ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Dr Sadhanashree Column: ಆಂತರಿಕ ರಿಪುಗಳು ಅರಿಷದ್ವರ್ಗವಾದರೆ, ಬಾಹ್ಯರಿಪುಗಳಾರು ಬಲ್ಲಿರಾ ?

ಯಾವುದೋ ಒಂದು ಡ್ರೈನೇಜ್ ಪೈಪ್‌ನಲ್ಲಿ ಸರಾಗವಾಗಿ ಹರಿದುಹೋದಂತೆ ನಮ್ಮ ದೇಹ ದಲ್ಲಿ ಅದು ಹರಿದುಹೋಗಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ದೇಹವು ಒಂದು ಜೈವಿಕ ವ್ಯವಸ್ಥೆ. ನಾವು ನೀರು ಕುಡಿದ ಕೂಡಲೇ ತಕ್ಷಣವೇ ಅದು ಸಂಪರ್ಕಕ್ಕೆ ಬರುವುದು ನಮ್ಮ ಉದರದಲ್ಲಿ ಸ್ಥಿತವಾಗಿರುವ ಅಗ್ನಿಯ ಜತೆ

ಆಂತರಿಕ ರಿಪುಗಳು ಅರಿಷದ್ವರ್ಗವಾದರೆ, ಬಾಹ್ಯರಿಪುಗಳಾರು ಬಲ್ಲಿರಾ ?

ಅಂಕಣಗಾರ್ತಿ ಡಾ.ಸಾಧನಶ್ರೀ

Profile Ashok Nayak Feb 22, 2025 9:41 AM

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ಮನುಷ್ಯನ ಮನಶ್ಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಪ್ರತಿಬಂಧಕ ರೂಪವಾಗಿರುವ ಭಾವನೆಗಳನ್ನು ಶತ್ರುಗಳು (ಅರಿ) ಎಂದು ಕರೆದು ಅವುಗಳನ್ನು ಆರು ಗುಂಪಾಗಿ ವರ್ಗೀ ಕರಣ ಮಾಡುತ್ತಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ ಇವೇ ಆ ಅರಿಷಡ್ವರ್ಗಗಳು. ನಮ್ಮ ವಿಕಾಸಕ್ಕೆ ಅಡ್ಡಿಯಾಗಿ ನಿಂತಿರುವ ರಿಪುಗಳು. ಮನುಷ್ಯಜನ್ಮದ ಮಹತ್ತ್ವವಿರುವುದೇ ಈ ಆರನ್ನೂ ಜಯಿಸುವುದರಲ್ಲಿ. ಇವು ಆರೂ ಅಂತಃಶತ್ರುಗಳು. ಇವನ್ನು ಗೆದ್ದರೆ ಮನುಷ್ಯ ಲೋಕವನ್ನೇ ಗೆದ್ದಂತೆ; ಇವನ್ನು ಗೆಲ್ಲದೆ ಲೋಕವನ್ನೇ ಗೆದ್ದರೂ ಪರಾಜಿತನಾದಂತೆಯೇ. ಇವೆಲ್ಲವೂ ರಜೋ-ತಮೋಗುಣಗಳ ವೈಪರೀತ್ಯದಿಂದ ಉಂಟಾ ದುವೆಂದೂ ಇವನ್ನು ಧೃತಿಯಿಂದ ಗೆಲ್ಲಬೇಕೆಂದೂ ಶಾಸ್ತ್ರ ಹೇಳುತ್ತದೆ.

ಇವು ನಮ್ಮ ಮಾನಸಿಕ ಸ್ವಾಸ್ಥ್ಯದ ಶತ್ರುಗಳಾದರೆ ದೈಹಿಕ ಸ್ವಾಸ್ಥ್ಯವನ್ನು ಕೆಡಿಸುವ ಇನ್ನೂ ಆರು ರಿಪುಗಳಿದ್ದಾರೆ. ಶಾಸ್ತ್ರದಲ್ಲಿ ಅವುಗಳ ಉಖ ಹೀಗಿದೆ- “ಅತ್ಯಂಬುಪಾನಾತ್ ಅತಿಸಂಗ ಮಾತ್ ಚ ದಿವಾ ಚ ಸುಪ್ತೇಃ ನಿಶಿಜಾಗರಾತ್ ಚ | ಸಂರೋಧನಾತ್ ಮೂತ್ರಪುರೀಷ ಯೋಶ್ಚ ಷಡ್ಭಿರ್ನಿದಾನೈಃ ಪ್ರಭವಂತಿ ರೋಗಾಃ || ಹಾಗಾದರೆ ಈ 6 ಶತ್ರುಗಳು ಹೇಗೆ ನಮ್ಮ ಸ್ವಾಸ್ಥ್ಯವನ್ನು ಹಾಳುಮಾಡಬಲ್ಲರು ಎಂಬುದನ್ನು ಅರ್ಥೈಸಿಕೊಳ್ಳೋಣ.

