ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತವರಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಹ್ಯಾಟ್ರಿಕ್‌ ಸೋಲಿನ ಮುಖಭಂಗ, ಡೆಲ್ಲಿಗೆ ಸತತ ಮೂರನೇ ಜಯ!

DC vs CSK Match Highlights: ಚೆನ್ನೈ ಎಂಎ ಚಿದಂಬರಂ ಶನಿವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 17ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 25 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಡೆಲ್ಲಿ ಪರ ನಿರ್ಣಾಯಕ ಅರ್ಧಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಿಂಚಿದ ಕೆಎಲ್‌ ರಾಹುಲ್‌, ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಜಯ!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 25 ರನ್‌ ಜಯ.

Profile Ramesh Kote Apr 5, 2025 8:42 PM

ಚೆನ್ನೈ: ಕೆಎಲ್‌ ರಾಹುಲ್‌ (77 ರನ್‌) ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 17ನೇ ಪಂದ್ಯದಲ್ಲಿ (DC vs CSK) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 25 ರನ್‌ಗಳಿಂದ ಗೆದ್ದು ಬೀಗಿತು. ಅಕ್ಷರ್‌ ಪಟೇಲ್‌ (Axar Patel) ನಾಯಕತ್ವದ ಡೆಲ್ಲಿಗೆ ಇದು ಹ್ಯಾಟ್ರಿಕ್‌ ಜಯ ಸಾಧಿಸಿದರೆ, ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ‌ ತವರು ಅಭಿಮಾನಿಗಳ ಎದುರು ಹ್ಯಾಟ್ರಿಕ್ ಸೋಲಿನ ಮುಖಭಂಗವನ್ನು ಅನುಭವಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ್ದ ಕನ್ನಡಿಗ ಕೆಎಲ್‌ ರಾಹುಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 184 ರನ್‌ ಗುರಿ ಹಿಂಬಾಲಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ನಿರೀಕ್ಷಿತ ಬ್ಯಾಟಿಂಗ್‌ ಮೂಡಿಬರಲಿಲ್ಲ. ಆದ್ದರಿಂದ ವಿಜಯ್‌ ಶಂಕರ್‌ (69) ಅವರ ಅರ್ಧಶತಕದ ಹೊರತಾಗಿಯೂ ಸಿಎಸ್‌ಕೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 5 ವಿಕೆಟ್‌ ನಷ್ಟಕ್ಕೆ 158 ರನ್‌ಗಳಿಗೆ ಸೀಮಿತವಾಯಿತು ಹಾಗೂ ತವರು ಅಭಿಮಾನಿಗಳ ಎದುರು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತೊಮ್ಮೆ ಮುಖಭಂಗ ಅನುಭವಿಸಿತು.

IPL 2025: ದಂಡ ಬಿದ್ದರೂ ನೋಟ್‌ಬುಕ್‌ ಸೆಲೆಬ್ರೇಷನ್‌ ಬಿಡದ ದಿಗ್ವೇಶ್‌!

ವಿಜಯ್‌ ಶಂಕರ್‌ ಅರ್ಧಶತಕ

ಚೇಸಿಂಗ್‌ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಆಲ್‌ರೌಂಡರ್‌ ವಿಜಯ್‌ ಶಂಕರ್‌. ಆರಂಭಿಕರಾದ ರಚಿನ್‌ ರವೀಂದ್ರ, ಡೆವೋನ್‌ ಕಾನ್ವೆ ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರು ಅಗ್ರ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿದರು. ಶಿವಂ ದುಬೆ (18) ಹಾಗೂ ರವೀಂದ್ರ ಜಡೇಜಾ ಕೂಡ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷೆ ಹುಸಿಗೊಳಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ವಿಜಯ್‌ ಶಂಕರ್‌, 54 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಐದು ಬೌಂಡರಿಗಳೊಂದಿಗೆ ಅಜೇಯ 69 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಸಿಎಸ್‌ಕೆ ತಂಡವನ್ನು ಗೆಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೂ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಮತ್ತೊಂದು ಕಡೆ ಎಂಎಸ್‌ ಧೋನಿ 26 ಎಸೆತಗಳಲ್ಲಿ ಅಜೇಯ 30 ರನ್‌ಗಳಿದರೂ ಸಿಎಸ್‌ಕೆಯನ್ನು ಗೆಲ್ಲಿಸಲು ಆಗಲಿಲ್ಲ.



ಡೆಲ್ಲಿ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ವಿಪ್ರಾಜ್‌ ನಿಗಮ್‌ ಎರಡು ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಕುಲ್ದೀಪ್‌ ಯಾದವ್‌ ಹಾಗೂ ಮುಖೇಶ ಕುಮಾರ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.

183 ರನ್‌ಗಳನ್ನು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುವ ನಿರ್ಧಾರ ತೆಗೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್‌ ಪಟೇಲ್‌ ನಿರ್ಧಾರವನ್ನು ಬ್ಯಾಟ್ಸ್‌ಮನ್‌ಗಳು ಸಮರ್ಥಿಸಿಕೊಂಡರು. ಕೆಎಲ್‌ ರಾಹುಲ್‌ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 183 ರನ್‌ಗಳನ್ನು ಕಲೆ ಹಾಕಿತು. ಇದರೊಂದಿಗೆ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 184 ರನ್‌ಗಳ ಸವಾಲುದಾಯಕ ಗುರಿಯನ್ನು ನೀಡಿತ್ತು.



ಕೆಎಲ್‌ ರಾಹುಲ್‌ ಮಿಂಚಿನ ಬ್ಯಾಟಿಂಗ್‌

ಆರಂಭಿಕ ಬ್ಯಾಟ್ಸ್‌ಮನ್‌ ಜೇಕ್‌ ಮೆಗರ್ಕ್‌ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದರು. ಆದರೆ, ಓಪನರ್‌ ಕೆಎಲ್‌ ರಾಹುಲ್‌ ತಮ್ಮ ಬ್ಯಾಟಿಂಗ್‌ ಮೂಲಕ ಗಮನ ಸೆಳೆದರು. ಅವರು ಆಡಿದ 51 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 77 ರನ್‌ಗಳನ್ನು ಸಿಡಿಸಿದರು. ಅದರಲ್ಲಿಯೂ ಅವರು 150.98ರ ಸ್ಟ್ರೈಕ್‌ ರೇಟ್‌ನಲ್ಲಿ ಆಡಿದ್ದರು. ಅರ್ಧಶತಕದ ಜೊತೆಗೆ ಅಭಿಷೇಕ್‌ ಪೊರೆಲ್‌ ಅವರೊಂದಿಗೆ 54 ರನ್‌ಗಳ ಜೊತೆಯಾಟವನ್ನು ಆಡಿದರು. ಅಭಿಷೇಕ್‌ ಪೊರೆಲ್‌ 20 ಎಸೆತಗಳಲ್ಲಿ 33 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದ್ದರು. ಅಕ್ಷರ್‌ ಪಟೇಲ್‌ (21), ಸಮೀರ್‌ ರಿಝ್ವಿ (20) ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ (24) ತಂಡಕ್ಕೆ ಉಪಯುಕ್ತ ಕಾಣಿಯನ್ನು ನೀಡಿದರು.

ಸಿಎಸ್‌ಕೆ ಪರ ಗಮನಾರ್ಹ ಬೌಲಿಂಗ್‌ ಪ್ರದರ್ಶನ ತೋರಿದ ಖಲೀಲ್‌ ಅಹ್ಮದ್‌ ತಮ್ಮ ಪಾಲಿನ 4 ಓವರ್‌ಗಳಿಗೆ 25 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸಿದರು. ಮತೀಶ ಪತಿರಣ, ರವೀಂದ್ರ ಜಡೇಜಾ ಹಾಗೂ ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಸ್ಕೋರ್‌ ವಿವರ

ಡೆಲ್ಲಿ ಕ್ಯಾಪಿಟಲ್ಸ್‌: 20 ಓವರ್‌ಗಳಿಗೆ 183-6 (ಕೆಎಲ್‌ ರಾಹುಲ್‌ 77, ಅಭಿಷೇಕ್‌ ಪೊರೆಲ್‌ 33, ಟ್ರಿಸ್ಟನ್‌ ಸ್ಟಬ್ಸ್‌ 24; ಖಲೀಲ್‌ ಅಹ್ಮದ್‌ 25 ಕ್ಕೆ 2, ಮತೀಶ ಪತಿರಣ 31 ಕ್ಕೆ 1, ರವೀಂದ್ರ ಜಡೇಜಾ 19ಕ್ಕೆ 1)

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಿಗೆ 158-5 ( ವಿಜಯ್‌ ಶಂಕರ್‌ 69, ಎಂಎಸ್‌ ಧೋನಿ 30; ವಿಪ್ರಾಜ್‌ ನಿಗಮ್‌ 27 ಕ್ಕೆ 2, ಮಿಚೆಲ್‌ ಸ್ಟಾರ್ಕ್‌ 27 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಕೆಎಲ್‌ ರಾಹುಲ್‌