ಟೆಲ್ ಅವಿವ್: ಎಲ್ಲಿ ನೋಡಿದರೂ , ಕುಸಿದು ಬಿದ್ದಿರುವ ಕಟ್ಟಡ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಜನರ ಕಣ್ಣುಗಳಲ್ಲಿ ಸಾವಿನ ಭಯ. ಹಮಾಸ್ ಹಾಗೂ ಇಸ್ರೇಲ್ ನಡುವೆ ಯುದ್ಧ ಶುರುವಾಗಿ ಒಂದು ವರ್ಷಕ್ಕಿಂತಲೂ ಹೆಚ್ಚಾಗಿದೆ. ಈವರೆಗೆ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಜನ ಪರದಾಡುತ್ತಿದ್ದಾರೆ. ಸಿಡಿ ಮದ್ದು, ಕ್ಷಿಪಣಿಗಳ ಸದ್ದು ಜನರ ಕಿವಿಯನ್ನು ಕೊರೆಯುತ್ತಿವೆ. ಯುದ್ಧ ಪೀಡಿತ ಗಾಜಾದಲ್ಲಿಇದೀಗ ಭರವಸೆಯ ಬೆಳಕೊಂದು ಮೂಡಿದೆ. 15 ತಿಂಗಳ ನಿರಂತರ ಹೋರಾಟದ ನಂತರ, ಇಸ್ರೇಲ್ ಮತ್ತು ಹಮಾಸ್, ಗಾಜಾದಲ್ಲಿ ಕದನ ವಿರಾಮವನ್ನು ಒಪ್ಪಿಕೊಂಡಿದೆ. ಇದು ಮೂರು ಹಂತದಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ಘೋಷಿಸಿದ್ದಾರೆ. ದೋಹಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕತಾರ್ ನೇತೃತ್ವದಲ್ಲಿ ಯುದ್ಧವನ್ನು ನಿಲ್ಲಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ. ಕಳೆದ ಕೆಲವು ದಿನಗಳಿಂದ ಹಲವಾರು ಸುತ್ತಿನ ಮಾತುಕತೆ ನಡೆದಿದ್ದರೂ ಕೂಡ ಉಭಯ ದೇಶಗಳು ಯುದ್ಧವನ್ನು ಮುಂದುವರಿಸಿದ್ದವು. ಪರಿಣಾಮ ಇಸ್ರೇಲ್‌ನ 1200 ನಾಗರಿಕರು ಮತ್ತು ಪ್ಯಾಲೆಸ್ತೀನ್‌ನಲ್ಲಿ 46 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಇದೀಗ ಶಾಂತಿ ಸ್ಥಾಪನೆಯ ಮಾತುಕತೆಗಳು ನಡೆದಿದ್ದು, ಈಗಾಗಲೇ ಎಲ್ಲಾ ಬಂಧಿತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಕದನ ವಿರಾಮದ ಒಪ್ಪಂದದಲ್ಲೇನಿದೆ?
2023ರ ಅಕ್ಟೋಬರ್ 7 ರಂದು ಹಮಾಸ್ ಹಾಗೂ ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾಗಿತ್ತು. ವಿವಿಧ ರಾಷ್ಟ್ರಗಳ ಹಲವಾರು ಪ್ರಯತ್ನದ ಬಳಿಕವೂ ಕದನ ವಿರಾಮ ಕಗ್ಗಂಟಾಗಿಯೇ ಉಳಿದಿತ್ತು. ಇದೀಗ ಜಾಗತಿಕ ಒತ್ತಡದಿಂದಾಗಿ ಹಾಗೂ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಭಾನುವಾರದಿಂದಲೇ ಒತ್ತಾಯಾಳುಗಳ ಬಿಡುಗಡೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜತೆಗೆ ಒಂದು ವಾರದ ನಂತರ, ಇಸ್ರೇಲ್ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುತ್ತದೆ.
42 ದಿನಗಳದ ಸೀಸ್‌ಫೈರ್
ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಮೊದಲ ಹಂತ 42 ದಿನಗಳ ಕಾಲ ಇರಲಿದೆ. ಇದೇ ವೇಳೆಗೆ ಹಮಾಸ್ ತನ್ನ ಸೆರೆಯಲ್ಲಿಟ್ಟಿದ್ದ 33 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಪ್ರತಿಯಾಗಿ ಇಸ್ರೇಲ್ 737 ಪ್ಯಾಲೀಸ್ತಿನ್ ಖೈದಿಗಳನ್ನು ಬಿಡುಗಡೆ ಮಾಡುತ್ತದೆ. ಯುದ್ಧದ ಕಾರಣದಿಂದ ಗಾಜಾವನ್ನು ತೊರೆದಿದ್ದ ಪ್ಯಾಲೆಸ್ತಿನ್ನಿಯರು ಗಾಜಾಗೆ ಮತ್ತೆ ಮರಳಲಿದ್ದಾರೆ.
