Hariprriya: ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ; ವೆಡ್ಡಿಂಗ್ ಆ್ಯನಿವರ್ಸರಿಯಂದೇ ಗುಡ್ ನ್ಯೂಸ್
2023ರ ಜ. 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಸ್ಯಾಂಡಲ್‌ವುಡ್‌ನ ಸ್ಟಾರ್ ದಂಪತಿ ವಸಿಷ್ಠ ಎನ್. ಸಿಂಹ ಮತ್ತು ಹರಿಪ್ರಿಯಾ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಭಾನುವಾರ (ಜ. 26) ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ

ಬೆಂಗಳೂರು: ಸ್ಯಾಂಡಲ್‌ವುಡ್ ಸ್ಟಾರ್ ದಂಪತಿ ವಸಿಷ್ಠ ಎನ್. ಸಿಂಹ (Vasishta N. Simha) ಮತ್ತು ಹರಿಪ್ರಿಯಾ (Hariprriya) ದಂಪತಿ ತಮ್ಮ ಮದುವೆಯ ವಾಷಿಕೋತ್ಸವದಂದೇ (ಜ. 26) ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಹೌದು, ಭಾನುವಾರ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ವಸಿಷ್ಠ ಸಿಂಹ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ದಂಪತಿ 2023ರ ಜ. 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವು ತಿಂಗಳ ಹಿಂದೆ ಹರಿಪ್ರಿಯಾ ತಾವು ಗರ್ಭಿಣಿಯಾಗಿರುವ ವಿಚಾರ ಬಹಿರಂಗಪಡಿಸಿದ್ದರು. ಬಳಿಕ ಅವರು ಬೇಬಿಬಂಪ್ ಫೋಟೊ ಹಂಚಿಕೊಂಡಿದ್ದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹರಿಪ್ರಿಯಾ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ʼʼನಮ್ಮ ಮದುವೆ ದಿನವೇ ಅವನು ಬಂದಿದ್ದಾನೆʼʼ ಎಂದು ವಸಿಷ್ಠ ಸಿಂಹ ಅವರು ಪೋಸ್ಟ್ ಮಾಡಿದ್ದಾರೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ 2 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗೆ ಮಿಲನಾ ನಾಗರಾಜ್, ಪ್ರಣಿತಾ ಸುಭಾಷ್ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೊಬ್ಬ ಸ್ಯಾಂಡಲ್‌ವುಡ್ ದಂಪತಿ ಗುಡ್‌ನ್ಯೂಸ್ ನೀಡಿದೆ. ವಸಿಷ್ಠ ಸಿಂಹ-ಹರಿಪ್ರಿಯಾ ದಂಪತಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Thalapathy Vijay: ದಳಪತಿ ವಿಜಯ್ ಈಗ ʼಜನ ನಾಯಕನ್ʼ; ಕೊನೆ ಚಿತ್ರದ ಟೈಟಲ್ ರಿವೀಲ್
2007ರಲ್ಲಿ ತೆರೆಕಂಡ ʼಬದಿʼ ತುಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಹರಿಪ್ರಿಯಾ 2008ರಲ್ಲಿ ʼಮನಸುಗಳ ಮಾತು ಮಧುರʼ ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆಗೈದರು. ಅದಾದ ಬಳಿಕ ತಮಿಳು, ತೆಲುಗು, ಮಲಯಾಳಂ ಸೇರಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ವಸಿಷ್ಠ ಸಿಂಹ ಅವರು 2013ರ ʼಆರ್ಯಾಸ್ ಲವ್ʼ ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಜತೆಗೆ ಇವರು ಗಾಯಕರೂ ಹೌದು. ಸ್ಯಾಂಡಲ್‌ವುಡ್‌ನ ಹೆಮ್ಮೆಯ ಪ್ರಶಾಂತ್ ನೀಲ್-ಯಶ್-ಶ್ರೀನಿಧಿ ಶೆಟ್ಟಿ ಕಾಂಬಿನೇಷನ್‌ನ ʼಕೆಜಿಎಫ್ʼ ಚಿತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ. 2023ರಲ್ಲಿ ತೆರೆಕಂಡ ʼಯದಾ ಯದಾ ಹಿʼ ಸಿನಿಮಾದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಜತೆಯಾಗಿ ಅಭಿನಯಿಸಿದ್ದಾರೆ.