Saif Ali Khan: ಸೈಫ್ ಆಲಿ ಖಾನ್ ಪೂರ್ವಜರ 15,000 ಕೋಟಿ ಆಸ್ತಿ ಮುಟ್ಟುಗೋಲು? ಎಲ್ಲವೂ ಸರ್ಕಾರದ ನಿಯಂತ್ರಣಕ್ಕೆ!
ಬಾಲಿವುಡ್‌ನ ಖ್ಯಾತ ನಟ ಸೈಫ್ ಆಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ಸೇರಿದ 15,000 ಕೋಟಿ ಮೌಲ್ಯದ ಪೂರ್ವಜರ ಆಸ್ತಿಗಳ ಮೇಲಿನ ತಡೆಯಾಜ್ಞೆಯನ್ನು ನ್ಯಾಯಾಲಯವು ರದ್ದುಗೊಳಿಸಿದ್ದು,ಆ ಆಸ್ತಿಗಳೆಲ್ಲವೂ ಕೇಂದ್ರದ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸೈಫ್ ಆಲಿ ಖಾನ್ ಮಕ್ಕಳು ಇನ್ನು ನವಾಬರಾಗಿ ಉಳಿಯುವುದಿಲ್ಲ ಎನ್ನಲಾಗಿದೆ.
ಭೋಪಾಲ್: ದುಷ್ಕರ್ಮಿಯಿಂದ ಹಲ್ಲೆಗೊಳಗಾಗಿದ್ದ ಬಾಲಿವುಡ್ ನಟ ಸೈಫ್ ಆಲಿ ಖಾನ್(Saif Ali Khan) ಎರಡು ಸರ್ಜರಿಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಸಮಾಧಾನದ ನಿಟ್ಟುಸಿರು ಬಿಡುವಷ್ಟರೊಳಗೆ ಅವರ ಕುಟುಂಬಕ್ಕೆ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಬಂದೆರಗಿದೆ. ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ(Pataudi Family) ಸೇರಿದ 15,000 ಕೋಟಿ ಮೌಲ್ಯದ ಪೂರ್ವಜರ ಆಸ್ತಿಗಳ ಮೇಲಿನ ತಡೆಯಾಜ್ಞೆಯನ್ನು ನ್ಯಾಯಾಲಯವು ರದ್ದುಗೊಳಿಸಿದ್ದು, ಆ ಆಸ್ತಿಗಳೆಲ್ಲವೂ ಕೇಂದ್ರದ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಪ್ರದೇಶ ಹೈಕೋರ್ಟ್, ಸೈಫ್ ಖಾನ್ ಅವರ ಪೂರ್ವಜರ ಆಸ್ತಿಗಳ ಮೇಲೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ತೆಗೆದುಹಾಕಿದೆ. ಇದು ಶತ್ರು ಆಸ್ತಿ ಕಾಯಿದೆ, 1968 ರ ಅಡಿಯಲ್ಲಿ ಅವುಗಳ ಸ್ವಾಧೀನಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಕಾಯಿದೆಯ ಪ್ರಕಾರ, 1947 ರ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಒಡೆತನದ ಆಸ್ತಿಯನ್ನು ಕೇಂದ್ರ ಸರಕಾರವು ವಶಕ್ಕೆ ತೆಗೆದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ:Saif Ali Khan: ಆಸ್ಪತ್ರೆಯಿಂದ ನಟ ಸೈಫ್ ಆಲಿ ಖಾನ್ ಡಿಸ್ಚಾರ್ಜ್
2024, ಡಿಸೆಂಬರ್ 13 ರಂದು ಹೈಕೋರ್ಟ್‌ನ ಏಕ ಪೀಠವು 30 ದಿನಗಳಲ್ಲಿ ಮೇಲ್ಮನವಿ ಪ್ರಾಧಿಕಾರದ ಮುಂದೆ ತಮ್ಮ ಕಡೆಯಿಂದ ಹಾಜರಾಗಲು ಪಟೌಡಿ ಕುಟುಂಬವನ್ನು ಕೇಳಿದೆ. ಜನವರಿ 21 ರವರೆಗೆ ಕುಟುಂಬ ಏನು ಮಾಡಿದೆ ಎಂಬುದು ಸ್ಪಷ್ಟವಾಗಿಲ್ಲ. ಭೋಪಾಲ್ ಜಿಲ್ಲಾಡಳಿತವು ಇಂತಹ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆದರೆ, ಹೈಕೋರ್ಟ್ ಆದೇಶ ಸ್ಪಷ್ಟವಾದ ನಂತರವಷ್ಟೇ ಕ್ರಮ ಕೈಗೊಳ್ಳಲಾಗುವುದು ಎಂದು ಭೋಪಾಲ್ ಕಲೆಕ್ಟರ್ ಕೌಶಲೇಂದ್ರ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಏನಿದು ಪ್ರಕರಣ?
