ನವದೆಹಲಿ: ಉತ್ತರ ದೆಹಲಿಯ (Delhi Tragedy) ಬುರಾರಿ ಪ್ರದೇಶದಲ್ಲಿ ಜನವರಿ 27 ರಂದು ನಾಲ್ಕು ಅಂತಸ್ತಿನ ಕಟ್ಟಡ ಕುಸಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಒಂದೇ ಕುಟುಂಬದ ನಾಲ್ಕು ಜನರನ್ನು ರಕ್ಷಿಸಲಾಗಿದ್ದು, ಅವರನ್ನು ರಾಜೇಶ್ (30), ಅವರ ಪತ್ನಿ ಗಂಗೋತ್ರಿ (26), ಮತ್ತು ಅವರ ಮಕ್ಕಳಾದ ಪ್ರಿನ್ಸ್ (6) ಮತ್ತು ರಿತಿಕ್ (3) ಎಂದು ಗುರುತಿಸಲಾಗಿದೆ. ಜನವರಿ 29ರ ತಡರಾತ್ರಿ ಕಾರ್ಯಾಚರಣೆಯಲ್ಲಿ ಅವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ ಕುಟುಂಬ ಕನಿಷ್ಠ 30 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಇದ್ದರು. ಈ ಬಗ್ಗೆ ಮಾತನಾಡಿದ ರಾಜೇಶ್ ತಾನು ಹಾಗೂ ತನ್ನ ಕುಟುಂಬ ಹೇಗೆ ಬದುಕುಳಿದ್ದೇವೆ ಎಂದು ತಿಳಿಸಿದ್ದಾರೆ. ಮನೆಯಲ್ಲಿ ಉಳಿದಿರುವ ಮೂರು ಟೊಮೆಟೊಗಳನ್ನು ತಿನ್ನುವ ಮೂಲಕ ತಮ್ಮ ಹಸಿವನ್ನು ನೀಗಿಸಿಕೊಂಡೆವು ಎಂದು ಹೇಳಿದ್ದಾರೆ. ಸಂಜೆ 6.30 ರ ಸುಮಾರಿಗೆ ಕಟ್ಟಡ ಕುಸಿದಿದೆ, ನಾವು ನಮ್ಮ ಮೇಲಿನ ಅವಶೇಷಗಳನ್ನು ತೆಗೆದುಹಾಕಲು ಸಾಕಷ್ಟು ಪ್ರಯತ್ನಿಸಿದ್ದೆವು. ಆದರೆ ಅದು ನಮ್ಮಿಂದ ಸಾಧ್ಯವಾಗಲಿಲ್ಲ. ದೇವರ ಮೇಲೆ ಭಾರ ಹಾಕಿ ಪ್ರಾರ್ಥಿಸಿಕೊಂಡಿದ್ದೆವು. ಕೈಗೆ ಸಿಕ್ಕ ಮೂರು ಟೊಮ್ಯಾಟೊಗಳು ನಮ್ಮ ಜೀವ ಉಳಿಸಿತು ಎಂದು ಹೇಳಿದ್ದಾರೆ.
ನಮ್ಮನ್ನು ಹೊರತೆಗೆದಾಗ ನಾವು ಪ್ರಜ್ಞಾಹೀನರಾಗಿದ್ದೇವು. ನಾವೆಲ್ಲರೂ ಯಾವಾಗ ಮತ್ತು ಹೇಗೆ ಆಸ್ಪತ್ರೆಯನ್ನು ತಲುಪಿದ್ದೇವೆ ಎಂಬುದು ನನಗೆ ನೆನಪಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ಇಬ್ಬರ ಸಾವು, 12 ಮಂದಿಗೆ ಗಾಯ
ಘಟನೆಯಲ್ಲಿ ಈ ವರೆಗೆ 5 ಮಂದಿ ಮೃತಪಟ್ಟಿದ್ದರೆ, 16 ಜನರನ್ನು ರಕ್ಷಿಸಲಾಗಿದೆ. ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಲೇ ಇದೆ. ಏತನ್ಮಧ್ಯೆ, ದೆಹಲಿ ಪೊಲೀಸರು ಕಟ್ಟಡದ ಮಾಲೀಕ ಯೋಗೇಂದ್ರ ಭಾಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.