IND vs ENG: ರೋಹಿತ್ ಶರ್ಮಾ ಶತಕದ ಕುರಿತು ರವೀಂದ್ರ ಜಡೇಜಾ ಹೇಳಿದ್ದೇನು?
Ravindra jadeja on Rohit Sharma's Century: ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ಭಾನುವಾರ (ಫೆಬ್ರವರಿ 9) ಇಂಗ್ಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿರುವುದು ಟೀಮ್ ಇಂಡಿಯಾ ಆಟಗಾರರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಹೇಳಿದ್ದಾರೆ. 12 ಬೌಂಡರಿ , 7 ಸಿಕ್ಸರ್ ನೆರವಿನಿಂದ 119 ರನ್ ಸಿಡಿಸಿ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಹಿಟ್‌ಮ್ಯಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
![ಶತಕ ಸಿಡಿಸಿದ ರೋಹಿತ್ ಶರ್ಮಾ ಬಗ್ಗೆ ರವೀಂದ್ರ ಜಡೇಜಾ ಹೇಳಿದ್ದಿದು!](https://cdn-vishwavani-prod.hindverse.com/media/original_images/Rohit_Sharma-Ravindra_Jadeja.jpg)
Ravindra jadeja on Rohit Sharma's Century
![Profile](https://vishwavani.news/static/img/user.png)
ಕಟಕ್: ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit ಸಿಡಿಸಿದ ಶತಕದಿಂದ ನಾಯಕ ಹಾಗೂ ತಂಡದ ಇತರ ಆಟಗಾರರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ವಿಶ್ವಾಸ ಮೂಡಿಸಿದೆ ಎಂದು ಅನುಭವಿ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಹೇಳಿದ್ದಾರೆ. ಹಿಟ್‌ಮ್ಯಾನ್ ಸಿಡಿಸಿದ 32ನೇ ಏಕದಿನ ಶತಕದ ನೆರವಿನಿಂದ 4 ವಿಕೆಟ್ ಗೆಲುವು ಸಾಧಿಸಿದ ಭಾರತ ತಂಡ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಇಂಗ್ಲೆಂಡ್ ನೀಡಿದ 305 ರನ್‌ಗಳ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ನಾಯಕ 12 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 119 ರನ್ ಗಳಿಸಿದರು. ಈ ಪ್ರದರ್ಶನಕ್ಕಾಗಿ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯ ಮುಗಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಜಡೇಜಾ, ನಾಯಕ ರೋಹಿತ್ ಶರ್ಮಾ ಅವರ ಶತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
IND vs ENG: ಸೆಂಚುರಿ ಬಾರಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ!
"ಒಬ್ಬ ಸ್ಟಾರ್ ಆಟಗಾರ ತಮ್ಮ ಹಳೆಯ ಫಾರ್ಮ್‌ಗೆ ಮರಳಲು ಒಂದೆರಡು ಇನಿಂಗ್ಸ್‌ಗಳನ್ನು ಕಾಯಬೇಕಾಗುತ್ತದೆ. ಆದರೆ ಐಸಿಸಿ ಆಯೋಜನೆಯ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾ ಸ್ಫೋಟಕ ಫಾರ್ಮ್‌ಗೆ ಮರಳಿರುವುದು ಶುಭ ಸಂಗತಿ. ಈ ಶತಕದಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿರುವುದು ತಂಡದ ದೃಷ್ಟಿಯಿಂದಲೂ ಉತ್ತಮವಾಗಿದೆ. ಅಲ್ಲದೆ ಅವರು (ರೋಹಿತ್ ಶರ್ಮಾ) ತಮ್ಮ ಆಟದ ಕುರಿತು ತುಂಬಾ ಚೆನ್ನಾಗಿ ಅರಿತುಕೊಂಡಿದ್ದಾರೆ. ಆದ್ದರಿಂದ ಅವರ ಆಟದ ಬಗ್ಗೆ ಯೋಚಿಸುವುದು ಅಥವಾ ಚರ್ಚಿಸುವುದು ಅನಗತ್ಯ," ಎಂದು ರವೀಂದ್ರ ಜಡೇಜಾ ತಿಳಿಸಿದ್ದಾರೆ.
ದೇಶಿ ಕ್ರಿಕೆಟ್ ನೆರವಾಗಿದೆ: ಜಡೇಜಾ
ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಲಯದಲ್ಲಿ ಬೌಲ್ ಮಾಡಲು ದೇಶಿ ಕ್ರಿಕೆಟ್ ನೆರವಾಗಿದೆ. ಅಸ್ಸಾಂ ಹಾಗೂ ಡೆಲ್ಲಿ ತಂಡಗಳ ವಿರುದ್ಧ ನಡೆದಿದ್ದ ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ತೋರಿದ್ದ ಜಡೇಜಾ, ಅದೇ ಲಯವನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಮುಂದುವರೆಸಿ ಮೊದಲೆರಡು ಪಂದ್ಯಗಳಲ್ಲಿ ತಲಾ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
"ದೇಶಿ ಕ್ರಿಕೆಟ್ (ರಣಜಿ ಟ್ರೋಫಿ ಟೂರ್ನಿ) ಆಡಿದ್ದು ನನಗೆ ಸಾಕಷ್ಟು ನೆರವಾಗಿದೆ. ಅಲ್ಲಿ ಬೌಲ್ ಮಾಡಲು ಸಾಕಷ್ಟು ಎಸೆತಗಳು ಸಿಕ್ಕಿದ್ದರಿಂದ ಲಯ ಕಂಡುಕೊಳ್ಳಲು ಸುಲಭವಾಯಿತು. ಆದ್ದರಿಂದ ಎರಡು ವರ್ಷಗಳ ನಂತರ ನಾನು ಏಕದಿನ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡರೂ ಟೆಸ್ಟ್ ಕ್ರಿಕೆಟ್‌ನಂತೆ ಸುಲಲಿತವಾಗಿ ಬೌಲ್ ಮಾಡುತ್ತಿದ್ದೇನೆ," ಎಂದು ರವೀಂದ್ರ ಜಡೇಜಾ ತಿಳಿಸಿದ್ದಾರೆ.
IND vs ENG 2nd ODI: ರೋಹಿತ್ ಶತಕ ವೈಭವ; ಭಾರತಕ್ಕೆ ಸರಣಿ ಗೆಲುವಿನ ಸಂಭ್ರಮ
ಕ್ಲೀನ್ ಸ್ವೀಪ್‌ನತ್ತ ಭಾರತ ಚಿತ್ತ
ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ತಂಡ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಫೆಬ್ರವರಿ 12 (ಬುಧವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ. ನಂತರ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೆಬ್ರವರಿ 20ರಂದು ಬಾಂಗ್ಲಾದೇಶ ತಂಡದ ಸವಾಲು ಎದುರಿಸುವ ಮೂಲಕ ಭಾರತ ತಂಡ ತನ್ನ ಅಭಿಯಾನ ಆರಂಭಿಸಲಿದೆ.