ಬೆಂಗಳೂರು: ʼಕೆಜಿಎಫ್ʼ (KGF) ಸರಣಿ ಸಿನಿಮಾಗಳ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನು ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಇದೀಗ ಮತ್ತೊಂದು ಬಹುದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನು ತಿದ್ದಲು ಹೊರಟಿದ್ದಾರೆ. ಹೌದು, ಈಗಾಗಲೇ ಹೊರಬಂದಿರುವ 'ಕೆಜಿಎಫ್' ಮತ್ತು 'ಕೆಜಿಎಫ್ 2' ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು, 'ಕೆಜಿಎಫ್ 3' (KGF 3 Update) ಮೂಲಕ ಮತ್ತೊಮ್ಮೆ ರಾಕಿ ಭಾಯ್ ಸಾಮ್ರಾಜ್ಯ ಕಟ್ಟಿಕೊಡಲು ಪ್ರಶಾಂತ್ ನೀಲ್ ಮತ್ತು ಯಶ್ (Yash) ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕುಮಾರ್ (Ajith Kumar) ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರ ಬಿದ್ದಿಲ್ಲವಾದರೂ ಈಗಾಗಲೇ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ಇಡೀ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಜಿತ್ ಕೂಡ ಒಬ್ಬರು. ಅವರು ಒಂದೆರಡು ತೆಲುಗು ಮತ್ತು ಹಿಂದಿ ಚಿತ್ರ ಮಾಡಿದ್ದು ಬಿಟ್ಟರೆ ಮಿಕ್ಕಂತೆ ತಮಿಳು ಸಿನಿಮಾಗಳಲ್ಲೇ ನಟಿಸಿದ್ದಾರೆ. ಅದಾಗ್ಯೂ ಅವರಿಗೆ ದೇಶ-ವಿದೇಶಗಳಲ್ಲಿ ಲಕ್ಷಾಂತರ ಫ್ಯಾನ್ಸ್ ಇದ್ದಾರೆ. ಮಾಸ್ ಚಿತ್ರಗಳಲ್ಲಿ, ಆ್ಯಕ್ಷನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅವರು ತಮ್ಮ ಸ್ಟೈಲಿಶ್ ಲುಕ್, ವಿಶಿಷ್ಟ ಮ್ಯಾನರಿಸಂನಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಇಂತಿಪ್ಪ ಅಜಿತ್ ಇದೀಗ ಯಶ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವಾಗಲೇ ನಿರೀಕ್ಷೆ ಗರಿಗೆದರತೊಡಗಿದೆ.
ಈ ಸುದ್ದಿಯನ್ನೂ ಓದಿ: KGF Chapter 3: ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್; 'ಕೆಜಿಎಫ್ 3' ಬರೋದು ಪಕ್ಕಾ: ಮಾಳವಿಕಾ ಅವಿನಾಶ್ ಕೊಟ್ರು ಬಿಗ್ ಅಪ್‌ಡೇಟ್
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್:
ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಾರಾ ಅಜಿತ್?
ಪ್ರಶಾಂತ್ ನೀಲ್ ಸದ್ಯ ಪ್ಯಾನ್ ಇಂಡಿಯಾ ಗುರುತಿಸಿಕೊಳ್ಳುವ ನಿರ್ದೇಶಕರಾಗಿ ಬದಲಾಗಿದ್ದಾರೆ. ʼಕೆಜಿಎಫ್ 2ʼ ಚಿತ್ರದ ಬಳಿಕ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ʼಸಲಾರ್ʼ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿ ಮತ್ತೊಮ್ಮೆ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಇದೀಗ ಅಜಿತ್ ಅವರನ್ನು ಕನ್ನಡಕ್ಕೆ ಕರೆತರುವ ಸಾಹಸಕ್ಕೆ ಮುಂದಾಗಿದ್ದಾರೆ. ಅಜಿತ್ ಅವರ 2 ಚಿತ್ರಗಳನ್ನು ನಿರ್ದೇಶಿಸಲು ಪ್ರಶಾಂತ್ ನೀಲ್ ಮುಂದಾಗಿದ್ದಾರೆ ಎನ್ನಲಾಗಿತ್ತು. ಅದರಲ್ಲಿ ʼಕೆಜಿಎಫ್ 3ʼ ಕೂಡ ಒಂದು ಎನ್ನುವ ಸುದ್ದಿ ಹಬ್ಬಿದೆ.
