#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟಿ20ಐ ಸರಣಿಯ ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಉಭಯ ತಂಡಗಳ ನಡುವಣ ಮೊದಲನೇ ಟಿ20ಐ ಪಂದ್ಯ ಬುಧವಾರ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

IND vs ENG 1st T20I

Profile Ramesh Kote Jan 21, 2025 3:10 PM

ಕೋಲ್ಕತಾ: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಣ ಐದು ಪಂದ್ಯಗಳ ಟಿ20ಐ ಸರಣಿಯ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಾಳೆ (ಬುಧವಾರ) ಮೊದಲನೇ ಟಿ20ಐ ಪಂದ್ಯ ನಡೆಯಲಿದೆ. ಸೂರ್ಯಕುಮಾರ್‌ ಯಾದವ್‌ ಅವರ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಕಣಕ್ಕೆ ಇಳಿಯಲಿದ್ದು, ಇಂಗ್ಲೆಂಡ್‌ ಎದುರು ಕಠಿಣ ಸವಾಲು ಎದುರಿಸಲಿದೆ.

ಕೊನೆಯ ಟಿ20ಐ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಪಡೆದಿದ್ದ ಭಾರತ ತಂಡ, ಇದೀಗ ಅದೇ ಲಯವನ್ನು ಆಂಗ್ಲರ ವಿರುದ್ಧ ಮುಂದುವರಿಸಲು ಎದುರು ನೋಡುತ್ತಿದೆ. ಅನುಭವಿ ಆಟಗಾರರ ಜೊತೆ ಯುವ ಪ್ರತಿಭಾ ಆಟಗಾರರೊಂದಿಗೆ ಭಾರತ ತಂಡ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ಅಂದ ಹಾಗೆ 2023ರ ಏಕದಿನ ವಿಶ್ವಕಪ್‌ ಬಳಿಕ ಇದೇ ಮೊದಲ ಬಾರಿ ಮೊಹಮ್ಮದ್‌ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ.

IND vs ENG 1st T20: ಪಂದ್ಯದ ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ಹೀಗಿದೆ

ಮೊದಲನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಇಂಗ್ಲೆಂಡ್‌ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿಯೂ ಭಾರತದ ಪರ ಅಭಿಷೇಕ್‌ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಈ ಜೋಡಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತ್ತು. ಸಂಜು ಸ್ಯಾಮ್ಸನ್‌ ಕಳೆದ ಐದು ಟಿ20ಐ ಪಂದ್ಯಗಳಿಂದ ಮೂರು ಶತಕಗಳನ್ನು ಸಿಡಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದು ಕಡೆ ಅಭಿಷೇಕ್‌ ಶರ್ಮಾ ಕೂಡ ತ್ವರಿತವಾಗಿ ರನ್‌ ಗಳಿಸುತ್ತಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು

ದಕ್ಷಿಣ ಆಫ್ರಿಕಾದಲ್ಲಿ ಶತಕಗಳನ್ನು ಸಿಡಿಸಿದ್ದ ತಿಲಕ್‌ ವರ್ಮಾ ಈ ಸರಣಿಯಲ್ಲಿಯೂ ಮೂರನೇ ಕ್ರಮಾಂಕದಲ್ಲಿ ಮುಂದುವರಿಯಲಿದ್ದಾರೆ. ನಾಯಕ ಸೂರ್ಯಕುಮಾರ್‌ ಯಾದವ್‌ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಆಡಲಿದ್ದಾರೆ. ನಂತರದ ಕ್ರಮಾಂಕದಲ್ಲಿ ರಿಂಕು ಸಿಂಗ್‌ ಮ್ಯಾಚ್‌ ಫಿನಿಷರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಟೆಸ್ಟ್‌ ಸರಣಿಯಲ್ಲಿ ಮಿಂಚಿದ್ದ ನಿತೀಶ್‌ ಕುಮಾರ್‌ ಯಾದವ್‌ ಅವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ.



ಬೌಲಿಂಗ್‌ ವಿಭಾಗ

ಸ್ಪಿನ್‌ ಆಲ್‌ರೌಂಡರ್‌ ಆಗಿ ಅಕ್ಷರ್‌ ಪಟೇಲ್‌ ಆಡಿದರೆ, ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ವರುಣ್‌ ಚಕ್ರವರ್ತಿ ಆಡಬಹುದು. ವೇಗದ ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಶಮಿ ಹಾಗೂ ಅರ್ಷದೀಪ್‌ ಸಿಂಗ್‌ ಕಾಣಿಸಿಕೊಳ್ಳಲಿದ್ದಾರೆ. 2023ರ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ಬಳಿಕ ಪಾದದ ಗಾಯಕ್ಕೆ ತುತ್ತಾಗಿದ್ದ ಶಮಿ, ಒಂದೂವರೆ ವರ್ಷದ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ.

ಮೊದಲನೇ ಟಿ20ಐ ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಸಂಜು ಸ್ಯಾಮ್ಸನ್‌ (ವಿ.ಕೀ), ಅಭಿಷೇಕ್‌ ಶರ್ಮಾ, ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌ (ನಾಯಕ), ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್‌, ನಿತೀಶ್‌ ರೆಡ್ಡಿ, ಅಕ್ಷರ್‌ ಪಟೇಲ್‌, ಅರ್ಷದೀಪ್‌ ಸಿಂಗ್‌, ಮೊಹಮ್ಮದ್‌ ಶಮಿ, ವರುಣ್‌ ಚಕ್ರವರ್ತಿ