#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಇಂಗ್ಲೆಂಡ್‌ಗೆ ಮುಖಭಂಗ, 3ನೇ ಒಡಿಐ ಗೆದ್ದು ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ!

IND vs ENG 3rd ODI Highlights: ಶುಭಮನ್‌ ಗಿಲ್‌ (112) ಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ, ಮೂರನೇ ಪಂದ್ಯದಲ್ಲಿಯೂ ಇಂಗ್ಲೆಂಡ್‌ ವಿರುದ್ಧ 142 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು.

ಇಂಗ್ಲೆಂಡ್‌ಗೆ ಮೂರನೇ ಪಂದ್ಯದಲ್ಲಿಯೂ ಸೋಲಿನ ಬರೆ ಎಳೆದ ಭಾರತ!

India won 3rd ODI against England

Profile Ramesh Kote Feb 12, 2025 9:00 PM

ಅಹಮದಾಬಾದ್‌: ಶುಭಮನ್‌ ಗಿಲ್‌ (112 ರನ್‌) (Shubman Gill) ಅವರ ಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ, ಇಂಗ್ಲೆಂಡ್‌ ವಿರುದ್ಧ ಮೂರನೇ ಪಂದ್ಯದಲ್ಲಿಯೂ (IND vs ENG 3rd ODI Highlights) 142 ರನ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರೋಹಿತ್‌ ಶರ್ಮಾ ನಾಯಕತ್ವದ ಟೀಮ್‌ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಇದರೊಂದಿಗೆ ಕನಿಷ್ಠ ಕೊನೆಯ ಪಂದ್ಯವನ್ನಾದರೂ ಗೆದ್ದು ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಟೂರ್ನಿಗೆ (ICC Champions Trophy 2025) ವಿಶ್ವಾಸ ಹೆಚ್ಚಿಸಿಕೊಳ್ಳಬೇಕೆಂದುಕೊಂಡಿದ್ದ ಪ್ರವಾಸಿ ಇಂಗ್ಲೆಂಡ್‌ಗೆ ಭಾರಿ ನಿರಾಶೆಯಾಯಿತು.

ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಪ್ರವಾಸಿ ಬೌಲರ್‌ಗಳು ವಿಫಲರಾದರು. ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಆಂಗ್ಲರು ವಿಫಲರಾದರು. ಮೂರನೇ ಪಂದ್ಯದಲ್ಲಿಯೂ ತಮ್ಮ ಫಾರ್ಮ್‌ ಅನ್ನು ಮುಂದುವರಿಸಿದ ಶುಭಮನ್‌ ಗಿಲ್‌ ಶತಕ ಸಿಡಿಸಿದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಿಗೆ 356 ರನ್‌ ಗಳಿಸಿ ಆಲ್‌ಔಟ್‌ ಆಯಿತು. ಆ ಮೂಲಕ ಇಂಗ್ಲೆಂಡ್‌ಗೆ 357 ರನ್‌ಗಳ ಕಠಿಣ ಗುರಿಯನ್ನು ನೀಡಿತು.

IND vs ENG: ಆದಿಲ್‌ ರಶೀದ್‌ ಎದುರು ಮುಂದುವರಿದ ವಿರಾಟ್‌ ಕೊಹ್ಲಿಯ ವೈಫಲ್ಯ! ಇಂಗ್ಲೆಂಡ್‌ ಸ್ಪಿನ್ನರ್‌ಗೆ ಔಟಾಗಿರುವುದು ಎಷ್ಟನೇ ಬಾರಿ ಗೊತ್ತೆ?

ಏಳನೇ ಒಡಿಐ ಶತಕ ಸಿಡಿಸಿದ ಶುಭಮನ್‌ ಗಿಲ್‌

ಕಟಕ್‌ನಲ್ಲಿ ಶತಕ ಸಿಡಿಸಿದ್ದ ನಾಯಕ ರೋಹಿತ್‌ ಶರ್ಮಾ, ಮೂರನೇ ಪಂದ್ಯದಲ್ಲಿ ಅದೇ ಲಯವನ್ನು ಮುಂದುವರಿಸುವಲ್ಲಿ ವಿಫಲರಾದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಶುಭಮನ್‌ ಗಿಲ್‌ ತಮ್ಮ ಪವರ್‌ಫುಲ್‌ ಆಟದ ಮೂಲಕ ಆಂಗ್ಲರಿಗೆ ಬೆವರಿಳಿಸಿದರು. ಅವರು 95 ಎಸೆತಗಳಲ್ಲಿ ತಮ್ಮ ಏಳನೇ ಒಡಿಐ ಶತಕವನ್ನು ಪೂರ್ಣಗೊಳಿಸಿದರು. ಒಟ್ಟು 102 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 112 ರನ್‌ಗಳಿಸಿ ಆದಿಲ್‌ ರಶೀದ್‌ಗೆ ಶರಣಾದರು. ಇದಕ್ಕೂ ಮುನ್ನ ಎರಡನೇ ವಿಕೆಟ್‌ಗೆ ವಿರಾಟ್‌ ಕೊಹ್ಲಿ ಜೊತೆ 116 ರನ್‌ಗಳು ಹಾಗೂ ಶ್ರೇಯಸ್‌ ಅಯ್ಯರ್‌ ಜೊತೆಗೆ ಮೂರನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟವನ್ನು ಆಡಿ ಗಿಲ್‌ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಲು ನೆರವು ನೀಡಿದ್ದರು.



