Ramayana Movie: ಹಿರಿದಾಗುತ್ತಿದೆ 'ರಾಮಾಯಣ' ಪಾತ್ರವರ್ಗ; ಯಶ್ ತಾಯಿ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಎಂಟ್ರಿ
ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್ ಸದ್ಯ ʼರಾಮಾಯಣʼ ಸಿನಿಮಾ ಮೂಲಕ ಬಾಲಿವುಡ್‌ಗೆ ಡಂಟ್ರಿ ಕೊಟ್ಟಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ಇದೀಗ ಈ ಚಿತ್ರದ ಪ್ರಮುಖ ಪಾತ್ರಕ್ಕೆ ಹಿರಿಯ ನಟಿ ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರು ಎನ್ನುವ ವಿವರ ಇಲ್ಲಿದೆ.

ಯಶ್ ಮತ್ತು ರಣಬೀರ್ ಕಪೂರ್.

ಮುಂಬೈ: ದೇಶವೇ ಕುತೂಹಲದಿಂದ ತುದಿಗಾಲಿನಲ್ಲಿ ಕಾಯುವಂತೆ ತಯಾರಾಗುತ್ತಿದೆ ಬಾಲಿವುಡ್‌ನ ʼರಾಮಾಯಣʼ ಚಿತ್ರ (Ramayana Movie). ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಿತೇಶ್ ತಿವಾರಿ (Nitesh Tiwari) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (Yash), ರಣಬೀರ್ ಕಪೂರ್ (Ranbir Kapoor) ಮತ್ತು ಸಾಯಿ ಪಲ್ಲವಿ (Sai Pallavi) ನಟಿಸುತ್ತಿರುವ ಈ ಚಿತ್ರದ ಶೂಟಿಂಗ್ ಆರಂಭಕ್ಕೂ ಮುನ್ನವೇ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇದೀಗ ಈ ಚಿತ್ರಕ್ಕೆ ಮತ್ತೊಬ್ಬ ಪವರ್‌ಫುಲ್ ನಟಿಯ ಎಂಟ್ರಿಯಾಗಿದೆ. ಮನೋಜ್ಞ ಅಭಿನಯದ ಮೂಲಕ 2 ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಹಿರಿಯ ನಟಿ ಇದೀಗ 'ರಾಮಾಯಣ'ದ ಭಾಗವಾಗುತ್ತಿದ್ದಾರೆ. ಹಾಗಾದರೆ ಯಾರು ಆ ನಟಿ? ಅವರ ಪಾತ್ರ ಯಾವುದು?
'ರಾಮಾಯಣʼ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ಸೀತೆ ಪಾತ್ರಕ್ಕೆ ಸೌತ್ ಬ್ಯೂಟಿ ಸಾಯಿ ಪಲ್ಲವಿ ಜೀವ ತುಂಬಲಿದ್ದಾರೆ. ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ಆ ಮೂಲಕ ಬಾಲಿವುಡ್‌ಗೆ ಖಡಕ್ ಆಗಿಯೇ ಪ್ರವೇಶಿಸಲಿದ್ದಾರೆ. ಇನ್ನುಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಇದೀಗ ರಾವಣನ ತಾಯಿ ಕೈಕಸಿ ಪಾತ್ರಕ್ಕೆ ದಕ್ಷಿಣ ಭಾರತ ಮೂಲದ ಹಿರಿಯ ನಟಿಯನ್ನು ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
ಕೈಕಸಿ ಪಾತ್ರದಲ್ಲಿ ಶೋಭನಾ?
ಬಹುಭಾಷಾ ಕಲಾವಿದೆ, ಮಲಯಾಳಂ ಮೂಲದ ನಟಿ ಶೋಭನಾ ಅವರು ಕೈಕಸಿ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಭರತನಾಟ್ಯ ಡ್ಯಾನ್ಸರ್ ಕೂಡ ಆಗಿರುವ ಅವರು ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಭಿನಯಕ್ಕೆ ಪ್ರಾಶಸ್ತ್ಯವಿರುವ ಚಿತ್ರಗಳನ್ನು ಆಯ್ದುಕೊಳ್ಳುವ ಅವರಿಗೆ ಇತ್ತೀಚೆಗೆ ಪದ್ಮ ಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು.
ʼರಾಮಾಯಣʼ ಕಥೆಗೆ ಬಹುಮುಖ್ಯ ತಿರುವು ಕೊಡುವುದೇ ರಾವಣನ ತಾಯಿ ಕೈಕಸಿಯ ಪಾತ್ರ. ಈ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಜತೆಗೆ ಈ ಶೋಭನಾ ಅವರ ಪಾತ್ರವನ್ನು ವಿಶೇಷವಾಗಿ ಕಟ್ಟಿ ಕೊಡಲಾಗುತ್ತಿದೆ ಎನ್ನಲಾಗಿದೆ. ಶೋಭನಾ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ಸಿನಿಮಾ ತಂಡ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ. ʼರಾಮಾಯಣʼ 2 ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗ 2026ರ ದೀಪಾವಳಿ ವೇಳೆಗೆ ಮತ್ತು 2ನೇ ಭಾಗ 2027ರಲ್ಲಿ ಬಿಡುಗಡೆಯಾಗಲಿದೆ.
2 ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಶೋಭನಾ
1980ರಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶೋಭನಾ ಕನ್ನಡ, ಮಲಯಾಳಂ, ತಮಿಳು, ಹಿಂದಿ, ತೆಲುಗು ಮತ್ತು ಇಂಗ್ಲಿಷ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1993ರಲ್ಲಿ ತೆರೆಕಂಡ ಮಲಯಾಳಂನ ʼಮಣಿಚಿತ್ರತಾಳ್ʼ ಮತ್ತು 2002ರಲ್ಲಿ ರಿಲೀಸ್ ಆದ ʼಮಿತ್ರ್, ಮೈ ಫ್ರೆಂಡ್ʼ ಇಂಗ್ಲಿಷ್ ಸಿನಿಮಾದ ಅಭಿನಯಕ್ಕೆ ಶೋಭನಾ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ಪ್ಯಾನ್ ಇಂಡಿಯಾ ಚಿತ್ರ ʼಕಲ್ಕಿ 2898 ಎಡಿʼಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Toxic Movie: ಯಶ್ ಬರ್ತ್‌ಡೇಗೆ 'ಟಾಕ್ಸಿಕ್' ಸರ್ಪ್ರೈಸ್ ಗಿಫ್ಟ್- ಟೀಸರ್‌ನಲ್ಲಿ ರಾಕಿಂಗ್ ಸ್ಟಾರ್ ಮ್ಯಾನರಿಸಂಗೆ ಫ್ಯಾನ್ಸ್ ಫುಲ್ ಫಿದಾ!
ಮಾರ್ಚ್‌ನಿಂದ ಅಖಾಡಕ್ಕೆ ಯಶ್
ಮಾರ್ಚ್‌ನಲ್ಲಿ ಯಶ್ ತಮ್ಮ ಭಾಗದ ಚಿತ್ರೀಕರಣ ಆರಂಭಿಸಲಿದ್ದಾರೆ. ರಾವಣನ ಪಾತ್ರಕ್ಕಾಗಿ ಯಶ್ ದಾಖಲೆಯ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಪವರ್‌ಫುಲ್ ಪಾತ್ರವರ್ಗದ ಮೂಲಕವೇ ʼರಾಮಾಯಣʼ ಹೈಪ್ ಸೃಷ್ಟಿಸಿದೆ.