ಬೆಂಗಳೂರು: ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಇತಿಹಾಸ ಬರೆದ 'ಕೆಜಿಎಫ್ 2' (KGF 2) ಚಿತ್ರ ರಿಲೀಸ್ ಆಗಿ ಇಂದಿಗೆ (ಏ. 14) ಭರ್ತಿ 3 ವರ್ಷ. ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ, ಪ್ರಶಾಂತ್ ನೀಲ್ (Prashanth Neel)-ಯಶ್ (Yash) ಕಾಂಬಿನೇಷನ್‌ನ ಇದು 2022ರ ಏ. 14ರಂದು ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸುಮಾರು 100 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಇದು ಗಳಿಸಿದ್ದು ಬರೋಬ್ಬರಿ 1,250 ಕೋಟಿ ರೂ. ಆ ಮೂಲಕ ಅತೀ ಹೆಚ್ಚು ಗಳಿಸಿದ ಟಾಪ್ 10 ಭಾರತೀಯ ಚಿತ್ರಗಳಲ್ಲಿ 'ಕೆಜಿಎಫ್ 2' ಕೂಡ ಸ್ಥಾನ ಪಡೆದಿದೆ. ಇಡೀ ದೇಶವೇ ಸ್ಯಾಂಡಲ್‌ವುಡ್‌ನತ್ತ ತಿರುಗಿನೋಡುವಂತೆ ಮಾಡಿದ ಈ ಚಿತ್ರದ 3ನೇ ಭಾಗದ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚಿತ್ರತಂಡ ಬಿಗ್ ಅಪ್‌ಡೇಟ್ ನೀಡಿದೆ. 'ಕೆಜಿಎಫ್ 3' (KGF 3 Update)ಯನ್ನು ಅಧಿಕೃತವಾಗಿ ಪ್ರಕಟಿಸಿದೆ.
'ಕೆಜಿಎಫ್' ಸರಣಿ ಚಿತ್ರಗಳನ್ನು ಕಣ್ತುಂಬಿಕೊಂಡ ಸಿನಿಪ್ರೇಮಿಗಳು 3ನೇ ಭಾಗಕ್ಕಾಗಿ ಕಾಯುತ್ತಲೇ ಇದ್ದಾರೆ. ರೋಚಕ ಘಟ್ಟದಲ್ಲಿ ಅಂತ್ಯವಾಗಿದ್ದ 'ಕೆಜಿಎಫ್ 2' ಚಿತ್ರದಲ್ಲಿ ಕಥೆ ಮುಂದುವರಿಯುವ ಬಗ್ಗೆ ಸೂಚನೆ ನೀಡಲಾಗಿತ್ತು. ಚಿನ್ನದೊಂದಿಗೆ ಸಮುದ್ರಕ್ಕೆ ಜಿಗಿದ ರಾಕಿ ಭಾಯ್ ಕಥೆ ಏನಾಯ್ತು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ. ಆದರೆ 'ಕೆಜಿಎಫ್ 3' ಚಿತ್ರ ಆರಂಭವಾಗುವ ಬಗ್ಗೆ ವದಂತಿಗಳು ಹರಡಿದ್ದವೇ ಹೊರತು ಅಧಿಕೃತವಾಗಿ ಯಾವುದೇ ಮಾಹಿತಿ ಹೊರ ಬಿದ್ದಿರಲಿಲ್ಲ. ಇದೀಗ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡ ಪೋಸ್ಟ್:
ʼಕೆಜಿಎಫ್ 2ʼ ಸಿನಿಮಾ 3 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ತುಣಕು ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್ ವಿಡಿಯೊದ ಕೊನೆಯಲ್ಲಿ ʼಕೆಜಿಎಫ್ 3ʼ ಎಂದು ಬರೆದುಕೊಂಡಿದೆ. ಇದು ಸರಣಿಯ 3ನೇ ಭಾಗ ಬರಲಿದೆ ಎನ್ನುವ ಸೂಚನೆ ಎನ್ನಲಾಗುತ್ತಿದೆ. ಈ ಬಗ್ಗೆ ಕಾತುರದಿಂದ ನಿರೀಕ್ಷಿಸುತ್ತಿದ್ದ ಫ್ಯಾನ್ಸ್ ರೋಮಾಂಚನಗೊಂಡಿದ್ದಾರೆ. ಅದಾಗ್ಯೂ ಯಾವಾಗ ಚಿತ್ರ ಸೆಟ್ಟೇರಲಿದೆ ಎನ್ನುವುದನ್ನು ಸಿನಿಮಾ ತಂಡ ಘೋಷಿಸಿಲ್ಲ. ಶೀಘ್ರ ಚಿತ್ರ ಆರಂಭಿಸಿ ಎಂದು ಹಲವರು ಬೇಡಿಕೆ ಇಟ್ಟಿದ್ದಾರೆ. ʼಕೆಜಿಎಫ್ʼ ಸರಣಿಯ ಮೊದಲ ಭಾಗ 2018ರಲ್ಲಿ ತೆರೆಕಂಡಿತ್ತು. 