ವರುಣ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ, ಅಭಿಷೇಕ್ ಅಬ್ಬರದಿಂದ ಭಾರತಕ್ಕೆ ಮೊದಲ ಜಯ!
IND vs ENG 1st T20I Highlights: ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 7 ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಆತಿಥೇಯ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದಿದೆ.
ಕೋಲ್ಕತಾ: ವರುಣ್ ಚಕ್ರವರ್ತಿ (23ಕ್ಕೆ 3) ಸ್ಪಿನ್ ಮೋಡಿ ಹಾಗೂ ಅಭಿಷೇಕ್ ಶರ್ಮಾ (79 ರನ್ ) ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ (IND vs ENG 1st T20I Highlights) ಇಂಗ್ಲೆಂಡ್ ವಿರುದ್ದ 7 ವಿಕೆಟ್‌ಗಳ ಸುಲಭ ಜಯ ಪಡದಿದೆ. ಆ ಮೂಲಕ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದಿದೆ.
ಬುಧವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ನೀಡಿದ್ದ 133 ರನ್‌ಗಳ ಸಾಧಾರಣ ಗುರಿ ಹಿಂಬಾಲಿಸಿದ ಭಾರತ ತಂಡ, ಅಭಿಷೇಕ್ ಶರ್ಮಾ (79 ರನ್) ಸ್ಪೋಟಕ ಅರ್ಧಶತಕದ ಬಲದಿಂದ 12.5 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವಿನ ದಡ ಸೇರಿತು. ಇದರೊಂದಿಗೆ ಆತಿಥೇಯರು ಟಿ20ಐ ಸರಣಿಯಲ್ಲಿ ಶುಭಾರಂಭ ಕಂಡಿದ್ದಾರೆ.
ಸುಲಭ ಗುರಿ ಹಿಂಬಾಲಿಸಿದ ಭಾರತದ ಪರ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ 20 ಎಸೆತಗಳಲ್ಲಿ 26 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಆದರೆ, ಜೋಫ್ರಾ ಆರ್ಚರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೆ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಆರ್ಚರ್‌ಗೆ ಡಕ್‌ಔಟ್ ಆದರು.
IND vs ENG: ಯುಜ್ವೇಂದ್ರ ಚಹಲ್‌ರ ಟಿ20ಐ ದಾಖಲೆ ಮುರಿದ ಅರ್ಷದೀಪ್ ಸಿಂಗ್!
ಅಬ್ಬರಿಸಿದ ಅಭಿಷೇಕ್ ಶರ್ಮಾ
ಭಾರತ ತಂಡ ಎರಡು ವಿಕೆಟ್ ಕಳೆದುಕೊಂಡ ಬಳಿಕ ಮತ್ತೊರ್ವ ಆರಂಭಿಕ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದರಿಸಿದ ಅವರು, ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದರು. ಅವರು ಆಡಿದ ಕೇವಲ 34 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 79 ರನ್‌ಗಳನ್ನು ಸಿಡಿಸಿದರು. ಇನ್ನೇನು ಭಾರತ ತಂಡವನ್ನು ಗೆಲ್ಲಿಸುವ ಹೊತ್ತಿನಲ್ಲಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದಲ್ಲಿ ತಿಲಕ್ ವರ್ಮಾ ಅಜೇಯ 19 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.
𝘼 𝙎𝙩𝙮𝙡𝙞𝙨𝙝 𝙁𝙞𝙛𝙩𝙮 😎
— BCCI (@BCCI) January 22, 2025
Abhishek Sharma starts the #INDvENG T20I series on the right note 👍
Follow The Match ▶️ https://t.co/4jwTIC5zzs#TeamIndia | #INDvENG | @IDFCFIRSTBank pic.twitter.com/U7Mkaamnfv
133 ರನ್‌ಗಳಿಗೆ ಇಂಗ್ಲೆಂಡ್ ಆಲ್‌ಔಟ್
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಇಂಗ್ಲೆಂಡ್ ತಂಡ, ನಾಯಕ ಜೋಸ್ ಬಟ್ಲರ್ (68 ರನ್) ಅವರ ಅರ್ಧಶತಕದ ಹೊರತಾಗಿಯೂ ಭಾರತದ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಗೆ ನಲುಗಿ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದ್ದರೂ 132 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇದರೊಂದಿಗೆ ಎದುರಾಳಿ ಟೀಮ್ ಇಂಡಿಯಾಗೆ 133 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು.
