ನವದೆಹಲಿ: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತನ್ನ ನಾಯಕನನ್ನು ಘೋಷಿಸಿದೆ. ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಅವರಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕತ್ವವನ್ನು ನೀಡಲಾಗಿದೆ ಹಾಗೂ ವೆಂಕಟೇಶ್ ಅಯ್ಯರ್‌ಗೆ ಉಪ ನಾಯಕನನ್ನಾಗಿ ನೇಮಿಸಲಾಗಿದೆ. ಈ ಬಗ್ಗೆ ಕೋಲ್ಕತಾ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬಹಿರಂಗಪಡಿಸಿದೆ.
ಕಳೆದ ಋತುವಿನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಕೆಆರ್ ತಂಡ ಚಾಂಪಿಯನ್ ಆಗಿತ್ತು. ಆದರೆ, ಮೆಗಾ ಹರಾಜಿಗೂ ಮುನ್ನ ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಮೆಗಾ ಹರಾಜಿನಲ್ಲಿ ಅವರನ್ನು ಖರೀದಿಸಲು ಕೋಲ್ಕತಾ ಫ್ರಾಂಚೈಸಿ ಮನಸು ಮಾಡಲಿಲ್ಲ. ಅಂದ ಹಾಗೆ ದಾಖಲೆಯ ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿತ್ತು ಹಾಗೂ ನಾಯಕತ್ವವನ್ನು ನೀಡಿದೆ.
IPL 2025: ಏಳು ವರ್ಷಗಳ ಬಳಿಕ ಗುರು-ಶಿಷ್ಯರ ಸಮಾಗಮ
ಮೆಗಾ ಹರಾಜಿನಲ್ಲಿ ಅಜಿಂಕ್ಯ ರಹಾನೆ ಅವರನ್ನು ಕೆಕೆಆರ್ ಮೂಲ ಬೆಲೆ 1.5 ಕೋಟಿ ರೂ ಗಳಿಗೆ ಖರೀದಿಸಿತ್ತು. ಈಗ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಅಜಿಂಕ್ಯ ರಹಾನೆ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಹೋಗಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ಕೆಕೆಆರ್ ತಂಡದ ನಾಯಕತ್ವ ವಹಿಸಿಕೊಂಡ ನಂತರ ಮಾತನಾಡಿದ ಅಜಿಂಕ್ಯ ರಹಾನೆ, "ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಕೆಕೆಆರ್ ಅನ್ನು ಮುನ್ನಡೆಸುವುದು ಗೌರವದ ಸಂಗತಿ. ನಮ್ಮಲ್ಲಿ ಉತ್ತಮ ಮತ್ತು ಸಮತೋಲಿತ ತಂಡವಿದೆ ಎಂದು ನಾನು ಭಾವಿಸುತ್ತೇನೆ. ನಾನು ಎಲ್ಲರೊಂದಿಗೂ ಕೆಲಸ ಮಾಡಲು ಮತ್ತು ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿದ್ದೇನೆ," ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 2025ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಪರ ಅತ್ಯಂತ ದುಬಾರಿ ಆಟಗಾರ. ಅವರನ್ನು 23.75 ಕೋಟಿ ರೂ. ಗಳಿಗೆ ಖರೀದಿಸಲಾಗಿದೆ. ವೆಂಕಟೇಶ್ ಅಯ್ಯರ್ ಕೆಕೆಆರ್‌ನ ನಾಯಕತ್ವ ವಹಿಸಿಕೊಳ್ಳುತ್ತಾರೆಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಆದರೆ ಇದೀಗ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಅಯ್ಯರ್ ಕೆಕೆಆರ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು ಮತ್ತು ನಿರಂತರವಾಗಿ ತಂಡದ ಭಾಗವಾಗಿದ್ದಾರೆ. ಕಳೆದ ವರ್ಷ ಪ್ರಶಸ್ತಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.