Dr Sadhanashree Column: ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವ ಅಭ್ಯಾಸವಿದೆಯಾ ?
ಎಲ್ಲರಿಗೂ, ನಿತ್ಯವೂ, ಮೂರು ಹೊತ್ತೂ ಆಹಾರದಲ್ಲಿ ಆಗಷ್ಟೇ ಫ್ರಿಜ್‌ನಿಂದ ತೆಗೆದ ಗಟ್ಟಿ ಮೊಸರು ಬೇಕೇ ಬೇಕು. ತಿಂಡಿಯ ಹೊತ್ತಿನಲ್ಲಿ ಚಪಾತಿ, ಅವಲಕ್ಕಿ, ಉಪ್ಪಿಟ್ಟು, ಪರಾಠ, ದೋಸೆ, ರೊಟ್ಟಿ- ಎಲ್ಲದಕ್ಕೂ ಮೊಸರು ಬೇಕು. ಮಧ್ಯಾಹ್ನವು ಊಟದ ಕೊನೆಯಲ್ಲಿ ಅನ್ನದ ಜತೆ ಮೊಸರು ಮತ್ತು ಉಪ್ಪಿನಕಾಯಿ ಸೇವಿಸುವುದು ಫೇವರಿಟ್!
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ಐದು ಜನರ ಕುಟುಂಬವೊಂದು ಕ್ಲಿನಿಕ್ಕಿಗೆ ಭೇಟಿ ನೀಡಿತ್ತು. ಐದು ಜನರಿಗೂ ಬೇರೆ ಬೇರೆ ರೀತಿಯ ಸಮಸ್ಯೆಗಳು. ಮಗಳಿಗೆ ಮುಟ್ಟಿನ ಸಮಸ್ಯೆಯಾದರೆ, ಮಗನಿಗೆ ಸದಾ ನೆಗಡಿ ಮತ್ತು ಕಫದ ಸಮಸ್ಯೆ. ತಂದೆಗೆ ಚರ್ಮದ ತೊಂದರೆ ಕಸಿವಿಸಿ ಮಾಡುತ್ತಿದ್ದರೆ, ತಾಯಿಗೆ ಪದೇ ಪದೆ ಬಿಟ್ಟು ಬಿಟ್ಟು ಬರುವ ಜ್ವರದ ಸಮಸ್ಯೆ. ಇನ್ನು, ಮನೆ ಹಿರಿಯರಾದ ಅತ್ತೆಗೆ ಡಯಾಬಿಟಿಸ್‌ನ ಸಮಸ್ಯೆಯಿಂದ ತಲೆಬಿಸಿ ಯಾಗಿತ್ತು. ಒಂದೇ ಕುಟುಂಬ ಎಂದರೆ ಸಾಮಾನ್ಯವಾಗಿ ಎಲ್ಲರ ಆಹಾರವೂ ಒಂದೇ ಬಗೆಯದ್ದಾ ಗಿರುತ್ತದೆ. ಆದ್ದರಿಂದ, ಒಂದೇ ರೀತಿಯ ಅಪಥ್ಯವಾದದ್ದೇನೋ ಇವರ ಕುಟುಂಬದಲ್ಲಿ ಅನುಸರಣೆ ಯಲ್ಲಿರಬೇಕು ಎಂದು ಅನುಮಾನಿಸಿ ಅವರ ಆಹಾರದ ಬಗ್ಗೆ ಸಂಪೂರ್ಣ ವಿವರಗಳನ್ನು ತೆಗೆದು ಕೊಂಡಾಗ ಕಾರಣ ತಿಳಿಯಿತು.
ಎಲ್ಲರಿಗೂ, ನಿತ್ಯವೂ, ಮೂರು ಹೊತ್ತೂ ಆಹಾರದಲ್ಲಿ ಆಗಷ್ಟೇ ಫ್ರಿಜ್‌ನಿಂದ ತೆಗೆದ ಗಟ್ಟಿ ಮೊಸರು ಬೇಕೇ ಬೇಕು. ತಿಂಡಿಯ ಹೊತ್ತಿನಲ್ಲಿ ಚಪಾತಿ, ಅವಲಕ್ಕಿ, ಉಪ್ಪಿಟ್ಟು, ಪರಾಠ, ದೋಸೆ, ರೊಟ್ಟಿ- ಎಲ್ಲದಕ್ಕೂ ಮೊಸರು ಬೇಕು. ಮಧ್ಯಾಹ್ನವು ಊಟದ ಕೊನೆಯಲ್ಲಿ ಅನ್ನದ ಜತೆ ಮೊಸರು ಮತ್ತು ಉಪ್ಪಿನಕಾಯಿ ಸೇವಿಸುವುದು ಫೇವರಿಟ್!
