ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India's Test Squad: ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ, ಶುಭಮನ್‌ ಗಿಲ್‌ ನೂತನ ನಾಯಕ!

India's Test Squad: ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ. ನಿರೀಕ್ಷೆಯಂತೆ ರೋಹಿತ್ ಶರ್ಮ ನಿವೃತ್ತಿಯಿಂದ ತೆರವಾದ ಟೆಸ್ಟ್ ನಾಯಕತ್ವ ಸ್ಥಾನಕ್ಕೆ ಶುಭಮನ್‌ ಗಿಲ್‌ ಆಯ್ಕೆಯಾಗಿದ್ದಾರೆ. ತಂಡದ ಉಪ ನಾಯಕನಾಗಿ ರಿಷಭ್‌ ಪಂತ್‌ ನೇಮಕಗೊಂಡಿದ್ದಾರೆ. ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಒಟ್ಟು 18 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ!

ಭಾರತ ಟೆಸ್ಟ್‌ ತಂಡಕ್ಕೆ ಶುಭಮನ್‌ ಗಿಲ್‌ ನಾಯಕ.

Profile Ramesh Kote May 24, 2025 1:57 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಮುಂಬರುವ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ (IND vs ENG) 18 ಸದಸ್ಯರ ಭಾರತ ತಂಡವನ್ನು (India's Test Squad) ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಶನಿವಾರ ಪ್ರಕಟಿಸಿದೆ. ನಿರೀಕ್ಷಯಂತೆ ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ಗೆ (Shubman Gill) ಭಾರತ ಟೆಸ್ಟ್‌ ತಂಡದ ನಾಯಕತ್ವವನ್ನು ನೀಡಲಾಗಿದ್ದು, ಇವರಿಗೆ ಉಪ ನಾಯಕನನ್ನಾಗಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ರೋಹಿತ್‌ ಶರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದರು. ಇವರಿಂದ ತೆರವಾಗಿದ್ದ ನಾಯಕತ್ವದ ಸ್ಥಾನಕ್ಕೆ ಗಿಲ್‌ ಅವರನ್ನು ಬಿಸಿಸಿಐ ಆಯ್ಕೆ ಮಾಡಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಆರಂಭಿಕ ಎರಡು ಆವೃತ್ತಿಗಳಲ್ಲಿ ಫೈನಲ್‌ಗೆ ಪ್ರವೇಶ ಮಾಡಿದ್ದ ಭಾರತ ತಂಡ, ಮೂರನೇ ಆವೃತ್ತಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಕಳೆದ ವರ್ಷ ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗಳಲ್ಲಿ ಸೋಲಿನಿಂದ ಟೀಮ್‌ ಇಂಡಿಯಾಗೆ ಭಾರಿ ಹಿನ್ನಡೆಯಾಗಿತ್ತು. ಇತ್ತೀಚೆಗೆ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಟೆಸ್ಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಯ ಭಾರತ ತಂಡಕ್ಕೆ ಹಲವು ಯುವ ಆಟಗಾರರಿಗೆ ಅವಕಾಶವನ್ನು ನೀಡಲಾಗಿದೆ.

IND vs ENG: ಶುಭಮನ್‌ ಗಿಲ್‌ ಬದಲು ಕನ್ನಡಿಗನಿಗೆ ಭಾರತದ ಟೆಸ್ಟ್‌ ನಾಯಕತ್ವ ನೀಡಿ ಎಂದ ಶ್ರೀಕಾಂತ್‌!

ಭಾರತ ಟೆಸ್ಟ್‌ ತಂಡಕ್ಕೆ ಗಿಲ್‌ 37ನೇ ನಾಯಕ

ಮೇ 24 ರಂದು ಮುಂಬೈನಲ್ಲಿ ನಡೆದಿದ್ದ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯ ಸಭೆಯನ್ನು ಶುಭಮನ್‌ ಗಿಲ್‌ ಅವರನ್ನು ಭಾರತ ಟೆಸ್ಟ್‌ ತಂಡದ 37ನೇ ನಾಯಕನನ್ನಾಗಿ ನೇಮಿಸಲಾಗಿದೆ. ಜೂನ್‌ 20 ರಂದು ಹೆಡಿಂಗ್ಲೆಯಲ್ಲಿ ಮೊದಲನೇ ಟೆಸ್ಟ್‌ ಪಂದ್ಯದ ಮೂಲಕ ಭಾರತ ತಂಡದ ಇಂಗ್ಲೆಂಡ್‌ ಪ್ರವಾಸ ಆರಂಭವಾಗಲಿದೆ. 18 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆಲ್ಲಲು ಗೌತಮ್‌ ಗಂಭೀರ್‌ ಮಾರ್ಗದರ್ಶನದ ಭಾರತ ತಂಡ ಎದುರು ನೋಡುತ್ತಿದೆ.