ಇದನ್ನೂ ಓದಿ: Dr Sadhanashree Column: ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವ ಅಭ್ಯಾಸವಿದೆಯಾ ?

ಅತಿ ಅಂಬುಪಾನ: ಅಂದರೆ ಅತಿಯಾದ ನೀರು ಸೇವನೆ. ನನ್ನ ಕ್ಲಿನಿಕ್ಕಿಗೆ ಬರುವ ಕೆಲವರು, “ಡಾಕ್ಟ್ರೇ, ನಾನು ವಾಟ್ಸಾಪ್‌ನಲ್ಲಿ ನೋಡಿದೆ, ಬೆಳಗ್ಗೆ ಎದ್ದ ಕೂಡಲೇ ಕನಿಷ್ಠಪಕ್ಷ 2-3 ಲೀಟರ್‌ ನಷ್ಟು ನೀರು ಕುಡಿಯಬೇಕೆಂದು ಹೇಳಿzರೆ. ಹಾಗಾಗಿ ಪ್ರತಿನಿತ್ಯವೂ ನಾನು ಆ ಅಭ್ಯಾಸವನ್ನು ತಪ್ಪದೆ ಮಾಡುತ್ತಿದ್ದೇನೆ" ಎನ್ನುತ್ತಾರೆ. ಇಂಥ ಅಭ್ಯಾಸವನ್ನು ಬಹಳ ಆರೋಗ್ಯಕರ ಎಂದು ಪದೇ ಪದೆ ಬೇರೆ ಬೇರೆ ವೇದಿಕೆಗಳಲ್ಲಿ ಹೇಳಿ ಹೇಳಿ ಜನರ ಮನಸ್ಸಿ ನಲ್ಲಿಯೂ ‘ಹೀಗೆ ಅತಿಯಾಗಿ ನೀರು ಕುಡಿಯುವುದು ಆರೋಗ್ಯವನ್ನು ಪೋಷಿಸುತ್ತದೆ’ ಎಂಬ ಭಾವನೆ ಗಾಢವಾಗಿ ಬೇರೂರಿದೆ.

Sadha ok

ಹಾಗಾಗಿ ನಮಗೆ ಯಾವ ಆರೋಗ್ಯ ಸಮಸ್ಯೆ ಬಂದರೂ, ಅದು ಅತಿಯಾದ ನೀರು ಸೇವನೆ ಯಿಂದ ಬಂದಿರಬಹುದೇನೋ ಎಂಬ ಕಿಂಚಿತ್ ಸಂಶಯವು ನಮ್ಮ ಮನಸ್ಸಿಗೆ ಬರುವುದಕ್ಕೆ ಮುನ್ನವೇ ಅದನ್ನು ನಾವು ತಳ್ಳಿಹಾಕಿಬಿಡುತ್ತೇವೆ. ಕಾರಣ, ಇದು ಬಹಳ ಒಳ್ಳೆಯ ಅಭ್ಯಾಸ ಎನ್ನುವುದನ್ನು ನಮ್ಮ ಮನಸ್ಸು ಈಗಾಗಲೇ ತೀರ್ಮಾನಿಸಿಬಿಟ್ಟಿದೆ. ಆದರೆ, ವಾಸ್ತವವಾಗಿ ಅತಿಯಾದ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ. ಹೌದು, ನಾವು ನೆನಪಿನಲ್ಲಿ ಇಟ್ಟು ಕೊಳ್ಳಬೇಕಾದ ಅಂಶವೆಂದರೆ, ನೀರು ಒಂದು ಆಹಾರ ದ್ರವ್ಯ, ಅಂದರೆ ಅದು ನಮ್ಮ ದೇಹದಲ್ಲಿ ಜಠರಾಗ್ನಿಯ ಸಂಪರ್ಕಕ್ಕೆ ಬಂದು ಜೀರ್ಣವಾಗಿಯೇ ಮುಂದೆ ಸಾಗಬೇಕು.

ಯಾವುದೋ ಒಂದು ಡ್ರೈನೇಜ್ ಪೈಪ್‌ನಲ್ಲಿ ಸರಾಗವಾಗಿ ಹರಿದುಹೋದಂತೆ ನಮ್ಮ ದೇಹ ದಲ್ಲಿ ಅದು ಹರಿದುಹೋಗಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ದೇಹವು ಒಂದು ಜೈವಿಕ ವ್ಯವಸ್ಥೆ. ನಾವು ನೀರು ಕುಡಿದ ಕೂಡಲೇ ತಕ್ಷಣವೇ ಅದು ಸಂಪರ್ಕಕ್ಕೆ ಬರುವುದು ನಮ್ಮ ಉದರದಲ್ಲಿ ಸ್ಥಿತವಾಗಿರುವ ಅಗ್ನಿಯ ಜತೆ.

