2025ರ ಐಪಿಎಲ್ ಬಳಿಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಬಲ್ಲ ಟಾಪ್ 5 ಆಟಗಾರರು!
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಅವಧಿ ಬಹುತೇಕ ಮುಕ್ತಾಯವಾಗಿದೆ. ಹಲವು ಯುವ ಪ್ರತಿಭೆಗಳ ಜೊತೆಗೆ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಲು ಕೂಡ ಕೆಲ ಆಟಗಾರರು ಐಪಿಎಲ್ ಮೂಲಕ ತಯಾರಿ ನಡೆಸುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿರುವ ಆಟಗಾರರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.



2025ರ ಐಪಿಎಲ್
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಹಲವು ಯುವ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಇದರ ನಡುವೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಕೆಲ ಸ್ಟಾರ್ ಆಟಗಾರರು ಕೂಡ ವಿವಿಧ ತಂಡಗಳ ಪರ ಆಡುತ್ತಿದ್ದಾರೆ. ಯಾರೆಲ್ಲಾ ಆಟಗಾರರು, ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆಂದು ಇಲ್ಲಿ ತಿಳಿದುಕೊಳ್ಳೋಣ.

1.ಕರುಣ್ ನಾಯರ್
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 89 ರನ್ಗಳನ್ನು ಸಿಡಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕರುಣ್ ನಾಯರ್ ಕೂಡ ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಇವರು 2022ರಲ್ಲಿ ಕೊನೆಯ ಬಾರಿ ಐಪಿಎಲ್ ಪಂದ್ಯವನ್ನು ಆಡಿದ್ದರು. ಇದೀಗ ಮೂರು ವರ್ಷಗಳ ಬಳಿಕ ತಮ್ಮ ಕಮ್ಬ್ಯಾಕ್ ಪಂದ್ಯದಲ್ಲಿಯೇ ಸ್ಪೋಟಕ ಬ್ಯಾಟ್ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ಅವಕಾಶ ಸಿಗಬಹುದೆಂಬ ವಿಶ್ವಾಸದಲ್ಲಿದ್ದಾರೆ.

2. ಮೊಹಮ್ಮದ್ ಸಿರಾಜ್
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಅದರಂತೆ ಅವರು ಗುಜರಾತ್ ಟೈಟನ್ಸ್ ಪರ 2025ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ. ತಮ್ಮ ಬೌಲಿಂಗ್ನಲ್ಲಿ ಹೊಸ ಹೊಸ ಕೌಶಲವನ್ನು ಅವರು ಸೇರಿಸಿಕೊಂಡಿದ್ದಾರೆ. ಇಲ್ಲಿಯ ತನಕ ಆಡಿದ 6 ಪಂದ್ಯಗಳಿಂದ 10 ವಿಕೆಟ್ಗಳನ್ನು ಕಿತ್ತಿದ್ದಾರೆ.

3. ಸಾಯಿ ಸುದರ್ಶನ್
2023ರಲ್ಲಿ ಸಾಯಿ ಸುದರ್ಶನ್ ಅವರು ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ, ನಂತರ ಅವರು ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ ಇದೀಗ ಅವರು ಗುಜರಾತ್ ಟೈಟನ್ಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಇಲ್ಲಿಯವರೆಗೂ ಆಡಿದ ಆರು ಪಂದ್ಯಗಳಲ್ಲಿ ಅವರು 329 ರನ್ಗಳನ್ನು ಸಿಡಿಸಿದ್ದು, ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

4. ಶಾರ್ದುಲ್ ಠಾಕೂರ್
2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ಶಾರ್ದುಲ್ ಠಾಕೂರ್ ಅವರನ್ನು, ತಡವಾಗಿ ಲಖನ ಸೂಪರ್ ಜಯಂಟ್ಸ್ ತಂಡ ಖರೀದಿಸಿತ್ತು. ಮೊಹ್ಸಿನ್ ಖಾನ್ ಅವರು ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಶಾರ್ದುಲ್ ಠಾಕೂರ್ ಬಂದಿದ್ದರು. ಅದರಂತೆ ಸಿಕ್ಕ ಅವಕಾಶದಲ್ಲಿ ಅವರು ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಆಡಿದ 7 ಪಂದ್ಯಗಳಿಂದ 11 ವಿಕೆಟ್ಗಳನ್ನು ಕಬಳಿಸಿದ್ದಾರೆ.

5. ರಿಯಾನ್ ಪರಾಗ್
ಗಾಯದ ಕಾರಣ ರಾಜಸ್ಥಾನ್ ರಾಯಲ್ಸ್ ಆಲ್ರೌಂಡರ್ ರಿಯಾನ್ ಪರಾಗ್ ಅವರನ್ನು ಭಾರತ ಏಕದಿನ ಮತ್ತು ಟಿ20 ತಂಡಗಳಿಂದ ಈ ಹಿಂದೆ ಕೈ ಬಿಡಲಾಗಿತ್ತು. ಆದರೆ, 2025ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರೆ, ಅವರು ಮತ್ತೆ ಟೀಮ್ ಇಂಡಿಯಾಗೆ ಮರಳುವ ಸಾಧ್ಯತೆ ಇದೆ. ಸದ್ಯ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಕೀ ಬ್ಯಾಟ್ಸ್ಮನ್ ಆಗಿದ್ದಾರೆ.