#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG 2nd ODI: ರೋಹಿತ್‌ ಶತಕ ವೈಭವ; ಭಾರತಕ್ಕೆ ಸರಣಿ ಗೆಲುವಿನ ಸಂಭ್ರಮ

IND vs ENG 2nd ODI: ಶತಕ ಸಂಭ್ರಮದಲ್ಲಿ ಮಿಂದೆದ್ದ ರೋಹಿತ್‌ ಶರ್ಮ 7 ಸಿಕ್ಸರ್‌ಗಳೊಂದಿಗೆ ರಂಜಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅವರು ಹೊಡೆದ ಸಿಕ್ಸರ್‌ಗಳ ಸಂಖ್ಯೆ 338ಕ್ಕೆ ಏರಿದೆ. ಈ ಸಾಹಸದ ವೇಳೆ ವಿಂಡೀಸ್‌ನ ಕ್ರಿಸ್‌ ಗೇಲ್‌ ಅವರನ್ನು ಹಿಂದಿಕ್ಕಿ ಅತ್ಯಧಿಕ ಸಿಕ್ಸರ್‌ ಸಾಧಕರ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದರು.

ರೋಹಿತ್‌ ಶತಕ ವೈಭವ; ಭಾರತಕ್ಕೆ ಸರಣಿ ಗೆಲುವಿನ ಸಂಭ್ರಮ

Profile Abhilash BC Feb 9, 2025 9:51 PM

ಕಟಕ್‌: ಬಹಳ ಸಮಯದ ಬಳಿಕ ಹಿಟ್‌ಮ್ಯಾನ್‌ ಅವತಾರವೆತ್ತಿದ ರೋಹಿತ್‌ ಶರ್ಮ(119) ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಭಾನುವಾರ ನಡೆದ ಏಕದಿನ ಪಂದ್ಯದಲ್ಲಿ(IND vs ENG 2nd ODI) ಶತಕ ಸಂಭ್ರಮದಲ್ಲಿ ಮಿಂದೆದ್ದರು. ಅವರ ಈ ಅತ್ಯಾಕರ್ಷಕ ಶತಕ ಸಾಹಸದಿಂದ ಭಾರತ ತಂಡ 4 ವಿಕೆಟ್‌ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆಲುವು ಸಾಧಿಸಿತು. ಅಂತಿಮ ಪಂದ್ಯ ಬುಧವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇಲ್ಲಿನ ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌, ಜೋ ರೂಟ್‌(65) ಮತ್ತು ಬೆನ್‌ ಡಕೆಟ್‌(69) ಬಾರಿಸಿದ ಅರ್ಧಶತಕದ ನೆರವಿನಿಂದ 49.5 ಓವರ್‌ಗಳಲ್ಲಿ 304 ರನ್‌ ಬಾರಿಸಿತು. ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಭಾರತ 44.3 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 308 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಫ್ಲಡ್ ಲೈಟ್​ಗಳು ಕೆಟ್ಟುಹೋದ ಕಾರಣ ಪಂದ್ಯ ಅರ್ಧ ಗಂಟೆ ಸ್ಥಗಿತಗೊಂಡಿತು. ಭಾರತ 6.1 ಓವರ್‌ಗಳಲ್ಲಿ 48 ರನ್‌ ಗಳಿಸಿದ್ದ ವೇಳೆ ಈ ಸಮಸ್ಯೆ ಎದುರಾಯಿತು. ಬಳಿಕ ಲೈಟ್‌ ಸರಿಪಡಿಸಿ ಪಂದ್ಯ ಆರಂಭವಾಯಿತು.

ಗಿಲ್‌-ರೋಹಿತ್‌ ಬೊಂಬಾಟ್‌ ಬ್ಯಾಟಿಂಗ್‌

ದೊಡ್ಡ ಮೊತ್ತವನ್ನು ಬೆನ್ನಟ್ಟುವ ವೇಳೆ ರೋಹಿತ್‌ ಶರ್ಮ ಮತ್ತು ಶುಭಮನ್‌ ಗಿಲ್‌ ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿ ಆಂಗ್ಲರ ದಾಳಿಯನ್ನು ಪುಡಿಗಟ್ಟಿದರು. ಉಭಯ ಆಟಗಾರರು ಕ್ರೀಸ್‌ನಲ್ಲಿರುವ ತನಕ ನೆರದಿದ್ದ ಪ್ರೇಕ್ಷಕರಿಗೆ ಭರಪೂರ ರಂಜನೆ ದೊರಕಿತು. 16.4 ಓವರ್‌ ತನಕ ಬ್ಯಾಟಿಂಗ್‌ ನಡೆಸಿದ ಈ ಜೋಡಿ ಮೊದಲ ವಿಕೆಟ್‌ಗೆ ಬರೋಬ್ಬರಿ 136 ರನ್‌ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಅರ್ಧಶತಕ ಬಾರಿಸಿದ ಶುಭಮನ್‌ ಗಿಲ್‌ 52 ಎಸೆತಗಳಿಂದ 60 ರನ್‌ ಗಳಿಸಿ ಓವರ್ಟನ್ ಅವರ ಸ್ಲೋ ಯಾರ್ಕರ್‌ಗೆ ಬೌಲ್ಟ್‌ ಆದರು.

