#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Invest Karnataka: 'ನಾವೀನ್ಯತೆಗಳ ಭವಿಷ್ಯ’ ಪ್ರದರ್ಶನಕ್ಕೆ ಡಿಸಿಎಂ ಡಿಕೆಶಿ ಚಾಲನೆ; 40ಕ್ಕೂ ಹೆಚ್ಚು ಕಂಪನಿ ಭಾಗಿ

Invest Karnataka: ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ `ಫ್ಯೂಚರ್ ಆಫ್ ಇನ್ನೋವೇಶನ್’ ಎಕ್ಸ್-ಪೋಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಚಾಲನೆ ನೀಡಿದ್ದಾರೆ.

'ನಾವೀನ್ಯತೆಗಳ ಭವಿಷ್ಯ’ ಪ್ರದರ್ಶನಕ್ಕೆ ಡಿಸಿಎಂ ಡಿಕೆಶಿ ಚಾಲನೆ

Profile Prabhakara R Feb 12, 2025 7:12 PM

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (Invest Karnataka) ಯುವಜನರ ಗಮನ ಸೆಳೆಯುತ್ತಿರುವುದೆಂದರೆ, ನಾಳಿನ ನಮ್ಮ ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ನಾವೀನ್ಯತೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಏರ್ಪಡಿಸಿರುವ `ಫ್ಯೂಚರ್ ಆಫ್ ಇನ್ನೋವೇಶನ್’ ಎಕ್ಸ್-ಪೋಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಜತೆಯಾಗಿ ಬುಧವಾರ ಚಾಲನೆ ನೀಡಿದರು. ಬಳಿಕ ಶಿವಕುಮಾರ್ ಮತ್ತು ಪಾಟೀಲ ಇಬ್ಬರೂ ಕರ್ನಾಟಕ ಪೆವಿಲಿಯನ್, ಟೊಯೋಟಾ, ಎಂಬೆಸಿ ಗ್ರೂಪ್, ರಾಜ್ಯ ಪ್ರವಾಸೋದ್ಯಮ, ಡ್ರೋನ್ ತಂತ್ರಜ್ಞಾನದ ವೈಶಿಷ್ಟ್ಯಪೂರ್ಣ ಮಜಲುಗಳನ್ನು ಕುತೂಹಲದಿಂದ ವೀಕ್ಷಿಸಿ, ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಕೃಷಿಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಹೊತ್ತು ತರಲಿವೆ ಎನ್ನಲಾಗುತ್ತಿರುವ ಅಗ್ರಿ-ಟೆಕ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ರೋಗಪತ್ತೆ ಮತ್ತು ಚಿಕಿತ್ಸೆಗಳನ್ನು ಸುಲಭವಾಗಿಸುವ ಆರೋಗ್ಯಸೇವೆಗಳ ತಂತ್ರಜ್ಞಾನಗಳ ಬಗ್ಗೆಯೂ ಅವರು ಡಿ.ಕೆ.ಶಿವಕುಮಾರ್‌ ಹಾಗೂ ಎಂ.ಬಿ.ಪಾಟೀಲ್‌ ತಿಳಿದುಕೊಂಡರು.

ಪ್ರದರ್ಶನ ಕುರಿತು ಮಾತನಾಡಿದ ಸಚಿವ ಎಂ.ಬಿ.ಪಾಟೀಲ್,‌ `ಇದರಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಈ ಪೈಕಿ ಜಾಗತಿಕ ಮಟ್ಟದ ಕಂಪನಿಗಳು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳೆರಡೂ ಇವೆ. ಡ್ರೋನ್, ಬಾಹ್ಯಾಕಾಶ, ಕೃಷಿ, ಆರೋಗ್ಯ, ಉತ್ಪಾದನಾ ವಲಯ, ವೈಮಾಂತರಿಕ್ಷ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುತ್ತಿರುವ ಆಧುನಿಕ ತಂತ್ರಜ್ಞಾನ ಧಾರೆಗಳನ್ನು ಇಲ್ಲಿ ನೋಡಬಹುದು’ ಎಂದರು.