ಮುಂಬೈ ಮೂಲದ ಎನಿಮಿ ಪ್ರಾಪರ್ಟಿ ಕಸ್ಟೋಡಿಯನ್ ಆಫೀಸ್ 2015 ರಲ್ಲಿ ಭೋಪಾಲ್‌ನ ನವಾಬರ ಭೂಮಿಯನ್ನು ಸರಕಾರಿ ಆಸ್ತಿ ಎಂದು ಘೋಷಿಸಿತ್ತು, ನಂತರ ಪಟೌಡಿ ಕುಟುಂಬವು ನ್ಯಾಯಾಲಯದ ಮೊರೆ ಹೋಗಿತ್ತು. ಸೈಫ್ ಆಲಿ ಖಾನ್ ಅವರ ತಾಯಿ ಶರ್ಮಿಳಾ ಟ್ಯಾಗೋರ್, ಸಹೋದರಿಯರಾದ ಸೋಹಾ ಆಲಿ ಖಾನ್, ಸಬಾ ಆಲಿ ಖಾನ್, ಮನ್ಸೂರ್ ಆಲಿ ಖಾನ್ ಪಟೌಡಿ ಅವರ ಸಹೋದರಿ ಸಬಿಹಾ ಸುಲ್ತಾನ್ ಮತ್ತು ಇತರರ ವಿರುದ್ಧ 2015 ರಲ್ಲಿ ಉಚ್ಚ ನ್ಯಾಯಾಲಯವು ಶತ್ರು ಆಸ್ತಿ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿತ್ತು.
ಪಟೌಡಿ ಕುಟುಂಬವು ಭೋಪಾಲ್ ಮತ್ತು ರೈಸೆನ್‌ನಲ್ಲಿ ತಮ್ಮ ಭೂಮಿಯನ್ನು ಬಳಸಿಕೊಂಡಿದ್ದು, ಇದರಲ್ಲಿ ಕೊಹೆಫಿಜಾ ಅವರ ಫ್ಲಾಗ್ ಹೌಸ್, ಅಹಮದಾಬಾದ್ ಅರಮನೆ, ಕೋಠಿ ಮತ್ತು ರೈಸನ್‌ನ ಚಿಕ್ಲೋಡ್‌ನಲ್ಲಿರುವ ಅರಣ್ಯ ಭೂಮಿ ಒಳಗೊಂಡಿದೆ.
1947 ರಲ್ಲಿ, ಭೋಪಾಲ್ ರಾಜಪ್ರಭುತ್ವದ ರಾಜ್ಯವಾಗಿತ್ತು. ಅದರ ಕೊನೆಯ ನವಾಬ, ನವಾಬ್ ಹಮೀದುಲ್ಲಾ ಖಾನ್ 1950 ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಮನ್ಸೂರ್ ಆಲಿ ಖಾನ್ ಪಟೌಡಿ ಅವರ ತಾಯಿಯ ಅಜ್ಜ ನವಾಬ್ ಹಮೀದುಲ್ಲಾ ಖಾನ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದರು, ಅವರಲ್ಲಿ ಹಿರಿಯವಳು ಅಬಿದಾ ಸುಲ್ತಾನ್. ಎರಡನೇ ಪುತ್ರಿ, ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದುಕೊಂಡಿದ್ದರು. ಸೈಫ್ ಆಲಿ ಖಾನ್ ಅವರ ಅಜ್ಜ ನವಾಬ್ ಇಫಿಕರ್ ಆಲಿ ಖಾನ್ ಪಟೌಡಿ ಅವರನ್ನು ವಿವಾಹವಾಗಿದ್ದರು. ಆಸ್ತಿಗಳಿಗೆ ಕಾನೂನುಬದ್ಧ ಉತ್ತರಾಧಿಕಾರಿಯಾದರು.
2019 ರಲ್ಲಿ, ನ್ಯಾಯಾಲಯವು ಸಾಜಿದ್ ಸುಲ್ತಾನ್ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಿತ್ತು. ಅವರ ಮೊಮ್ಮಗ ಸೈಫ್ ಆಲಿ ಖಾನ್ ಅವರು ಆಸ್ತಿಯ ಪಾಲನ್ನು ಪಡೆದಿದ್ದರು. ಈ ಮಧ್ಯೆ ಅಬಿದಾ ಸುಲ್ತಾನ್ ಪಾಕಿಸ್ತಾನಕ್ಕೆ ವಲಸೆ ಹೋದ ಪರಿಣಾಮವಾಗಿ ಕೇಂದ್ರ ಸರ್ಕಾರವು ಆಸ್ತಿಗಳನ್ನು ಶತ್ರು ಆಸ್ತಿ ಎಂದು ಹೇಳಿಕೊಂಡಿತ್ತು. ಇದೀಗ ಪಟೌಡಿ ಕುಟುಂಬದ 15 ಸಾವಿರ ಕೋಟಿ ಆಸ್ತಿಯನ್ನು ಸರ್ಕಾರವು ತನ್ನ ನಿಯಂತ್ರಣಕ್ಕೆ ತಗೆದುಕೊಳ್ಳುವ ಸಾಧಗಯತೆಯಿದ್ದು,ಇನ್ನು ಮುಂದೆ ಸೈಫ್ ಆಲಿ ಖಾನ್ ಮಕ್ಕಳು ನವಾಬರಾಗಿ ಉಳಿಯುವುದಿಲ್ಲ ಎಂದು ತಿಳಿದು ಬಂದಿದೆ.