ಒಳಮೀಸಲಾತಿ: ನ್ಯಾ. ನಾಗಮೋಹನ್ ದಾಸ್ ಆಯೋಗ ಮಧ್ಯಂತರ ವರದಿ ಅಂಗೀಕರಿಸಿದ ಸಚಿವ ಸಂಪುಟ
Cabinet Meeting: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿರುವುದಾಗಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು

ಸಚಿವ ಎಚ್.ಕೆ.ಪಾಟೀಲ್.

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ (Internal Reservation) ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನು ಸಚಿವ ಸಂಪುಟ (Cabinet Meeting) ಅಂಗೀಕರಿಸಿರುವುದಾಗಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ (H.K.Patil) ತಿಳಿಸಿದರು. ಅವರು ಮಾ. 27ರಂದು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಕುರಿತು ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
#WATCH | Bengaluru: On Justice H.N. Nagmohan Das committee report on suggestions regarding internal reservation among SC communities in the state, Karnataka Minister HK Patil says, "Nagmohan Das has submitted his report. This internal reservation is to be implemented, how to be… pic.twitter.com/Glat1KZPoi
— ANI (@ANI) March 27, 2025
ಆಯೋಗದ 4 ಪ್ರಮುಖ ಶಿಫಾರಸ್ಸು
ಆಯೋಗವು 4 ಪ್ರಮುಖ ಶಿಫಾರಸ್ಸುಗಳನ್ನು ಮಾಡಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 30ರಿಂದ 40 ದಿವಸಗಳೊಳಗೆ ಹೊಸ ಸಮೀಕ್ಷೆಯನ್ನು ನಡೆಸಬಹುದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿಯನ್ನು ಸಿದ್ದಪಡಿಸಬೇಕು. ಸಮೀಕ್ಷೆಗೆ ಅಗತ್ಯವಿರುವ ತರಬೇತಿ, ಸಂಪನ್ಮೂಲ ಕ್ರೋಢೀಕರಣಗಳ ಉಸ್ತುವಾರಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದು ಸೂಕ್ತವೆಂದು ಆಯೋಗವು ಅಭಿಪ್ರಾಯಪಟ್ಟಿದೆ. ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ವರದಿಯಲ್ಲಿ ತಿಳಿಸಿದ ಮಾನದಂಡಗಳಂತೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವರ್ಗೀಕರಣಗೊಳಿಸಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
ಈ ಸುದ್ದಿಯನ್ನೂ ಓದಿ: Honeytrap Case: ಹನಿಟ್ರ್ಯಾಪ್ ಆರೋಪ; ಪ್ರಾಥಮಿಕ ತನಿಖೆ ಆರಂಭಿಸಿದ ಸಿಐಡಿ
ಸಚಿವ ಸಂಪುಟದಿಂದ ಅಂಗೀಕಾರ
ನಾಗಮೋಹನ್ ದಾಸ್ ಆಯೋಗದವರ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ. ಒಳಮೀಸಲಾತಿ ವರ್ಗೀಕರಣವನ್ನು ಶೀಘ್ರದಲ್ಲಿ ಕೈಗೊಳ್ಳುವ ಸಂಬಂಧ, ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನಾಗಮೋಹನ್ ದಾಸ್ ಸಮಿತಿಗೆ ವಹಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಸಮೀಕ್ಷಾ ಕಾರ್ಯವನ್ನು 60 ದಿನದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಸಮಿತಿಯ ಅವಧಿಯನ್ನು 2 ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಮಿತಿಯ ಶಿಫಾರಸ್ಸುಗಳಲ್ಲಿ ಹೊಸ ವಿಷಯಗಳೇನಿದೆ ಹಾಗೂ 2 ತಿಂಗಳ ಕಾಲಾವಧಿಯಲ್ಲಿ ಸಮೀಕ್ಷೆ ಕೈಗೊಳ್ಳಲು ಸಾಧ್ಯವೇ ಎಂಬ ಪತ್ರಕರ್ತರ ಪ್ರಶ್ನೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ 6 ಸಾವಿರ ಪಂಚಾಯತಿ ಹಾಗೂ 300ಕ್ಕೂ ಹೆಚ್ಚು ವಾರ್ಡ್ಗಗಳಿವೆ. ಈ ಕಾರ್ಯವನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳ ಉಸ್ತುವಾರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ತೀವ್ರಗತಿಯಲ್ಲಿ ಕೈಗೊಳ್ಳಲು ಸಚಿವಸಂಪುಟ ಸೂಚನೆ ನೀಡಿದೆ. ಆಯೋಗವು ಸಮೀಕ್ಷೆ ಕೈಗೊಳ್ಳಲು ಬೇಕಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿಗಳ ಸಭೆ ನಡೆಸಲಾಗುವುದು. ಕಾಂಗ್ರೆಸ್ ಸರ್ಕಾರವು ಮೀಸಲಾತಿ ಸೌಲಭ್ಯ ನೀಡಲು ಬದ್ಧವಾಗಿದ್ದು, ಭವಿಷ್ಯದಲ್ಲಿ ಯಾವುದೇ ಗೊಂದಲಗಳಾಗದಂತೆ ದತ್ತಾಂಶಗಳು ಕರಾರುವಕ್ಕಾಗಿ ಪಡೆಯಲು ಹಾಗೂ ಹಾಗೂ ಜನರಿಗೆ ಮೀಸಲಾತಿಯ ಅನುಕೂಲ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿರುವುದಾಗಿ ಸಚಿವರು ತಿಳಿಸಿದರು.
ಈ ಹಿಂದೆ ನಡೆಸಲಾಗಿರುವ ಜನಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ , ಆದಿ ಆಂಧ್ರ, ಎಸ್‌ಸಿ ವರ್ಗಗಳ ಮಾಹಿತಿಗಳು ವರದಿಯಲ್ಲಿ ಇಲ್ಲ. ಈ ದತ್ತಾಂಶಗಳಿಲ್ಲದೇ ಹೋದರೆ ಕಾನೂನಿನಡಿ ಮಾನ್ಯವಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ 2 ತಿಂಗಳ ಕಾಲಾವಧಿಯಲ್ಲಿ ಹೊಸ ಸಮೀಕ್ಷೆ ಮಾಡಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ವಿವರಿಸಿದರು.