ಇನ್ನು ಎರಡನೇ ಹಂತದ ಕದನ ವಿರಾಮ ಒಪ್ಪಂದ 16ನೇ ದಿನದಿಂದ ಪ್ರಾರಂಭವಾಗಲಿದೆ. ಇದರಲ್ಲಿ ಉಳಿದ ಒತ್ತೆಯಾಳುಗಳ ಬಿಡುಗಡೆ ಹಾಗೂ ಇಸ್ರೇಲ್ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ತೆಗೆದುಕೊಳ್ಳುವುದು ಮತ್ತು ಉಭಯ ದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಮಹತ್ವ ನೀಡಲಾಗಿದೆ. ಮೂರನೇ ಮತ್ತು ಅಂತಿಮ ಹಂತದ ಕದನ ವಿರಾಮದಲ್ಲಿ ಗಾಜಾವನ್ನು ಮತ್ತೆ ಮೊದಲಿನ ರೀತಿಯಲ್ಲಿ ಸಜ್ಜುಗೊಳಿಸಲು ತೀರ್ಮಾನ ಮಾಡಲಾಗಿದೆ.
ಕದನ ವಿರಾಮಕ್ಕೆ ಮಧ್ಯವರ್ತಿಗಳಾಗಿರುವ ಕತಾರ್, ಅಮೆರಿಕ ಹಾಗೂ ಈಜಿಪ್ಟ್ ದೇಶಗಳು ಸೀಸ್ ಫೈರ್‌ನ ಮೇಲ್ವಿಚಾರಣೆ ನಡೆಸಲಿದ್ದು, ಇದರ ಕಂಟ್ರೋಲಿಂಗ್ ಬಾಡಿ ಕೈರೋದಲ್ಲಿ ಸ್ಥಾಪನೆಯಾಗಲಿದೆ. ಅನೇಕ ದೇಶಗಳು ಗಾಜಾದ ನೆರವಿಗೆ ಬಂದ್ದಿದ್ದು, ಮಾನವೀಯ ನೆಲೆಯಲ್ಲಿ ಸಹಾಯಹಸ್ತವನ್ನು ಚಾಚುತ್ತಿವೆ.
ಮುಂದಿನ ಸವಾಲುಗಳೇನು?
ಜಾಗತಿಕ ಒತ್ತಡಕ್ಕೋ ಇಲ್ಲ ಆಂತರಿಕ ಬೆಳವಣಿಗೆಯಿಂದಲೋ ಇಸ್ರೇಲ್ ಕದನ ವಿರಾಮಕ್ಕೇನೋ ಒಪ್ಪಿಗೆಯನ್ನು ಸೂಚಿಸಿದೆ ನಿಜ. ಆದರೂ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಹಮಾಸ್ ಉಗ್ರರನ್ನು ಬುಡ ಸಮೇತ ಕಿತ್ತು ಹಾಕುವ ಪ್ರತಿಜ್ಞೆಯನ್ನು ಇಸ್ರೇಲ್ ಪ್ರಧಾನಿ ಮಾಡಿದ್ದರು. ಇದೀಗ ಅದು ಸಾಧ್ಯವಾಗಿಲ್ಲ. ಇಸ್ರೇಲ್ ತನ್ನ ಸೇನೆಯನ್ನು ಗಾಜಾದಿಂದ ಹಿಂಪಡೆದರೆ ಗಾಜಾ ಯಾವತ್ತಿಗೂ ಹಮಾಸ್ ಉಗ್ರರ ನೆಲೆಯಾಗಿಯೇ ಉಳಿದು ಬಿಡುತ್ತದೆ. ಇನ್ನೊಂದೆಡೆ ಇಸ್ರೇಲ್ ಸೇನೆ ಗಾಜಾದಲ್ಲಿಯೇ ಉಳಿದರೆ ಕದನ ವಿರಾಮವನ್ನು ಮುರಿದಂತಾಗುತ್ತದೆ. ಇದರಿಂದಾಗಿ ಮತ್ತೆ ಯುದ್ಧದ ಭೀತಿ ಕಾಡಬಹುದು.
