ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jayalalitha : ದಿ.ಜಯಲಲಿತಾ ಆಸ್ತಿ, ಒಡವೆ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಡೇಟ್‌ ಫಿಕ್ಸ್‌!

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿದ್ದ, ಪ್ರಸ್ತುತ ತನಿಖಾ ಸಂಸ್ಥೆಗಳ ವಶದಲ್ಲಿರುವ ಬೆಲೆ ಬಾಳುವ ವಸ್ತುಗಳು, ಆಸ್ತಿಯನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಕೊನೆಗೂ ದಿನ ಸನ್ನಿಹಿತವಾಗಿದೆ. ಫೆಬ್ರವರಿ 14 ಮತ್ತು 15 ರಂದು ದಿನಾಂಕ ನಿಗದಿಪಡಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

J. Jayalalitha

ಬೆಂಗಳೂರು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ (J. Jayalalitha) ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಬೆಂಗಳೂರಿನ ವಿಶೇಷ ನ್ಯಾಯಾಲಯವು ಫೆಬ್ರವರಿ 14 ಮತ್ತು 15 ಎರಡು ದಿನಗಳನ್ನು ನಿಗದಿಪಡಿಸಿದೆ.

ಸಿಬಿಐ/ಇಡಿ ಪ್ರಕರಣಗಳ ವಿಚಾರಣೆ ನಡೆಸಲು ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಎಚ್‌ಎ ಬುಧವಾರ ಆದೇಶ ಹೊರಡಿಸಿದ್ದು, ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ದಿನಾಂಕಗಳನ್ನು ನಿಗದಿಪಡಿಸಿದ್ದಾರೆ. ಜಯಲಲಿತಾ ಅವರ ಉತ್ತರಾಧಿಕಾರಿಗಳಾದ ಜೆ ದೀಪಕ್ ಮತ್ತು ಜೆ ದೀಪಾ ಅವರು ಆಸ್ತಿ ವಿಚಾರವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಹೀಗಾಗಿ ಇದೀಗ ಅವುಗಳ ಹಸ್ತಾಂತರಕ್ಕೆ ಕೋರ್ಟ್ ದಿನ ನಿಗದಿಪಡಿಸಿದೆ.

ಜುಲೈ 12, 2023 ರಂದು ವಿಶೇಷ ನ್ಯಾಯಾಲಯವು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದು ಹೈಕೋರ್ಟ್ ಆದೇಶ ಹೊರಡಿಸಿತ್ತು, ವಿಶೇಷ ನ್ಯಾಯಾಲಯವು ದೀಪಾ ಮತ್ತು ದೀಪಕ್ ಅವರ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಬಿಡುಗಡೆಗಾಗಿ ಮಾಡಿಕೊಂಡಿದ್ದ ಕೋರಿಕೆಯನ್ನು ತಿರಸ್ಕರಿಸಿತ್ತು.

ಈ ಸುದ್ದಿಯನ್ನೂ ಓದಿ : ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ನಿವಾಸ ಸರ್ಕಾರದ ಸ್ವತ್ತಲ್ಲ: ಮದ್ರಾಸ್​ ಹೈಕೋರ್ಟ್

2024 ರ ಫೆಬ್ರವರಿ 19 ರಂದು, ವಿಶೇಷ ನ್ಯಾಯಾಲಯವು ಬೆಲೆಬಾಳುವ ವಸ್ತುಗಳು, ಚಿನ್ನ ಮತ್ತು ವಜ್ರದ ಆಭರಣಗಳನ್ನು ಹಿಂದಿರುಗಿಸಲು ದಿನಾಂಕವನ್ನು ನಿಗದಿಪಡಿಸಿತ್ತು. ಮಾರ್ಚ್ 6 ಮತ್ತು 7 ರಂದು ಅಧಿಕೃತ ಅಧಿಕಾರಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ಅದರ ವಿರುದ್ಧ ಹೈಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಕೆಯಾದ ಕಾರಣ ಹಸ್ತಾಂತರ ಮಾಡಲಾಗಿರಲಿಲ್ಲ. ಜಯಲಲಿತಾ ಅವರ ಕಾನೂನು ವಾರಸುದಾರರಾದ ಜೆ ದೀಪಕ್ ಮತ್ತು ಜೆ ದೀಪಾ ಅವರು ಹೈಕೋರ್ಟ್​ ಮೊರೆ ಹೋಗಿದ್ದರು. ಆದರೆ, ಇದೀಗ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದರಿಂದ ವಿಶೇಷ ನ್ಯಾಯಾಲಯ ಮತ್ತೆ ಹಸ್ತಾಂತರಕ್ಕೆ ದಿನಾಂಕ ನಿಗದಿ ಮಾಡಿದೆ.