DK Shivakumar (23)

ಮುಖ್ಯವಾಗಿ ಇಲ್ಲಿ ಮರುಬಳಕೆ ಇಂಧನ, ಸೆಮಿಕಂಡಕ್ಟರ್, ವಿದ್ಯುಚ್ಚಾಲಿತ ವಾಹನಗಳು ಮತ್ತು ಸುಸ್ಥಿರ ಉತ್ಪಾದನೆಗೆ ಹೆಸರಾದ ಕಂಪನಿಗಳು ಪಾಲ್ಗೊಂಡಿವೆ. ಜೊತೆಗೆ ರಾಜ್ಯದ ಸಾಧನೆಗಳನ್ನು ಬಿಂಬಿಸುವ ಪ್ರತ್ಯೇಕ `ಕರ್ನಾಟಕ ಪೆವಿಲಿಯನ್’ ಕೂಡ ಇದೆ. ಪಾಲ್ಗೊಂಡಿರುವ ಕಂಪನಿಗಳಲ್ಲಿ ಜಿ.ಇ ಹೆಲ್ತ್ ಕೇರ್, ಹೀರೋ ಫ್ಯೂಚರ್ ಎನರ್ಜೀಸ್, ರಿವರ್ ಮೊಬಿಲಿಟಿ, ಸರಳಾ ಏವಿಯೇಶನ್, ಗೆಲಾಕ್ಸಿ ಸ್ಪೇಸ್, ಲ್ಯಾಮ್ ರೀಸರ್ಚ್ ಪ್ರಮುಖವಾಗಿವೆ. `ಕರ್ನಾಟಕ ಪೆವಿಲಿಯನ್’ನಲ್ಲಿ ಕ್ವಿನ್ ಸಿಟಿ, ಫ್ಲೈಯಿಂಗ್ ವೆಡ್ಜ್, ಬೆಲ್ಲಾಟ್ರಿಕ್ಸ್, ಸ್ಕೀಸರ್ವ್, ಫ್ಲಕ್ಸ್ ಆಟೋ ಮುಂತಾದ ಉದ್ಯಮಗಳಿವೆ.

ಈ ಸುದ್ದಿಯನ್ನೂ ಓದಿ | Invest Karnataka 2025: ಬೆಂಗಳೂರು ಜತೆಗೆ ಕರ್ನಾಟಕವನ್ನೂ ಜಾಗತಿಕ ಕೇಂದ್ರವನ್ನಾಗಿ ಮಾಡೋಣ: ಡಿ.ಕೆ. ಶಿವಕುಮಾರ್

ಸ್ವಯಂಚಾಲಿತ ಕಾರಿನ ಮೇಲೆ ವಾಹನೋದ್ಯಮದ ನಿರೀಕ್ಷೆ

ಬೆಂಗಳೂರು: ಸ್ವಯಂಚಾಲಿತ ಕಾರುಗಳು ಮುಂದಿನ ದಿನಗಳಲ್ಲಿ ಸಂಚಾರ ಕ್ಷೇತ್ರದಲ್ಲಿನ ಬಹುದೊಡ್ಡ ತಂತ್ರಜ್ಞಾನವಾಗಲಿದೆ ಎಂದು ‘ಮರ್ಸಿಡಿಸ್-ಬೆನ್ಜ್ ಇಂಡಿಯಾ’ದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಸಂತೋಷ್‌ ಅಯ್ಯರ್‌ ಬುಧವಾರ ಅಭಿಪ್ರಾಯಪಟ್ಟರು.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ‘ಜಾಗತಿಕ ಹೂಡಿಕೆ ಸಮಾವೇಶ’ದಲ್ಲಿ ನಡೆದ ‘ವೇಗದ ನಗರೀಕರಣದ ವೇಳೆ ಸಂಚಾರ ಕ್ಷೇತ್ರದ ಭವಿಷ್ಯ’ ಗೋಷ್ಠಿಯಲ್ಲಿ ಮಾತನಾಡಿದರು.

ಸರಕಾರ ಕಾರುಗಳ ಮೇಲೆ 68% ತೆರಿಗೆ ವಿಧಿಸುತ್ತಿದೆ. ಆದರೆ ಆ ಹಣ ಬೇರೆಡೆ ಬಳಕೆಯಾಗುತ್ತಿರುವುದು ಈ ಕ್ಷೇತ್ರದ ಸಮಸ್ಯೆಗಳು ಉಳಿಯಲು ಕಾರಣವಾಗಿದೆ. ದೇಶದ ಪ್ರತಿ ರಾಜ್ಯದಲ್ಲೂ ಸಾರಿಗೆ-ಸಂಚಾರ ಕ್ಷೇತ್ರಕ್ಕೆ ಸಂಬಂಧಿಸಿ ವಿಭಿನ್ನ ನಿಯಮಗಳು ಜಾರಿಯಲ್ಲಿರುವುದು ಸುಸ್ಥಿರತೆಯನ್ನು ವ್ಯಾಪಕಗೊಳಿಸುವಲ್ಲಿ ವಾಹನ ತಯಾರಕರಿಗೆ ತೊಡಕಾಗಿದೆ,” ಎಂದರು.

