ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕದ ಹೊಡೆತ ಇನ್ನಷ್ಟು ಶಕ್ತವಾಗಿರಲಿದೆ; ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಯ ಪ್ರತೀಕಾರದ ಪ್ರತಿಜ್ಞೆ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್‌ ಬೆದರಿಕೆ

US-Israel-Iran War: ಅಮೆರಿಕ-ಇಸ್ರೇಲ್‌-ಇರಾನ್‌ ಯುದ್ಧ 14ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರತೆ ಕಡಿಮೆಯಾಗುವ ಬದಲು ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಇರಾನ್‌ಗೆ ಬೆದರಿಕೆ ಒಡ್ಡಿದ್ದಾರೆ. ಮಿಲಿಟರಿ ಮತ್ತು ಆರ್ಥಿಕ ಕ್ರಮದ ಮೂಲಕ ಇರಾನ್‌ನನ್ನು ಸಂಪೂರ್ಣ ನಾಶಪಡಿಸುವುದಾಗಿ ಎಚ್ಚರಿಸಿದ್ದಾರೆ.

ಅಮೆರಿಕದ ಹೊಡೆತ ಇನ್ನಷ್ಟು ಶಕ್ತವಾಗಿರಲಿದೆ: ಡೊನಾಲ್ಡ್‌ ಟ್ರಂಪ್‌

ಡೊನಾಲ್ಡ್‌ ಟ್ರಂಪ್‌ ಮತ್ತು ಮೊಜ್ತಬಾ ಖಮೇನಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Mar 13, 2026 4:27 PM

ವಾಷಿಂಗ್ಟನ್‌, ಮಾ. 13: ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸುವ ಮೂಲಕ ಆರಂಭವಾದ ಯುದ್ಧ ಇದೀಗ 14ನೇ ದಿನಕ್ಕೆ ಕಾಲಿಟ್ಟಿದ್ದು, ಪಶ್ಚಿಮ ಏಷ್ಯಾ ಸಂಘರ್ಷವಾಗಿ ಬದಲಾಗಿದೆ (US-Israel-Iran War). ಇರಾನ್‌ ಕೂಡ ಅಮೆರಿಕ, ಇಸ್ರೇಲ್‌ ಮಿತ್ರ ರಾಷ್ಟ್ರಗಳ ವಿರುದ್ಧ ತಿರುಗಿ ಬಿದ್ದಿದ್ದು ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೊಮ್ಮೆ ಇರಾನ್‌ಗೆ ಬೆದರಿಕೆ ಒಡ್ಡಿದ್ದಾರೆ. ಮಿಲಿಟರಿ ಮತ್ತು ಆರ್ಥಿಕ ಕ್ರಮದ ಮೂಲಕ ಇರಾನ್‌ನನ್ನು ಸಂಪೂರ್ಣ ನಾಶಪಡಿಸುವುದಾಗಿ ಎಚ್ಚರಿಸಿದ್ದಾರೆ.

ಟ್ರೂತ್‌ಸೋಶಿಯಲ್‌ ಪೋಸ್ಟ್‌ ಮೂಲಕ ಟ್ರಂಪ್‌ ಮತ್ತೊಮ್ಮೆ ಗುಡುಗಿದ್ದಾರೆ. ಇರಾನ್‌ನ ಸೇನೆಗೆ ಸಾಕಷ್ಟು ಹಿನ್ನಡೆಯಾಗಿದೆ ಮತ್ತು ಈ ಸಂಘರ್ಷದಲ್ಲಿ ಅಮೆರಿಕ ಮೇಲುಗೈ ಸಾಧಿಸಿದೆ ಎಂದಿದ್ದಾರೆ. ʼʼನಾವು ಎಲ್ಲ ರೀತಿಯಿಂದಲೂ ಇರಾನ್‌ನನ್ನು ಧ್ವಂಸಗೊಳಿಸುತ್ತೇವೆ. ಇರಾನ್‌ನ ಭಯೋತ್ಪಾದಕ ಆಡಳಿತವನ್ನು ಮಿಲಿಟರಿ, ಆರ್ಥಿಕ ಮತ್ತು ಇತರ ರೀತಿಯಲ್ಲಿ ಸಂಪೂರ್ಣವಾಗಿ ನಾಶಪಡಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ದಾಳಿ ಇನ್ನಷ್ಟು ತೀವ್ರಗೊಳ್ಳುವ ಸೂಚನೆ ನೀಡಿದ್ದಾರೆ.

ಟ್ರಂಪ್‌ ಹೊಸ ಬೆದರಿಕೆ:



ಇರಾನ್‌ನ ಸೇನಾ ಸಾಮರ್ಥ್ಯ ತೀವ್ರವಾಗಿ ಕುಸಿದಿವೆ ಎಂದು ಟ್ರಂಪ್ ಹೇಳಿದ್ದಾರೆ. "ಇರಾನ್‌ನ ನೌಕಾಪಡೆ ನಾಶವಾಗಿದೆ. ಅವರ ವಾಯುಪಡೆಯ ಶಕ್ತಿ ಕುಂದುತ್ತಿದೆ. ಕ್ಷಿಪಣಿಗಳು, ಡ್ರೋನ್‌ಗಳು ನಾಶವಾಗುತ್ತಿವೆ ಮತ್ತು ಅವರ ನಾಯಕರನ್ನು ಹೊಡೆದುರುಳಿಸಲಾಗುತ್ತಿದೆʼʼ ಎಂದಿದ್ದಾರೆ.

ಹೊರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಆತಂಕ: ಇರಾನಿನ 16 ದೋಣಿ ನಾಶ

ಇರಾನ್‌ ವಿರುದ್ಧದ ಹೋರಾಟವನ್ನು ಮುಂದುವರಿಸಲು ಅಮೆರಿಕವು ಅಗಾಧ ಮಿಲಿಟರಿ ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೊಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. "ನಮ್ಮಲ್ಲಿ ಸಾಟಿಯಿಲ್ಲದ ಫೈರ್‌ಪವರ್, ಅನಿಯಮಿತ ಮದ್ದುಗುಂಡುಗಳು ಇವೆ. ಇರಾನ್‌ ನಾಯಕರು 47 ವರ್ಷಗಳಿಂದ ಪ್ರಪಂಚದಾದ್ಯಂತ ಮುಗ್ಧ ಜನರನ್ನು ಕೊಲ್ಲುತ್ತಿದ್ದಾರೆ. ಈಗ ನಾನು ಅಮೆರಿಕದ 47ನೇ ಅಧ್ಯಕ್ಷನಾಗಿ, ಅವರನ್ನು ಕೊಲ್ಲುತ್ತಿದ್ದೇನೆ. ಹಾಗೆ ಮಾಡುವುದು ಎಂತಹ ದೊಡ್ಡ ಗೌರವʼʼ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇರಾನ್‌ ಶರಣಾಗುತ್ತಿದೆ ಎಂದಿದ್ದ ಟ್ರಂಪ್‌

2 ದಿನಗಳ ಹಿಂದೆ ಜಿ7 ರಾಷ್ಟ್ರಗಳ ನಾಯಕರೊಂದಿಗೆ ಮಾತನಾಡಿದ ಟ್ರಂಪ್‌, ಇರಾನ್‌ ಸದ್ಯದಲ್ಲೇ ಶರಣಾಗಲಿದೆ ಎಂದಿದ್ದರು. ಆದರೆ ಇರಾನ್‌ ತನ್ನ ದಾಳಿಯನ್ನು ಶಕ್ತವಾಗಿಯೇ ಮುಂದುವರಿಸಿದೆ. ಅಲ್ಲದೆ ನೂತನ ಸರ್ವೋಚ್ಚ ನಾಯಕನಾಗಿ ಅಯ್ಕೆಯಾದ ಮೊಜ್ತಬಾ ಖಮೇನಿ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ. ಸರ್ವೋಚ್ಚ ನಾಯಕನಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಅವರು, ''ಕೊಲ್ಲಿ ಪ್ರದೇಶಗಳಲ್ಲಿನ ಸೇನಾ ನೆಲೆಗಳನ್ನು ಕೂಡಲೇ ಅಮೆರಿಕ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಶಕ್ತವಾಗಿ ದಾಳಿ ನಡೆಸುತ್ತೇವೆʼʼ ಎಂಬ ಸಂದೇಶ ರವಾನಿಸಿದ್ದಾರೆ.

ಅಮೆರಿಕದ ವಿರುದ್ಧ ಸಿಡಿದೆದ್ದ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ; ಪ್ರತೀಕಾರದ ಎಚ್ಚರಿಕೆ

ಇರಾನ್‌ನಲ್ಲಿ ಹರಿದ ನೆತ್ತರಿಗೆ ಪ್ರತೀಕಾರ ತೀರಿಸುವುದಾಗಿಯೂ ಹೊರ್ಮುಜ್‌ ಜಲಸಂಧಿ ಮುಚ್ಚುವುದಾಗಿಯೂ ಗುಡುಗಿದ್ದಾರೆ. ಇದರೊಂದಿಗೆ ಜಾಗತಿಕ ತೈಲ ಬಿಕ್ಕಟ್ಟು ಮತ್ತೆಯೂ ಮುಂದುವರಿಯುವ ಸಾಧ್ಯತೆ ಇದೆ. ಭಾರತ ಆಮದು ಮಾಡಿಕೊಳ್ಳುವ ಶೇ. 90ರಷ್ಟು ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ಇಂಧನ ಹೊರ್ಮುಜ್‌ ಜಲಸಂಧಿಯಿಂದಲೇ ಬರುತ್ತಿದೆ. ಹೀಗಾಗಿ ಭಾರತ ಹೊರ್ಮುಜ್‌ ಜಲಸಂಧಿಯ ಬಿಕ್ಕಟ್ಟು ಪರಿಹಾರಕ್ಕಾಗಿ ಇರಾನ್‌ ಜತೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.