Kamal Haasan: ಕನ್ನಡ ಭಾಷೆಯ ಮೂಲ ತಮಿಳೇ? ಕಮಲ್ ಹೇಳಿಕೆ ಎಷ್ಟು ಸರಿ? ಇತಿಹಾಸ ಹೇಳೋದೇನು?
Kamal Haasan Controversy: ತಮ್ಮ 'ಥಗ್ ಲೈಫ್' ಚಿತ್ರದ ಪ್ರಚಾರದ ವೇಳೆ "ಕನ್ನಡ ತಮಿಳಿನಿಂದ ಹುಟ್ಟಿತು" ಎಂದು ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಹಾಗಾದರೆ ಕಮಲ್ ಹಾಸನ್ ಹೇಳಿಕೆಯ ಸತ್ಯಾಸತ್ಯತೆ ಏನು? ತಮಿಳು ಭಾಷೆ ಕನ್ನಡಕ್ಕಿಂತಲೂ ಹಳೆಯ ಭಾಷೆಯೇ? ಕನ್ನಡದ ಮೂಲದ ನಿಜಕ್ಕೂ ತಮಿಳೇ? ಇಲ್ಲಿದೆ ಸಂಪೂರ್ಣ ಮಾಹಿತಿ.


ಚೆನ್ನೈ: ನಟ ಕಮಲ್ ಹಾಸನ್... ಅದ್ಬುತ ಸಿನಿಮಾಗಳು, ಅಪರೂಪದ ಪಾತ್ರ, ಅತ್ಯದ್ಬುತ ನಟನೆಗೆ ಎಷ್ಟು ಸುದ್ದಿಯಲ್ಲಿರುತ್ತಾರೋ, ಅಷ್ಟೇ ವಿವಾದಗಳಿಂದಲೂ ಸದ್ದು ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಅವರ ಹೇಳಿಕೆಯೊಂದು ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕಿದೆ. ತಮ್ಮ 'ಥಗ್ ಲೈಫ್' ಚಿತ್ರದ ಪ್ರಚಾರದ ವೇಳೆ "ಕನ್ನಡ ತಮಿಳಿನಿಂದ ಹುಟ್ಟಿತು" ಎಂದು ಅವರು ನೀಡಿರುವ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಇದು ವಿವಾದದ ಕಿಡಿಗೆ ಕಿಚ್ಚು ಹಚ್ಚಿದೆ. ಹಾಗಾದರೆ ಕಮಲ್ ಹಾಸನ್(Kamal Haasan Controversy) ಹೇಳಿಕೆಯ ಸತ್ಯಾಸತ್ಯತೆ ಏನು? ತಮಿಳು ಭಾಷೆ ಕನ್ನಡಕ್ಕಿಂತಲೂ ಹಳೆಯ ಭಾಷೆಯೇ? ಕನ್ನಡದ ಮೂಲದ ನಿಜಕ್ಕೂ ತಮಿಳೇ? ಇಲ್ಲಿದೆ ಸಂಪೂರ್ಣ ಮಾಹಿತಿ.
ಕನ್ನಡದ ಮೂಲ ತಮಿಳು ಭಾಷೆ ಅಲ್ಲ!
ತಮಿಳು ಅತ್ಯಂತ ಪುರಾತನ ಭಾಷೆಯಾಗಿರಬಹುದು ಅಥವಾ ಅದು ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಪಡೆದ ಮೊದಲ ಭಾಷೆಯೂ ಆಗಿರಬಹುದು, ಆದರೆ ಕನ್ನಡದ ಮೂಲ ತಮಿಳು ಅಲ್ಲ. ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ತಮಿಳಿನಂತೆ ಕನ್ನಡ ಕೂಡ ಅತ್ಯಂತ ಹಳೆಯ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ, ಇದು 2,000 ವರ್ಷಗಳ ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇದು ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳನ್ನು ಒಳಗೊಂಡಿರುವ ದ್ರಾವಿಡ ಭಾಷಾ ಕುಟುಂಬದ ಒಂದು ಶಾಖೆ. ಭಾಷಾಶಾಸ್ತ್ರಜ್ಞರ ಪ್ರಕಾರ, ಕನ್ನಡವು ಕ್ರಿಸ್ತಪೂರ್ವ 3 ನೇ ಶತಮಾನದ ಸುಮಾರಿಗೆ ದ್ರಾವಿಡ ಭಾಷೆಯಿಂದ ವಿಕಸಿತಗೊಂಡಿತು ಎನ್ನಲಾಗಿದೆ. ಕ್ರಿಸ್ತ ಪೂರ್ವ 450 ವರ್ಷ ಪುರಾತನವಾದ ಕನ್ನಡದ ಹಲ್ಮಿಡಿ ಶಾಸನದಲ್ಲಿ ಮೂಲ ದ್ರಾವಿಡ ಭಾಷೆಯ ಪದಗಳನ್ನು ಕಾಣಬಹುದಾಗಿದೆ. ಹೀಗಾಗಿ ಕನ್ನಡವೂ ತಮಿಳಿನಂತೆಯೇ ಮೊದಲೇ ಬಳಕೆಯಲ್ಲಿತ್ತು ಎಂಬುದನ್ನು ಇದು ಸೂಚಿಸುತ್ತದೆ.
ಕನ್ನಡ ಮತ್ತು ತಮಿಳು ನಡುವಿನ ಸಂಪರ್ಕವೇನು?
ಕನ್ನಡ ಮತ್ತು ತಮಿಳು ಎರಡೂ ಭಾಷೆಗಳು ಮೂಲ-ದ್ರಾವಿಡ ಭಾಷೆಯಿಂದ ವಿಕಸನಗೊಂಡಿವೆ. ಎರಡೂ ಭಾಷೆಗಳು ಒಂದೇ ರೀತಿಯ ವ್ಯಾಕರಣ ರಚನೆಗಳು, ಪದ ರಚನೆ ಹೊಂದಿವೆ. ತಮಿಳು ಭಾಷಿಗರು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಮಿಳಕಂ ಪ್ರದೇಶದಲ್ಲಿ ಬೇರೂರಿದ್ದರೂ, ಕನ್ನಡ ಭಾಷಿಕರು ಪಶ್ಚಿಮಕ್ಕೆ ಅಂದರೆ ಈಗ ಕರ್ನಾಟಕ ಎಂದು ಕರೆಯಲ್ಪಡುವ ಸ್ಥಳಕ್ಕೆ ತೆರಳಿದರು. ಇದು ಸ್ವತಂತ್ರ ಭಾಷಾ ವಿಕಾಸಕ್ಕೆ ಕಾರಣವಾಯಿತು.
ಚಾಲುಕ್ಯರು, ಪಲ್ಲವರು ಮತ್ತು ಹೊಯ್ಸಳ ರಾಜವಂಶಗಳು ಕನ್ನಡ ಮತ್ತು ತಮಿಳು ಮಾತನಾಡುವ ಪ್ರದೇಶಗಳನ್ನು ಆಳ್ವಿಕೆ ನಡೆಸಿದ್ದ ಕಾರಣ ಎರಡೂ ಭಾಷೆಗಳು ರಾಜಕೀಯ ಇತಿಹಾಸವನ್ನೂ ಹಂಚಿಕೊಂಡಿವೆ. ಚೋಳ ರಾಜವಂಶ (9–13ನೇ ಶತಮಾನ) ಕರ್ನಾಟಕದ ಕೆಲವು ಭಾಗಗಳನ್ನು ಆಳ್ವಿಕೆ ಮಾಡಿತ್ತು. ಈ ಸಂದರ್ಭದಲ್ಲಿ ತಮಿಳು ಶಾಸನಗಳಿಗೆ ಯಾವುದೇ ಮನ್ನಣೆ ಸಿಕ್ಕಿರಲಿಲ್ಲ. ಆದರೆ ಹೊಯ್ಸಳ ರಾಜವಂಶ (10 ನೇ–14 ನೇ ಶತಮಾನ) ತಮಿಳು ಪ್ರದೇಶಗಳ ಮೇಲೆ ಪ್ರಭಾವ ಬೀರಿತು, ಈ ಸಂದರ್ಭದಲ್ಲಿ ಭಾಷಾ ವಿನಿಮಯವನ್ನು ಬೆಳೆಸಿತು.
ವಿಜಯನಗರ ಸಾಮ್ರಾಜ್ಯದಲ್ಲಿ (14-17 ನೇ ಶತಮಾನ), ಕನ್ನಡ ಮತ್ತು ತಮಿಳು ಸಾಹಿತ್ಯ ಎರಡೂ ಒಂದೇ ಆಸ್ಥಾನದ ಆಶ್ರಯದಲ್ಲಿ ಪೋಷಿಸಲ್ಪಟ್ಟವು. ಉದಾಹರಣೆಗೆ, ರಾಜಮನೆತನದ ಆಸ್ಥಾನಗಳು ಮತ್ತು ದೇವಾಲಯಗಳು ಭಾಷೆಗಳ ಸಮ್ಮಿಳನ ಕೇಂದ್ರ ಬಿಂದುಗಳಾಗಿದ್ದವು. ಅಲ್ಲಿ ಕವಿಗಳು ಮತ್ತು ವಿದ್ವಾಂಸರು ಹೆಚ್ಚಾಗಿ ಎರಡೂ ಭಾಷೆಗಳನ್ನು ಮಾತನಾಡುತ್ತಿದ್ದರು. ಆಡಳಿತ, ಧಾರ್ಮಿಕ ಮತ್ತು ಕಲಾತ್ಮಕ ವಿನಿಮಯಗಳು ಸಾಮಾನ್ಯವಾಗಿದ್ದವು. ಉದಾಹರಣೆಗೆ ಕಾಂಚೀಪುರಂ ಅಥವಾ ಬೇಲೂರು-ಹಳೇಬೀಡುಗಳಲ್ಲಿನ ದೇವಾಲಯಗಳು ಕನ್ನಡ ಮತ್ತು ತಮಿಳು ಎರಡರಲ್ಲೂ ಶಾಸನಗಳನ್ನು ಹೊಂದಿವೆ.
ತಮಿಳು ಹೇಗೆ ಹುಟ್ಟಿಕೊಂಡಿತು?
ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆಯಾಗಿದ್ದು, 2,500 ವರ್ಷಗಳಿಗೂ ಹೆಚ್ಚು ಹಳೆಯದಾಗಿದೆ ಮತ್ತು ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡಿದೆ. ಭಾಷಾಶಾಸ್ತ್ರಜ್ಞರು ನಂಬುವಂತೆ ದ್ರಾವಿಡ ಭಾಷೆಗಳು ಭಾರತದಲ್ಲಿ ಇಂಡೋ ಆರ್ಯನ್ನರ ಆಗಮನಕ್ಕಿಂತಲೂ ಮೊದಲೇ ಬಳಕೆಯಲ್ಲಿತ್ತು ಎನ್ನಲಾಗಿದೆ. ಸಂಗಮ್ ಸಾಹಿತ್ಯದಲ್ಲಿ ಮೊದ ಮೊದಲಿಗೆ ತಮಿಳು ಬಳಕೆಯಾಯಿತು. ಪ್ರಾಚೀನ ತಮಿಳಕಂನಲ್ಲಿ (ಆಧುನಿಕ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳು) ಪಾಂಡ್ಯ, ಚೇರ ಮತ್ತು ಚೋಳ ರಾಜರ ಆಶ್ರಯದಲ್ಲಿ ಸಂಗಮ್ ಪಠ್ಯಗಳನ್ನು ರಚಿಸಲಾಯಿತು.