ಇದನ್ನೂ ಓದಿ: Dr Sadhanashree Column: ಶಿರಸ್ಸೆಂಬ ಹೊನ್ನ ಕಳಸದ ಕಾಳಜಿ
ಮತ್ತೆ ರಾತ್ರಿ ಊಟವಾದ ನಂತರ ಒಂದು ಕಪ್ ಮೊಸರಿಗೆ ಸಕ್ಕರೆಯನ್ನು ಸೇರಿಸಿ ನಿತ್ಯವೂ ಸೇವಿಸುವ ಅಭ್ಯಾಸ. ಈ ರೀತಿ ದಿನನಿತ್ಯವೂ ಶಾರೀರಿಕ ಶ್ರಮವಿಲ್ಲದಿದ್ದಾಗಲೂ ಆಹಾರ ಕಾಲದಲ್ಲಿ ಗಟ್ಟಿ ಮೊಸ ರನ್ನು ಸೇವಿಸುವುದರ ಪರಿಣಾಮವಾಗಿ ದೇಹದಲ್ಲಾಗುತ್ತಿದ್ದ ಪಿತ್ತ-ಕಫ-ರಕ್ತಗಳ ವಿಕೃತಿಯು ಅವರ ಆರೋಗ್ಯದ ಈ ಏರುಪೇರುಗಳಿಗೆ ಕಾರಣ ಎಂದು ನನಗೆ ಖಾತರಿಯಾಯಿತು.
ಆಯುರ್ವೇದ ವೈದ್ಯರಾದ ಮೇಲೆ ಕೇವಲ ಔಷಧಗಳ ಪಟ್ಟಿಯನ್ನು ಕೊಟ್ಟು ಕಳಿಸುವುದಷ್ಟೇ ನಮ್ಮ ಜವಾಬ್ದಾರಿ ಅಲ್ಲ. ಬದಲಿಗೆ, ರೋಗಗಳ ಕಾರಣವನ್ನು ತಿಳಿಸಿ ಅವರ ಜೀವನದಿಂದ ಆ ಕಾರಣ ಗಳನ್ನು ನಿವಾರಿಸುವುದೇ ಬಹುದೊಡ್ಡ ಜವಾಬ್ದಾರಿ. ಇದು ಚಿಕಿತ್ಸೆಯ ಬಹುಮುಖ್ಯ ಭಾಗ. ಈ ನಿಟ್ಟಿನಲ್ಲಿ ನಾನು ಅವರಿಗೆ “ಆಯುರ್ವೇದದ ಪ್ರಕಾರ ನಿತ್ಯವೂ ಮೊಸರಿನ ಬಳಕೆ, ಅದೂ ಮೂರೂ ಆಹಾರ ಕಾಲಗಳಲ್ಲಿ ನಿಷಿದ್ಧ" ಎಂದು ತಿಳಿಸಿದೆ.
“ಮೊಸರು ಆರೋಗ್ಯಕರವಾದರೂ ಅದನ್ನು ಕೆಲವು ವಿಶಿಷ್ಟ ನಿಯಮಗಳೊಂದಿಗೆ ಸೇವಿಸಬೇಕು. ಇಲ್ಲವಾದರೆ, ಅದು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ನೀಡುವುದು ಖಂಡಿತ. ಹಾಗಾಗಿ ಇನ್ನು ಮುಂದೆ ಮೊಸರಿನ ಬದಲು ಮಜ್ಜಿಗೆಯನ್ನು ಸೇವಿಸಬೇಕು" ಎಂದು ಹೇಳಿದೆ. ಅವರು ಬಂದು ಆಗಲೇ ಸುಮಾರು ಹೊತ್ತು ಆಗಿದ್ದರಿಂದ, ಸಮಯದ ಅಭಾವದಿಂದ ನಾನು ಅವರಿಗೆ ಈ ವಿಷಯದ ಕುರಿತು ಹೆಚ್ಚಾಗಿ ವಿವರಿಸಲಿಲ್ಲ.
ಅವರು “ಖಂಡಿತ ಡಾಕ್ಟರೇ" ಎಂದು ಹೇಳಿ ಮನೆಗೆ ತೆರಳಿದರು. ಅದಾದ ನಂತರ ಕೆಲವು ವಾರಗಳ ಕಾಲ, ಔಷಧಿಗಳನ್ನು ಸೇವಿಸುವುದರ ಬಗ್ಗೆ -ನಿನಲ್ಲಿ ವಿಚಾರಿಸಿ ಎಲ್ಲರಿಗೂ ಆರಾಮವಾದ ಮೇಲೆ ಔಷಧಿಗಳನ್ನು ನಿಲ್ಲಿಸಬಹುದು ಎಂದು ನಾನು ಹೇಳಿದೆ. ಇದಾದ ಮೇಲೆ ನನಗೂ ಅವರ ಬಗ್ಗೆ ಹೆಚ್ಚೇನೂ ನೆನಪಿರಲಿಲ್ಲ.
