ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Maha Kumbh 2025: ಮಹಾಕುಂಭ ಮೇಳದಲ್ಲಿ ಭಾರೀ ಕಾಲ್ತುಳಿತ; ಕನಿಷ್ಠ 15 ಮಂದಿ ಸಾವಿನ ಶಂಕೆ

ಬುಧವಾರ ಮೌನಿ ಅಮಾವಾಸ್ಯೆಯ ಪ್ರಯುಕ್ತ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತ ನಡೆದಿದ್ದು, ಕನಿಷ್ಠ 15 ಮಂದಿ ಮೃತಪಟ್ಟಿರುವ ಸಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹಾಕುಂಭ ಮೇಳದಲ್ಲಿ ಭಾರೀ ಕಾಲ್ತುಳಿತ; ಕನಿಷ್ಠ 15 ಮಂದಿ ಸಾವು?

Profile Ramesh B Jan 29, 2025 7:16 AM

ಲಖನೌ: ಬುಧವಾರ (ಜ. 29) ಮೌನಿ ಅಮಾವಾಸ್ಯೆಯ(Mauni Amavasya) ಪ್ರಯುಕ್ತ ಉತ್ತರ ಪ್ರದೇಶದ(Uttar Pradesh) ಪ್ರಯಾಗರಾಜ್‌ನಲ್ಲಿ(Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh 2025) ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ದು, ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 15 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ಮುಂಜಾನೆ 2.30ರ ವೇಳೆಗೆ ಕಾಲ್ತುಳಿತ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಮಹಾಕುಂಭ ಮೇಳದಲ್ಲಿ 'ಎರಡನೇ ಶಾಹಿ ಸ್ನಾನ'ದ ದಿನವಾದ ಮೌನಿ ಅಮಾವಾಸ್ಯೆಯಂದು ಘಾಟ್‌ಗಳು ಮತ್ತು ತ್ರಿವೇಣಿ ಸಂಗಮದಲ್ಲಿ ಭಾರಿ ಸಂಖ್ಯೆ ಜನರು ಜಮಾಯಿಸಿದ್ದರಿಂದ ಅವರನ್ನು ನಿರ್ವಹಿಸುವುದು ಮತ್ತು ನಿಯಂತ್ರಿಸುವುದು ಆಡಳಿತಕ್ಕೆ ಕಷ್ಟವಾಯಿತು ಎಂದು ವರದಿ ತಿಳಿಸಿದೆ. ಬುಧವಾರ ಪವಿತ್ರ ಸ್ನಾನ ಮಾಡಲು ಕುಂಭಮೇಳಕ್ಕೆ ಕನಿಷ್ಠ 10 ಕೋಟಿ ಮಂದಿ ಆಗಮಿಸುವ ಸಾಧ್ಯತೆ ಇದೆ. ಜನ ಸಂದಣಿ ಕಾರಣದಿಂದ ಹಲವರನ್ನು ವಾಪಸ್‌ ಕಳುಹಿಸಲಾಗುತ್ತಿದೆ.



ಹೆಚ್ಚಿನ ಜನಸಂದಣಿಯಿಂದಾಗಿ ತಡೆಗೋಡೆ ಮುರಿದ ನಂತರ ಕಾಲ್ತುಳಿತ ಸಂಭವಿಸಿದೆ ಎಂದು ಮೇಳದ ವಿಶೇಷ ಕರ್ತವ್ಯದ ಅಧಿಕಾರಿ ಆಕಾಂಕ್ಷಾ ರಾಣಾ ತಿಳಿಸಿದ್ದಾರೆ. "ಸಂಗಮ ಪ್ರದೇಶದಲ್ಲಿ ತಡೆಗೋಡೆ ಮುರಿದ ನಂತರ ಕೆಲವರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಾಲ್ತುಳಿತದ ಭಯಾನಕತೆಯನ್ನು ಕರ್ನಾಟಕದ ಮಹಿಳೆಯೊಬ್ಬರು ಪಿಟಿಐಗೆ ವಿವರಿಸಿದ್ದಾರೆ. "ನಾವು 2 ಬಸ್ಸುಗಳಲ್ಲಿ 60 ಮಂದಿ ಬಂದಿದ್ದೇವೆ. ಇದ್ದಕ್ಕಿದ್ದಂತೆ ತಳ್ಳಾಟ ಕಂಡು ಬಂತು. ಜನರ ಮಧ್ಯೆ ನಾವು ಸಿಕ್ಕಿ ಹಾಕಿಕೊಂಡೆವು. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲʼʼ ಎಂದು ಹೇಳಿದ್ದಾರೆ.

ಮಕರ ಸಂಕ್ರಾಂತಿಯಿಂದ ಕುಂಭಮೇಳ ನಡೆಯುವ ಅಷ್ಟೂ ದಿನ ನೀರಿನಲ್ಲಿ ಮಿಂದೇಳುವುದನ್ನು ‘ಪವಿತ್ರ’ ಎಂದು ಭಾವಿಸಲಾಗುತ್ತದೆ. ಆದರೆ ಅಮೃತ ಸ್ನಾನದ (ಶಾಹಿ ಸ್ನಾನ) ದಿನಗಳನ್ನು ವಿಶೇಷವಾದ ದಿನಗಳೆಂದು ಎಂದು ಪರಿಗಣಿಸಲಾಗುತ್ತದೆ.