ಕೋಲ್ಕತಾ: ಜೂನ್ 3ರಂದು ನಿಗದಿಯಾಗಿರುವ ಐಪಿಎಲ್ ಫೈನಲ್(IPL 2025 Final) ಪಂದ್ಯದ ತಾಣ ಯಾವುದೆಂದು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ. ವಾಡಿಕೆ ಪ್ರಕಾರ ಹೈದರಾಬಾದ್‌ನಲ್ಲಿ ಪ್ಲೇ ಆಫ್, ಕೋಲ್ಕತಾದಲ್ಲಿ ಫೈನಲ್ ನಡೆಯಬೇಕು. ಆದರೆ ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಫೈನಲ್ ಹಿಂದೆ ನಿಗದಿ ಮಾಡಿದ್ದಂತೆ ಕೋಲ್ಕತಾ(Kolkata)ದಲ್ಲೇ ನಡೆಯಬೇಕೆಂಬ ಆಗ್ರಹಗಳು ಜೋರಾಗಿವೆ. ಮಾಜಿ ಆಟಗಾರ ಸೌರವ್ ಗಂಗೂಲಿ(Sourav Ganguly) ಕೂಡ ಪ್ರತಿಕ್ರಿಯಿಸಿದ್ದು ಕೋಲ್ಕತಾದಿಂದ ಪಂದ್ಯ ಸ್ಥಳಾಂತರಿಸುವುದು ಅಷ್ಟು ಸುಲಭವಲ್ಲ ಎಂದು ಬಿಸಿಸಿಐಗೆ ಸವಾಲು ಹಾಕಿದ್ದಾರೆ.
'ಫೈನಲ್ ಪಂದ್ಯಕ್ಕೆ ನಾವು ಪ್ರಯತ್ನ ಮಾಡುತ್ತಲೇ ಇದ್ದೇವೆ, ಎಲ್ಲವೂ ಸರಿಯಾಗುತ್ತದೆ ಎಂಬ ಭರವಸೆ ಇದೆ' ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಭಾರತ-ಪಾಕ್ ಸಂಘರ್ಷದ ಕಾರಣ ಟೂರ್ನಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಮೇ 25ರಂದು ನಡೆಯ ಫೈನಲ್ ಜೂನ್ 3ಕ್ಕೆ ನಿಗದಿಯಾಗಿದೆ. ಈಗಾಗಲೇ ಲೀಗ್ ಪಂದ್ಯಗಳಿಗೆ ಮಳೆ ಅಡ್ಡಿಪಡ್ಡಿಸುತ್ತಿದೆ. ಶನಿವಾರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್‌ಸಿಬಿ ಮತ್ತು ಕೆಕೆಆರ್ ನಡುವಣ ಪಂದ್ಯ ಟಾಸ್ ಕೂಡ ನಡೆಯದೆ ರದ್ದುಗೊಂಡಿತ್ತು.
ದೇಶಾದ್ಯಂತ ಮಾನ್ಸೂನ್ ಚುರುಕುಗೊಂಡಿತ್ತದೆ. ಆದಾಗ್ಯೂ, ಜೂನ್ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಎಂಬುದು ನಿರೀಕ್ಷೆಯಾಗಿದೆ. ಹೀಗಾಗಿ ಅಂತಿಮವಾಗಿ ಅಹಮದಾಬಾದ್ ತಾಣವನ್ನೇ ಬಿಸಿಸಿಐ ಆಯ್ಕೆ ಮಾಡಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ IPL 2025: ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ಕೆ.ಎಲ್ ರಾಹುಲ್
ಸದ್ಯ ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ ಉಳಿದಿರುವ ಲೀಗ್ ಪಂದ್ಯಗಳು ಬೆಂಗಳೂರು ಸೇರಿ 6 ನಗರಗಳಲ್ಲಿ ನಡೆಯಲಿವೆ. ಬೆಂಗಳೂರಿನಲ್ಲಿ 2, ಜೈಪುರಲ್ಲಿ 3, ಲಖನೌದಲ್ಲಿ 2, ಮುಂಬೈನಲ್ಲಿ 1, ಅಹಮದಾಬಾದ್‌ನಲ್ಲಿ 2, ನವದೆಹಲಿಯಲ್ಲಿ 3 ಪಂದ್ಯಗಳು ನಿಗದಿಯಾಗಿದೆ. ಲೀಗ್ ಹಂತದ ಪಂದ್ಯಗಳು ಮೇ 27ರಂದು ಕೊನೆಗೊಳ್ಳಲಿವೆ. ಮೇ 29ರಿಂದ ನಾಕೌಟ್ ಹಂತ ಶುರುವಾಗಲಿದ್ದು, ಜೂ.3ರಂದು ಫೈನಲ್ ಪಂದ್ಯ ನಿಗದಿಯಾಗಿದೆ.