ಹಾಗಾಗಿ, ನಾವು ಅಕ್ರಮವಾಗಿ ನೀರು ಸೇವಿಸಿದರೆ ಅದು ಮೊದಲು ಹಾಳುಮಾಡುವುದು ನಮ್ಮ ಅಗ್ನಿಯನ್ನು. ಕ್ರಮೇಣ ಈ ತೊಂದರೆ ಇಡೀ ದೇಹಕ್ಕೆ ಪಸರಿಸಿ ಬೇರೆ ಬೇರೆ ರೀತಿಯ ವ್ಯಾಧಿಗಳು ಕಾಣಿಸಿಕೊಳ್ಳುತ್ತವೆ. ಸಣ್ಣದಾದ ಅಲರ್ಜಿ ಇರಬಹುದು ಅಥವಾ ಅಜೀರ್ಣ, ಹೊಟ್ಟೆಉಬ್ಬರ, ಅಸಿಡಿಟಿ, ಸಂಧಿ ಊತದಂಥ ಸಮಸ್ಯೆಗಳವರೆಗೂ ತಪ್ಪಾದ ನೀರು ಸೇವನೆಯೇ ಕಾರಣ. ಹಾಗಾಗಿ, ಸರಳವಾಗಿ ಹೇಳಬೇಕೆಂದರೆ- ಬಾಯಾರಿಕೆಯಾದಾಗ ಮಾತ್ರ ನೀರನ್ನು ಸೇವಿಸತಕ್ಕದ್ದು. ಹಾಗೆಯೇ ನಿಮ್ಮ ಬಾಯಾರಿಕೆ ತಣಿಯುವಷ್ಟು ಮಾತ್ರ ಪ್ರಮಾ ಣವನ್ನು ಸೇವಿಸುವುದು. ಇಲ್ಲವಾದರೆ ನೀರು ಸೇವನೆಯು ನಿಮ್ಮ ಆರೋಗ್ಯಕ್ಕೆ ಬಹಳ ದೊಡ್ಡ ಶತ್ರುವಾಗಬಹುದು.

2. ಅತಿ ಮೈಥುನ: ಮೈಥುನವೆಂಬುದು ಮಾನವನ ಮೂಲಭೂತ ಕಾಮನೆಗಳಲ್ಲಿ ಒಂದು. ಆಯುರ್ವೇದದ ಪ್ರಕಾರ ಇದು ಸ್ವಾಸ್ಥ್ಯವನ್ನು ಕಾಪಾಡುವ ಬಹಳ ಮುಖ್ಯವಾದ ಅಂಶ. ಹಾಗಾಗಿಯೇ ಮೈಥುನದ ಕ್ರಮ/ಅಕ್ರಮಗಳನ್ನು ಬಿಡಿಬಿಡಿಯಾಗಿ ತಿಳಿಸಿ ಹೇಳಲಾಗಿದೆ. ಮೈಥುನ ಮಾಡುವಾಗ ನಾವು ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಅದರಿಂದ ಉಂಟಾಗುವ ಹಲವಾರು ವೈಪರೀತ್ಯಗಳನ್ನು ತಡೆದು ಸಾಸ್ಥ್ಯವನ್ನು ಸದಾ ಕಾಪಾಡಿಕೊಳ್ಳ ಬಹುದು.

ಆಯುರ್ವೇದದ ಪ್ರಕಾರ ದಿನಚರ್ಯೆಯ ಆಚರಣೆ ಎಷ್ಟು ಸ್ವಾಸ್ಥ್ಯಪ್ರದವೋ, ಅದೇ ರೀತಿ ಸರಿಯಾದ ರಾತ್ರಿಚರ್ಯೆಯು ಬಹಳ ಅವಶ್ಯಕ. ಮೈಥುನವನ್ನು ಸರಿಯಾದ ಕ್ರಮದಲ್ಲಿ ಮಾಡದಿದ್ದರೆ ಅದು ತೊಂದರೆಯನ್ನುಂಟು ಮಾಡುವುದಲ್ಲದೆ ವೇಗ ಬಂದಾಗ ಅದನ್ನು ಧಾರಣೆ ಮಾಡುವುದು ಸಹ ಆರೋಗ್ಯಕ್ಕೆ ಕಂಟಕ. ಸಾಮಾನ್ಯವಾಗಿ ವಸಂತಋತು ಮತ್ತು ನವರಾತ್ರಿಯ ಕಾಲದ ಶರದೃತುವಿನಲ್ಲಿ ಮೂರು ದಿನಕ್ಕೊಮ್ಮೆ ಮೈಥುನವನ್ನು ಮಾಡ ತಕ್ಕದ್ದು. ಅಂತೆಯೇ, ನಮ್ಮ ಶಾರೀರಿಕ ಬಲವು ಅತ್ಯಂತ ಕಡಿಮೆ ಇರುವ ವರ್ಷಋತು ಮತ್ತು ಗ್ರೀಷ್ಮ ಋತುವಿನಲ್ಲಿ ಕೇವಲ 15 ದಿನಕ್ಕೆ ಒಮ್ಮೆ ಮಾಡಬೇಕು. ಇನ್ನು ಚಳಿಗಾಲ ದಲ್ಲಿ, ನಮ್ಮ ಶಾರೀರಿಕ ಬಲ ಅತ್ಯಧಿಕವಿದ್ದಾಗ ಇಚ್ಛೆಗೆ ತಕ್ಕಂತೆ ಮೈಥುನ ಕ್ರಿಯೆಯಲ್ಲಿ ತೊಡಗಬಹುದು. ಆದರೆ ಎಂದಿಗೂ ಸಂಧ್ಯಾಕಾಲದಲ್ಲಿ, ಪೂರ್ಣಿಮೆಯ ರಾತ್ರಿ, ಅಮಾ ವಾಸ್ಯೆಯ ರಾತ್ರಿ, ಮಧ್ಯಾಹ್ನ ಅಥವಾ ಮಧ್ಯರಾತ್ರಿಯಲ್ಲಿ ಮೈಥುನ ನಿಷಿದ್ಧ. ರಾತ್ರಿ ಊಟ ವಾದ ನಂತರ ಕನಿಷ್ಠಪಕ್ಷ 3 ಗಂಟೆಗಳನ್ನು ಬಿಟ್ಟು ಮೈಥುನದಲ್ಲಿ ತೊಡಗುವುದು ಸೂಕ್ತ. ಆಹಾರವು ಇನ್ನೂ ಜೀರ್ಣವಾಗುತ್ತಿರುವಾಗ ಮೈಥುನ ಮಾಡಿದರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ.

