ಬೆಂಗಳೂರು: ಸದ್ಯ ದೇಶ ಮಾತ್ರವಲ್ಲ ಜಗತ್ತಿನ ಗಮನ ಸೆಳೆಯುತ್ತಿರುವ ಚಿತ್ರ ಸ್ಯಾಂಡಲ್‌ವುಡ್‌ನ ʼಟಾಕ್ಸಿಕ್ʼ (Toxic Movie). ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ಗ್ಲೋಬಲ್ ಸ್ಟಾರ್ ಎನಿಸಿಕೊಂಡಿರುವ ಯಶ್ (Yash) ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಮಲಯಾಳಂನ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದೆ. ಗೋವಾದಲ್ಲಿ ನಡೆಯುವ ಡ್ರಗ್ಸ್ ಮಾಫಿಯಾದ ಕಥೆ ಒಳಗೊಂಡಿರುವ ಈ ಸಿನಿಮಾವನ್ನು ಹಾಲಿವುಡ್ ರೇಂಜಿನಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ. ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆ.ಜೆ.ಪೆರ‍್ರಿ (J.J.Perry) ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಹಿಂದೆಂದೂ ಭಾರತೀಯ ಚಿತ್ರರಂಗದಲ್ಲೇ ಕಂಡುಬರದ ರೀತಿಯಲ್ಲಿ, ಮೈ ನವಿರೇಳಿಸುವ ಹಾಗೆ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ ಎನ್ನಲಾಗಿದೆ.
ಮುಂಬೈನಲ್ಲಿ ʼಟಾಕ್ಸಿಕ್ʼ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಕಂಪೋಸ್ ಮಾಡಿರುವ ಹಾಲಿವುಡ್‌ನ ಜನಪ್ರಿಯ ಸ್ಟಂಟ್ ಮಾಸ್ಟರ್ ಜೆ.ಜೆ.ಪೆರ‍್ರಿ ಸದ್ಯ ತಾಯ್ನಾಡು ಅಮೆರಿಕಕ್ಕೆ ತೆರಳಿದ್ದಾರೆ. ಈ ಮಧ್ಯೆ ಅವರು ʼಟಾಕ್ಸಿಕ್ʼ ಚಿತ್ರದ ಶೂಟಿಂಗ್ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಯಶ್ ಅವರನ್ನು ಮನಸಾರೆ ಹೊಗಳಿದ್ದಾರೆ. ಯಶ್ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ರೀತಿ, ಅವರ ವೃತ್ತಿಪರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಅವರನ್ನು ಫ್ರೆಂಡ್ ಎಂದೂ ಕರೆದಿದ್ದಾರೆ.
ಜೆ.ಜೆ.ಪೆರ‍್ರಿ ಹಂಚಿಕೊಂಡ ಪೋಸ್ಟ್ ಇಲ್ಲಿದೆ.
ʼʼಗೆಳೆಯ ಯಶ್ ಜತೆ ʼಟಾಕ್ಸಿಕ್ʼ ಚಿತ್ರದಲ್ಲಿ ಕೆಲಸ ಮಾಡಿದ್ದು ಸಂತಸ ತಂದಿದೆ. ಭಾರತದಲ್ಲಿ ಉತ್ತಮ ಸಮಯ ಕಳೆದಿದ್ದೇನೆ. ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ. ನಮ್ಮ ಕೆಲಸದ ಬಗ್ಗೆ ಹೆಮ್ಮೆ ಇದೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಆ ಮೂಲಕ ʼಟಾಕ್ಸಿಕ್ʼ ಬಗ್ಗೆ ಇದ್ದ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Toxic Movie: ಕೊನೆಯ ಹಂತಕ್ಕೆ ಬಂದ ʼಟಾಕ್ಸಿಕ್ʼ ಚಿತ್ರ; ಮತ್ತೆ ಮುಂಬೈಗೆ ತೆರಳಿದ ಯಶ್ ಆ್ಯಂಡ್ ಟೀಂ
ಬೆಂಗಳೂರಿನಲ್ಲಿ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಗೋವಾ, ಮುಂಬೈ ಬಳಿಕ ಇದೀಗ ಮತ್ತೆ ಬೆಂಗಳೂರಿಗೆ ಮರಳಿದೆ. ವಿವಿಧ ಹಂತಗಳಲ್ಲಿ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಲಾಗಿದೆ. ಈ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿ ಬಾಲಿವುಡ್‌ನ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಸುಮಾರು 15 ವರ್ಷಗಳ ಬಳಿಕ ನಯನತಾರಾ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಅವರು ಚಿತ್ರದ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಚಿತ್ರದಲ್ಲಿ ಯಾರೆಲ್ಲ ಅಭಿನಯಿಸುತ್ತಿದ್ದಾರೆ ಎನ್ನುವ ಗುಟ್ಟು ರಟ್ಟಾಗಿಲ್ಲ.
ಯಶ್ ಅವರ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಜ. 8ರಂದು ರಿಲೀಸ್ ಆಗಿರುವ ಟೀಸರ್ ಈಗಾಗಲೇ ಗಮನ ಸೆಳೆದಿದ್ದು, ದಾಖಲೆಯ ವೀಕ್ಷಣೆ ಕಂಡಿದೆ. ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿ ಬರುತ್ತಿರುವ ಸೂಚನೆಯನ್ನು ಈ ಟೀಸರ್ ಬಹಿರಂಗಪಡಿಸಿದ್ದು, ಯಶ್ ಅವರ ಸ್ಟೈಲಿಶ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಜತೆಗೆ ಹಾಲಿವುಡ್ ರೇಂಜಿನಲ್ಲೇ ಟೀಸರ್ ಕಂಡು ಬಂದಿದ್ದು, ಸ್ಯಾಂಡಲ್‌ವುಡ್‌ನ ದಿಶೆಯನ್ನೇ ಬದಲಾಯಿಸುವ ಎಲ್ಲ ಸಾಮರ್ಥ್ಯವನ್ನೂ ಇದು ಒಳಗೊಂಡಿದೆ. ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷ ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.