ಸಾಯಿ ಸುದರ್ಶನ್‌, ಅರ್ಷದೀಪ್‌ ಸಿಂಗ್‌ಗೆ ಚೊಚ್ಚಲ ಅವಕಾಶ

ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿರುವ ತಮಿಳುನಾಡಿನ ಸಾಯಿ ಸುದರ್ಶನ್‌ ಹಾಗೂ ಪಂಜಾಬ್‌ ತಂಡದ ಅರ್ಷದೀಪ್‌ ಸಿಂಗ್‌ಗೆ ಭಾರತ ಟೆಸ್ಟ್‌ ತಂಡದಲ್ಲಿ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಫಿಟ್‌ನೆಸ್‌ ಸಮಸ್ಯೆಯಿಂದಾಗಿ ಹಿರಿಯ ವೇಗಿ ಮೊಹಮ್ಮದ್‌ ಶಮಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ, ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇನ್ನು ಶಾರ್ದುಲ್‌ ಠಾಕೂರ್‌ಗೆ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಭಾರತ ಎ ತಂಡದ ನಾಯಕ ಅಭಿಮನ್ಯು ಈಶ್ವರನ್‌ಗೆ ಮತ್ತೊಂದು ಅವಕಾಶವನ್ನು ನೀಡಲಾಗಿದೆ.

ಶುಭಮನ್‌ ಗಿಲ್‌ ಟೆಸ್ಟ್‌ ದಾಖಲೆಗಳು

ಶುಭಮನ್‌ ಗಿಲ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಿದ 32 ಪಂದ್ಯಗಳಿಂದ 1,893 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 5 ಶತಕಗಳನ್ನು ಬಾರಿಸಿದ್ದಾರೆ. ದೀರ್ಘಾವಧಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶುಭಮನ್‌ ಗಿಲ್‌ಗೆ ನಾಯಕತ್ವವನ್ನು ನೀಡಲಾಗಿದೆ. ಅಂದ ಹಾಗೆ ಜಸ್‌ಪ್ರೀತ್‌ ಬುಮ್ರಾ ಕೂಡ ನಾಯಕತ್ವದ ರೇಸ್‌ನಲ್ಲಿದ್ದರು. ಆದರೆ, ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಕಾರಣ ಅವರನ್ನು ನಾಯಕತ್ವಕ್ಕೆ ಪರಿಗಣಿಸಲಾಗಿಲ್ಲ.



ಕನ್ನಡಿಗ ಕರುಣ್‌ ನಾಯರ್‌ ಕಮ್‌ಬ್ಯಾಕ್‌

ಕನ್ನಡಿಗ ಕರುಣ್‌ ನಾಯರ್‌ 8 ವರ್ಷಗಳ ಬಳಿಕ ಭಾರತ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಅವರು 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಅವರು ಟೆಸ್ಟ್‌ ತಂಡದಿಂದ ಸ್ಥಾನ ಕಳೆದುಕೊಂಡಿದ್ದರು. ಅವರು 2023-24 ಮತ್ತು 2024-25ರ ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ತಂಡದ ಪರ ರನ್‌ ಹೊಳೆ ಹರಿಸಿದ್ದರು. ಇದರ ಫಲವಾಗಿ ಅವರಿಗೆ ಟೆಸ್ಟ್‌ ತಂಡದಲ್ಲಿ ಕಮ್‌ಬ್ಯಾಕ್‌ ಮಾಡಲು ಅವಕಾಶ ನೀಡಲಾಗಿತ್ತು. ಅವರು ಆಡಿದ 6 ಟೆಸ್ಟ್‌ ಪಂದ್ಯಗಳಿಂದ 67ರ ಸರಾಸರಿಯಲ್ಲಿ 374 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕವನ್ನು ಕೂಡ ಸಿಡಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಭಾರತ ತಂಡ

ಶುಭಮನ್‌ ಗಿಲ್‌ (ನಾಯಕ), ರಿಷಭ್‌ ಪಂತ್‌ (ಉಪ ನಾಯಕ), ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಸಾಯಿ ಸುದರ್ಶನ್‌, ಅಭಿಮನ್ಯು ಈಶ್ವರನ್‌, ಕರುಣ್‌ ನಾಯರ್‌, ನಿತೀಶ್‌ ಕುಮಾರ್‌ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್‌ ಜುರೆಲ್‌, ವಾಷಿಂಗ್ಟನ್‌ ಸುಂದರ್‌, ಶಾರ್ದುಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ, ಆಕಾಶ್‌ ಸಿಂಗ್‌, ಅರ್ಷದೀಪ್‌ ಸಿಂಗ್‌, ಕುಲ್ದೀಪ್‌ ಯಾದವ್‌