ಆದರೆ, ಮತ್ತೆ ಮೂರು ತಿಂಗಳ ನಂತರ ಕ್ಲಿನಿಕ್ಕಿಗೆ ಬಂದಿದ್ದರು. ಮತ್ತೆ ಎಲ್ಲರಿಗೂ ಅದೇ ಸಮಸ್ಯೆಗಳು ಉಲ್ಬಣವಾಗಿದ್ದವು. ನನಗೂ ಇದನ್ನು ಕೇಳಿ ಸ್ವಲ್ಪ ಆಶ್ಚರ್ಯವೇ ಆಯಿತು. ಸರಿ, ಎಂದು ಪುನಃ ಅವರ ಆಹಾರದ ಬಗ್ಗೆ ವಿಚಾರಿಸತೊಡಗಿದೆ. ಅವರು ತಕ್ಷಣವೇ “ಡಾಕ್ಟರೇ, ನೀವು ಕಳೆದ ಬಾರಿ ಹೇಳಿದ ನಂತರ ನಾವೆಲ್ಲರೂ ಮಜ್ಜಿಗೆಯನ್ನೇ ಬಳಸುತ್ತಿದ್ದೇವೆ. ಮೊಸರನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ" ಎಂದು ಹೇಳಿದರು. ಆಗಂತೂ ನನಗೆ ಇನ್ನೂ ಹೆಚ್ಚು ಆಶ್ಚರ್ಯವಾಯಿತು. ಇವರ ರೋಗೋತ್ಪತ್ತಿಗೆ ಇದ್ದ ಮುಖ್ಯ ಕಾರಣವೇ ಅನಿಯಮಿತ ಮೊಸರಿನ ಸೇವನೆ.
ಅದನ್ನು ನಿಲ್ಲಿಸಿದರೂ ಇವರಿಗೆ ಮತ್ತೆ ತೊಂದರೆಗಳು ಶುರುವಾಗಿವೆಯಲ್ಲಾ ಎಂದು ಯೋಚನೆ ಮಾಡತೊಡಗಿದೆ. ಆಗ, ತಕ್ಷಣವೇ ಅವರನ್ನು ಮತ್ತೊಂದು ಪ್ರಶ್ನೆ ಕೇಳಿದೆ- “ಮೊಸರಿನಿಂದ ಮಜ್ಜಿಗೆ ಯನ್ನು ಹೇಗೆ ತಯಾರು ಮಾಡ್ತಾ ಇದ್ದೀರಾ.. ಸ್ವಲ್ಪ ವಿವರಿಸಿ?" ಅಂತ. ಆಗ ಅವರು ಹೇಳಿದರು “ಫ್ರಿಜ್ಜಿನಿಂದ ತೆಗೆದ ಮೊಸರಿಗೆ ಸ್ವಲ್ಪ ನೀರನ್ನು ಬೆರೆಸುತ್ತೇವೆ, ತದನಂತರ ಆ ಮಜ್ಜಿಗೆಯನ್ನು ನಾವು ಆಹಾರದೊಟ್ಟಿಗೆ ಸೇವಿಸುತ್ತೇವೆ" ಎಂದು. ಆಗ, ಮತ್ತೆ ಏಕೆ ಇವರಿಗೆ ಎಲ್ಲಾ ತೊಂದರೆಗಳು ಮರು ಕಳಿಸಿವೆ ಎಂಬುದು ಸ್ಪಷ್ಟವಾಯಿತು.
