Internal reservation: ನ್ಯಾ. ನಾಗಮೋಹನದಾಸ್ ಆಯೋಗದಿಂದ ಇನ್ನೊಂದು ಒಳಮೀಸಲು ಸಮೀಕ್ಷೆಗೆ ಆದೇಶ
ನ್ಯಾ. ನಾಗಮೋಹನ ದಾಸ್ ಆಯೋಗದ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ. ಅದರ ಜತೆಗೆ ಒಳಮೀಸಲಾತಿ ವರ್ಗೀಕರಣವನ್ನು ಶೀಘ್ರಗತಿಯಲ್ಲಿ ಕೈಗೊಳ್ಳಲು ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನ್ಯಾ. ನಾಗಮೋಹನ ದಾಸ್ ಸಮಿತಿಗೆ ವಹಿಸಲೂ ಸಚಿವ ಸಂಪುಟ ನಿರ್ಣಯಿಸಿದೆ.


ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ (Scheduled Caste)) ಒಳಮೀಸಲಾತಿ (Internal reservation) ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ಆಯೋಗ (Justice Nagamohan Das commission) ಗುರುವಾರ ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿಯನ್ನು ಗುರುವಾರ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಮಧ್ಯಂತರ ವರದಿಯ ಶಿಫಾರಸಿನಂತೆ ತಂತ್ರಜ್ಞಾನ ಬಳಸಿ ಮುಂದಿನ 40 ದಿನಗಳೊಳಗೆ ಉಪ ಜಾತಿಗಳ ಸಮೀಕ್ಷೆ ನಡೆಸುವುದು, ಅದರ ಹೊಣೆಯನ್ನು ಹಾಲಿ ಇರುವ ಆಯೋಗಕ್ಕೆ ವಹಿಸುವುದಕ್ಕೂ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಧಾನಸೌಧದಲ್ಲಿ ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಅಧ್ಯಕ್ಷತೆಯ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ. ಸಮಿತಿಯು ನಾಲ್ಕು ಪ್ರಮುಖ ಶಿಫಾರಸುಗಳನ್ನು ಮಾಡಿದ್ದು, ಅವುಗಳ ಅನುಷ್ಠಾನಕ್ಕೂ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಪ್ರಮುಖವಾಗಿ ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿನ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಬೇಕಿದ್ದು, ಅದಕ್ಕಾಗಿ ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಬೇಕು ಎಂದು ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ. ಈ ಸಮೀಕ್ಷೆಯನ್ನು ತಂತ್ರಜ್ಞಾನ ಬಳಸಿ 30ರಿಂದ 40 ದಿನಗಳೊಳಗೆ ಹೊಸ ಸಮೀಕ್ಷೆ ನಡೆಸಬಹುದು ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.
ಜತೆಗೆ ಹೊಸದಾಗಿ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿ ಸಿದ್ಧಪಡಿಸಬೇಕು. ಸಮೀಕ್ಷೆಗೆ ಅಗತ್ಯವಿರುವ ತರಬೇತಿ, ಸಂಪನ್ಮೂಲ ಕ್ರೋಢೀಕರಣಗಳ ಉಸ್ತುವಾರಿಗಾಗಿ ಉನ್ನತ ಮಟ್ಟದ ಸಮಿತಿ ರಚಿಸುವುದು ಸೂಕ್ತವೆಂದು ವರದಿಯಲ್ಲಿ ತಿಳಿಸಲಾಗಿದೆ. ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ನಿಗದಿ ಮಾಡುವ ಮಾನದಂಡಗಳಂತೆ ಉಪ ಜಾತಿಗಳನ್ನು ವರ್ಗೀಕರಣಗೊಳಿಸಿ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡುವಂತೆ ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.
ನ್ಯಾ. ನಾಗಮೋಹನದಾಸ್ ಆಯೋಗದ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ. ಅದರ ಜತೆಗೆ ಒಳಮೀಸಲಾತಿ ವರ್ಗೀಕರಣವನ್ನು ಶೀಘ್ರಗತಿಯಲ್ಲಿ ಕೈಗೊಳ್ಳಲು ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನ್ಯಾ. ನಾಗಮೋಹನದಾಸ್ ಸಮಿತಿಗೆ ವಹಿಸಲೂ ಹಾಗೂ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ, ವರದಿ ಸಲ್ಲಿಸಲು ಆಯೋಗದ ಅವಧಿಯನ್ನು 60 ದಿನಗಳ (2 ತಿಂಗಳು)ವರೆಗೆ ವಿಸ್ತರಿಸಲೂ ನಿರ್ಣಯಿಸಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ರಾಜ್ಯದಲ್ಲಿ 6 ಸಾವಿರ ಗ್ರಾಪಂ, 300ಕ್ಕೂ ಹೆಚ್ಚಿನ ಸ್ಥಳೀಯ ಸಂಸ್ಥೆಗಳಿವೆ. ಆ ಕಾರ್ಯವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಉಸ್ತುವಾರಿಯಲ್ಲಿ ತಂತ್ರಜ್ಞಾನ ಬಳಸಿ ತೀವ್ರಗತಿಯಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸೂಚಿಸಿದೆ. ಆಯೋಗವು ಸಮೀಕ್ಷೆ ಕೈಗೊಳ್ಳಲು ಬೇಕಿರುವ ಎಲ್ಲ ಸೌಲಭ್ಯಗಳನ್ನೂ ಸರ್ಕಾರ ಒದಗಿಸಲಿದೆ. ಅದಕ್ಕೆ ಸಂಬಂಧಿಸಿ ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಸಲಿದ್ದಾರೆ. ಭವಿಷ್ಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ದತ್ತಾಂಶಗಳು ಕರಾರುವಕ್ಕಾಗಿ ಪಡೆಯಲು ಹಾಗೂ ಜನರಿಗೆ ಮೀಸಲಾತಿ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ಜಾತಿ ಆಧಾರಿತ ಜನಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಎಸ್ಸಿ ವರ್ಗಗಳ ಮಾಹಿತಿಗಳಿಲ್ಲ. ಹೀಗಾಗಿ ಅದನ್ನು ದತ್ತಾಂಶಕ್ಕೆ ಪರಿಗಣಿಸಲಾಗದು. ಒಂದು ವೇಳೆ ಪರಿಗಣಿಸಿದರೂ ದತ್ತಾಂಶಗಳಿಲ್ಲದಿದ್ದರೆ ಕಾನೂನಿನಡಿ ಮಾನ್ಯತೆ ಸಿಗುವುದಿಲ್ಲ. ಆದ್ದರಿಂದ ಎರಡು ತಿಂಗಳ ಕಾಲಾವಧಿಯಲ್ಲಿ ಹೊಸ ಸಮೀಕ್ಷೆ ಮಾಡಲಾಗುತ್ತದೆ. ಅದಕ್ಕಾಗಿ ಅಗತ್ಯವಿರುವ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸುವುದು ಹಾಗೂ ಗ್ರಾಪಂ ಸೇರಿ ಇನ್ನಿತರ ಕಡೆಗಳ ಸಿಬ್ಬಂದಿಯನ್ನೂ ಬಳಸಿಕೊಳ್ಳುವ ಚಿಂತನೆಯಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಒಳಮೀಸಲಾತಿ: ನ್ಯಾ. ನಾಗಮೋಹನ್ ದಾಸ್ ಆಯೋಗ ಮಧ್ಯಂತರ ವರದಿ ಅಂಗೀಕರಿಸಿದ ಸಚಿವ ಸಂಪುಟ