ರನ್‌ ಬರಗಾಲದಲ್ಲಿದ್ದ ಈ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್‌ ಪ್ಯಾಕೆಜ್‌ ನೀಡಿದರು. 30 ಎಸೆತದಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ರೋಹಿತ್‌, 76 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಇದು ರೋಹಿತ್‌ ಅವರ 32ನೇ ಏಕದಿನ ಶತಕ. ಅಂತಿಮವಾಗಿ 90 ಎಸೆತ ಎದುರಿಸಿದ ಅವರು 12 ಆಕರ್ಷಕ ಬೌಂಡರಿ ಮತ್ತು 7 ಸಿಕ್ಸರ್‌ ನೆರವಿನಿಂದ 119 ರನ್‌ ಬಾರಿಸಿದರು. ಚಾಂಪಿಯನ್ಸ್‌ ಟ್ರೋಫಿಗೆ ಇನ್ನು ಕೆಲ ದಿನಗಳಿರುವಾಗಲೇ ರೋಹಿತ್‌ ಲಯಕ್ಕೆ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಗೇಲ್‌ ದಾಖಲೆ ಪತನ

ಶತಕ ಸಂಭ್ರಮದಲ್ಲಿ ಮಿಂದೆದ್ದ ರೋಹಿತ್‌ ಶರ್ಮ 7 ಸಿಕ್ಸರ್‌ಗಳೊಂದಿಗೆ ರಂಜಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅವರು ಹೊಡೆದ ಸಿಕ್ಸರ್‌ಗಳ ಸಂಖ್ಯೆ 338ಕ್ಕೆ ಏರಿದೆ. ಈ ಸಾಹಸದ ವೇಳೆ ವಿಂಡೀಸ್‌ನ ಕ್ರಿಸ್‌ ಗೇಲ್‌ ಅವರನ್ನು ಹಿಂದಿಕ್ಕಿ ಅತ್ಯಧಿಕ ಸಿಕ್ಸರ್‌ ಸಾಧಕರ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದರು. ಗೇಲ್‌ 331 ಸಿಕ್ಸರ್‌ ಹೊಡೆದಿದ್ದಾರೆ. 351 ಸಿಕ್ಸರ್‌ ಬಾರಿಸಿರುವ ಪಾಕಿಸ್ತಾನದ ಶಾಹಿದ್‌ ಅಫ್ರಿದಿ ವಿಶ್ವ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ Most Sixes In ODIs: ಕ್ರಿಸ್‌ ಗೇಲ್‌ ಸಿಕ್ಸರ್‌ ದಾಖಲೆ ಮುರಿದ ರೋಹಿತ್‌

ಕೊಹ್ಲಿ ಮತ್ತೆ ವಿಫಲ

ಮಂಡಿ ನೋವಿನಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಆಡಲಿಳಿದರೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕೇವಲ ಒಂದು ಬೌಂಡರಿಗೆ ಸೀಮಿತರಾಗಿ 5 ರನ್‌ಗೆ ಆಟ ಮುಗಿಸಿದರು. ಆ ಬಳಿಕ ಬಂದ ಶ್ರೇಯಸ್‌ ಅಯ್ಯರ್‌ 44 ರನ್‌ ಗಳಸಿದ್ದ ವೇಳೆ ಇಲ್ಲದ ರನ್‌ ಕದಿಯುವ ಯತ್ನದಲ್ಲಿ ರನೌಟ್‌ ಆದರು. ಕನ್ನಡಿಗ ಕೆ.ಎಲ್‌ ರಾಹುಲ್‌ ಈ ಪಂದ್ಯದಲ್ಲಿಯೂ ಎಡವಿದರು. ಅವರ ಗಳಿಕೆ 10 ರನ್‌. ಅಂತಿಮ ಹಂತದಲ್ಲಿ ಭಾರತ ನಾಟಕೀಯ ಕುಸಿತ ಕಂಡರೂ ಅಕ್ಷರ್‌ ಪಟೇಲ್‌ ಅಜೇಯ 41 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೇಮೀ ಓವರ್ಟನ್ 27 ಕ್ಕೆ 2 ವಿಕೆಟ್‌ ಕಿತ್ತರು.

ಇಂಗ್ಲೆಂಡ್‌ಗೆ ರೂಟ್‌-ಡಕೆಟ್‌ ಆಸರೆ

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌, ಮೊದಲ ಪಂದ್ಯದಂತೇ ಬಿರುಸಿನ ಬ್ಯಾಟಿಂಗ್‌ ಮೂಲಕ ಉತ್ತಮ ರನ್‌ ಕಲೆಹಾಕಿತು. ಆರಂಭಿಕರಾದ ಫಿಲ್‌ ಸಾಲ್ಟ್‌ ಮತ್ತು ಬೆನ್‌ ಡಕೆಟ್‌ ಸೇರಿಕೊಂಡು ಓವರ್‌ಗೆ 10ರ ಸರಾಸರಿಯಲ್ಲಿ ರನ್‌ ಗಳಿಸುವ ಮೂಲಕ ಭಾರತೀಯ ಬೌಲರ್‌ಗಳನ್ನು ದಂಡಿಸಿದರು.

ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸುತ್ತಿದ್ದ ಈ ಜೋಡಿಯನ್ನು ಪದಾರ್ಪಣ ಪಂದ್ಯವನ್ನಾಡಿದ ವರುಣ್‌ ಚಕ್ರವರ್ತಿ ಕೊನೆಗೂ ಬೇರ್ಪಡಿಸಿ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. 26 ರನ್‌ ಗಳಿಸಿದ್ದ ಫಿಲ್‌ ಸಾಲ್ಟ್‌ ವಿಕೆಟ್‌ ಕಿತ್ತರು. ಡಕೆಟ್‌ ಮತ್ತು ಸಾಲ್ಟ್‌ ಮೊದಲ ವಿಕೆಟ್‌ಗೆ 81 ರನ್‌ ಒಟ್ಟುಗೂಡಿಸಿದರು. ಈ ವಿಕೆಟ್‌ ಪತನದ ಬಳಿಕ ರೂಟ್‌ ಜತೆ ಇನಿಂಗ್ಸ್‌ ಬೆಳೆಸಿದ ಡಕೆಟ್‌ ಅರ್ಧಶತಕ ಬಾರಿಸಿದರು. ಒಟ್ಟು 10 ಬೌಂಡರಿ ನೆರವಿನಿಂದ 65 ರನ್‌ ಬಾರಿಸಿದರು.

ರೂಟ್‌ ಅರ್ಧಶತಕ ಬಾರಿಸುವ ಮೂಲಕ ಇಂಗ್ಲೆಂಡ್‌ ಪರ ಏಕದಿನದಲ್ಲಿ ಅತ್ಯಧಿಕ ಬಾರಿ 50 ಪ್ಲಸ್‌ ರನ್‌ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಮಾಜಿ ಆಟಗಾರ ಇಯಾನ್‌ ಮಾರ್ಗನ್‌(55) ಹೆಸರಿನಲ್ಲಿತ್ತು. ರೂಟ್‌ 56 ಬಾರಿ 50 ಪ್ಲಸ್‌ ರನ್‌ ಬಾರಿಸಿದರು. 72 ಎಸೆತ ಎದುರಿಸಿದ ರೂಟ್‌ 69 ರನ್‌ ಗಳಿಸಿ ಈ ಪಂದ್ಯದಲ್ಲಿಯೂ ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ಉಳಿದಂತೆ ಹ್ಯಾರಿ ಬ್ರೂಕ್‌(31), ಜಾಸ್‌ ಬಟ್ಲರ್‌(34) ರನ್‌ ಬಾರಿಸಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ಲಿಯಾಂಗ್‌ ಲಿವಿಂಗ್‌ಸ್ಟೋನ್‌ 41 ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಭಾರತ ಪರ ರವೀಂದ್ರ ಜಡೇಜಾ ಒಂದು ಮೇಡನ್‌ ಸಹಿತ 35 ರನ್‌ ವೆಚ್ಚದಲ್ಲಿ 3 ವಿಕೆಟ್‌ ಕಿತ್ತರು. ಚೊಚ್ಚಲ ಪಂದ್ಯವನ್ನಾಡಿದ ಚಕ್ರವರ್ತಿ, ಅನುಭವಿ ಮೊಹಮ್ಮದ್‌ ಶಮಿ, ಯುವ ವೇಗಿ ಹರ್ಷಿತ್‌ ರಾಣಾ ಮತ್ತು ಹಾರ್ದಿಕ್‌ ಪಾಂಡ್ಯ ದುಬಾರಿಯಾಗಿ ಪರಿಣಮಿಸಿ ತಲಾ ಒಂದೊಂದು ವಿಕೆಟ್‌ ಪಡೆದರು.

ವರುಣ್‌ ಚಕ್ರವರ್ತಿ ಪದಾರ್ಪಣೆ

ಕರ್ನಾಟಕದ ಬೀದರ್‌ನಲ್ಲಿ ಜನಿಸಿದ ವರುಣ್ ಚಕ್ರವರ್ತಿ, ಸದ್ಯತಮಿಳುನಾಡಿನ ತಂಜಾವೂರಿನಲ್ಲಿ ನೆಲೆಸಿರುವ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಈ ಪಂದ್ಯದಲ್ಲಿ ಆಡುವ ಮೂಲಕ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದರು. ಇದೇ ವೇಳೆ ಮಾಜಿ ಆಟಗಾರ ಫಾರೂಖ್‌ ಇಂಜಿನಿಯರ್‌( 36 ವರ್ಷ) ಬಳಿಕ ಭಾರತ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎರಡನೇ ಅತಿ ಹಿರಿಯ ಆಟಗಾರ ಎನಿಸಿಕೊಂಡರು. ವರುಣ್‌ಗೆ 33 ವರ್ಷ, 164 ದಿನ.