IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!
IND vs NZ Final match Highlights: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, ಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ದ 4 ವಿಕೆಟ್‌ಗಳಿಂದ ರೋಚಕ ಗೆಲುವು ಪಡೆಯಿತು. ಇದರೊಂದಿಗೆ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. 2002 ಹಾಗೂ 2013ರ ಬಳಿಕ ಭಾರತಕ್ಕೆ ಇದು ಮೂರು ಚಾಂಪಿಯನ್ಸ್ ಟ್ರೋಫಿ ಗರಿಯಾಗಿದೆ.

ಮೂರನೇ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡ ಭಾರತ ತಂಡ.

ದುಬೈ: ಭಾರತ ತಂಡ (India) ಮೂರನೇ ಚಾಂಪಿಯನ್ಸ್ ಟ್ರೋಫಿಯನ್ನು ( Champions Trophy 2025) ಮುಡಿಗೇರಿಸಿಕೊಂಡಿದೆ. ಕೊನೆಯವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಪೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ಭಾರತ ತಂಡ 4 ಗೆಲುವು ಸಾಧಿಸಿತು. ಆ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಆದರೆ, ಕೊನೆಯವರೆಗೂ ಕಠಿಣ ಹೋರಾಟ ನಡೆಸಿದ್ದ ನ್ಯೂಜಿಲೆಂಡ್ ತಂಡ ಅಂತಿಮವಾಗಿ ಸೋಲು ಒಪ್ಪಿಕೊಂಡಿತು. ಸ್ಪರ್ಧಾತ್ಮಕ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಅರ್ಧಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 252 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ, ರೋಹಿತ್ ಶರ್ಮಾ(76 ರನ್) ಅರ್ಧಶತಕದ ಬಲದಿಂದ 49 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 254 ರನ್‌ಗಳನ್ನು ಗಳಿಸಿ ನಾಲ್ಕು ವಿಕೆಟ್ ರೋಚಕ ಗೆಲುವು ಸಾಧಿಸಿತು. ಟೀಮ್ ಇಂಡಿಯಾದ ಚೇಸಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ಶ್ರೇಯಸ್ ಅಯ್ಯರ್ (48) ಹಾಗೂ ಕೆಎಲ್ ರಾಹುಲ್ (34*) ಮಹತ್ತರ ಪಾತ್ರವನ್ನು ವಹಿಸಿದರು.
IND vs NZ: 37 ರನ್ ಗಳಿಸಿ ಕೇನ್ ವಿಲಿಯಮ್ಸನ್ ದಾಖಲೆ ಮುರಿದ ರಚಿನ್ ರವೀಂದ್ರ!
ರೋಹಿತ್ ಶರ್ಮಾ ಅರ್ಧಶತಕ
ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಮೊದಲನೇ ವಿಕೆಟ್‌ಗೆ 105 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. 31 ರನ್ ಗಳಿಸಿದ ಬಳಿಕ ಗಿಲ್ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ನಾಯಕ ರೋಹಿತ್ ಶರ್ಮಾ, 83 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 76 ರನ್‌ಗಳನ್ನು ಕಲೆ ಹಾಕಿ ಭಾರತಕ್ಕೆ ಭರ್ಜರಿ ಆರಂಭ ತಂದುಕೊಟ್ಟು ರಚಿನ್ ರವೀಂದ್ರಗೆ ವಿಕೆಟ್ ಒಪ್ಪಿಸಿದ್ದರು.
𝗖. 𝗛. 𝗔. 𝗠. 𝗣. 𝗜. 𝗢. 𝗡. 𝗦! 🇮🇳🏆 🏆 🏆
— BCCI (@BCCI) March 9, 2025
The Rohit Sharma-led #TeamIndia are ICC #ChampionsTrophy 2025 𝙒𝙄𝙉𝙉𝙀𝙍𝙎 👏 👏
Take A Bow! 🙌 🙌#INDvNZ | #Final | @ImRo45 pic.twitter.com/ey2llSOYdG
ಕೊನೆಯಲ್ಲಿ ಭಾರತಕ್ಕ ಕೆಎಲ್ ರಾಹುಲ್ ಆಸರೆ
122 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಮಧ್ಯಮ ಓವರ್‌ಗಳಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ 61 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಕಲೆ ಹಾಕಿದರು. ಅಕ್ಷರ್ ಪಟೇಲ್ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಶ್ರೇಯಸ್ ಅಯ್ಯರ್ ನಿರ್ಣಾಯಕ 48 ರನ್‌ಗಳಿಗೆ ಅರ್ಧಶತಕದಂಚಿನಲ್ಲಿ ಮಿಚೆಲ್ ಸ್ಯಾಂಟ್ನರ್‌ಗೆ ಔಟಾದರು. ಆದರೆ, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಕೆಎಲ್ ರಾಹುಲ್ ಕಳೆದ ಪಂದ್ಯದಂತೆ ಈ ಹಣಾಹಣಿಯಲ್ಲಿಯೂ ಅಜೇಯ 34 ರನ್ ಗಳಿಸಿ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.
