#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ʻಅಪ್ಪನ ಹಾದಿಯಲ್ಲಿ ಮಗʼ: ಶತಕ ಸಿಡಿಸಿದ ಆಂಡ್ರೆ ಫ್ಲಿಂಟಾಫ್‌ ಪುತ್ರ ರಾಕಿ!

ಇಂಗ್ಲೆಂಡ್‌ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಆಂಡ್ರೆ ಫ್ಲಿಂಟಾಫ್‌ ಅವರ ಪುತ್ರ ರಾಕಿ ಫ್ಲಿಂಟಾಫ್‌ ತಮ್ಮ ಬ್ಯಾಟ್‌ ಮೂಲಕ ಸದ್ದು ಮಾಡುತ್ತಿದ್ದಾರೆ. ಅವರು ಕ್ರಿಕೆಟ್‌ ಆಸ್ಟ್ರೇಲಿಯಾ XI ವಿರುದ್ಧ ಶತಕ ಬಾರಿಸಿದ್ದಾರೆ. ಅಲ್ಲದೆ ತಮ್ಮ ತಂದೆಯ ಎದುರೇ ಶತಕ ಸಿಡಿಸಿರುವುದು ಅತ್ಯಂತ ವಿಶೇಷವಾಗಿದೆ.

ಆಸ್ಟ್ರೇಲಿಯಾ  XI ವಿರುದ್ಧ ಸೆಂಚುರಿ ಬಾರಿಸಿದ ಆಂಡ್ರೆ ಫ್ಲಿಂಟಾಫ್‌ ಪುತ್ರ ರಾಕಿ!

Andrew Flintoff son scored century against Australia XI

Profile Ramesh Kote Jan 23, 2025 9:27 PM

ನವದೆಹಲಿ: ಇಂಗ್ಲೆಂಡ್‌ ತಂಡದ ಮಾಜಿ ಆಲ್‌ರೌಂಡರ್‌ ಆಂಡ್ರೆ ಫ್ಲಿಂಟಾಫ್‌ (Andrew Flintoff) ಅವರ ಪುತ್ರ ರಾಕಿ ಫ್ಲಿಂಟಾಫ್‌ (Rocky Flintoff) ಕ್ರಿಕೆಟ್‌ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದಾರೆ. ಜನವರಿ 23 ರಂದು ಗುರುವಾರ ಇಂಗ್ಲೆಂಡ್‌ ಲಯನ್ಸ್‌ ಪರ 9ನೇ ಕ್ರಮಾಂಕದಲ್ಲಿ ರಾಕಿ ಕ್ರೀಸ್‌ಗೆ ಬಂದು ಅತ್ಯುತ್ತಮವಾಗಿ ಆಟವನ್ನು ಪ್ರದರ್ಶಿಸಿದರು.

ಇಂಗ್ಲೆಂಡ್‌ ಲಯನ್ಸ್‌ ತಂಡ 161 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದಿದ್ದ ಅವರು 127 ಎಸೆತಗಳಲ್ಲಿ 108 ರನ್‌ಗಳನ್ನು ಕಲೆ ಹಾಕಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಫ್ರೆಡೀ ಮೆಕ್‌ಕ್ಯಾನ್‌ ಜೊತೆ 8ನೇ ವಿಕೆಟ್‌ಗೆ ರಾಕಿ ಫ್ಲಿಂಟಾಫ್‌ 66 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಇಂಗ್ಲೆಂಡ್‌ ಲಯನ್ಸ್‌ ತಂಡ 200ರ ಗಡಿ ದಾಟಲು ನೆರವು ನೀಡಿದ್ದರು. ನಂತರ ಕೊನೆಯ ಇಬ್ಬರು ಬ್ಯಾಟ್ಸ್‌ಮನ್‌ಗಳಾದ ಜಾಶ್‌ ಟಾಂಗ್‌ ಮತ್ತು ಮಿಚೆಲ್‌ ಸ್ಟ್ಯಾನ್ಲೀ ಅವರ ಜೊತೆ ದೀರ್ಘಾವಧಿ ಬ್ಯಾಟ್‌ ಮಾಡುವ ಮೂಲಕ ಶತಕವನ್ನು ಪೂರ್ಣಗೊಳಿಸಿದ್ದರು.