Abhishek Sharma weaving magic and how! 🪄
— BCCI (@BCCI) January 22, 2025
Follow The Match ▶️ https://t.co/4jwTIC5zzs #TeamIndia | #INDvENG | @IamAbhiSharma4 | @IDFCFIRSTBank pic.twitter.com/5xhtG6IN1F
ಇಂಗ್ಲೆಂಡ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಅವರನ್ನು ಅರ್ಷದೀಪ್ ಸಿಂಗ್ ತಮ್ಮ ಮೊದಲ ಸ್ಪೆಲ್‌ನಲ್ಲಿ ಔಟ್ ಮಾಡಿ ಪ್ರವಾಸಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಈ ವೇಳೆ ಇಂಗ್ಲೆಂಡ್ ತಂಡ 17 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಹ್ಯಾರಿ ಬ್ರೂಕ್ (17 ರನ್) ಹಾಗೂ ಜೋಸ್ ಬಟ್ಲರ್ 48 ರನ್ ಜೊತೆಯಾಟವಾಡಿ ಇಂಗ್ಲೆಂಡ್‌ಗೆ ಅಲ್ಪ ಚೇತರಿಕೆ ತಂದುಕೊಟ್ಟಿದ್ದರು. ಆದರೆ, ವರುಣ್ ಚಕ್ರವರ್ತಿ 8ನೇ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (0) ಅವರನ್ನು ಔಟ್ ಮಾಡಿದರು. ಆ ಮೂಲಕ ಭಾರತಕ್ಕೆ ಮೇಲುಗೈ ತಂದು ಕೊಟ್ಟಿದ್ದರು.
ಜೋಸ್ ಬಟ್ಲರ್ ಅರ್ಧಶತಕ
ನಂತರ ಜಾಕೋಬ್ ಬೆಥೆಲ್, ಜೇಮಿ ಓವರ್ಟನ್, ಗಸ್ ಅಟ್ಕಿನ್ಸನ್ ಅವರು ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಜೋಸ್ ಬಟ್ಲರ್ ಏಕಾಂಗಿ ಹೋರಾಟ ನಡೆಸಿದರು. ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಬಟ್ಲರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರು ಆಡಿದ 44 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 68 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗುತ್ತಿದ್ದ ಇಂಗ್ಲೆಂಡ್ ತಂಡವನ್ನು 100ರ ಗಡಿ ದಾಟಿಸಿದರು. ಆದರೆ, ವರುಣ್ ಚಕ್ರವರ್ತಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ನಿತೀಶ್ ರೆಡ್ಡಿಗೆ ಪ್ರವಾಸಿ ನಾಯಕ ಕ್ಯಾಚಿತ್ತರು. ಕೊನೆಯಲ್ಲಿ ಜೋಫ್ರಾ ಆರ್ಚರ್ 12 ರನ್ ಗಳಿಸಿದರು.
IND vs Eng: ಟಿ20ಐ ಸರಣಿಯಲ್ಲಿ ಭಾರತಕ್ಕೆ ಕೀ ಆಟಗಾರನನ್ನು ಆರಿಸಿದ ಆಕಾಶ್ ಚೋಪ್ರಾ!
ಭಾರತ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.
ಸ್ಕೋರ್ ವಿವರ
ಇಂಗ್ಲೆಂಡ್: 20 ಓವರ್‌ಗಳಿಗೆ 132-10 (ಜೋಸ್ ಬಟ್ಲರ್ 68, ಹ್ಯಾರಿ ಬ್ರೂಕ್ 17; ವರುಣ್ ಚಕ್ರವರ್ತಿ 23ಕ್ಕೆ 3, ಅರ್ಷದೀಪ್ ಸಿಂಗ್ 17ಕ್ಕೆ 2, ಅಕ್ಷರ್ ಪಟೇಲ್ 22ಕ್ಕೆ 2, ಹಾರ್ದಿಕ್ ಪಾಂಡ್ಯ 42ಕ್ಕೆ 2)
ಭಾರತ: 12.5 ಓವರ್‌ಗಳಿಗೆ 133-3 (ಅಭಿಷೇಕ್ ಶರ್ಮಾ 79, ಸಂಜು ಸ್ಯಾಮ್ಸನ್ 26; ಜೋಫ್ರಾ ಆರ್ಚರ್ 22ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ವರುಣ್ ಚಕ್ರವರ್ತಿ