One Team
— BCCI (@BCCI) March 9, 2025
One Dream
One Emotion!
🇮🇳🇮🇳🇮🇳#TeamIndia pic.twitter.com/MbqZi9VGoG
251 ರನ್ ಕಲೆ ಹಾಕಿದ್ದ ನ್ಯೂಜಿಲೆಂಡ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್ ಕಳೆದುಕೊಂಡು 251 ರನ್‌ಗಳನ್ನು ಕಲೆ ಹಾಕಿತು. ಇದರೊಂದಿಗೆ ಎದುರಾಳಿ ಭಾರತ ತಂಡಕ್ಕೆ 252 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಕಿವೀಸ್ ಪರ ಡ್ಯಾರಿಲ್ ಮಿಚೆಲ್ ಹಾಗೂ ಮೈಕಲ್ ಬ್ರೇಸ್‌ವೆಲ್ ತಲಾ ನಿರ್ಣಾಯಕ ಅರ್ಧಶತಕಗಳನ್ನು ಬಾರಿಸಿದ್ದರು.
ನ್ಯೂಜಿಲೆಂಡ್ ತಂಡದ ಪರ ಓಪನರ್ಸ್ ವಿಲ್ ಯಂಗ್ (15) ಹಾಗೂ ರಚಿನ್ ರವೀಂದ್ರ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಮುರಿಯದ ಮೊದಲನೇ ವಿಕೆಟ್‌ಗೆ 57 ರನ್‌ಗಳನ್ನು ಗಳಿಸಿದ್ದರು. ಇದರೊಂದಿಗೆ ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಹೊಸ ಚೆಂಡಿನಲ್ಲಿ ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಅನ್ನು ಈ ಇಬ್ಬರೂ ಸಮರ್ಥವಾಗಿ ಮೆಟ್ಟಿ ನಿಂತಿದ್ದರು.
India clinch the #ChampionsTrophy 2025 🏆🇮🇳#INDvNZ ✍️: https://t.co/SGA6TKUuGX pic.twitter.com/KNqpqREQ0I
— ICC (@ICC) March 9, 2025
ಕಿವೀಸ್‌ಗೆ ಆಘಾತ ನೀಡಿದ್ದ ಚೈನಾಮನ್
ಮೊದಲು ಬ್ಯಾಟ್ ಮಾಡಿ ಶುಭಾರಂಭ ಕಂಡಿದ್ದ ನ್ಯೂಜಿಲೆಂಡ್ ತಂಡ, ದೊಡ್ಡ ಮೊತ್ತವನ್ನು ಕಲೆ ಹಾಕಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ವರುಣ್ ಚಕ್ರವರ್ತಿ ಎಂಟನೇ ಓವರ್‌ನಲ್ಲಿ ವಿಲ್ ಯಂಗ್ ಅವರನ್ನು ಎಲ್‌ಬಿಡಬ್ಲ್ಯುಗೆ ಔಟ್ ಮಾಡಿದರು. ಇದಾದ ಬೆನ್ನಲ್ಲೆ 11ನೇ ಓವರ್‌ನಲ್ಲಿ ಚೆಂಡು ಕೈಗೆತ್ತಿಕೊಂಡ ಕುಲ್ದೀಪ್ ಯಾದವ್ ತನ್ನ ಮೊದಲನೇ ಎಸೆತದಲ್ಲಿಯೇ 37 ರನ್ ಗಳಿಸಿ ಗಟ್ಟಿಯಾಗಿ ನಿಂತಿದ್ದ ರಚಿನ್ ರವೀಂದ್ರ ಅವರನ್ನುಬೌಲ್ಡ್ ಮಾಡಿದರು. ಬಳಿಕ ತಮ್ಮ ಎರಡನೇ ಓವರ್‌ನಲ್ಲಿ ಕೀ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆ ಮೂಲಕ ಸ್ಯಾಂಟ್ನರ್ ಪಡೆ 75 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆಯನ್ನು ಅನುಭವಿಸಿತ್ತು.
