IPL 2025: ʻಶ್ರೀಘ್ರದಲ್ಲಿಯೇ ಡಾ ವೆಂಕಟೇಶ್ ಅಯ್ಯರ್ ಆಗಲಿದ್ದೇನೆʼ-ಕೆಕೆಆರ್ ಆಲ್‌ರೌಂಡರ್!
ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಲ್ಲಿ 23.75 ಕೋಟಿ ರೂ ಜೇಬಿಗಿಳಿಸಿಕೊಂಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್, ಇದೀಗ ತಮ್ಮ ವಿದ್ಯಾರ್ಹತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Ramesh Kote
Dec 10, 2024 4:36 PM
ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಲ್ಲಿ 23.75 ಕೋಟಿ ರೂ ಜೇಬಿಗಿಳಿಸಿಕೊಂಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್, ಇದೀಗ ತಮ್ಮ ವಿದ್ಯಾರ್ಹತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಎಂಬಿಎ ಮುಗಿಸಿಕೊಂಡಿರುವ ಅವರು, ಸದ್ಯ ಹಣಕಾಸಿನ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ತಮ್ಮ ಹೆಸರು ಡಾ. ವೆಂಕಟೇಶ್ ಅಯ್ಯರ್ ಆಗಲಿದೆ ಎಂದು ಸಂದರ್ಶನವೊಂದರಲ್ಲಿ ಆಲ್‌ರೌಂಡರ್ ಹೇಳಿಕೊಂಡಿದ್ದಾರೆ.
2021ರ ಐಪಿಎಲ್ ಟೂರ್ನಿಯ ವೇಳೆ 20 ಲಕ್ಷ ರೂ ಮೂಲ ಬೆಲೆಗೆ ಕೆಕೆಆರ್ ಸೇರಿಕೊಂಡಿದ್ದ ವೆಂಕಟೇಶ್ ಅಯ್ಯರ್, ಇದೀಗ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ 23 ಕೋಟಿ ರೂ. ಗೂ ಹೆಚ್ಚಿನ ಮೊತ್ತವನ್ನು ಪಡೆದುಕೊಂಡಿದ್ದಾರೆ. ಅಂದ ಹಾಗೆ ಕ್ರಿಕೆಟ್ ಜೊತೆಗೆ ಆಲ್‌ರೌಂಡರ್ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಎಂಬಿಎ ಮುಗಿಸಿಕೊಂಡಿರುವ ಅವರು ಇದೀಗ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ.
ಶಿಕ್ಷಣ ತುಂಬಾ ಮುಖ್ಯವಾಗುತ್ತದೆ
ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಭಾಗವಹಿಸಿದ್ದ ವೆಂಕಟೇಶ್ ಅಯ್ಯರ್‌ಗೆ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. "ನಮ್ಮದು ಸಾಂಪ್ರದಾಯಿಕ ಕುಟುಂಬವಾಗಿದ್ದು, ಕೇವಲ ಕ್ರಿಕೆಟ್ ಮಾತ್ರ ಆಡುತ್ತೇನೆಂದು ಮನೆಯಲ್ಲಿ ಮನವೋಲಿಸುವುದು ಕಷ್ಟ. ಆದರೆ, ಇದೊಂದು ಸಂಗತಿಯಾದರೆ, ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದೇನೆ. ವಿದ್ಯಾಭ್ಯಾಸದ ಜತೆಗೆ ಆಟದಲ್ಲಿಯೂ ಮುಂದೆ ಇರಬೇಕೆಂದು ನನ್ನ ಪೋಷಕರು ತಿಳಿಸಿದ್ದರು. ಮಧ್ಯ ಪ್ರದೇಶ ತಂಡಕ್ಕೆ ಯಾರಾದರೂ ಹೊಸಬರು ಬಂದರೆ, ಅವರಿಗೆ ಓದುತ್ತಿದ್ದೀರಾ? ಅಥವಾ ಇಲ್ಲವಾ ಎಂಬ ಪ್ರಶ್ನೆಯನ್ನು ಕೇಳುತ್ತೇನೆ. 60 ವಯಸ್ಸಿನವರೆಗೂ ಕ್ರಿಕೆಟ್ ಆಡಲು ಆಗುವುದಿಲ್ಲ ಆದರೆ, ಸಾಯುವತನಕ ಶಿಕ್ಷಣ ಜೊತೆಯಲ್ಲಿರುತ್ತದೆ," ಎಂದು ತಿಳಿಸಿದ್ದಾರೆ.
ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದೇನೆ: ವೆಂಕಟೇಶ್ ಅಯ್ಯರ್
"ಕ್ರಿಕೆಟ್ ಬಳಿಕ ನಿಮ್ಮ ಜೀವನ ಉತ್ತಮವಾಗಿರಬೇಕೆಂದರೆ ಶಿಕ್ಷಣ ತುಂಬಾ ಮುಖ್ಯವಾಗುತ್ತದೆ. ಕ್ರಿಕೆಟ್‌ನಿಂದ ಹೊರಬರಲು ಅಕಾಡೆಮಿಕ್ಸ್ ನಿಮಗೆ ನೆರವು ನೀಡುತ್ತದೆ. ಎಲ್ಲಾ ಸಮಯದಲ್ಲಿಯೂ ನಾನು ಆಟದ ಬಗ್ಗೆ ಚಿಂತಿಸುವುದಿಲ್ಲ. ಇದು ಒತ್ತಡವನ್ನು ಹೇರುತ್ತದೆ. ಒಂದೇ ಸಮಯದಲ್ಲಿ ಎರಡು ಸಂಗತಿಗಳನ್ನು ನಿರ್ವಹಿಸುತ್ತೇನೆ. ಶಿಕ್ಷಣವು ಮೈದಾನದಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ಸನ್ನಿವೇಶಗಳಲ್ಲಿ ಕೌಶಲದಿಂದಲೇ ಒಳ್ಳೆಯ ನಿರ್ಧಾರನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ, ಶಿಕ್ಷಣ ದಿಂದ ಇದು ಸಾಧ್ಯವಾಗುತ್ತದೆ. ಕ್ರಿಕೆಟಿಗರು ಆಟಕ್ಕೆ ಸಂಬಂಧಿ ಜ್ಞಾನ ಮಾತ್ರವಲ್ಲ, ಅವರಿಗೆ ಸಾಮಾನ್ಯ ಜ್ಞಾನ ಕೂಡ ಮುಖ್ಯವಾಗುತ್ತದೆ. ನೀವು ಪದವಿ ಅಥವಾ ಸ್ನಾತಕೋತ್ತರ ಪದವಿನ್ನು ಮುಗಿಸಲೇ ಬೇಕು. ನಾನು ಇದೀಗ ಹಣಕಾಸು ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದೇನೆ. ಮುಂದಿನ ಸಲ ನೀವು ನನ್ನನ್ನು ಡಾ. ವೆಂಕಟೇಶ್ ಅಯ್ಯರ್ ಎಂಬಂತೆ ಸಂದರ್ಶನ ಮಾಡುತ್ತೀರಿ," ಎಂದು ವೆಂಕಟೇಶ್ ಅಯ್ಯರ್ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ:IPL 2025 Auction: ವೆಂಕಟೇಶ್ ಅಯ್ಯರ್‌ಗೆ ಜಾಕ್‌ಪಾಟ್! ಆಲ್‌ರೌಂಡರ್‌ಗೆ 23.73 ಕೋಟಿ ರೂ. ಕೊಟ್ಟ ಕೆಕೆಆರ್!