ಅಂತೆಯೇ, ಸ್ತ್ರೀಯರ ಮಾಸಿಕ ಋತುಸ್ರಾವದ ಸಮಯದಲ್ಲಿಯೂ ಮೈಥುನ ಮಾಡ ಬಾರದು. ಮೈಥುನವಾದ ಕೂಡಲೇ ಸ್ನಾನ ಮಾಡಿ ಒಂದು ಲೋಟ ಬೆಚ್ಚಗಿನ ಹಾಲು ಮತ್ತು ಸಕ್ಕರೆಯನ್ನು ಸೇವಿಸಿ ಸ್ವಲ್ಪ ಸಮಯ ತಂಗಾಳಿಯಲ್ಲಿ ಮೈಮನಗಳನ್ನು ಒಡ್ಡಿ ನಂತರ ನಿದ್ರಿಸಿದರೆ ಅದು ಬಹಳ ಪುಷ್ಟಿಕರ. ವ್ಯಾಧಿಗ್ರಸ್ತರಾದಾಗ ಮತ್ತು ಗರ್ಭಧರಿಸಿದಾಗ ಮೈಥುನ ಮಾಡದಿರುವುದೇ ಉತ್ತಮ. ಇಂಥ ಸರಳ ನಿಯಮಗಳನ್ನು ಪಾಲಿಸಿದರೆ ಮೈಥುನವು ನಮ್ಮ ರಿಪುವಾಗದಂತೆ ಕಾಯ್ದಿರಿಸಿಕೊಳ್ಳಬಹುದು.

ಹಗಲು ನಿದ್ದೆ: ಆಯುರ್ವೇದ ಎಂದರೆ ‘ಆಯು’ವಿನ ವೇದ, ‘ಆಯು’ವಿನ ಜ್ಞಾನ. ‘ಆಯು’ ಎಂದರೆ ಶರೀರ, ಇಂದ್ರಿಯ, ಸತ್ವ ಮತ್ತು ಚೈತನ್ಯದ ಸಂಯೋಗ. ಈ ನಾಲ್ಕು ಘಟಕಗಳು ಒಟ್ಟುಗೂಡಿದರೆ ಮಾತ್ರ ಜೀವ-ಜೀವನ. ಹಾಗಾಗಿಯೇ ಆಯುರ್ವೇದವು ಹೀಗೆ ತಿಳಿಸುತ್ತದೆ: ದೇಹ-ಇಂದ್ರಿಯ-ಮನಸ್ಸು-ಆತ್ಮಗಳೆಂಬ 4 ಕಂಬಗಳ ಮೇಲೆ ನಮ್ಮ ಬದುಕು ನಿಂತಿದೆ. ಈ ನಾಲ್ಕು ಒಂದೆಡೆ ಇದ್ದಾಗ ಮಾತ್ರ ಬದುಕು.

ಇವುಗಳ ಬೇರ್ಪಡುವಿಕೆಯೇ ಮರಣ. ಈ 4 ಸ್ತಂಭಗಳ ಮೇಲೆ ನಿಂತ ಬದುಕಿಗೆ ಮೂರು ಉಪಸ್ತಂಭಗಳಿವೆ. ಅವೆಂದರೆ, ವಿವೇಚಿತ ಆಹಾರ, ಉತ್ತಮ ನಿದ್ರೆ ಮತ್ತು ನಾವು ಮಾಡುವ ಆರೋಗ್ಯಪೂರಕ ಚಟುವಟಿಕೆಗಳು. ನಾವು ಸೇವಿಸುವ ಆಹಾರವು, ಶರೀರ ಮತ್ತು ಇಂದ್ರಿ ಯಗಳನ್ನು ಪ್ರಧಾನವಾಗಿ ಪೋಷಿಸುತ್ತದೆ.