ತಮ್ಮ ಅದ್ಭುತ ಶತಕದಲ್ಲಿ 16ರ ವಯಸ್ಸಿನ ರಾಕಿ ಫ್ಲಿಂಟಾಫ್‌ ಅವರು 6 ಭರ್ಜರಿ ಸಿಕ್ಸರ್‌ ಹಾಗೂ 9 ಬೌಂಡರಿಗಳನ್ನು ಸಿಡಿಸಿದರು. ಅಂತಿಮವಾಗಿ ಇಂಗ್ಲೆಂಡ್‌ ಲಯನ್ಸ್‌ ತಂಡ 316 ರನ್‌ಗಳನ್ನು ಕಲೆ ಹಾಕಿತು. ಅಂದ ಹಾಗೆ ಈ ಹಿಂದಿನ ಪಂದ್ಯದಲ್ಲಿ ಆಂಡ್ರೆ ಫ್ಲಿಂಟಾಫ್‌ ಪುತ್ರ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ 19 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 4 ರನ್‌ ಗಳಿಸಿ ಔಟ್‌ ಆಗಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್‌ ಲಯನ್ಸ್‌ 7 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

Ranji Trophy: ರಣಜಿಯಲ್ಲೂ ರೋಹಿತ್‌, ಜೈಸ್ವಾಲ್‌, ಗಿಲ್‌ ವಿಫಲ

ರಾಕಿ ಫ್ಲಿಂಟಾಫ್ ವೃತ್ತಿಜೀವನ

ರಾಕಿ ಫ್ಲಿಂಟಾಫ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 4 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 87 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದಲ್ಲದೆ, ರಾಕಿ 7 ಲಿಸ್ಟ್ ʻಎʼ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಕೇವಲ ಒಂದು ಅರ್ಧಶತಕದೊಂದಿಗೆ 167 ರನ್ ಗಳಿಸಿದ್ದಾರೆ. ರಾಕಿ ಗಳಿಸಿದ ಶತಕ ಅವರಿಗೆ ತುಂಬಾ ವಿಶೇಷವಾಗಿದೆ, ಏಕೆಂದರೆ ಇದು ದೊಡ್ಡ ವೇದಿಕೆಯಲ್ಲಿ ಅವರ ತಂದೆಯ ಮುಂದೆ ಮೂಡಿ ಬಂದ ಶತಕವಾಗಿದೆ.



ಹೋದ ವರ್ಷ ಜೂನ್‌ನಲ್ಲಿ ರಾಕಿ ಫ್ಲಿಂಟಾಫ್‌ ಲ್ಯಾನ್ಸ್‌ಶೈರ್‌ ತಂಡದ ಪರ ಆಡಲು ಸಹಿ ಹಾಕಿದ್ದರು. ಇದು ಇವರ ಮೊದಲ ವೃತ್ತಿಪರ ಗುತ್ತಿಯಾಗಿದೆ. ಇಂಗ್ಲೆಂಡ್‌ ಲಯನ್ಸ್‌ ತಂಡದಲ್ಲಿ ರಾಕಿ ಜೊತೆಗೆ ಇಂಗ್ಲೆಂಡ್‌ ಹಿರಿಯರ ತಂಡದ ಶೋಯೆಬ್‌ ಬಶೀರ್‌, ಪ್ಯಾಟ್‌ ಬ್ರೌನ್‌, ಜಾಶ್‌ ಟಾಂಗ್‌ ಹಾಗೂ ಜಾಶ್‌ ಟರ್ನರ್‌ ಕೂಡ ಆಡುತ್ತಿದ್ದಾರೆ.

ಇಂಗ್ಲೆಂಡ್‌ ದಿಗ್ಗಜ ಆಲ್‌ರೌಂಡರ್‌ ಆಂಡ್ರೆ ಫ್ಲಿಂಟಾಫ್‌

ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಆಂಡ್ರೆ ಫ್ಲಿಂಟಾಫ್ ಇಂಗ್ಲೆಂಡ್‌ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ 79 ಟೆಸ್ಟ್‌ ಪಂದ್ಯಗಳು, 141 ಒಡಿಐ ಪಂದ್ಯಗಳು ಹಾಗೂ 7 ಟಿ20ಐ ಪಂದ್ಯಗಳನ್ನು ಇಂಗ್ಲೆಂಡ್‌ ಪರ ಆಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಫ್ಲಿಂಟಾಫ್ 3845 ರನ್ ಗಳಿಸಿ 226 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 3394 ರನ್ ಜೊತೆಗೆ 169 ವಿಕೆಟ್ ಉರುಳಿಸಿದ್ದಾರೆ. ಇನ್ನು ಟಿ20ಐ ಕ್ರಿಕೆಟ್‌ನಲ್ಲಿ 76 ರನ್‌ಗಳ ಜೊತೆಗೆ 5 ವಿಕೆಟ್‌ ಪಡೆದಿದ್ದಾರೆ.