ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಭೆ
ಸಾಲ ನೀಡುವಾಗ ಮತ್ತು ಹಿಂಪಡೆಯುವಾಗ ಏನೆಲ್ಲಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸ ಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನಗಳನ್ನು ನೀಡಿದೆ ಅವುಗಳನ್ನು ಹಣ ಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳು, ವ್ಯಕ್ತಿಗಳು ಕಡ್ಡಾಯವಾಗಿ ಪಾಲಿಸಬೇಕು
ಚಿಕ್ಕಬಳ್ಳಾಪುರ: ಸಾಲ ನೀಡುವಾಗ ಬಡ್ಡಿದರ, ಹಿಂಪಡೆಯುವ ಅವಧಿ, ಪ್ರೊಸೆಸಿಂಗ್ ಶುಲ್ಕ ಹಾಗೂ ಹೆಚ್ಚುವರಿ ಶುಲ್ಕಗಳು ಏನೇ ಇದ್ದರೂ ಸಾಲ ಪಡೆಯುವವರಿಗೆ ಮುಂಚಿತವಾಗಿಯೇ ತಿಳಿಸ ಬೇಕು. ಯಾವುದೇ ಶುಲ್ಕಗಳನ್ನು ಮುಚ್ಚಿಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೋಂದಾಯಿತ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳಿಗೆ, ಲೇವಾದೇವಿಗಾರರಿಗೆ ಹಾಗೂ ಗಿರಿವಿದಾರರಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿ ಗಳು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Budget 2025: ʻಗುಂಡೇಟು ಗಾಯಗಳಿಗೆ ಬ್ಯಾಂಡೇಜ್ʼ-ಕೇಂದ್ರ ಬಜೆಟ್ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ!
ಸಾಲವನ್ನು ನೀಡುವಾಗ ಮತ್ತು ಹಿಂಪಡೆಯುವಾಗ ಏನೆಲ್ಲಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸ ಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನಗಳನ್ನು ನೀಡಿದೆ ಅವುಗಳನ್ನು ಹಣ ಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳು, ವ್ಯಕ್ತಿಗಳು ಕಡ್ಡಾಯವಾಗಿ ಪಾಲಿಸಬೇಕು.
ಸಾಲ ಪಡೆಯಲು ಇಚ್ಚಿಸಿ ಅರ್ಜಿ ಸಲ್ಲಿಸುವವರ ಆದಾಯದ ಸಾಮರ್ಥ್ಯವನ್ನು ಪರಿಶೀಲಿಸಬೇಕು. ಅವರ ಪ್ರತಿ ತಿಂಗಳ ಹಣ ಕಟ್ಟುವ ಸಾಮರ್ಥ್ಯವನ್ನು ಮೀರಿ ಸಾಲ ವಿತರಣೆ ಮಾಡಬಾರದು. ಸಾಲ ಕೊಡುವಾಗ ಅವರ ಮಾಸಿಕ ವೇತನ ಹಾಗೂ ಆದಾಯದ ಮೂಲವನ್ನು ಆಧರಿಸಿ ನೀಡಬೇಕು. ಅತಿ ಹೆಚ್ಚು ಇ.ಎಂ.ಐ ಪಾವತಿಸಲು ಸೂಚಿಸಬಾರದು ಎಂದರು.