ನಾವು ಸರಿಯಾಗಿ ಮಾಡುವಂಥ ನಿದ್ರೆಯು ಇಂದ್ರಿಯ ಮತ್ತು ಮನಸ್ಸುಗಳನ್ನು ಕಾಪಾಡಿ ದರೆ ನಾವು ಮಾಡುವಂಥ ಚಟುವಟಿಕೆಗಳು (ಶಾರೀರಿಕ, ವಾಚಿಕ ಹಾಗೂ ಮಾನಸಿಕ) ನಮ್ಮ ಮನಸ್ಸು ಮತ್ತು ಚೈತನ್ಯವನ್ನು ಪ್ರಭಾವಿಸುತ್ತದೆ. ಹಾಗಾಗಿ, ನಮ್ಮ ಮಾನಸಿಕ ಸ್ವಾಸ್ಥ್ಯ ವನ್ನು ಸುಧಾರಿಸಿಕೊಳ್ಳಬೇಕಾದರೆ ನಾವು ನಮ್ಮ ನಿದ್ರೆಯನ್ನು ಸುಧಾರಿಸಿಕೊಳ್ಳಲೇಬೇಕು.

ನಿದ್ರೆಯನ್ನು ಸರಿಯಾಗಿ ಮಾಡಿದ್ದೇ ಆದರೆ ಮನಸ್ಸಿನ ಆರೋಗ್ಯ, ಶಾಂತಿ, ನೆಮ್ಮದಿ, ವಿವೇ ಚನಾ ಶಕ್ತಿ ಹಾಗೂ ಚಿಂತನೆಗಳು ತಮ್ಮಷ್ಟಕ್ಕೆ ತಾವೇ ಉತ್ತಮವಾಗುತ್ತವೆ. ನಿದ್ರೆಯನ್ನು ಗಮನಿಸಿಕೊಳ್ಳದೆ, ನಾವು ಎಷ್ಟೇ ಯೋಗ-ಧ್ಯಾನ-ಕೌನ್ಸಿಲಿಂಗ್ ಇತ್ಯಾದಿಗಳನ್ನ ಮಾಡಿ ಕೊಂಡರೂ ಪ್ರಯೋಜನವಾಗುವುದಿಲ್ಲ.

ರಾತ್ರಿ ಮಾಡುವ ನಿದ್ರೆಗೂ ಹಗಲು ಮಾಡುವ ನಿದ್ರೆಗೂ ಬಹಳ ವ್ಯತ್ಯಾಸವಿದೆ. ಈ ಎರಡು ರೀತಿಯ ನಿದ್ರೆಗಳು ಒಂದೇ ಅಲ್ಲ. ‘ನಾನು ರಾತ್ರಿ ಕೆಲಸ ಮಾಡುತ್ತೇನೆ, ಅದನ್ನು ಸರಿದೂಗಿ ಸಲು ಹಗಲು ಹೊತ್ತಿನಲ್ಲಿ ಮಲಗುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ’ ಅಂದರೆ ಹಗಲು ಮಾಡುವ ನಿದ್ರೆಯಿಂದ ರಾತ್ರಿ ನಿದ್ರೆಯ ಲಾಭಗಳು, ದೇಹ-ಮನಸ್ಸುಗಳಿಗೆ ಸಿಗುವು ದಿಲ್ಲ. ಆಯುರ್ವೇದದ ಪ್ರಕಾರ ಹಗಲು ನಿದ್ರೆಯು ಅನಾರೋಗ್ಯಕರ. ಕಾರಣ, ಇದು 3 ದೋಷಗಳನ್ನು ಅಂದರೆ ವಾತ, ಪಿತ್ತ, ಕ-ಫಗಳನ್ನು ಹಾಳುಮಾಡಿ ವಿವಿಧ ರೀತಿಯ ಕಾಯಿಲೆಗಳನ್ನು ಉಂಟುಮಾಡುತ್ತದೆ.

ಉದಾಹರಣೆಗೆ- ಉಬ್ಬಸ, ಕೆಮ್ಮು, ತಲೆಭಾರ, ಪದೇಪದೆ ನೆಗಡಿ, ಆಹಾರದಲ್ಲಿ ರುಚಿ ಕಡಿಮೆ ಎನಿಸುವುದು, ಜೀರ್ಣಶಕ್ತಿ ಕುಂದುವುದು, ಅಂಗಗಳ ಮಾಂಸ ದುಷ್ಟಿ, ಮೇದಸ್ಸಿನ ದುಷ್ಟಿ, ಸ್ಥೌಲ್ಯ, ಮಧುಮೇಹ, ಪದೇ ಪದೆ ಜ್ವರ ಬರುವುದು, ಹುಳಿತೇಗು, ಎದೆ ಉರಿ, ಪಿತ್ತ ವಾಂತಿ ಇತ್ಯಾದಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹಗಲು ನಿದ್ರೆಯನ್ನು ವರ್ಜಿಸಿ ರಾತ್ರಿ ನಿದ್ರೆಯನ್ನು ಪಾಲಿಸಿ. ಇದರಿಂದ ಮಾತ್ರ ಆರೋಗ್ಯದ ಲಾಭ ಸಾಧ್ಯ.