ಯುದ್ಧ ವಿರಾಮ ಅನಿವಾರ್ಯವೇಕೆ ?
ಮೇ ತಿಂಗಳಿನಲ್ಲಿ ನಡೆದಿದ್ದ ಸಭೆಯಲ್ಲಿ ಇಸ್ರೇಲ್ ಯುದ್ಧ ವಿರಾಮದ ಮಾತನ್ನು ತಳ್ಳಿ ಹಾಕಿತ್ತು. ಆದರೆ ಇದೀಗ ದಿಗ್ಗಜ ದೇಶಗಳ ನೇತೃತ್ವದಲ್ಲಿ ಅಸ್ತು ಎಂದು ಹೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಸ್ರೇಲ್‌ಗೆ ಇದು ಅನಿವಾರ್ಯ ಕೂಡ ಆಗಿದೆ. ಒಂದೆಡೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಇನ್ನೊಂದೆಡೆ ದೇಶದಲ್ಲಿಯೇ ಸರ್ಕಾರ ವಿರುದ್ಧದ ಕೂಗು ಕೇಳಿಬರುತ್ತಿದೆ. ಇಸ್ರೇಲ್ ಸೇನೆ ಸೈನಿಕರ ಕೊರತೆಯನ್ನೂ ಕೂಡ ಎದುರಿಸುತ್ತಿದ್ದು, ಇರಾನ್ ಜೊತೆಗಿನ ಸಂಘರ್ಷವೂ ಒಂದು ಬಹು ಮುಖ್ಯ ಕಾರಣವಾಗಿದೆ. ಅದೇ ರೀತಿಯಲ್ಲಿ ಹಮಾಸ್ ಕೂಡ ಒತ್ತಡಕ್ಕೆ ಮಣಿದಿದ್ದು, ಗಾಜಾದಲ್ಲಿನ ಸಾಲು ಸಾಲು ಸಾವಿನಿಂದಾಗಿ ಪ್ಯಾಲೆಸ್ತೇನಿಯನ್ನರು ಹಮಾಸ್ ಅನ್ನು ವಿರೋಧಿಸಲು ಆರಂಭಿಸಿದರು. ಈ ಎಲ್ಲಾ ಪರಿಣಾಮದಿಂದಾಗಿ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.
ಅಮೆರಿಕ ಪಾತ್ರವೇನು?
ಕದನ ವಿರಾಮ ಒಪ್ಪಂದ ಜಾರಿಗೆ ಬರುವಲ್ಲಿ ಹಲವರು ಶ್ರಮಿಸಿದ್ದು, ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಿರುವ ಜೋ ಬಿಡೆನ್ ಅವರ ಅವಧಿ ಕೊನೆಗೊಳ್ಳುವ ಮೊದಲು ಇಸ್ರೇಲ್ ಮತ್ತು ಹಮಾಸ್ ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಬರುವಂತೆ ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್ ಒತ್ತಡ ಹೇರಿದ್ದರು. ಇದೀಗ ಬೈಡನ್ ಶ್ವೇತ ಭವನ ತೊರೆಯುವ ಮೊದಲೇ ಕದನ ವಿರಾಮ ಘೋಷಣೆಯಾಗಿದೆ. ಟ್ರಂಪ್ ಅವರ ಪಶ್ಚಿಮ ಏಷ್ಯಾ ರಾಯಭಾರಿ ಸ್ಟೀವ್ ವಿಟ್ಕಾಫ್ ಕಳೆದ ವಾರ ಇಸ್ರೇಲಿ ನಾಯಕರನ್ನು ಭೇಟಿಯಾಗಿದ್ದರು. ಇದೀಗ ಅವರ ನೇತೃತ್ವದಲ್ಲಿಯೇ ಕದನ ವಿರಾಮ ಘೋಷಣೆಯಾಗಿದೆ.
ಯುದ್ಧ ನಿಂತರೆ ಯೆಮೆನ್‌ನ ಹೌತಿಗಳು ಇಸ್ರೇಲ್ ಮತ್ತು ಕೆಂಪು ಸಮುದ್ರದ ಮೂಲಕ ಹಾದುಹೋಗುವ ಹಡಗುಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬಹುದು. ಈ ಮೂಲಕ ಸೂಯೆಜ್ ಕಾಲುವೆಯ ಮೂಲಕ ಸರಕು ಸಾಗಣೆ ಪುನರಾರಂಭವಾಗಬಹುದು. ಇದು ಜಾಗತಿಕ ಆರ್ಥಿಕತೆಯ ಮೇಲಿನ ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡುತ್ತದೆ.