ಸ್ನೇಹಿತರೆ, ಮೊಸರಿಗೆ ಕೇವಲ ನೀರನ್ನು ಸೇರಿಸುವುದರಿಂದ ಅದು ಮಜ್ಜಿಗೆಯಾಗುವುದಿಲ್ಲ. ನೆನಪಿಡಿ, ಮೊಸರನ್ನು ಕಡೆಯುವುದರಿಂದ ಮಾತ್ರ ಮೊಸರಿನ ಅವಗುಣಗಳು ಹೋಗಿ ಅದು ಮಜ್ಜಿಗೆಯಾಗು ವುದು. ಮಥಿಸುವಿಕೆಯಿಂದ ಮಾತ್ರ ಮಜ್ಜಿಗೆ ಆಗುತ್ತದೆ. ಮಂಥನದ ಈ ಸಂಸ್ಕಾರದಿಂದ ಮಜ್ಜಿಗೆಯು ಮೊಸರಿಗಿಂತ ವಿಭಿನ್ನವಾಗಿ ನಿತ್ಯವೂ ಆಹಾರದೊಟ್ಟಿಗೆ ಸೇವಿಸಲು ಯೋಗ್ಯವಾದ ದ್ರವಾಹಾರ ವಾಗುತ್ತದೆ. ಆದರೂ ಮಜ್ಜಿಗೆಯ ಬಗ್ಗೆಯೂ ಸ್ವಲ್ಪ ತಿಳಿದುಕೊಂಡು ಉಪಯೋಗಿಸುವುದು ಕ್ಷೇಮ.
ಹಾಗಾಗಿ, ಬನ್ನಿ ಈ ಲೇಖನದಲ್ಲಿ ಮಜ್ಜಿಗೆಯನ್ನು ಸೇವಿಸಿ ಆರೋಗ್ಯಕರವಾಗಿ ಇರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮಜ್ಜಿಗೆಯನ್ನು ಭೂಲೋಕದ ಅಮೃತ ಎಂದು ಹೇಳಿದರೆ ತಪ್ಪಾಗಲಾರದು. ಕಾರಣ, ಇದಕ್ಕೆ ಇರುವ ಅನೇಕ ಔಷಧಿಯ ಗುಣಗಳು. ಸಾಮಾನ್ಯವಾಗಿ, ಸಾಂಪ್ರ ದಾಯಿಕ ಊಟವು ತುಪ್ಪದಿಂದ ಆರಂಭವಾಗಿ ಮಜ್ಜಿಗೆಯಲ್ಲಿ ಕೊನೆಗೊಳ್ಳುತ್ತದೆ.
ಅಂತೆಯೇ ನಿತ್ಯದ ಊಟದಲ್ಲೂ ಮಜ್ಜಿಗೆ ಅನ್ನ ಊಟ ಮಾಡಿದರೆ ಊಟ ಮುಗಿಯಿತು ಎಂದೇ ಅರ್ಥ. ಆಯುರ್ವೇದದಲ್ಲಿ ಮಜ್ಜಿಗೆಗೆ ತಕ್ರ, ಮಥಿತ, ಗೋಲ ಎಂಬ ಹೆಸರುಗಳಿವೆ. ನಾನು ಆಗಲೇ ಹೇಳಿದ ಹಾಗೆ ಮೊಸರಿಗೆ ನೀರು ಸೇರಿಸಿಬಿಟ್ಟರೆ ಅದು ಮಜ್ಜಿಗೆಯಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀರಾಗುವಿಕೆ ಅಥವಾ ಜಿಡ್ಡಿಲ್ಲದಿರುವಿಕೆ ಮಾತ್ರ ಮಜ್ಜಿಗೆಯ ಗುಣಗಳಲ್ಲ. ವಿಶಿಷ್ಟ ರೀತಿಯಲ್ಲಿ ತಯಾರಿಸಿದ ಮಜ್ಜಿಗೆಯಲ್ಲಿ ಮಾತ್ರ ಆಯುರ್ವೇದ ಗ್ರಂಥಗಳಲ್ಲಿ ಹೇಳಿರುವ ಮಜ್ಜಿಗೆಯ ಎಲ್ಲಾ ಗುಣಗಳನ್ನು ಕಾಣಬಹುದು.
ಆಗ ಮಾತ್ರ ಇದು ಭೂಲೋಕದ ಅಮೃತವಾದೀತು. ಸರಿಯಾದ ಕ್ರಮದಲ್ಲಿ ತಯಾರಿಸಿ ಬಳಸಿದ ಮಜ್ಜಿಗೆಯು ರೋಗವನ್ನು ತಡೆಗಟ್ಟುವುದು ಮಾತ್ರವಲ್ಲದೆ ರೋಗದ ನಿರ್ಮೂಲನೆಯನ್ನೂ ಮಾಡುತ್ತದೆ. ಆಯುರ್ವೇದವು ಹೇಳಿದಂತೆ ‘ನ ತಕ್ರದಗ್ಧಾಃ ಪ್ರಭವಂತಿ ರೋಗಾಃ’ ಎಂದರೆ ಮಜ್ಜಿಗೆ ಯ ಸರಿಯಾದ ಉಪಯೋಗದಿಂದ ವಾಸಿಯಾದ ರೋಗವು ತಿರುಗಿ ಹುಟ್ಟದು.
