ನಗೋಯಾ(ಜಪಾನ್), ಸೆ.20: ಶಫಾಲಿ ವರ್ಮಾ(100*) ಅವರ ಸೊಗಸಾದ ಶತಕದ ನೆರವಿನಿಂದ ಭಾರತ ಮಹಿಳಾ ತಂಡ 20ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಭಾನುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 114 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತು.
ಇಲ್ಲಿನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ನಾಯಕಿಯ ಆಯ್ಕೆಯನ್ನು ಸಮರ್ಥಿಸಿಕೊಂಡ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಈ ಬಿರುಸಿನ ಬ್ಯಾಟಿಂಗ್ ಬಲದಿಂದ ಭಾರತ 4 ವಿಕೆಟ್‌ಗೆ 195 ರನ್ ಪೇರಿಸಿತು.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು 15.4 ಓವರ್‌ಗಳಲ್ಲಿ ಕೇವಲ 81ಗೆ ಸರ್ವಪತನ ಕಂಡಿತು. ಭಾರತ ಪರ ದೀಪ್ತಿ ಶರ್ಮಾ ಮತ್ತು ನಂದಿನಿ ಶರ್ಮಾ ತಲಾ 3 ವಿಕೆಟ್ ಕಿತ್ತರು. ಚಿನ್ನದ ಪದಕ ಸ್ಫರ್ಧೆಯಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಸೆಣಸಲಿದೆ. ದಿನದ ಮೊದಲ ಸೆಮಿ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನವನ್ನು 8 ವಿಕೆಟ್ ಅಂತರದಿಂದ ಸೋಲಿಸಿತ್ತು.
ಭಾರತ ಪ್ರವಾಸದ ಸೀಮಿತ ಓವರ್‌ಗಳ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ ಪ್ರಕಟ
ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿ ಕೇವಲ 36 ಎಸೆತಗಳಿಂದ ಮೊದಲ ವಿಕೆಟ್‌ಗೆ 72 ರನ್ ರಾಶಿ ಹಾಕಿದರು. ಮಂಧಾನ 37 ರನ್ ಗಳಿಸಿದರು. ಮಂಧಾನ ವಿಕೆಟ್ ಪತನದ ಬಳಿಕ ಶಫಾಲಿಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಉತ್ತಮ ಸಾಥ್ ನೀಡಿದರು. ಕೌರ್ 40 ರನ್ ಗಳಿಸಿದರು.
ಚೊಚ್ಚಲ ಶತಕ
ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒಗ್ಗಿಕೊಂಡ ಶಫಾಲಿ 49 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿ ತಮ್ಮ ಚೊಚ್ಚಲ ಟಿ20 ಅಂತರರಾಷ್ಟ್ರೀಯ ಶತಕವನ್ನು ಗಳಿಸಿದರು. ಅವರ ಈ ಇನಿಂಗ್ಸ್‌ನಲ್ಲಿ ಬರೋಬ್ಬರಿ 9 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಯಿತು.
ಬಾಂಗ್ಲಾ ಪರ ಚೇಸಿಂಗ್ ವೇಳೆ ಕೇವಲ ಮೂವರು ಆಟಗಾರ್ತಿಯರು ಮಾತ್ರ ಎರಡಂಕಿ ಗಡಿ ದಾಟಿದರು. ದಿಲಾರಾ ಅಖ್ತರ್(27), ಶರ್ಮಿನ್ ಅಖ್ತರ್(10) ಮತ್ತು ಸುಲ್ತಾನಾ ಖಾತುನ್(12*). ಉಳಿದವರು ಒಂದಂಕಿಗೆ ಸೀಮಿತರಾದರು.
ಪಾಕ್‌ಗೆ ಹೀನಾಯ ಸೋಲು
ಇದಕ್ಕೂ ಮುನ್ನ ದಿನದ ಆರಂಭದಲ್ಲಿ ನಡೆದಿದ್ದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 4 ವಿಕೆಟ್‌ಗೆ 174 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 17.5 ಒವರ್‌ಗಳಲ್ಲಿ 2 ವಿಕೆಟ್‌ಗೆ 178 ರನ್ ಬಾರಿಸಿ 8 ವಿಕೆಟ್ ಅಂತರದ ಗೆಲುವು ಸಾಧಿಸಿತು.