IND vs NZ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಕಳೆದುಕೊಂಡಿದ್ದಕ್ಕೆ ಕಣ್ಣೀರಿಟ್ಟ ಮ್ಯಾಟ್ ಹೆನ್ರಿ! ವಿಡಿಯೊ
ಡ್ಯಾರಿಲ್-ಮೈಕಲ್ ನಿರ್ಣಾಯಕ ಅರ್ಧಶತಕ
ಮಧ್ಯಮ ಕ್ರಮಾಂಕದಲ್ಲಿ ಟಾಮ್ ಲೇಥಮ್ ನಿರಾಶೆ ಮೂಡಿಸಿದರು. ಆದರೆ, ಐದನೇ ವಿಕೆಟ್‌ಗೆ ಜೊತೆಯಾದ ಮೈಕಲ್ ಬ್ರೇಸ್‌ವೆಲ್ ಮತ್ತು ಡ್ಯಾರಿಲ್ ಮಿಚೆಲ್ ತಾಳ್ಮೆಯ ಆಟವನ್ನು ಆಡಿದರು. ಈ ವೇಳೆ ಡ್ಯಾರಿಲ್ ಮಿಚೆಲ್ 101 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 63 ರನ್‌ಗಳನ್ನು ಗಳಿಸಿ ಶಮಿಗೆ ತಲೆ ಬಾಗಿದರು. ಡ್ಯಾರಿಲ್ ಮಿಚೆಲ್ ವಿಕೆಟ್ ಒಪ್ಪಿಸಿದ ನಂತರ ಕೊನೆಯವರೆಗೂ ಬ್ಯಾಟ್ ಮಾಡಿದ್ದ ಮೈಕಲ್ ಬ್ರೇಸ್‌ವೆಲ್, ಕೇವಲ 40 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಗಳ ಮೂಲಕ ಅಜೇಯ 53 ರನ್‌ಗಳನ್ನು ಕಲೆ ಹಾಕಿದರು ಹಾಗೂ ಕಿವೀಸ್ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಇದಕ್ಕೂ ಮುನ್ನ ಇವರು 34 ರನ್ ಗಳಿಸಿದ್ದ ಗ್ಲೆನ್ ಫಿಲಿಪ್ಸ್ ಜೊತೆ 53 ರನ್‌ಗಳ ಜೊತೆಯಾಟವನ್ನು ಆಡಿದ್ದರು.
ಭಾರತ ತಂಡದ ಪರ ವರುಣ್ ಚಕ್ರವರ್ತಿ 45 ರನ್ ನೀಡಿ 2 ವಿಕೆಟ್ ಕಿತ್ತರೆ, ಕುಲ್ದೀಪ್ ಯಾದವ್ 40 ರನ್ ನೀಡಿ ಎರಡು ವಿಕೆಟ್ ಪಡೆದರು. ಇನ್ನು ರವೀಂದ್ರ ಜಡೇಜಾ 30 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ
ನ್ಯೂಜಿಲೆಂಡ್: 50 ಓವರ್‌ಗಳಿಗೆ 251-7 (ಡ್ಯಾರಿಲ್ ಮಿಚೆಲ್ 63, ಮೈಕಲ್ ಬ್ರೇಸ್‌ವೆಲ್ 53, ರಚಿನ್ ರವೀಂದ್ರ 37, ಗ್ಲೆನ್ ಫಿಲಿಪ್ಸ್ 34; ಕುಲ್ದೀಪ್ ಯಾದವ್ 40ಕ್ಕೆ 2, ವರುಣ್ ಚಕ್ರವರ್ತಿ45ಕ್ಕೆ 2)
ಭಾರತ: 49 ಓವರ್‌ಗಳಿಗೆ 254-6 (ರೋಹಿತ್ ಶರ್ಮಾ 76, ಶ್ರೇಯಸ್ ಅಯ್ಯರ್ 48, ಕೆಎಲ್ ರಾಹುಲ್ 34*, ಶುಭಮನ್ ಗಿಲ್ 31; ಮಿಚೆಲ್ ಸ್ಯಾಂಟ್ನರ್ 46ಕ್ಕೆ2, ಮೈಕಲ್ ಬ್ರೇಸ್‌ವೆಲ್ 28 ಕ್ಕೆ2
ಪಂದ್ಯ ಶ್ರೇಷ್ಠ ಪ್ರಶಸ್ತಿ: ರೋಹಿತ್ ಶರ್ಮಾ