2ನೇ ಭಾಗ 4 ವರ್ಷದ ತರುವಾಯ ಅಂದರೆ 2022ರಲ್ಲಿ ಬಿಡುಗಡೆಯಾಗಿತ್ತು. ಅದರಂತೆ 3ನೇ ಭಾಗ 2026ರಲ್ಲಿ ರಿಲೀಸ್ ಆಗಬೇಕು. ಇದು ಸಾಧ್ಯವಾಗುತ್ತ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ʼಕೆಜಿಎಫ್ʼ ಸರಣಿ 70 ಮತ್ತು 80ರ ದಶಕದಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಕೋಲಾರ ಚಿನ್ನದ ಗಣಿಯ ಸುತ್ತವೇ ಸುತ್ತುತ್ತದೆ. ವೇಗವಾಗಿ ಸಾಗುವ ಕಥೆ, ಭರಪೂರ ಸಾಹಸ ದೃಶ್ಯಗಳು, ಅದ್ಭುತ ಕ್ಯಾಮೆರಾ ವರ್ಕ್, ಗಮನ ಸೆಳೆಯುವ ಹಾಡುಗಳು, ಕಾಡುವ ಹಿನ್ನೆಲೆ ಸಂಗೀತ, ಚುರುಕಾದ ಸಂಭಾಷಣೆ ಚಿತ್ರದ ಪ್ಲಸ್ ಪಾಯಿಂಟ್. ಇದರ ಜತೆಗೆ ಕಲಾವಿದರ ಅಭಿನಯವೂ ಮೋಡಿ ಮಾಡಿದೆ.
ಈ ಸುದ್ದಿಯನ್ನೂ ಓದಿ: KGF 3 Update: ಬಹುದೊಡ್ಡ ಸ್ಟಾರ್ ಸಮಾಗಮಕ್ಕೆ ಸ್ಯಾಂಡಲ್‌ವುಡ್ ಸಜ್ಜು; ʼಕೆಜಿಎಫ್ 3ʼ ಚಿತ್ರದಲ್ಲಿ ಯಶ್ ಜತೆ ನಟಿಸ್ತಾರ ಅಜಿತ್?
ಸ್ಟೈಲಿಶ್ ಲುಕ್, ಮಾಸ್ ಅವತಾರದಲ್ಲಿ ಯಶ್ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಜತೆಗೆ ಶ್ರೀನಿಧಿ ಶೆಟ್ಟಿ ಕೂಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅನಂತ್‌ನಾಗ್, ಪ್ರಕಾಶ್ ರೈ, ಸಂಜಯ್ ದತ್, ಅರ್ಚನಾ ಜೋಯಿಸ್, ಮಾಳವಿಕಾ ಅವಿನಾಶ್, ಗೋವಿಂದೇ ಗೌಡ, ಗರುಡ ರಾಮ್, ವಶಿಷ್ಟ ಸಿಂಹ, ರವೀನಾ ಟಂಡನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದೆ. ಮುಂದಿನ ಭಾಗದಲ್ಲಿ ಇವರೆಲ್ಲ ಇರಲಿದ್ದಾರಾ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಸದ್ಯಕ್ಕಂತೂ ಅನುಮಾನ
ಸದ್ಯಕ್ಕಂತೂ ಚಿತ್ರ ಸೆಟ್ಟೇರುವ ಸಾಧ್ಯತೆ ಇಲ್ಲ. ಪ್ರಶಾಂತ್ ನೀಲ್ ಮತ್ತು ಯಶ್ ಇದೀಗ ಬೇರೆ ಬೇರೆ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಈ ಚಿತ್ರಗಳನ್ನು ಮುಗಿಸಿ ಇವರು ʼಕೆಜಿಎಫ್ 3ʼ ಸಿನಿಮಾದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆಯೇ ವ್ಯಾಪಕ ಚರ್ಚೆ ನಡೆಯುತ್ತಿದೆ.