ನಡೆದುಕೊಂಡು ಹೋಗಬೇಕಾಗುತ್ತದೆ.
ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಕುರಿತು ಕಲಾಕೃತಿ ತಯಾರಿ ಮಾಡಲಾಗಿದ್ದು, ಕೃಷಿ ಅಧಿಕಾರಿಗಳಿಂದ ಚಿತ್ತಾಕರ್ಷಕ ರಂಗೋಲಿ ಸಿದ್ಧವಾಗುತ್ತಿದೆ. ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬರುವ ನಿರೀಕ್ಷೆ ಇದೆ. ಸಮಾವೇಶದ ವೇಳೆ ಅವಘಡ ಸಂಭವಿಸದಂತೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಬೃಹತ್ ವೇದಿಕೆಯನ್ನು ನಿನ್ನೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ʼಬಾಳೆ ಬೆಳೆಗೆ ಹಣಕಾಸು ಕೊಡಿʼ
ಒಂದು ಜಿಲ್ಲೆ ಒಂದು ಬೆಳೆ ಯೋಜನೆಯ ಬಾಳೆ ಬೆಳೆಗೆ ಅಧಿಕಾರಿಗಳು ಹಣ ಇಲ್ಲ ಎನ್ನುತ್ತಿದ್ದಾರೆ ಎಂದು ರೈತರು ಸಿಎಂ ಸಿದ್ದರಾಮಯ್ಯರಿಗೆ ದೂರು ನೀಡಿದ್ದಾರೆ. ಆಡಳಿತ ತರಬೇತಿ ಕೇಂದ್ರದ ಹೇಮಾವತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರ ನಿಯೋಗದ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಒಂದು ಜಿಲ್ಲೆ ಒಂದು ಬೆಳೆ ಎಂಬ ಯೋಜನೆಯಡಿ ಮೈಸೂರಿಗೆ ಬಾಳೆ ಬೆಳೆಯನ್ನು ಘೋಷಣೆ ಮಾಡಿದ್ದು , ಬಾಳೆ ಬೆಳೆಗೆ ಸಂಬಂಧಪಟ್ಟಂತೆ ಯೋಜನೆಗಳನ್ನು ಜಾರಿಗೆ ತರಲು ಹಣಕಾಸು ಲಭ್ಯವಿಲ್ಲ ಎಂದು ಇಲಾಖೆಯವರು ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ ಕೂಡಲೇ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು 1500 ಹೆಕ್ಟೇರಿಗೂ ಹೆಚ್ಚು ಬಾಳೆ ಬಾಳೆ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಅನುಕೂಲ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಗರ್ ಹುಕುಂ ಸಾಗುವಳಿ ಚೀಟಿ ನೀಡಲು ಅಧಿಕಾರಿಗಳು, ತಾಂತ್ರಿಕ ಸಮಸ್ಯೆ ಎಂದು ಹೇಳಿ ತಡ ಮಾಡುತ್ತಿದ್ದಾರೆ. ಕೂಡಲೇ ಇದನ್ನು ಸರಿಪಡಿಸಿ ಸುಮಾರು 40,50 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: CM Siddaramaiah: ಫೇಸ್‌ಬುಕ್ ಆಟೋ ಟ್ರಾನ್ಸ್‌ಲೇಷನ್ ಎಡವಟ್ಟು; ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ ಎಂದ ಸಿಎಂ