ರಾತ್ರಿ ನಿದ್ರೆಗೆಡುವುದು: ‘ನಿದ್ರೆ’ ಎಂದರೆ ನಮ್ಮ ದೇಹಕ್ಕೆ ಬೇಕಾದಂಥ ದಿನನಿತ್ಯದ ವಿಶ್ರಾಂತಿ. ಮನುಷ್ಯನು ತಾನು ಮಾಡುವ ಕೆಲಸದ ಶ್ರಮದಿಂದಾದ ದಣಿವನ್ನು ನಿವಾರಿಸಿಕೊಳ್ಳಲು, ಎಲ್ಲಾ ಇಂದ್ರಿಯಗಳು ತಮ್ಮ ಕೆಲಸಕಾರ್ಯದಿಂದ ಮುಕ್ತಿ ಹೊಂದಿ ಪಡೆಯುವ ವಿಶ್ರಾಂತ ಸ್ಥಿತಿಯೇ ನಿದ್ರೆ. ಶರೀರ-ಇಂದ್ರಿಯ-ಮನಸ್ಸುಗಳಲ್ಲಿ ಪೂರ್ತಿ ದಿನ ಆದಂಥ ಏರುಪೇರು ಗಳನ್ನು ವ್ಯತ್ಯಾಸಗಳನ್ನು ಸರಿಪಡಿಸಿ, ಅವನ್ನು ದುರಸ್ತಿ ಮಾಡಿ ತಾಜಾಗೊಳಿಸಿ ಮುಂದಿನ ದಿನಕ್ಕೆ ತಯಾರು ಮಾಡುವಂಥ ಪ್ರಕ್ರಿಯೆಗೆ ನಿದ್ರೆ ಎಂದು ಹೆಸರು. ಆದರೆ ಈ ಎಲ್ಲಾ ಲಾಭ ವನ್ನು ಪಡೆದುಕೊಳ್ಳಬೇಕಾದರೆ ಅದು ಕೇವಲ ರಾತ್ರಿ ನಿದ್ರೆಯ ಮೂಲಕವೇ ಸಾಧ್ಯ.

ಹಾಗಾಗಿಯೇ ರಾತ್ರಿಯ ನಿದ್ರೆಯನ್ನು ಆಯುರ್ವೇದವು ಭೂತ ಧಾತ್ರಿ ಎಂದು ಕರೆದಿದೆ. ಅಂದರೆ, ಒಬ್ಬ ತಾಯಿಯು ತನ್ನ ಮಗುವನ್ನು ಹೇಗೆ ಪೋಷಿಸಿ, ರಕ್ಷಿಸುತ್ತಾಳೋ ಅದೇ ರೀತಿ ಸಕಲ ಜೀವಿಗಳ ಆರೋಗ್ಯವನ್ನು ರಾತ್ರಿ ಮಾಡುವ ನಿದ್ರೆಯು ಕಾಪಾಡುತ್ತದೆ. ಇಂಥ ರಾತ್ರಿಯ ನಿದ್ರೆಯನ್ನು ನಾವು ಬಿಟ್ಟು ಎಚ್ಚರವಾಗಿರುವ ಅಭ್ಯಾಸವನ್ನು ಮಾಡಿ ಕೊಂಡಿರುವುದರಿಂದಲೇ ಅನೇಕ ಕಾಯಿಲೆಗಳನ್ನು ಇಂದು ಅನುಭವಿಸಬೇಕಾಗಿದೆ. ರಾತ್ರಿ 10 ಗಂಟೆಯ ಒಳಗೆ ಮಲಗಿ, 5 ಗಂಟೆಯ ಹೊತ್ತಿಗೆ ಏಳುವುದು ಉತ್ತಮ ಅಭ್ಯಾಸ. ಇದರ ಹೊರತಾಗಿ ಮಾಡುವ ಎಲ್ಲ ರೀತಿಯ ನಿದ್ರೆ ಅಥವಾ ಈ ಸಮಯದಲ್ಲಿ ಮಾಡದಿರುವ ನಿದ್ರೆಯು ನಮ್ಮ ಆರೋಗ್ಯದ ಬಹುದೊಡ್ಡ ಶತ್ರು ಎಂಬುದು ನೆನಪಿರಲಿ.