ಕ್ರಮೇಣ, ತಮಿಳು ಶಾಸ್ತ್ರೀಯ ತಮಿಳಾಗಿ ವಿಕಸನಗೊಂಡಿತು, ಇದನ್ನು ಧಾರ್ಮಿಕ ಮತ್ತು ತಾತ್ವಿಕ ಪಠ್ಯಗಳಲ್ಲಿ ಬಳಸಲಾಗುತ್ತದೆ. ತದ ನಂತರ ಭಕ್ತಿ ಚಳುವಳಿ (6 ನೇ - 9 ನೇ ಶತಮಾನ CE) ಸಂದರ್ಭದಲ್ಲಿ ತಮಿಳಿನಲ್ಲೇ ನಾಯನಾರ್‌ಗಳು ಮತ್ತು ಆಳ್ವಾರರು ಶಿವ ಮತ್ತು ವಿಷ್ಣುವಿಗೆ ಭಕ್ತಿ ಕಾವ್ಯವನ್ನು ರಚಿಸಿದರು. ಬರು ಬರುತ್ತಾ ತಮಿಳು, ಶೈವ ಸಿದ್ಧಾಂತ ಮತ್ತು ವೈಷ್ಣವ ದೇವತಾಶಾಸ್ತ್ರದ ಭಾಷೆಯಾಗಿ ಬದಲಾಗುತ್ತಾ, ವೈದಿಕ/ಸಂಸ್ಕೃತ ಪ್ರಾಬಲ್ಯಕ್ಕೆ ವಿರೋಧ ವ್ಯಕ್ತವಾಯಿತು. ಮಧ್ಯಕಾಲೀನ ಯುಗದಲ್ಲಿ, ಚೋಳ ಚಕ್ರವರ್ತಿಗಳು (ವಿಶೇಷವಾಗಿ ರಾಜರಾಜ ಚೋಳ I ಮತ್ತು ರಾಜೇಂದ್ರ ಚೋಳ I) ತಮಿಳು ಶಾಸನಗಳು, ದೇವಾಲಯ ವಾಸ್ತುಶಿಲ್ಪ ಮತ್ತು ಸಾಹಿತ್ಯವನ್ನು ಉತ್ತೇಜಿಸಿದರು. ಬ್ರಿಟಿಷ್ ಆಳ್ವಿಕೆಯಲ್ಲಿ, ಮುದ್ರಿತ ನಿಘಂಟುಗಳು ಮತ್ತು ಕೆಲವು ಇಂಗ್ಲಿಷ್ ಪದಗಳಲ್ಲಿ ತಮಿಳನ್ನು ಬಳಸಲಾಗುತ್ತಿತ್ತು. ಇದು ದ್ರಾವಿಡ ರಾಜಕೀಯದ ಅವಿಭಾಜ್ಯ ಅಂಗವಾಯಿತು.
ಈ ಸುದ್ದಿಯನ್ನೂ ಓದಿ: Kamal Haasan: ಕನ್ನಡ ವಿವಾದದ ಬೆನ್ನಲ್ಲೇ ಬಿಗ್ ಅಪ್‌ಡೇಟ್ ಕೊಟ್ಟ ಕಮಲ್ ಹಾಸನ್; ರಾಜ್ಯ ಸಭೆ ಚುನಾವಣೆಗೆ ಸಜ್ಜು!
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಏನು?
ತಮ್ಮ 'ಥಗ್ ಲೈಫ್' ಚಿತ್ರದ ಪ್ರಚಾರದ ವೇಳೆ "ಕನ್ನಡ ತಮಿಳಿನಿಂದ ಹುಟ್ಟಿತು" ಎಂದು ಕಮಲ್ ಹಾಸನ್ ಹೇಳಿಕೆ ನೀಡಿರುವುದು ಕನ್ನಡಿಗರನ್ನು ಕೆರಳಿಸಿದೆ. ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಕೂಡ ಹಾಜರಿದ್ದ ಈ ಕಾರ್ಯಕ್ರಮದಲ್ಲಿ ಇದು ನನ್ನ ಕುಟುಂಬ. ಅದಕ್ಕಾಗಿಯೇ ಅವರು ಶಿವರಾಜಕುಮಾರ್ ಇಲ್ಲಿಗೆ ಬಂದಿದ್ದಾರೆ. ನಿಮ್ಮ ಭಾಷೆ (ಕನ್ನಡ) ತಮಿಳಿನಿಂದ ಹುಟ್ಟಿದೆ, ಆದ್ದರಿಂದ ನೀವು ಕೂಡ ಸೇರಿದ್ದೀರಿ" ಎಂದು ಹಾಸನ್ ಹೇಳಿದ್ದರು.