#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Elections: 50 ಸಾವಿರ ಸರ್ಕಾರಿ ಉದ್ಯೋಗ ಸೃಷ್ಟಿ, 1,700ಕ್ಕೂ ಹೆಚ್ಚು ಅನಧಿಕೃತ ಕಾಲೋನಿಗಳಿಗೆ ಮಾಲಿಕತ್ವದ ಹಕ್ಕು: ಬಿಜೆಪಿ ಪ್ರಣಾಳಿಕೆಯಲ್ಲಿ ಏನೇನಿದೆ?

Delhi Elections: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿರುವ ನಿರಾಶ್ರಿತರ ಕಾಲೋನಿಗಳಲ್ಲಿನ ಜನರಿಗೆ ಮಾಲೀಕತ್ವದ ಹಕ್ಕು, 13,000 ಸೀಲ್ ಮಾಡಿದ ಅಂಗಡಿಗಳನ್ನು ಮತ್ತೆ ತೆರೆಯುವುದು, 50 ಸಾವಿರ ಸರ್ಕಾರಿ ಉದ್ಯೋಗ ಸೃಷ್ಟಿ-ಇದು ದಿಲ್ಲಿಯಲ್ಲಿ ಬಿಜೆಪಿ ನೀಡಿದ ಭರವಸೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಪತ್ರ ಬಿಡುಗಡೆಗೊಳಿಸಿದರು.

ದಿಲ್ಲಿ ವಿಧಾನಸಭಾ ಚುನಾವಣೆ; ಬಿಜೆಪಿಯ 3ನೇ ಪ್ರಣಾಳಿಕೆ ರಿಲೀಸ್‌

ಅಮಿತ್‌ ಶಾ.

Profile Ramesh B Jan 25, 2025 6:52 PM

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿರುವ ನಿರಾಶ್ರಿತರ ಕಾಲೋನಿಗಳಲ್ಲಿನ ಜನರಿಗೆ ಮಾಲೀಕತ್ವದ ಹಕ್ಕು, 13,000 ಸೀಲ್ ಮಾಡಿದ ಅಂಗಡಿಗಳನ್ನು ಮತ್ತೆ ತೆರೆಯುವುದು, 50 ಸಾವಿರ ಸರ್ಕಾರಿ ಉದ್ಯೋಗ ಸೃಷ್ಟಿ-ಇದು ದಿಲ್ಲಿಯಲ್ಲಿ ಬಿಜೆಪಿ (BJP) ಬಿಡುಗಡೆ ಮಾಡಿದ ಚುನಾವಣೆಯ ಪ್ರಣಾಳಿಕೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು (Delhi Elections). ಶನಿವಾರ (ಜ. 25) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ದಿಲ್ಲಿಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ (BJP manifesto) ಸಂಕಲ್ಪ ಪತ್ರದ 3ನೇ ಭಾಗವನ್ನು ಅನಾವರಣಗೊಳಿಸಿದರು.

ದಿಲ್ಲಿ ವಿಧಾನಸಭೆಗೆ ಫೆ. 5ರಂದು ಚುನಾವಣೆ ನಡೆಯಲಿದ್ದು, ಫೆ. 8ರಂದು ಪಲಿತಾಂಶ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ಮತ್ತು ಆಡಳಿತರೂಢ ಆಮ್‌ ಆದ್ಮಿ ಪಾರ್ಟಿ ಅಧಿಕಾರ ಹಿಡಿಯಲು ಸತಾಯ-ಗತಾಯ ಪ್ರಯತ್ನದಲ್ಲಿ ತೊಡಗಿಸಿಕೊಂಡಿವೆ.



ಪ್ರಣಾಳಿಕೆಯಲ್ಲಿ ಏನೇನಿದೆ?

ಪ್ರಣಾಳಿಕೆ ಅನಾವರಣಗೊಳಿಸಿ ಅಮಿತ್‌ ಶಾ ಮಾತನಾಡಿ, "1,700ಕ್ಕೂ ಹೆಚ್ಚು ಅನಧಿಕೃತ ಕಾಲೋನಿಗಳಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ಕಾಲೋನಿಗಳಲ್ಲಿ ಕಟ್ಟಡ ನಿರ್ಮಾಣ, ಸೈಟ್‌ ಖರೀದಿ ಅಥವಾ ಮಾರಾಟಕ್ಕೆ ಅನುಮತಿ ಇಲ್ಲ. ಬಿಜೆಪಿ ಅವರಿಗೆ ಸಂಪೂರ್ಣ ಮಾಲೀಕತ್ವದ ಹಕ್ಕುಗಳನ್ನು ನೀಡಲಿದೆ. ಅಲ್ಲದೆ ವಸತಿ ಸಚಿವಾಲಯದ ನಿಯಮಗಳನ್ನು ಮತ್ತು ದಿಲ್ಲಿಯ ಉಪನಿಯಮಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ನಾವು ಅಲ್ಲಿನ ನಿವಾಸಿಗಳಿಗೆ ಕೆಲವು ಹಕ್ಕನ್ನು ನೀಡುತ್ತೇವೆʼʼ ಎಂದರು.

