Mahakumbh Mela Stampede: ಮಹಾ ಕುಂಭಮೇಳ ಕಾಲ್ತುಳಿತ; ಕನ್ನಡಿಗರ ನೆರವಿಗಾಗಿ ಸಹಾಯವಾಣಿ ಆರಂಭ
Mahakumbh Mela Stampede: ಕುಟುಂಬದವರು ಕುಂಭಮೇಳಕ್ಕೆ ತೆರಳಿ, ಸಂಪರ್ಕಕ್ಕೆ ಸಿಗದಿದ್ದರೆ ಸಹಾಯವಾಣಿ ಸಂಖ್ಯೆ (HELP DESK) 080-22340676 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಇನ್ನು ರಾಜ್ಯ ಸರ್ಕಾರ ಕೂಡ ಉತ್ತರ ಪ್ರದೇಶದ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಂಡಿದೆ.


ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಬೆಳಗಾವಿ ಮೂಲದ ನಾಲ್ವರು ಗಾಯಗೊಂಡು, ಹಲವರು ಗಾಯಗೊಂಡಿದ್ದಾರೆ. ಇನ್ನು ರಾಜ್ಯದಿಂದ ತೆರಳಿದ ಹಲವರು ನಾಪತ್ತೆಯಾಗಿರುವುದರಿಂದ ಅವರ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಹೀಗಾಗಿ ಕುಂಭಮೇಳದಲ್ಲಿ ತೊಂದರೆಗೆ ಸಿಲುಕಿರುವ ಕನ್ನಡಿಗರ ನೆರವಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿ (Mahakumbh Mela Stampede) ಆರಂಭಿಸಿದೆ.
ಕುಟುಂಬದವರು ಕುಂಭಮೇಳಕ್ಕೆ ತೆರಳಿ, ಸಂಪರ್ಕಕ್ಕೆ ಸಿಗದಿದ್ದರೆ ಸಹಾಯವಾಣಿ ಸಂಖ್ಯೆ (HELP DESK) 080-22340676 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಇನ್ನು ರಾಜ್ಯ ಸರ್ಕಾರ ಕೂಡ ಉತ್ತರ ಪ್ರದೇಶದ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಂಡಿದೆ.
ಕುಂಭಮೇಳ ಕಾಲ್ತುಳಿತ ದುರಂತ ಸಂಬಂಧ ರಾಜ್ಯ ಸರ್ಕಾರ ಕನ್ನಡಿಗರ ನೆರವಿಗೆ ಧಾವಿಸಿದೆ.
— DIPR Karnataka (@KarnatakaVarthe) January 29, 2025
ನಿಮ್ಮ ಕುಟುಂಬದವರು ಕುಂಭಮೇಳಕ್ಕೆ ತೆರಳಿದ್ದು, ಅವರು ನಿಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲವೇ?. ಹಾಗಾದ್ರೆ, ನಾವು ನಿಮಗಾಗಿಯೇ ಸಹಾಯವಾಣಿ ತೆರೆದಿದ್ದೇವೆ. ಸಹಾಯವಾಣಿ ಸಂಖ್ಯೆ 080-22340676 ಗೆ ಸಂಪರ್ಕ ಮಾಡಬಹುದು. #kumbhmela2025prayagraj… pic.twitter.com/T3D4lfbrUA
ಮೃತರಿಗೆ ಸಿಎಂ ಸಂತಾಪ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಮೃತಪಟ್ಟಿರುವ ಸುದ್ದಿ ಕೇಳಿ ಬೇಸರವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನು ಕಾಲ್ತುಳಿತದಲ್ಲಿ ರಾಜ್ಯದ ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ಅಧಿಕಾರಿಗಳನ್ನು ನಿಯೋಜಿಸಿದ್ದು, ನಮ್ಮವರ ರಕ್ಷಣೆಗೆ ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದೆ. ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಸ್ವಲ್ಪ ಜಾಗರೂಕತೆಯಿಂದಿರಿ ಎಂದು ಸಲಹೆ ನೀಡಿದ್ದಾರೆ.
ಮಹಾ ಕುಂಭಮೇಳ ಕಾಲ್ತುಳಿತ ದುರಂತ; ಬೆಳಗಾವಿ ಮೂಲದ ತಾಯಿ-ಮಗಳು ಸೇರಿ ನಾಲ್ವರ ಸಾವು

ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ( Mahakumbh Mela Stampede) ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿದ್ದಾರೆ. ನಗರದ ವಡಗಾವಿ ನಿವಾಸಿಗಳಾದ ತಾಯಿ-ಮಗಳಾದ ಜ್ಯೋತಿ ಹತ್ತರವಾಠ (50) ಹಾಗೂ ಮೇಘಾ ಹತ್ತರವಾಠ, ಶೆಟ್ಟಿ ಗಲ್ಲಿಯ ಅರುಣ್ ಕೋರ್ಪಡೆ, ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ ಮೃತ ದುರ್ದೈವಿಗಳು.
ಕುಂಭಮೇಳ ಕಾಲ್ತುಳಿತ ದುರ್ಘಟನೆಯಲ್ಲಿ ಬೆಳಗಾವಿ ಮೂಲದ ಹತ್ತಾರು ಜನ ಕಾಣೆಯಾಗಿದ್ದು, ಸದ್ಯ ಜಿಲ್ಲೆಯವರ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮೌನಿ ಅಮಾವಾಸ್ಯೆ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಕೋಟ್ಯಂತರ ಜನ ತೆರಳಿದ್ದಾರೆ. ಮುಂಜಾನೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಳಗಾವಿಯಿಂದ ಸುಮಾರ 60 ಜನ ಕುಂಭಮೇಳಕ್ಕೆ ತೆರಳಿದ್ದರು. ಸಾಯಿರಥ ಟ್ರಾವೆಲ್ಸ್ ಮೂಲಕ ಇವರೆಲ್ಲಾ 3 ದಿನದ ಹಿಂದೆ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ, ಕಾಲ್ತುಳಿತದಲ್ಲಿ ತಾಯಿ-ಮಗಳಾದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ ಸೇರಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ.