Kamal Haasan: ಕನ್ನಡ ವಿವಾದದ ಬೆನ್ನಲ್ಲೇ ಬಿಗ್ ಅಪ್‌ಡೇಟ್ ಕೊಟ್ಟ ಕಮಲ್ ಹಾಸನ್; ರಾಜ್ಯ ಸಭೆ ಚುನಾವಣೆಗೆ ಸಜ್ಜು!
ನಟ-ರಾಜಕಾರಣಿ ಕಮಲ್ ಹಾಸನ್ ಅವರು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಬೆಂಬಲದೊಂದಿಗೆ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ಚುನಾವಣಾ ಒಪ್ಪಂದದ ಪ್ರಕಾರ, ಹಾಸನ್ ಅವರನ್ನು ಮೈತ್ರಿಕೂಟದ ಮೂಲಕ ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಸಲಾಗುವುದು ಎಂದು ಡಿಎಂಕೆ ತಿಳಿಸಿದೆ.


ಚೆನ್ನೈ: ನಟ-ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಬೆಂಬಲದೊಂದಿಗೆ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ಚುನಾವಣಾ ಒಪ್ಪಂದದ ಪ್ರಕಾರ, ಹಾಸನ್ ಅವರನ್ನು ಮೈತ್ರಿಕೂಟದ ಮೂಲಕ ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಸಲಾಗುವುದು ಎಂದು ಡಿಎಂಕೆ ತಿಳಿಸಿದೆ. ಲೋಕಸಭಾ ಚುನಾವಣೆಗೆ ಮುನ್ನ ಮಾರ್ಚ್ 2024 ರಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ ಪಕ್ಷವು ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಒಕ್ಕೂಟ (ಎಸ್‌ಪಿಎ)ಕ್ಕೆ ಔಪಚಾರಿಕವಾಗಿ ಸೇರಿದ ನಂತರ ಅವರಿಗೆ ರಾಜಕೀಯ ಸ್ಥಾನಮಾನದ ಭರವಸೆಯನ್ನು ನೀಡಲಾಗಿತ್ತು.
ರಾಜಕೀಯ ಪಕ್ಷಗಳ ಮೈತ್ರಿ ನಂತರ ತಮಿಳುನಾಡಿನ ಎಲ್ಲಾ 39 ಸಂಸದೀಯ ಸ್ಥಾನಗಳನ್ನು ಗೆದ್ದುಕೊಂಡಿತು. ಜೂನ್ ಮತ್ತು ಜುಲೈನಲ್ಲಿ ತಮಿಳುನಾಡಿನಲ್ಲಿ ಒಟ್ಟು ಆರು ಸ್ಥಾನಗಳು ಖಾಲಿಯಾಗಲಿವೆ. ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟವು ಖಾಲಿ ಇರುವ ಆರು ಸ್ಥಾನಗಳಲ್ಲಿ ನಾಲ್ಕನ್ನು ಗೆಲ್ಲುವ ಸಾಧ್ಯತೆ ಇದೆ, ಆದರೆ ಎಐಎಡಿಎಂಕೆ ಮತ್ತು ಅದರ ಮೈತ್ರಿಕೂಟದ ಪಾಲುದಾರ ಪಿಎಂಕೆ, ಪ್ರಸ್ತುತ ಹೊಂದಿರುವ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿವೆ. ಡಿಎಂಕೆ ಗೆಲ್ಲುವ ಸಾಧ್ಯತೆಯಿರುವ ನಾಲ್ಕು ಸ್ಥಾನಗಳಲ್ಲಿ ಒಂದು ಕಮಲ್ ಹಾಸನ್‌ಗೆ ನೀಡಲಾಗುವುದು ಎಂದು ತಿಳಿದು ಬಂದಿದೆ.
ಕನ್ನಡ ಭಾಷೆಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ವಿವಾದ ಸೃಷ್ಠಿಸಿದ ಒಂದು ದಿನದ ಬಳಿಕ ಈ ವಿಷಯ ಹೊರಬಿದ್ದಿದೆ. ಬೆಂಗಳೂರಿನಲ್ಲಿ ನಡೆದ ಅವರ ಮುಂಬರುವ ಚಿತ್ರ ಥಗ್ ಲೈಫ್‌ನ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಮಾಡಿದ ಈ ಹೇಳಿಕೆಗಳು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಕನ್ನಡ ಕಾರ್ಯಕರ್ತರು ಮತ್ತು ರಾಜಕೀಯ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿವೆ. ತಮ್ಮ ಚಿತ್ರ ಥಗ್ ಲೈಫ್ ಬಿಡುಗಡೆಗೆ ಕೆಲವೇ ವಾರಗಳ ಮೊದಲು "ಕನ್ನಡ ತಮಿಳಿನಿಂದ ಹುಟ್ಟಿದೆ" ಎಂದು ನಟ ವಿವಾದವನ್ನು ಸೃಷ್ಠಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kamal Haasan: ತಮಿಳಿನಿಂದಲೇ ಕನ್ನಡ ಹುಟ್ಟಿತು ಎಂದ ಕಮಲ್ ಹಾಸನ್; ಭುಗಿಲೆದ್ದ ವಿವಾದ
ನಟ ಶಿವರಾಜ್ಕುಮಾರ್ ಎದುರು ಡಾ.ರಾಜ್ಕುಮಾರ್ ಅವರ ಬಗ್ಗೆ ತಮಗಿರುವ ಗೌರವ ಹಂಚಿಕೊಂಡಿದ್ದ ಕಮಲ್ ಹಾಸನ್ ಅವರು ನಿಮ್ಮ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದಿದ್ದಾರೆ. ಕನ್ನಡಿಗರ ಪ್ರೀತಿ, ಗೌರವಕ್ಕೆ ವಂದಿಸುತ್ತಲೇ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದು ಕಮಲ್ ಹಾಸನ್ ಹೇಳಿದ್ದಕ್ಕೆ ವಿರೋಧ ವ್ಯಕ್ತವಾಗಿದೆ.