"ದಿಲ್ಲಿಯಲ್ಲಿ 13,000 ಅಂಗಡಿಗಳನ್ನು ಮುಚ್ಚಲಾಗಿದೆ. ಅವುಗಳನ್ನು ಮತ್ತೆ ತೆರೆಯಲು ಕ್ರಮ ಕೈಗೊಳ್ಳಲಿದ್ದೇವೆ. ಇದಕ್ಕಾಗಿ ನಾವು ನ್ಯಾಯಾಂಗ ಪ್ರಾಧಿಕಾರವನ್ನು ರಚಿಸುತ್ತೇವೆʼʼ ಎಂದು ಭರವಸೆ ನೀಡಿದರು. ದಿಲ್ಲಿಯಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದರು. ಇದು ಎಲ್ಲ ಕಾರ್ಮಿಕರಿಗೆ 10 ಲಕ್ಷ ರೂ.ವರೆಗೆ ಜೀವ ವಿಮಾ ರಕ್ಷಣೆ ಮತ್ತು 5 ಲಕ್ಷ ರೂ.ವರೆಗೆ ಅಪಘಾತ ವಿಮೆಯನ್ನು ಖಚಿತಪಡಿಸಲಿದೆ.

"ನಾವು ಜವಳಿ ಕಾರ್ಮಿಕರಿಗೂ ಇದೇ ಸೌಲಭ್ಯವನ್ನು ಒದಗಿಸುತ್ತೇವೆ. ಕಾರ್ಮಿಕರಿಗೆ 10,000 ರೂ. ಸಹಾಯವನ್ನು ನೀಡುತ್ತೇವೆ ಮತ್ತು ನೋಂದಾಯಿತ ಕಾರ್ಮಿಕರಿಗೆ 3 ಲಕ್ಷ ರೂ.ವರೆಗೆ ಸಾಲ ನೀಡುತ್ತೇವೆ. ಬಿಜೆಪಿ ಯಾವುದೇ ಭ್ರಷ್ಟಾಚಾರವಿಲ್ಲದೆ ದಿಲ್ಲಿಯ ಯುವ ಜನತೆಗೆ 50,000 ಸರ್ಕಾರಿ ಉದ್ಯೋಗಗಳನ್ನು ನೀಡಲಿದೆʼʼ ಎಂದು ಅವರು ಒತ್ತಿ ಹೇಳಿದರು.

"20 ಲಕ್ಷ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದ್ದೇವೆ. 20,000 ಕೋಟಿ ರೂ.ಗಳ ಹೂಡಿಕೆಯ ಮೂಲಕ ನಾವು ಸಮಗ್ರ ಸಾರ್ವಜನಿಕ ಸಾರಿಗೆ ಜಾಲವನ್ನು ಅಭಿವೃದ್ಧಿಪಡಿಸುತ್ತೇವೆ ಮತ್ತು 13,000 ಬಸ್ಸುಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸುತ್ತೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದಿಲ್ಲಿಯನ್ನು ಶೇ. 100ರಷ್ಟು ಎಲೆಕ್ಟ್ರಿಕ್ ಬಸ್ ನಗರವನ್ನಾಗಿಸುತ್ತೇವೆ" ಎಂದು ಅವರು ಹೇಳಿದರು.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಭಾಗವಾಗಿ ಮಹಾಭಾರತ ಕಾರಿಡಾರ್ ರಚಿಸಲು ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳೊಂದಿಗೆ ಸೇರಿ ಕ್ರಮ ಕೈಗೊಳ್ಳಾಗುವುದು ಎಂದೂ ತಿಳಿಸಿದರು.

ಈ ಸುದ್ದಿಯನ್ನೂ ಓದಿ: Delhi Elections 2025: ಆಪ್‌ಗೆ ಮತ್ತೊಮ್ಮೆ ಡೆಲ್ಲಿ ಗದ್ದುಗೆ ಫಿಕ್ಸ್‌- ಸಟ್ಟಾ ಬಜಾರ್‌ ಸ್ಫೋಟಕ ಭವಿಷ್ಯ!

ಇದೇ ವೇಳೆ ಅಮಿತ್‌ ಶಾ ಅವರು ಬಿಜೆಪಿಯ ಹಿಂದಿನ 2 ಪ್ರಣಾಳಿಕೆಗಳ ಭರವಸೆಗಳನ್ನು ನೆನಪಿಸಿಕೊಂಡರು. "ಪ್ರತಿ ಗರ್ಭಿಣಿಗೆ ನಾವು 12,000 ರೂ.ಗಳ ಆರ್ಥಿಕ ನೆರವು ನೀಡುತ್ತೇವೆ ಮತ್ತು ಆರು ಪೌಷ್ಠಿಕಾಂಶದ ಕಿಟ್‌ ಒದಗಿಸುತ್ತೇವೆ. 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಸಿಗಲಿದೆ. ಹೋಳಿ ಮತ್ತು ದೀಪಾವಳಿಯಂದು ಪ್ರತಿ ಸಹೋದರಿಗೆ 1 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಿದ್ದೇವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ನಾವು ಪ್ರತಿ ಬಡ ವ್ಯಕ್ತಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯನ್ನು ನೀಡುತ್ತೇವೆ. ದಿಲ್ಲಿಯ ಪ್ರತಿಯೊಬ್ಬ ಬಡ ವ್ಯಕ್ತಿಯು ಪ್ರಮುಖ ಆಸ್ಪತ್ರೆಗಳಲ್ಲಿ 10 ಲಕ್ಷ ರೂ.ವರೆಗೆ ಯಾವುದೇ ವೆಚ್ಚವಿಲ್ಲದೆ ಚಿಕಿತ್ಸೆ ಪಡೆಯಬಹುದುʼʼ ಎಂದರು.