#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Jasprit Bumrah: ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯ ವೇಗಿ!

Jasprit Bumrah Names ICC men's Cricketer Of The Year: 2024ರ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದರ ಫಲವಾಗಿ ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌ ಪ್ರಶಸ್ತಿ ಗೆದ್ದ ಭಾರತದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

2024ರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಜಸ್‌ಪ್ರೀತ್‌ ಬುಮ್ರಾ!

Jasprit Bumrah Names ICC men's Cricketer Of The Year

Profile Ramesh Kote Jan 28, 2025 7:22 PM

ನವದೆಹಲಿ: ಕಳೆದ ವರ್ಷ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ 2024ರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ವಿರಾಟ್‌ ಕೊಹ್ಲಿ ಬಳಿಕ ಈ ಗೌರವಕ್ಕೆ ಭಾಜನರಾದ ಎರಡನೇ ಭಾರತೀಯ ಆಟಗಾರ ಹಾಗೂ ಮೊದಲ ಭಾರತೀಯ ವೇಗಿ ಎಂಬ ಕೀರ್ತಿಗೆ ಜಸ್‌ಪ್ರೀತ್‌ ಬುಮ್ರಾ ಪಾತ್ರರಾಗಿದ್ದಾರೆ. ಹೋದ ವರ್ಷ ಇಂಗ್ಲೆಂಡ್‌ ಹಾಗೂ ಬಾಂಗ್ಲಾದೇಶ ವಿರುದ್ಧ ತವರು ಟೆಸ್ಟ್‌ ಸರಣಿಗಳನ್ನುಗೆಲ್ಲುವಲ್ಲಿ ಬುಮ್ರಾ ಭಾರತಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್‌ ಗೆಲುವಿಗೆ ಜಸ್‌ಪ್ರೀತ್‌ ಬುಮ್ರಾ ನೆರವು ನೀಡಿದ್ದರು.

2024ರ ವರ್ಷದ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌ ಪ್ರಶಸ್ತಿಯ ರೇಸ್‌ನಲ್ಲಿ‌ ಆಸ್ಟ್ರೇಲಿಯಾ ತಂಡದ ಟ್ರಾವಿಸ್ ಹೆಡ್‌ ಹಾಗೂ ಇಂಗ್ಲೆಂಡ್‌ ತಂಡದ ಜೋ ರೂಟ್‌ ಕೂಡ ಇದ್ದರು. ಇವರನ್ನು ಹಿಂದಿಕ್ಕಿದ ಜಸ್‌ಪ್ರೀತ್‌ ಬುಮ್ರಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ರಾಹುಲ್‌ ದ್ರಾವಿಡ್‌ (2004), ಸಚಿನ್‌ ತೆಂಡೂಲ್ಕರ್‌ (2010), ರವಿಚಂದ್ರನ್‌ ಅಶ್ವಿನ್‌ (2016) ಹಾಗೂ ವಿರಾಟ್‌ ಕೊಹ್ಲಿ (2017, 2018) ಬಳಿಕ ಈ ಪ್ರಶಸ್ತಿಗೆ ಭಾಜನರಾದ ಐದನೇ ಆಟಗಾರರೆನಿಸಿಕೊಂಡಿದ್ದಾರೆ ಜಸ್‌ಪ್ರೀತ್‌ ಬುಮ್ರಾ.

2024ರ ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಜಸ್‌ಪ್ರೀತ್ ಬುಮ್ರಾ!

2024ರ ವರ್ಷದ ಐಸಿಸಿ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿ

ಇದಕ್ಕೂ ಮುನ್ನ ಜಸ್‌ಪ್ರೀತ್‌ ಬುಮ್ರಾ ಅವರು 2024ರ ವರ್ಷದ ಐಸಿಸಿ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಅಂತ್ಯವಾಗಿದ್ದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸಿದ್ದ ಜಸ್‌ಪ್ರೀತ್‌ ಬುಮ್ರಾ 32 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೂ ಟೀಮ್‌ ಇಂಡಿತಾ 1-3 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಸೋತಿತ್ತು.



2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಬರುವುದಕ್ಕೂ ಮುನ್ನ ಜಸ್‌ಪ್ರೀತ್‌ ಬುಮ್ರಾ, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಗಮನಾರ್ಹ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು. ಇನ್ನು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅವರು 15 ವಿಕೆಟ್‌ಗಳನ್ನು ಕಬಳಿಸಿದ್ದರು. ಅದರಂತೆ ಭಾರತ ತಂಡ, ಫೈನಲ್‌ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು ಹಾಗೂ ಬುಮ್ರಾ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ನಾಮ ನಿರ್ದೇಶನಗೊಂಡಿದ್ದ ಟ್ರಾವಿಸ್‌ ಹೆಡ್‌ ಹಾಗೂ ಜೋ ರೂಟ್‌ ಅವರಿಂತಲೂ 2024ರಲ್ಲಿ ಜಸ್‌ಪ್ರೀತ್‌ ಬುಮ್ರಾ ಉತ್ತಮ ಪ್ರದರ್ಶನ ತೋರಿದ್ದಾರೆ. ಟೀಮ್‌ ಇಂಡಿಯಾ ವೇಗಿ ಕಳೆದ ವರ್ಷ ಆಡಿದ್ದ 13 ಪಂದ್ಯಗಳಿಂದ 71 ವಿಕೆಟ್‌ಗಳನ್ನು ಕಬಳಿಸಿದ್ದರು.

ಜಸ್‌ಪ್ರೀತ್‌ ಬುಮ್ರಾ ಪ್ರತಿಕ್ರಿಯೆ

"ಸರ್ ಗಾರಿಫೀಲ್ಡ್‌ ಸೋಬರ್ಸ್ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ಕಳೆದ ವರ್ಷವು ನಿಜವಾಗಿಯೂ ಸ್ಮರಣೀಯವಾಗಿದೆ, ವಿಶೇಷವಾಗಿ ಬಾರ್ಬಡೋಸ್‌ನಲ್ಲಿ ಟಿ20 ವಿಶ್ವಕಪ್ ಗೆದ್ದಿರುವುದು. ಇದು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ," ಎಂದು ಜಸ್‌ಪ್ರೀತ್‌ ಬುಮ್ರಾ ಸಂತಸ ವ್ಯಕ್ತಪಡಿಸಿದ್ದಾರೆ.