CSK vs GT: ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಚೆನ್ನೈ; ಗುಜರಾತ್‌ಗೆ ಹೀನಾಯ ಸೋಲು
IPL 2025: ಒಂದು ದಿನ ಹಿಂದಷ್ಟೇ ಭಾರತ ಟೆಸ್ಟ್ ತಂಡಕ್ಕೆ ನೂತನ ನಾಯಕನಾಗಿ ಆಯ್ಕೆಯಾದ ಶುಭಮನ್ ಗಿಲ್(13) ಈ ಪಂದ್ಯದಲ್ಲಿ ವಿಫಲರಾದರು. ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜಾಶ್ ಬಟ್ಲರ್(5) ಕೂಡ ಬ್ಯಾಟಿಂಗ್ ಜೋಶ್ ತೋರಲಿಲ್ಲ.


ಅಹಮದಾಬಾದ್: ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ 83 ರನ್ ಅಂತರದ ಗೆಲುವು ಸಾಧಿಸುವ ಮೂಲಕ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು. ಆದರೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಲು ವಿಫಲವಾಯಿತು. ಸೋಲಿನ ಹೊರತಾಗಿಯೂ ಗುಜರಾತ್ ಅಗ್ರ ಸ್ಥಾನ ಕಾಯ್ದುಕೊಂಡಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಹಗಲು ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್, ಡೆವೋನ್ ಕಾನ್ವೆ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 5 ವಿಕೆಟ್‌ಗೆ 230 ರನ್ ಕಲೆಹಾಕಿತು. ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ಗುಜರಾತ್ ಟೈಟಾನ್ಸ್ 18.3 ಓವರ್‌ಗಳಲ್ಲಿ147 ರನ್‌ಗೆ ಸರ್ವಪತನ ಕಂಡಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಗುಜರಾತ್‌ಗೆ ಸಾಯಿ ಸುದರ್ಶನ್ ಮಾತ್ರ ಆಸರೆಯಾದರು. ಏಕಾಂಗಿ ಬ್ಯಾಟಿಂಗ್ ಹೋರಾಟ ನಡೆಸಿದ ಅವರು 28 ಎಸೆತಗಳಿಂದ 41 ರನ್ ಗಳಿಸಿದರು. ಇವರದ್ದೇ ತಂಡದ ಪರ ಗರಿಷ್ಠ ಸ್ಕೋರ್. ಒಂದು ದಿನ ಹಿಂದಷ್ಟೇ ಭಾರತ ಟೆಸ್ಟ್ ತಂಡಕ್ಕೆ ನೂತನ ನಾಯಕನಾಗಿ ಆಯ್ಕೆಯಾದ ಶುಭಮನ್ ಗಿಲ್(13) ಈ ಪಂದ್ಯದಲ್ಲಿ ವಿಫಲರಾದರು. ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜಾಶ್ ಬಟ್ಲರ್(5) ಕೂಡ ಬ್ಯಾಟಿಂಗ್ ಜೋಶ್ ತೋರಲಿಲ್ಲ.
ಕೆಲ ಕ್ರಮಾಂಕದಲ್ಲಿ ಅರ್ಶದ್ ಖಾನ್ ಸಣ್ಣ ಬ್ಯಾಟಿಂಗ್ ಹೋರಾಟ ನಡೆಸಿ 20 ರಮ್ ಕೊಡುಗೆ ಸಲ್ಲಿಸಿದರು. ಚೆನ್ನೈ ಪರ ಸ್ಪಿನ್ ಮೋಡಿ ಮಾಡಿದ ನೂರ್ ಅಹ್ಮದ್ ಮತ್ತು ವೇಗಿ ಅನ್ಶುಲ್ ಕಾಂಬೋಜ್ ತಲಾ 3 ವಿಕೆಟ್ ಕಿತ್ತರು. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಚೆನ್ನೈಗೆ ಆರಂಭಿಕರಾದ ಆಯುಷ್ ಮ್ಹಾತ್ರೆ ಮತ್ತು ಡೆವೋನ್ ಕಾನ್ವೆ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಅಹಮದಾಬಾದ್ ಬೌಲರ್‌ಗಳಿಗೆ ಕಾಡಿದರು. ಉಭಯ ಆಟಗಾರು ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಅದರಲ್ಲೂ ಅರ್ಷದ್ ಖಾನ್ ಅವರ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದ ಆಯುಷ್ ಮ್ಹಾತ್ರೆ ಬರೋಬ್ಬರಿ 28 ರನ್ ದೋಚಿದರು. ಇವರ ಬಿರುಸಿನ ಬ್ಯಾಟಿಂಗ್‌ಗೆ ಕೊನೆಗೂ ಪ್ರಸಿದ್ಧ್ ಕೃಷ್ಣ ಬ್ರೇಕ್ ಹಾಕಿದರು. 17 ಎಸೆತ ಎದುರಿಸಿದ ಮ್ಹಾತ್ರೆ 34 ರನ್ ಬಾರಿಸಿದರು. ಡೆವೋನ್ ಕಾನ್ವೆ 52 ರನ್ ಬಾರಿಸಿದರು. ಸಿಡಿದದ್ದು 6 ಬೌಂಡರಿ ಮತ್ತು 2 ಸಿಕ್ಸರ್.
ಅರ್ಧಶತಕ ಬಾರಿಸಿ ದಾಖಲೆ ಬರೆದ ಬ್ರೇವಿಸ್
ಮ್ಹಾತ್ರೆ ಮತ್ತು ಕಾನ್ವೆ ಅಬ್ಬರದ ಬಳಿಕ 5ನೇ ಕ್ರಮಾಂಕದಲ್ಲಿ ಆಡಲಿಳಿದ ಡೆವಾಲ್ಡ್ ಬ್ರೆವಿಸ್ ಅಹಮದಾಬಾದ್ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಅವರು ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬರಪೂರ ರಂಜನೆ ಒದಗಿಸಿದರು. 19 ಎಸೆತಗಳಿಂದ ಅರ್ಧಶತಕ ಪೂರೈಸಿದ ಬ್ರೇವಿಸ್ ಅತಿ ವೇಗದ ಅರ್ಧಶತಕ ಸಿಡಿಸಿದ ಚೆನ್ನೈಯ ನಾಲ್ಕನೇ ಬ್ಯಾಟರ್ ಎಂಬ ದಾಖಲೆ ಬರೆದರು. ಸುರೇಶ್ ರೈನಾ(16) ಮೊದಲಿಗ. ಅಂತಿಮವಾಗಿ 23 ಎಸೆತಗಳಿಂದ 5 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 57 ರನ್ ಚಚ್ಚಿದರು. ರವೀಂದ್ರ ಜಡೇಜಾ 21 ರನ್ ಗಳಿಸಿ ಅಜೇಯರಾಗಿ ಉಳಿದರು. ಗುಜರಾತ್ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ 22 ರನ್‌ಗೆ 2 ವಿಕೆಟ್ ಕಿತ್ತು ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು. ಉಳಿದವರು ಸರಿಯಾಗಿ ದಂಡಿಸಿಕೊಂಡರು.