ಮಾಸಿಕ ಆದಾಯ ಅಥವಾ ವೇತನದ ಶೇಕಡ ೫೦ ಕ್ಕಿಂತ ಹೆಚ್ಚು ಇರಬಾರದು. ಸಂಜೆ 6 ರಿಂದ ಬೆಳಿಗ್ಗೆ ೯ ರವರೆಗೆ ಸಾಲ ಹಿಂಪಡೆಯುವ ಯಾವುದೇ ಪ್ರಕ್ರಿಯೆಗಳನ್ನು ಮಾಡಬಾರದು. ಬೆಳಿಗ್ಗೆ 9 ರಿಂದ ಸಂಜೆ ೬ ರವರೆಗೆ ಮಾತ್ರ ಕರೆ ಮಾಡಬಹುದು. ಕರೆ ಮಾಡುವಾಗ ಬೆದರಿಕೆ ಹಾಕುವುದು ಹಾಗೂ ಕೆಟ್ಟ ಪದಗಳನ್ನು ಬಳಸಿ ನಿಂದಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಾಲ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದವರ ಸಂಬಂಧಿಕರು, ಸ್ನೇಹಿತರು ಹಾಗೂ ಸಹೋ ದ್ಯೋಗಿಗಳ ಮುಖಾಂತರ ಸಾಲ ವಾಪಸ್ಸು ಪಡೆಯಲು ಕಿರುಕುಳ ಕೊಡುವಂತಿಲ್ಲ. ಸಾಲ ಪಡೆದ ವಿವರವನ್ನು ಗೌಪ್ಯವಾಗಿಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಬಹಿರಂಗವಾಗಿ ಪ್ರಚಾರ ವಾಗುವಂತೆ ಸಾಲ ತೀರಿಸಲು ಕೇಳಬಾರದು. ಅವರ ಕುಟುಂಬಕ್ಕೆ, ಆಸ್ತಿಗೆ ಹಾನಿ ಮಾಡಬಾರದು. ರೌಡಿಗಳನ್ನು, ಗೂಂಡಾಗಳನ್ನು ಸಾಲ ವಸೂಲಾತಿಗೆ ಕಳುಹಿಸುವುದು, ಮಾಡುವುದು, ಜಿಲ್ಲೆಯ ಯಾವುದೇ ಭಾಗದಲ್ಲಿ ಜರುಗಬಾರದು. ಅಂತಹ ಪ್ರಕರಣ ಕಂಡು ಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಯ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಲೇವಾದೇವಿಗಾರರು ಕಿರುಕುಳ ನೀಡಿದರೆ ಕರೆ ಮಾಡಿ
ಯಾವುದೇ ರೀತಿಯ ಹಣಕಾಸು ವ್ಯವಹಾರ ನೆಡೆಸುವವರು ಸಾಲಗಾರರೊಂದಿಗೆ ಸಭ್ಯತೆ ಹಾಗೂ ಗೌರವಾನ್ವಿತವಾಗಿ ವರ್ತಿಸಬೇಕು. ಖ ಃ I ನ ಸುತ್ತೋಲೆಯಲ್ಲಿರುವ ಅಂಶಗಳನ್ನು ಪಾಲಿಸಿ ಸಾಲ ನೀಡಿದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಸಮಸ್ಯೆಗಳು ಎದುರಾದರೆ ಕಾನೂನು ರೀತ್ಯ ಕ್ರಮಕ್ಕೆ ಮುಂದಾಗಬೇಕು. ಅದು ಬಿಟ್ಟು ದೌರ್ಜನ್ಯ ಕಿರುಕುಳ ಹಾಗೂ ಹಿಂಸಾತ್ಮಕ ಕ್ರಮಗಳಿಗೆ ಮುಂದಾದರೆ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಆ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಹಣಕಾಸಿನ ವ್ಯವಹಾರ ಮಾಡುವವರು ಕಿರುಕುಳ ನೀಡಿದರೆ ಸಹಕಾರ ಸಂಘಗಳ ಉಪ ನಿಬಂಧಕರ ದೂ.ಸಂ: ೯೮೪೪೩೨೯೭೯೦ ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕರ ದೂ. ಸಂ ೯೩೭೯೮೬೨೪೨೬ ರವರಿಗೆ ಕರೆ ಮಾಡಿ ತಿಳಿಸಿದರೆ ಜಿಲ್ಲಾಡಳಿತ ಸಾಲಗಾರರ ನೆರವಿಗೆ ಬರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾಗರಾಜು, ಸಹಕಾರ ಸಂಘಗಳ ಉಪನಿಬಂಧಕ ಡಾ. ಶಂಕರ್, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು, ಹಣಕಾಸು ಲೇವಾದೇವಿಗಾರರು ಹಾಗೂ ಗಿರಿವಿದಾರರು ಮತ್ತು ಅಧಿಕಾರಿಗಳು ಹಾಜರಿದ್ದರು.