ಮಜ್ಜಿಗೆಯ ಗುಣ-ಕರ್ಮಗಳ ಬಗ್ಗೆ ಹೇಳಬೇಕಾದರೆ, ಮಜ್ಜಿಗೆಯು ರುಚಿಯಲ್ಲಿ ಸಿಹಿ, ಹುಳಿ ಮತ್ತು ಒಗರು ರಸಗಳನ್ನು ಹೊಂದಿದೆ. ಇದು ವೀರ್ಯದಲ್ಲಿ ಉಷ್ಣ ಅಂದರೆ- ಪಚನವಾದ ಮೇಲೆ ದೇಹ ದಲ್ಲಿ ಉಷ್ಣತೆಯನ್ನು ಉತ್ಪಾದಿಸುತ್ತದೆ- ಕೇಳಿ ಆಶ್ಚರ್ಯವಾಯಿತೇ? ಹೌದು ಸ್ನೇಹಿತರೆ, ನಮಗೆಲ್ಲ ಇರುವ ಸಾಮಾನ್ಯ ಭಾವನೆ ಎಂದರೆ ಮಜ್ಜಿಗೆ ತಂಪು ಎಂದು. ಆದರೆ, ಇದು ಪಚನಗೊಂಡ ಮೇಲೆ ದೇಹದಲ್ಲಿ ಉಷ್ಣಾಂಶವನ್ನು ಉತ್ಪತ್ತಿ ಮಾಡುವುದರಿಂದ ಇದನ್ನು ಬಿಸಿಲುಗಾಲದಲ್ಲಿ ಎಚ್ಚರಿಕೆ ಯಿಂದ ಉಪಯೋಗಿಸಬೇಕು.
ಅಂತೆಯೇ ಮಜ್ಜಿಗೆ ಅಗ್ನಿದೀಪಕ. ಅಂದರೆ ಹಸಿವೆಯನ್ನು ಹೆಚ್ಚು ಮಾಡುವ ಗುಣವುಳ್ಳದ್ದು. ಒಗರು, ಉಷ್ಣ ಮತ್ತು ಒಣಗಿಸುವ ಗುಣಗಳಿರುವ ಕಾರಣ ಇದು ಕಫವನ್ನು ಹೋಗಲಾಡಿಸುತ್ತದೆ. ಪಚನ ವಾದ ಮೇಲೆ ಸಿಹಿ ಸ್ವಭಾವವಾದ ಕಾರಣ ಇದು ಪಿತ್ತವನ್ನು ಶಮನಗೊಳಿಸುತ್ತದೆ. ಮಜ್ಜಿಗೆಯು, ವಿಶೇಷವಾಗಿ ಅಜೀರ್ಣ, ಅತಿಸಾರ, ಪಾಂಡು, ಮೊಳಕೆ ರೋಗ, ಉದರ, ಗುಲ್ಮಾ, ವಿಷಮ ಜ್ವರ, ವಾಂತಿ, ಹೊಟ್ಟೆ ನೋವು, ಮೇದಸ್ಸು ಮತ್ತು ಕಫ-ವಾತಜ ರೋಗಗಳನ್ನು ನಿವಾರಿಸುತ್ತದೆ.
ಮಜ್ಜಿಗೆಯು ಮಲ-ಮೂತ್ರಗಳ ವಿಸರ್ಜನೆಗೆ ಸಹಕರಿಸುತ್ತದೆ. ಇದನ್ನು ಊಟದ ಕೊನೆಯಲ್ಲಿ ಸೇವಿಸಿದಾಗ ಮೊದಲು ತಿಂದ ಎಲ್ಲಾ ಪದಾರ್ಥಗಳನ್ನು ಜೀರ್ಣ ಮಾಡಿ, ದೇಹ ಧಾತುಗಳ ಮಾರ್ಗ ವನ್ನು ಶುದ್ಧಿ ಮಾಡಿ, ಆ ಮೂಲಕ ಸಮನಾದ ಧಾತು ವೃದ್ಧಿಗೆ ಕಾರಣವಾಗುತ್ತದೆ. ಈ ರೀತಿಯ ಮಜ್ಜಿಗೆಯ ಸೇವನೆಯಿಂದ ವ್ಯಕ್ತಿಯು ದಪ್ಪನೂ ಆಗಲಾರ ತೆಳ್ಳಗೂ ಆಗಲಾರ.
ನಿತ್ಯೋಪಯೋಗಕ್ಕೆ ಮಜ್ಜಿಗೆಯನ್ನು ತಯಾರಿಸುವಾಗ ಈ ಅಂಶಗಳನ್ನು ನೆನಪಿಡಿ- ಹುಳಿ ಇರದ ಸಿಹಿ ಮೊಸರಿನ ಒಂದು ಭಾಗಕ್ಕೆ ಅಧಾಂಶ ಕಾದಾರಿದ ನೀರನ್ನು ಸೇರಿಸಿ ತಯಾರಿಸಬೇಕು (ಮಜ್ಜಿಗೆ ಯನ್ನು ಕಡೆಯುವಾಗ ತಣ್ಣೀರನ್ನು ಬಳಸುವುದರಿಂದ ನೆಗಡಿ, ಕೆಮ್ಮು, ಗಂಟಲುನೋವು ಕಾಣಿಸಿ ಕೊಳ್ಳಬಹುದು). ತಯಾರಿಕೆ ಎಂದರೆ ವಿಶೇಷವಾಗಿ ಇದನ್ನು ಕಡೆಯಬೇಕು.
ಬೆಣ್ಣೆ ಬರುವವರೆಗೂ ಇದನ್ನು ಕಡೆಯಬೇಕು. ಬೆಣ್ಣೆಯನ್ನು ಬೇರ್ಪಡಿಸಿ ಸೇವಿಸಿದ ಮಜ್ಜಿಗೆಯು ಬೆಣ್ಣೆ ತೆಗೆಯದ ಮಜ್ಜಿಗೆಗಿಂತ ಬೇಗ ಜೀರ್ಣಕಾರಿ. ಜಿಡ್ಡು ಬೇರ್ಪಟ್ಟ ಮಜ್ಜಿಗೆಯು ನಿತ್ಯವೂ ಅನ್ನ ದೊಟ್ಟಿಗೆ, ಮಜ್ಜಿಗೆಯ ಅಡುಗೆಗೆ, ಸಾಮಾನ್ಯವಾಗಿ ಎಲ್ಲಾ ಬಳಕೆಗೂ ಹೊಂದುತ್ತದೆ. ಮೊಸರಿನ ಪ್ರಮಾಣದ ಅರ್ಧದಷ್ಟು ನೀರು ಹಾಕಿ ಕಡೆದರೆ ದಪ್ಪವೂ ಅಲ್ಲದ ತೆಳ್ಳಗೂ ಅಲ್ಲದ ಮಜ್ಜಿಗೆ ಸಿದ್ಧ. ಇದು ದಿನಚರಿಯ ಸೇವನಿಗೆ ಯೋಗ್ಯವಾದ ದ್ರವಾಹಾರ.
ಇನ್ನು ನೀರನ್ನೇ ಹಾಕದೆ ಕಡೆದರೆ ಜಿಡ್ಡು ಬೇರ್ಪಡುವುದಿಲ್ಲ. ಇಂಥ ಗಟ್ಟಿಮಜ್ಜಿಗೆಯು ಲಸ್ಸಿ ಎಂದು ಕರೆಯಲ್ಪಡುತ್ತದೆ. ಇದನ್ನು ಬಗೆ ಬಗೆಯ ರೀತಿಯಲ್ಲಿ ಸೇವಿಸಬಹುದು. ಆದರೆ, ಚೆನ್ನಾಗಿ ಜೀರ್ಣ ಕ್ರಿಯೆ ಇರುವ, ದೈಹಿಕ ಶ್ರಮ ವಹಿಸುವ, ಅತಿ ಶೀತ ಹವಾಮಾನದಲ್ಲಿ ವಾಸಿಸುವವರ ಸೇವನೆಗೆ ಇದು ಯೋಗ್ಯ. ಇದು ಶೀತ ಕಾಲದಲ್ಲಿ ಪೋಷಕ.
ಮೊಸರಿಗಿಂತ ಕಾಯಿಸಿ ಆರಿಸಿದ ನೀರನ್ನು ಹೆಚ್ಚಾಗಿ ಹಾಕಿ ಕಡೆಯಬಹುದು. ಮುಕ್ಕಾಲು ಭಾಗ ನೀರು, ಕಾಲು ಭಾಗ ಮೊಸರು. ಈ ಮಜ್ಜಿಗೆಯಲ್ಲಿ ನೀರಿನ ಪ್ರಮಾಣವೇ ಹೆಚ್ಚು. ಇದನ್ನು ಜೀರ್ಣ ಕಾರಿಯದ ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಹಿಂಗು ಮೊದಲಾದ ಮಸಾಲೆಗಳಿಂದ ಒಗ್ಗರಿಸ ಬಹುದು. ಇದು ಅನ್ನದೊಟ್ಟಿಗೆ ಸೇವಿಸಲು ಯೋಗ್ಯವಾದ, ಜೀರ್ಣಕ್ಕೆ ಹಗುರವಾದ ಮಜ್ಜಿಗೆ. ಇದು ಬೇಸಿಗೆ ಕಾಲದಲ್ಲಿ ಹೆಚ್ಚು ಉತ್ತಮ ನೆನಪಿಡಿ, ಹುಳಿಮಜ್ಜಿಗೆಯ ನಿತ್ಯ ಸೇವನೆಯಿಂದ ಪ್ರಮೇಹ ದಂಥ ಸಮಸ್ಯೆ, ಚರ್ಮ ಕಾಯಿಲೆ, ರಕ್ತಸ್ರಾವದ ತೊಂದರೆಗಳು ಆಗುವುದರಿಂದ ಸಿಹಿ ಮಜ್ಜಿಗೆಯನ್ನೇ ನಿತ್ಯ ಸೇವಿಸುವುದು ಒಳ್ಳೆಯದು.
ಫ್ರಿಜ್ಜಿನಲ್ಲಿ ಶೇಖರಿಸಿದ್ದ ಮಜ್ಜಿಗೆಯ ಸ್ವಭಾವವೂ ಹುಳಿ ಮಜ್ಜಿಗೆಯದ್ದೇ ಆದ್ದರಿಂದ ಇದು ಸಹ ರಕ್ತ ಪಿತ್ತ ದುಷ್ಟಿಗೆ ಕಾರಣವಾಗಬಹುದು. ಬೇಸಿಗೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದು ಒಳ್ಳೆಯದು ಎಂಬ ಭಾವನೆಯಲ್ಲಿ ಹಲವರು ಇರುತ್ತಾರೆ. ಆದರೆ, ಸ್ನೇಹಿತರೆ ಮಜ್ಜಿಗೆಯನ್ನು ಕುಡಿಯುವುದರಿಂದ ಗಂಟಲಿನಲ್ಲಿ, ದೇಹದ ಮೇಲ್ಭಾಗದಲ್ಲಿ ಸ್ರಾವ ಹೆಚ್ಚುತ್ತದೆ.
ಆದ್ದರಿಂದ ನೆಗಡಿ, ಕೆಮ್ಮು, ತಲೆ ಭಾರ ವಿದ್ದಾಗ, ಕಫವು ಹರಿಯುತ್ತಿರುವವರಿಗೆ ಮಜ್ಜಿಗೆಯನ್ನು ಕುಡಿಯುವುದು ಅಥವಾ ರಾತ್ರಿಯ ಆಹಾರದ ಕೊನೆಯಲ್ಲಿ ಸೇವಿಸುವುದು ಮತ್ತಷ್ಟು ತೊಂದರೆಗೆ ಕಾರಣವಾಗುತ್ತದೆ. ಅಂತೆಯೇ ಉಷ್ಣಕಾಲದಲ್ಲಿ ಮಜ್ಜಿಗೆ ತಂಪು ಎಂದು ಭಾವಿಸಿ ಅತಿಯಾಗಿ ಕುಡಿ ದರೆ ಇದು ದೇಹದಲ್ಲಿ ಮತ್ತಷ್ಟು ಉಷ್ಣತೆಯನ್ನು ಹೆಚ್ಚಿಸಿ ತೊಂದರೆ ಮಾಡುತ್ತದೆ.
ಅನ್ನದೊಟ್ಟಿಗೆ ಬೆರೆಸಿ ಕಲಸಿಕೊಂಡು ತಿನ್ನುವುದರಿಂದ ಮಜ್ಜಿಗೆಯ ಸುಗುಣಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇನ್ನು, ಮಜ್ಜಿಗೆಯ ಸೇವನೆಗೆ ಕೆಲವು ನಿಷೇಧಗಳಿವೆ. ಉಷ್ಣವಲಯದಲ್ಲಿ, ಬೇಸಿಗೆ ಕಾಲದಲ್ಲಿ, ಮಳೆಗಾಲದ ನಂತರದ ಬಿಸಿಲು ಕಾಲದಲ್ಲಿ ಮಜ್ಜಿಗೆಯ ಅತಿಯಾದ ಸೇವನೆ ರೋಗಕರ. ಮೂರ್ಛೆ ತಪ್ಪುವ ರೋಗ, ಕಣ್ಣು ಕತ್ತಲೆ ಬಂದು ತಲೆ ಸುತ್ತುವ ವ್ಯಕ್ತಿಗಳಿಗೂ ಮಜ್ಜಿಗೆ ಹೊಂದುವುದಿಲ್ಲ.
