IND vs ENG 1st T20I: ಕೋಲ್ಕತಾದಲ್ಲಿ ಇಂಗ್ಲೆಂಡ್ ಎದುರು ಭಾರತಕ್ಕೆ ಕಠಿಣ ಸವಾಲು!
IND vs ENG: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಬುಧವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಟಿ20ಐ ಪಂದ್ಯದಲ್ಲಿ ಸೆಣಸಲಿವೆ. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿ ಆರಂಭವಾಗಲಿದೆ.
ಕೋಲ್ಕತಾ: ಭಾರತ ಹಾಗೂ ಇಂಗ್ಲೆಂಡ್ (IND vs ENG) ತಂಡಗಳ ನಡುವಣ ಐದು ಪಂದ್ಯಗಳ ಟಿ20ಐ ಸರಣಿಯು ಜನವರಿ 22ರಂದು ಆರಂಭವಾಗಲಿದೆ. ಮೊದಲನೇ ಟಿ20ಐ ಪಂದ್ಯ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ತಂಡ ಸೋಲಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಇನ್ನು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಮೂರನೇ ಸ್ಥಾನದಲ್ಲಿದೆ.
2024ರ ನವೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ಭಾರತ ತಂಡದಲ್ಲಿ ಇದೀಗ ಸ್ವಲ್ಪ ಬದಲಾವಣೆಯನ್ನು ತರಲಾಗಿದೆ. ಅದರಲ್ಲಿಯೂ ವಿಶೇಷವಾಗಿ 14 ತಿಂಗಳುಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಮೊಹಮ್ಮದ್ ಶಮಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯುವ ವೇಗಿ ಅರ್ಷದೀಪ್ ಸಿಂಗ್ ಅವರ ಜೊತೆ ಶಮಿ ವೇಗದ ಬೌಲಿಂಗ್ ವಿಭಾಗದಲ್ಲಿ ಕೈ ಜೋಡಿಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಬದಲಿಗೆ ಅಕ್ಷರ್ ಪಟೇಲ್‌ಗೆ ಉಪ ನಾಯಕನ ಸ್ಥಾನವನ್ನು ನೀಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಐ ಸರಣಿ ಆಡಿದ್ದ ಬಹುತೇಕ ಅದೇ ಪ್ಲೇಯಿಂಗ್ XI ಅನ್ನು ಇಂಗ್ಲೆಂಡ್ ವಿರುದ್ಧ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.
IND vs ENG: ಮೊದಲ ಟಿ20ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್; ವರ್ಷದ ಬಳಿಕ ವೇಗಿ ಆಗಮನ
ಇನ್ನು ಇಂಗ್ಲೆಂಡ್ ತಂಡವನ್ನು ಜೋಸ್ ಬಟ್ಲರ್ ಅವರು ಮುನ್ನಡೆಸುವ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೂಡ ನಿರ್ವಹಿಸಲಿದ್ದಾರೆಂದು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಸ್ಪಷ್ಟಪಡಿಸಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾರತ ತಂಡ ಒಟ್ಟು 7 ಟಿ20ಐ ಪಂದ್ಯಗಳನ್ನು ಆಡಿದೆ. ಇದರಲ್ಲಿ ಆರು ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, 2011ರಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಪಂದ್ಯದ ವಿವರ
ಮೊದಲನೇ ಟಿ20ಐ ಪಂದ್ಯ
ಭಾರತ ಹಾಗೂ ಇಂಗ್ಲೆಂಡ್
ದಿನಾಂಕ: ಜನವರಿ 22, 2025
ಸಮಯ: ಸಂಜೆ 7ಕ್ಕೆ ಆರಂಭ
ಸ್ಥಳ: ಈಡನ್ ಗಾರ್ಡನ್ಸ್ ಕ್ರೀಡಾಂಗಣ, ಕೋಲ್ಕತಾ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್
IND vs ENG: ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಪಿಚ್ ರಿಪೋರ್ಟ್
ಮೊದಲನೇ ಟಿ20ಐ ಪಂದ್ಯ ನಡೆಯುವ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಸದ್ಯ ಚಳಿಗಾಲ ಆಗಿರುವ ಕಾರಣ ಇಬ್ಬನಿ ಈ ಪಂದ್ಯತದಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಈ ಕ್ರೀಡಾಂಗಣದಲ್ಲಿ ಒಟ್ಟು 12 ಟಿ20ಐ ಪಂದ್ಯಗಳನ್ನು ಆಡಿಸಲಾಗಿದೆ. ಮೊದಲು ಬ್ಯಾಟ್ ಮಾಡಿದ್ದ ತಂಡಗಳು ಐದು ಬಾರಿ ಗೆಲುವು ಪಡೆದಿದ್ದರೆ, ಚೇಸಿಂಗ್ ತಂಡಗಳು 7 ಬಾರಿ ಗೆದ್ದಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 24
ಭಾರತ ತಂಡದ ಗೆಲುವು: 13
ಇಂಗ್ಲೆಂಡ್ ತಂಡದ ಗೆಲುವು: 11
ಫಲಿತಾಂಶವಿಲ್ಲ: 01
IND vs ENG 1st T20: ಪಂದ್ಯದ ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ಹೀಗಿದೆ
ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI
ಸಂಜು ಸ್ಯಾಮ್ಸನ್ (ವಿಕೇ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ
ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI
ಬೆನ್ ಡಕೆಟ್, ಫಿಲ್ ಸಾಲ್ಟ್ (ವಿ.ಕೀ), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮಿ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.