ʼಕೆಜಿಎಫ್ 3ʼಯಲ್ಲಿ ಅಜಿತ್‌ಗೆ ಯಾವ ಪಾತ್ರ?
ಮೂಲಗಳ ಪ್ರಕಾರ ʼಕೆಜಿಎಫ್ 3ʼರಲ್ಲಿ ಅಜಿತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ತೆರೆಮೇಲೆ ಕೆಲವೇ ಹೊತ್ತು ಕಾಣಿಸಿಕೊಂಡರೂ ಪವರ್‌ಫುಲ್ ವಿಲನ್ ಆಗಿ ಯಶ್ ವಿರುದ್ಧ ತೊಡೆತಟ್ಟಲಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ನೀಲ್ ಅವರ ಮತ್ತೊಂದು ಚಿತ್ರದಲ್ಲಿ ಅಜಿತ್ ನಾಯಕನಾಗಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಸದ್ಯ ಇದೆಲ್ಲ ವದಂತಿ ರೂಪದಲ್ಲೇ ಇದೆ. ಆದಷ್ಟು ಬೇಗ ಈ ಗಾಳಿಸುದ್ದಿ ನಿಜವಾಗಲಿ ಎನ್ನುವುದು ಅಭಿಮಾನಿಗಳ ಹಾರೈಕೆ. ಈ ಹಿಂದೆ ʼಕೆಜಿಎಫ್ 2ʼ ಚಿತ್ರದಲ್ಲಿ ಬಾಲಿವುಡ್‌ನ ಸಂಜಯ್ ದತ್, ರವೀನಾ ಟಂಡನ್ ಮುಂತಾದ ಘಟಾನಘಟಿಗಳು ನಟಿಸಿದ್ದರು. ಹೀಗಾಗಿ ಈ ಭಾಗದಲ್ಲಿ ಅಜಿತ್ ನಟಿಸಿದರೆ ಅಚ್ಚರಿ ಏನಿಲ್ಲ ಎನ್ನುವ ಮಾತೂ ಕೇಳಿ ಬಂದಿದೆ. ಸದ್ಯ ಅಜಿತ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾ ತುಂಬ ಹರಿದಾಡುತ್ತಿದೆ.
ʼಕೆಜಿಎಫ್ 3ʼ ಬರೋದು ಪಕ್ಕಾನಾ?
ಹಾಗೆ ನೋಡಿದರೆ ʼಕೆಜಿಎಫ್ 3ʼ ಬರಲಿದೆ ಎನ್ನುವ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಆಗಲಿ, ಯಶ್ ಆಗಲಿ, ಪ್ರಶಾಂತ್ ನೀಲ್ ಆಗಲಿ ಸ್ಪಷ್ಟಪಡಿಸಿಲ್ಲ. ʼಕೆಜಿಎಫ್ 2ʼ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕಥೆ ಮುಂದುವರಿಯಲಿದೆ ಎನ್ನುವ ಸೂಚನೆ ನಬೀಡಲಾಗಿತ್ತು. ಅಲ್ಲದೆ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹಿರಿಯ ನಟಿ, ʼಕೆಜಿಎಫ್ʼ ಸರಣಿ ಚಿತ್ರಗಳಲ್ಲಿ ನಟಿಸಿದ್ದ ಮಾಳವಿಕಾ ಅವಿನಾಶ್ ʼಕೆಜಿಎಫ್ 3ʼ ಸಿನಿಮಾದಲ್ಲಿ ನಟಿಸಲಿದ್ದಾಗಿ ಬಹಿರಂಗಪಡಿಸಿದ್ದರು. ಅದಾಗ್ಯೂ ಸದ್ಯಕ್ಕಂತೂ ಈ ಚಿತ್ರ ಸೆಟ್ಟೇರುವುದು ಅನುಮಾನ ಎನ್ನಲಾಗಿದೆ. ಯಶ್ ಮತ್ತು ಪ್ರಶಾಂತ್ ನೀಲ್ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು, ಅದೆಲ್ಲ ಮುಗಿದ ಬಳಿಕ ʼಕೆಜಿಎಫ್ 3ʼಯತ್ತ ಗಮನ ಹರಿಸಲಿದ್ದಾರೆ. ಒಟ್ಟಿನಲ್ಲಿ ಅಂತೆ-ಕಂತೆಯ ಮೂಲಕವೇ ʼಕೆಜಿಎಫ್ 3ʼ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದಂತು ಸುಳ್ಳಲ್ಲ.