ಯಾವುದೇ ರೀತಿಯ ಸುಟ್ಟ ಗಾಯ ಇರುವವರಿಗೆ ಮಜ್ಜಿಗೆ ನಿಷೇಧ. ಚರ್ಮದ ಕಾಯಿಲೆಗಳು, ಹುಳಿ ತೇಗು, ಎದೆ ಉರಿ ಮೊದಲಾದ ಪಿತ್ತದ ಸಮಸ್ಯೆ ಇರುವವರಿಗೆ, ಅತಿಯಾಗಿ ರಕ್ತವು ಒಸರುವ ಕಾಯಿಲೆ ಗಳಿರುವವರಿಗೆ ಮಜ್ಜಿಗೆ ತೊಂದರೆ ತರಬಹುದು.ಮಜ್ಜಿಗೆಯ ಸೇವನೆಗೆ ಸೂಕ್ತ ಕಾಲವೆಂದರೆ ಚಳಿಗಾಲ ಮತ್ತು ಮಳೆಗಾಲ.
ಇಂಥ ಸಮಯದಲ್ಲಿ ಮಜ್ಜಿಗೆಯ ಒಗ್ಗರಣೆಯ ಅಡುಗೆಗಳು ಹಿತಕರ. ಸ್ವಭಾವತಃ ಹಸಿವೆಯೇ ಕಡಿಮೆ ಇರುವವರಿಗೆ, ಸ್ಥೂಲಕಾಯದವರಿಗೆ, ಕಡಿಮೆ ಪ್ರಮಾಣದಲ್ಲಿ ಮುಟ್ಟು ಹೋಗುವವರಿಗೆ ಮಜ್ಜಿಗೆ ಒಳ್ಳೆಯದು. ರಕ್ತನಾಳಗಳಲ್ಲಿ ತಡೆ ಉಂಟಾಗುವಾಗ, ಕರುಳಿನಲ್ಲಿ ಚಲನೆಯು ನಿಧಾನವಾಗಿ ಆಗಿ ಮಲಬದ್ಧತೆ ಇದ್ದಾಗ ಮಜ್ಜಿಗೆಯ ಸೇವನೆ ಉಪಕಾರಿ. ಹೊಟ್ಟೆ ಉಬ್ಬರವಿದ್ದಾಗ ಒಗ್ಗರಣೆ ಮಾಡಿದ ಮಜ್ಜಿಗೆಯ ಅಡುಗೆಗಳು ಸೂಕ್ತ.
ಒಟ್ಟಾರೆ ಹೇಳಬೇಕಾದರೆ, ನಿತ್ಯ ಸೇವನೆಗೆ ಮತ್ತು ಆರೋಗ್ಯ ರಕ್ಷಣೆಗೆ ಮೊಸರನ್ನು ತ್ಯಜಿಸಿ ಮಜ್ಜಿಗೆ ಯನ್ನು ಸೇವಿಸಿ. ಮೊಸರು ಜೀರ್ಣಕ್ಕೆ ಜಡವಾದರೆ ಮಜ್ಜಿಗೆಯು ಜೀರ್ಣಕ್ಕೆ ಸುಲಭ. ಮೊಸರು ದೇಹ ದಲ್ಲಿ ಅವರೋಧ ಉಂಟುಮಾಡಿದರೆ, ಬೆಣ್ಣೆಯನ್ನು ಬೇರ್ಪಡಿಸಿದ ಮಜ್ಜಿಗೆಯು ರಕ್ತನಾಳ ಗಳನ್ನು ಶುದ್ಧಿ ಮಾಡುತ್ತದೆ. ಬಾವು ಉಂಟುಮಾಡುವ ಮೊಸರಿನ ಮಥನದಿಂದ ತಯಾರಾದ ಮಜ್ಜಿಗೆಯು ಬಾವು ನಿವಾರಕ. ಜ್ವರಕ್ಕೆ ಕಾರಣವಾದ ಮೊಸರು ಕಡೆದ ನಂತರ ವಿಷಮ ಜ್ವರದಲ್ಲಿ ಪಥ್ಯ. ಮೊಸರು ಮೇದಸ್ಸನ್ನು ಹೆಚ್ಚಿಸಿ ಬೊಜ್ಜಿಗೆ ಕಾರಣವಾದರೆ ಮಜ್ಜಿಗೆಯು ಮೇದಸ್ಸನ್ನು ಕರಗಿಸಿ ದೇಹವನ್ನು ಕೃಶವಾಗಿಸುತ್ತದೆ. ಆದ್ದರಿಂದಲೇ ಅಲ್ವಾ ಹೇಳೋದು ‘ತಕ್ರಂ ಶಕ್ರಸ್ಯ ದುರ್ಲಭಮ್!’