IND vs ENG: 2 ರನ್‌ಗೆ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ!
Sunil Gavaskar Slams KL Rahul: ಇಂಗ್ಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆಡಿದ್ದ 9 ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ವಿರುದ್ಧ ಸುನೀಲ್ ಗವಾಸ್ಕರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
![KL Rahul-Sunil Gavaskar](https://cdn-vishwavani-prod.hindverse.com/media/images/KL_Rahul-Sunil_Gavaskar.max-1280x720.jpg)
![Profile](https://vishwavani.news/static/img/user.png)
ನಾಗ್ಪುರ: ಇಂಗ್ಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರನ್ನು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಟೀಕಿಸಿದ್ದಾರೆ. ಈ ಪಂದ್ಯದಲ್ಲಿ ಆಡಿದ್ದ 9 ಎಸೆತಗಳಲ್ಲಿ ಕೆಎಲ್ ರಾಹುಲ್ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳ ಗೆಲುವು ಪಡೆದಿತ್ತು ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿದ್ದಾರೆ.
ಗುರುವಾರ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 249 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಪರ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ತಲಾ ಅರ್ಧಶತಕಗಳನ್ನು ಸಿಡಿಸಿದ್ದರು. ಆ ಮೂಲಕ ಭಾರತ ತಂಡವನ್ನು ಗೆಲುವಿನ ಸನಿಹ ತಂದು ವಿಕೆಟ್ ಒಪ್ಪಿಸಿದ್ದರು. ಕೊನೆಯ ಭಾರತ ತಂಡಕ್ಕೆ 28 ರನ್‌ಗಳ ಅಗತ್ಯವಿದ್ದಾಗ ಕೆಎಲ್ ರಾಹುಲ್ ಕ್ರೀಸ್‌ಗೆ ಬಂದಿದ್ದಾಗ ಶುಭಮನ್ ಗಿಲ್ 81 ರನ್‌ಗಳನ್ನು ಕಲೆ ಹಾಕಿದ್ದರು. ಈ ವೇಳೆ ಗಿಲ್‌ಗೆ ಹೆಚ್ಚಿನ ಸ್ಟ್ರೈಕ್ ನೀಡಬೇಕೆಂಬ ಹಂಬಲದಲ್ಲಿ ಕೆಎಲ್ ರಾಹುಲ್, ಆದಿಲ್ ರಶೀದ್ ಎಸೆತದಲ್ಲಿ ಎರಡು ಮನಸಿನಿಂದ ಬ್ಯಾಟ್ ಮಾಡಿ ಅವರಿಗೇ ಕ್ಯಾಚ್ ಕೊಟ್ಟಿದ್ದರು.
IND vs ENG: ಇಂಗ್ಲೆಂಡ್ ವಿರುದ್ಧ ಗೆದ್ದು ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ!
ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್, ಎರಡು ಮನಸಿನಿಂದ ಬ್ಯಾಟ್ ಮಾಡಿ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಭಮನ್ ಗಿಲ್ ಶತಕ ಸಿಡಿಸಬೇಕೆಂಬ ಉದ್ದೇಶದಲ್ಲಿ ಕೆಎಲ್ ರಾಹುಲ್ ತಮ್ಮ ಸ್ವಾಭವಿಕ ಬ್ಯಾಟಿಂಗ್ ಅನ್ನು ಮರೆತು ಆಡಿದ್ದಾರೆಂದು ಮಾಜಿ ನಾಯಕ ಟೀಕಿಸಿದ್ದಾರೆ.
"ಕೆಎಲ್ ರಾಹುಲ್ ತಮ್ಮ ಸ್ವಾಭವಿಕ ಆಟವನ್ನು ಆಡಬೇಕು. ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಸಹ ಆಟಗಾರ ಶತಕ ಪೂರೈಸಬೇಕೆಂಬ ಉದ್ದೇಶವನ್ನು ಅವರು ಹೊಂದಿದ್ದರು. ಈ ಉದ್ದೇಶದಿಂದ ಏನಾಯಿತು ಎಂಬುದು ನೀವು ನೋಡಬಹುದು. ಇದರ ಬಗ್ಗೆಯೇ ನಾನು ಈಗ ಮಾತನಾಡುತ್ತಿದ್ದೇನೆ. ಇದು ತಂಡದ ಆಟ ಹಾಗಾಗಿ ನೀವು ಈ ರೀತಿ ಆಡಬಾರದು. ಅವರು ಅರ್ಧ ಮನಸಿನಿಂದ ಆಡಿ ವಿಕೆಟ್ ಒಪ್ಪಿಸಿದ್ದಾರೆ," ಎಂದು ಸುನೀಲ್ ಗವಾಸ್ಕರ್ ಆರೋಪ ಮಾಡಿದ್ದಾರೆ.
IND vs ENG: 4ನೇ ಕ್ರಮಾಂಕದಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್!
ಭಾರತ ತಂಡಕ್ಕೆ 4 ವಿಕೆಟ್‌ಗಳ ಜಯ
ಪಂದ್ಯದ ಬಗ್ಗೆ ಮಾತನಾಡುವುದಾದರೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ, ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಬ್ಯಾಟಿಂಗ್ ಬಲದಿಂದ ಭರ್ಜರಿ ಆರಂಭ ಪಡೆದಿತ್ತು. ಫಿಲ್ ಸಾಲ್ಟ್ ರನ್‌ಔಟ್ ಆದ ಬಳಿಕ ಇಂಗ್ಲೆಂಡ್ ತಂಡ ಕೇವಲ ಎರಡು ರನ್ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಜೋಸ್ ಬಟ್ಲರ್ ಹಾಗೂ ಜಾಕೋಬ್ ಬೆಥೆಲ್ ಅರ್ಧಶತಕಗಳನ್ನು ಸಿಡಿಸಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಇಂಗ್ಲೆಂಡ್ 249 ರನ್‌ಗಳಿಗೆ ಆಲ್‌ಔಟ್ ಆಗಬೇಕಾಯಿತು.
IND vs ENG: ಒಂದೇ ಓವರ್‌ನಲ್ಲಿ 26 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಹರ್ಷಿತ್ ರಾಣಾ!
ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಹಾಗೂ ಅಕ್ಷರ್ ಪಟೇಲ್ ಅರ್ಧಶತಕಗಳ ಬಲದಿಂದ 38.4 ಓವರ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು 251 ರನ್‌ಗಳನ್ನು ಗಳಿಸಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದಿದೆ. 87 ರನ್‌ಗಳನ್ನು ಗಳಿಸಿದ ಶುಭಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.