ರಾತ್ರಿ ನಿದ್ರೆಗೆಡುವುದರಿಂದ ದೇಹದಲ್ಲಿ ವಾತ ಮತ್ತು ಪಿತ್ತಗಳು ಪ್ರಕೋಪವಾಗಿ ಮುಪ್ಪಿನ ಲಕ್ಷಣಗಳು ಬೇಗ ಆವರಿಸುತ್ತವೆ ಹಾಗೂ ದೇಹ ಕ್ಷೀಣವಾಗಿ ಎಲ್ಲ ರೀತಿಯ ಕೊರತೆಗಳು ಪ್ರಾರಂಭವಾಗುತ್ತವೆ ಎಂಬುದು ಆಯುರ್ವೇದದ ಖಚಿತ ಮಾತು.

ಮೂತ್ರ- ಪುರೀಷ ವೇಗಧಾರಣ: ನಮ್ಮ ಶರೀರವು, ಉತ್ಪಾದನೆ ಆಗುತ್ತಿರುವ ಮಲಗಳನ್ನು ಹೊರಹಾಕಲು ಬೇರೆ ಬೇರೆ ರೀತಿಯ ಕ್ರಿಯೆಗಳನ್ನು ನಡೆಸುತ್ತದೆ. ಈ ಸಹಜವಾದ ವಿವಿಧ ಕ್ರಿಯೆಗಳಿಗೆ ಆಯುರ್ವೇದದಲ್ಲಿ ‘ವೇಗ’ಗಳು ಎಂದು ಕರೆಯುತ್ತಾರೆ. ವೇಗ ಎಂಬ ಶಬ್ದದಲ್ಲಿ ‘ವಿ’ ಎಂದರೆ ಸ್ರೋತಸ್ಸು ಅಥವಾ ಪದಾರ್ಥ ಹರಿಯುವ ಮಾರ್ಗ ಎಂದರ್ಥ. ‘ಗ’ ಎಂದರೆ ಗತಿ ಅಥವಾ ಹರಿಯುವಿಕೆ. ದೇಹದಲ್ಲಿನ ವಿವಿಧ ಮಾರ್ಗಗಳಲ್ಲಿ ಪದಾರ್ಥಗಳು ಹರಿಯಲು ತೊಡಗಿದಾಗ ಉಂಟಾಗುವ ಜ್ಞಾನವೇ ವೇಗ. ಇದನ್ನು ’ಜಛಿ’ ಎಂದು ಕರೆಯಬಹುದು.

ಇವು ದೇಹದ ಜೈವಿಕ ಗಡಿಯಾರದ ಕರೆಗಂಟೆಗಳು. ಈ ವೇಗಗಳನ್ನು ತಡೆಯುವುದು ಅಥವಾ ಬಲವಂತವಾಗಿ ಉತ್ತೇಜಿಸುವುದು ರೋಗಕ್ಕೆ ಕಾರಣವಾಗುತ್ತದೆ. ಇವುಗಳನ್ನು ಸರಿಯಾಗಿ ಗಮನಿಸಿ, ಸಹಜವಾಗಿ ಅವುಗಳ ಪ್ರವೃತ್ತಿಯನ್ನು ಅನುಸರಿಸುವುದು ಸ್ವಾಸ್ಥ್ಯ ಸಾಧನೆಯ ಮೊದಲ ಹೆಜ್ಜೆ. ಆಯುರ್ವೇದದ ಪ್ರಕಾರ ದೇಹ ನೀಡುವ ಈ ಕರೆಗಳನ್ನು ಸ್ವೀಕರಿಸದೆ, ಸಹಜ ಸೂಚನೆಗಳನ್ನು ತಿರಸ್ಕರಿಸಿ, ಕಾರಣಾಂತರಗಳಿಂದ ಈ ಸಹಜ ಕಾರ್ಯ ವನ್ನು ಬಲಾತ್ಕಾರವಾಗಿ ತಡೆಯುವುದನ್ನು ವೇಗಧಾರಣೆ ಎಂದು ಕರೆದಿದ್ದಾರೆ.

ಅದೇ ರೀತಿ ಸೂಚನೆ ಇಲ್ಲದಿದ್ದಾಗಲೂ ಪ್ರಚೋದಿಸುವ ಪ್ರಯತ್ನಗಳನ್ನು ವೇಗ ಉದೀರಣ ಎಂದು ಹೇಳಿದ್ದಾರೆ. ವೇಗ ಧಾರಣೆ ಮತ್ತು ವೇಗ ಉದೀರಣೆ- ಎರಡೂ ದೇಹದಲ್ಲಿ ರೋಗ ಪ್ರಾರಂಭ ಮಾಡುವ ಬಹಳ ಬಲಿಷ್ಠವಾದ ಕಾರಣಗಳು.