ವಿರಾಟ್‌ ಕೊಹ್ಲಿ-ಶ್ರೇಯಸ್‌ ಅಯ್ಯರ್‌ ಅರ್ಧಶತಕ

ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ವಿರಾಟ್‌ ಕೊಹ್ಲಿ ಅಹಮದಾಬಾದ್‌ನಲ್ಲಿ 55 ಎಸೆತಗಳಲ್ಲಿ 52 ರನ್‌ಗಳನ್ನು ಗಳಿಸಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಫಾರ್ಮ್‌ಗೆ ಮರಳುವ ಭರವಸೆಯನ್ನು ನೀಡಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಶ್ರೇಯಸ್‌ ಅಯ್ಯರ್‌ 64 ಎಸೆತಗಳಲ್ಲಿ 78 ರನ್‌ಗಳನ್ನು ಸಿಡಿಸಿ ತಮ್ಮ ನಾಲ್ಕನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದಾರೆ. ಕೆಎಲ್‌ ರಾಹುಲ್‌ 40 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು. ಇಂಗ್ಲೆಂಡ್‌ ತಂಡದ ಪರ ಬೌಲಿಂಗ್‌ನಲ್ಲಿ ಗಮನ ಸೆಳೆದ ಸ್ಪಿನ್ನರ್‌ ಆದಿಲ್‌ ರಶೀದ್‌ 4 ವಿಕೆಟ್‌ ಕಿತ್ತರು.



214 ರನ್‌ಗಳಿಗೆ ಇಂಗ್ಲೆಂಡ್‌ ಆಲ್‌ಔಟ್‌

ಬಳಿಕ ಕಠಿಣ ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ ತಂಡ, ಭಾರತದ ಬೌಲರ್‌ಗಳ ಶಿಸ್ತು ಬದ್ದ ಬೌಲಿಂಗ್‌ ದಾಳಿಗೆ ನಲುಗಿ 34.2 ಓವರ್‌ಗಳಿಗೆ ಕೇವಲ 214 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಕನಿಷ್ಠ ಒಂದೂ ಪಂದ್ಯ ಗೆಲ್ಲದ ಪ್ರವಾಸಿಗರು ಮುಖಭಂಗ ಅನುಭವಿಸಿದರು. ಫಿಲ್‌ ಸಾಲ್ಟ್‌ (23 ರನ್‌), ಬೆನ್‌ ಡಕೆಟ್‌ (34), ಟಾಮ್‌ ಬ್ಯಾಂಟನ್‌ (38), ಜೋ ರೂಟ್‌ (24) ಅವರು ತಮಗೆ ಸಿಕ್ಕಿದ್ದ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದರು. ಕೊನೆಯಲ್ಲಿ ಗಸ್‌ ಅಟ್ಕಿನ್ಸನ್‌ 19 ಎಸೆತಗಳಲ್ಲಿ 38 ರನ್‌ಗಳಿಸಿದರೂ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಯಾವುದೇ ಪ್ರಯೋಜನವಾಗಲಿಲ್ಲ.

ಭಾರತ ತಂಡದ ಪರ ಅತ್ಯುತ್ತಮ ಬೌಲ್‌ ಮಾಡಿದ ಅರ್ಷದೀಪ್‌ ಸಿಂಗ್‌, ಹರ್ಷಿತ್‌ ರಾಣಾ, ಹಾರ್ದಿಕ್‌ ಪಾಂಡ್ಯ ಹಾಗೂ ಅಕ್ಷರ್‌ ಪಟೇಲ್‌ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದಿದ್ದಾರೆ.



ಸ್ಕೋರ್‌ ವಿವರ

ಭಾರತ: 50 ಓವರ್‌ಗಳಿಗೆ 356-10 (ಶುಭಮನ್‌ ಗಿಲ್‌ 112, ಶ್ರೇಯಸ್‌ ಅಯ್ಯರ್‌ 78, ವಿರಾಟ್‌ ಕೊಹ್ಲಿ 52, ಕೆಎಲ್‌ ರಾಹುಲ್‌ 40; ಆದಿಲ್‌ ರಶೀದ್‌ 64ಕ್ಕೆ 4, ಮಾರ್ಕ್‌ ವುಡ್‌ 45ಕ್ಕೆ 2)

ಇಂಗ್ಲೆಂಡ್‌: 34.2 ಓವರ್‌ಗಳಿಗೆ 214-10 (ಗಸ್‌ ಅಟ್ಕಿನ್ಸನ್‌ 38, ಟಾಮ್‌ ಬ್ಯಾಂಟನ್‌ 38, ಬೆನ್‌ ಡಕೆಟ್‌ 34; ಅಕ್ಷರ್‌ ಪಟೇಲ್‌ 22ಕ್ಕೆ 2, ಹರ್ಷಿತ್‌ ರಾಣಾ 31 ಕ್ಕೆ 2, ಅರ್ಷದೀಪ್‌ ಸಿಂಗ್‌ 33 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಶುಭಮನ್‌ ಗಿಲ್‌

ಸರಣಿ ಶ್ರೇಷ್ಠ ಪ್ರಶಸ್ತಿ: ಶುಭಮನ್‌ ಗಿಲ್‌