ರಿವರ್‌ ಮೊಬಿಲಿಟಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಅರವಿಂದ್ ಮಣಿ ಮಾತನಾಡಿ, “ಬೆಂಗಳೂರಿನಲ್ಲಿ ದಟ್ಟಣೆ ತಗ್ಗಿಸುವುದು ಎಷ್ಟು ಮುಖ್ಯವೋ, ಅಕ್ಕಪಕ್ಕದ ನಗರಗಳನ್ನು ಬೆಂಗಳೂರಿಗೆ ಸಂಪರ್ಕಿಸುವುದೂ ಅಷ್ಟೇ ಮುಖ್ಯ. ಇದು ಅಭಿವೃದ್ಧಿಯನ್ನು ಬೆಂಗಳೂರಿನ ಆಚೆಗೂ ಕೊಂಡೊಯ್ಯಲು ನೆರವಾಗಲಿದೆ. ಅಲ್ಲದೆ, ನಗರದಲ್ಲಿ ವಾಹನಗಳ ಹೊಗೆಯನ್ನೂ ತಗ್ಗಿಸುವಲ್ಲಿ ಸಹಕಾರಿಯಾಗುತ್ತದೆ,” ಎಂದರು.

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ ಸಂಚಾರ ಕ್ಷೇತ್ರದಲ್ಲಿ ನಾವೀನ್ಯತೆ ತರುವಾಗ ಎಚ್ಚರ ವಹಿಸಬೇಕು. ಇಲ್ಲವಾದರೆ ಸುಸ್ಥಿರತೆ ಹೆಸರಿನಲ್ಲಿ ಸಾವಿರಾರು ಜನರ ಉದ್ಯೋಗ ಕಸಿಯುವ ಅಪಾಯವಿರುತ್ತದೆ. ಸರಕಾರ ಎಲ್ಲಾ ರೀತಿಯ ವಾಹನಗಳ ಸಂಚಾರದ ಡೇಟಾ ಆಧರಿಸಿ ಮೊಬಿಲಿಟಿ ಕ್ಷೇತ್ರದ ಸುಧಾರಣೆಗೆ ಯೋಜನೆ ರೂಪಿಸಬೇಕು,’’ ಎಂದು ಸಿಇಇಡಬ್ಲ್ಯು ನಿರ್ದೇಶಕ ಕಾರ್ತಿಕ್ ಗಣೇಶನ್ ವಿವರಿಸಿದರು.

ಬೋಯಿಂಗ್‌ನ ‘ರಾಬರ್ಟ್ ಬಾಯ್ಡ್, “ವಿಮಾನಯಾನ ಕ್ಷೇತ್ರ ಹೆಚ್ಚು ಪಾಲುದಾರಿಕೆಯನ್ನು ಬಯಸುತ್ತದೆ. ಏರೋಸ್ಪೇಸ್‌, ಇಂಧನ, ಹಣಕಾಸು ಮತ್ತು ಸರಕಾರಗಳು ಪಾಲುದಾರಿಕೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಈ ಕ್ಷೇತ್ರ ಹೆಚ್ಚು ಪ್ರಗತಿ ಕಾಣಲು ಸಾಧ್ಯ. ಸುಸ್ಥಿರತೆ ಸಾಧಿಸುವಲ್ಲಿ ಬೇರೆಲ್ಲ ಕ್ಷೇತ್ರಕ್ಕಿಂತ ವಿಮಾನಯಾನ ಕ್ಷೇತ್ರ ಮುಂದಿದೆ,” ಎಂದರು.

ಇದೇವೇಳೆ, ಬೆಂಗಳೂರಿನ ಬೋಯಿಂಗ್‌ ಕೇಂದ್ರದಲ್ಲಿ ಸುಮಾರು 6 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಈ ತಂಡ ವಿಶ್ವದಲ್ಲೇ ಬೋಯಿಂಗ್‌ನ ಅತ್ಯುತ್ತಮ ತಂಡವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ದಿ ಎಕನಾಮಿಸ್ಟ್‌ನ ‘ಗ್ರಾಫಿಕ್ ವಿವರ’ ವಿಭಾಗದ ಸಂಪಾದಕಿ ಮಿಚೆಲ್ ಹೆನ್ನೆಸ್ಸಿ ಗೋಷ್ಠಿ ನಿರ್ವಹಿಸಿದರು.