ಪುರೀಷ ವೇಗ: ಹೀಗೆಂದರೆ ಎಂದರೆ ಮಲವಿಸರ್ಜನೆ. ತಿಂದ ಆಹಾರದ ಮಲ ಭಾಗವನ್ನು ದೇಹದಿಂದ ಹೊರ ಹಾಕುವ ಪ್ರಯತ್ನವೇ ಪುರೀಷ ವೇಗ. ಇದನ್ನು ತಡೆಯುವುದರಿಂದ ಶರೀರದ ಕ್ರಿಯಾತ್ಮಕ ವಿಕೃತಿ ಅಲ್ಲದೆ ರಚನಾತ್ಮಕ ಶಾರೀರಿಕ ವಿಕೃತಿಗೂ ಕಾರಣವಾಗುತ್ತದೆ. ಮಲ ವೇಗವನ್ನು ತಡೆಯುವುದರಿಂದ ಕ್ರಮೇಣ ಪೈಲ್ಸ್, ಫಿಸ್ಟುಲಾ, ತಲೆನೋವು, ಮೈಗ್ರೇನ್, ಕಣ್ಣಿನ ತೊಂದರೆ, ಕಾಲಿನ ಭಾಗದ ಮೀನಖಂಡಗಳ ತೀವ್ರ ವೇದನೆ, ಹೊಟ್ಟೆ ಉಬ್ಬರ ಇತ್ಯಾದಿಗಳು ಕಾಣಿಸಿಕೊಳ್ಳುತ್ತದೆ.‌

ಮೂತ್ರ ವೇಗ: ಬಹುಕಾಲ ಅಥವಾ ಪದೇ ಪದೆ ಮೂತ್ರವನ್ನು ತಡೆದರೆ ಚಿಕಿತ್ಸೆಗೆ ಅಸಾಧ್ಯ ವಾದ ಅನೇಕ ರೋಗಗಳು ಉಂಟಾಗುವುದರಲ್ಲಿ ಸಂಶಯವಿಲ್ಲ. ಮೂತ್ರಕೋಶ, ಶಿಶ್ನ, ಅಂಡಕೋಶ ಮತ್ತು ಸೊಂಟಗಳಲ್ಲಿ ಅತಿಯಾದ ನೋವು, ನಡಿಗೆಯಲ್ಲಿ ತೊಂದರೆ, ಮೂತ್ರ ಮಾಡುವಾಗ ಅಡೆತಡೆ ಉಂಟಾಗುವುದು, ಹೊಟ್ಟೆ ನೋವು, ಮೂತ್ರದಲ್ಲಿ ಕಲ್ಲು, ತಲೆನೋವು.

ವೃಕ್ಕಗಳ ಕಾರ್ಯ ಹಾನಿ, ಗ್ರಂಥಿಗಳ ಶೋಥ ಇದರಿಂದ ಕಾಣಿಸಿಕೊಳ್ಳುತ್ತದೆ. ಒಟ್ಟಾರೆ, ಪುರೀಷ ವೇಗದ ತಡೆಯಿಂದ ಉಂಟಾಗುವ ತೊಂದರೆಗಳಿಗಿಂತ ಮೂತ್ರ ವೇಗದ ತಡೆ ಯಿಂದ ಉಂಟಾಗುವ ತೊಂದರೆಗಳು ಪ್ರಬಲವಾದವುಗಳು.

ಹಸನಾದ ಬೆಳೆಯನ್ನು ನೋಡಿ ಅದರ ಹಿನ್ನೆಲೆಯನ್ನು ಊಹಿಸುವ ರೀತಿಯೇ, ಸರಿಯಾಗಿ ನಡೆಯುತ್ತಿರುವ ವೇಗಗಳಿಂದ ಸ್ವಾಸ್ಥ್ಯವನ್ನು ತಿಳಿಯಬಹುದು. ಹಾಗಾಗಿ, ಸ್ನೇಹಿತರೆ ನಿಮ್ಮ ವೇಗಗಳ ಅರಿವು ಸದಾ ನಿಮಗಿರಲಿ. ಈ ವೇಗಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದನ್ನು ತಕ್ಷಣವೇ ಗುರುತಿಸಿ ಸೂಕ್ತವಾದ ಚಿಕಿತ್ಸೆಯನ್ನು ತೆಗೆದುಕೊಂಡರೆ ಅದರಿಂದ ಬೃಹತ್ತಾಗಿ ಬೆಳೆಯುವ ಅನೇಕ ರೋಗಗಳನ್ನ ನೀವು ತಡೆದು ಸದಾ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಆಗಬೇಕಾದರೆ ಸ್ವಾಸ್ಥ್ಯರಕ್ಷಣೆ, ಮಾಡಬೇಡಿ ವೇಗಧಾರಣೆ! ಹಾಗಾಗಿ ಒಳಗಿನ ಅರಿಷಡ್ವರ್ಗವನ್ನು ಜಯಿಸುವುದು, ಹಾಗೆಯೇ ಹೊರಗಿನ ಈ 6 ಕಾರಣ ಗಳನ್ನು ನಮ್ಮ ಜೀವನದಿಂದ ಹೊರಗಿಡುವುದರಿಂದ ಮಾತ್ರ ಸ್ವಾಸ್ಥ್ಯದ ಸಂಪೂರ್ಣ ಅನುಭವ ಸಾಧ್ಯ!