ಬೆಂಗಳೂರು, ಜ. 16, 2025: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಇನ್ಮುಂದೆ ನಗುವಿನ ಹಬ್ಬ ಶುರುವಾಗ್ತಿದೆ. ಮಜಾ ಟಾಕೀಸ್ (Maja Talkies) ಮತ್ತೆ ಬರ್ತಿದೆ. ಸೀರಿಯಲ್ ನೋಡಿ ಬೋರ್ ಆಗಿದೆ, ಡಾನ್ಸ್, ಮ್ಯೂಜಿಕ್ ಮಧ್ಯೆ ಒಂದು ನಗಿಸುವ ಶೋ ಅವಶ್ಯಕತೆ ಇದೆ ಎನ್ನುತ್ತಿದ್ದ ವೀಕ್ಷಕರಿಗೆ ಸೃಜನ್ ಲೋಕೇಶ್ (Srujan Lokesh) ಗುಡ್‌ನ್ಯೂಸ್ ನೀಡಿದ್ದಾರೆ. ಒಂದಿಷ್ಟು ವರ್ಷ ಬ್ರೇಕ್ ಪಡೆದಿದ್ದ ಮಜಾ ಟಾಕೀಸ್ ಮತ್ತೆ ಶುರುವಾಗ್ತಿದೆ. ಕಲರ್ಸ್ ಕನ್ನಡ ಈಗಾಗಲೇ ಪ್ರೋಮೋ ಬಿಡುಗಡೆ ಮಾಡಿದೆ. ಬಿಗ್ ಬಾಸ್ ಸೀಸನ್ 11 ಕೊನೆಯ ಹಂತದಲ್ಲಿದ್ದು, ಕೆಲವೇ ದಿನದಲ್ಲಿ ಮುಗಿಯಲಿದೆ. ಅದಾದ್ಮೇಲೆ ಏನು ಎಂಬ ಪ್ರಶ್ನೆಗೆ ಉತ್ತರ ಈಗಾಗಲ್ಲೇ ಸಿಕ್ಕಿದ್ದು, ಇದೀಗ ಮಜಾ ಟಾಕೀಸ್ ಯಾವಾಗಿನಿಂದ ಶುರುವಾಗಲಿದೆ ಎಂಬ ಮಾಹಿತಿ ಜೊತೆ ಯಾರೆಲ್ಲ ಇರಲಿದ್ದಾರೆ ಎಂಬುದು ಗೊತ್ತಾಗಿದೆ.
ಹೌದು, ಈಗಾಗಲೇ ಟೆನ್ಷನ್ ಬಿಟ್ಟಾಕಿ, ನಗೋಕೆ ರೆಡಿಯಾಗಿ ಎಂಬ ಶೀರ್ಷಿಕೆಯಲ್ಲಿ ಮಜಾ ಟಾಕೀಸ್ ಪ್ರೋಮೋ ಬಿಡುಗಡೆಯಾಗಿದೆ. ಇದ್ರಲ್ಲಿ ಗಂಡ, ಹೆಂಡತಿ ಇಡೀ ದಿನ ಮನೆ ಕೆಲಸ, ಕಚೇರಿ ಅದು ಇದು ಅಂತ ಬ್ಯುಸಿಯಾಗಿ ಟೆನ್ಷನ್ ಮಾಡ್ಕೊಳ್ಳೋದನ್ನು ನೋಡ್ಬಹುದು. ಕೊನೆಯಲ್ಲಿ ಟಿವಿಯಲ್ಲಿ ಬರುವ ಸೃಜನ್, ನಿಮ್ಮ ಯಾವುದೇ ಸಮಸ್ಯೆಗೆ ನಗುವಿನ ಮೂಲಕ ಪರಿಹಾರ ನಮ್ಮಲ್ಲಿದೆ. ಕರ್ನಾಟಕದ ನಂಬರ್ ಒನ್ ಕಾಮಿಟಿ ಟಾಕ್ ಶೋ ಮಜಾ ಟಾಕೀಸ್ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಎಂಬ ಮಾಹಿತಿ ನೀಡ್ತಾರೆ.
ಅಲ್ಲದೇ ಸದ್ಯ ಹೊಸ ಸೀಸನ್ ವೀಕ್ಷಕರನ್ನು ಎಷ್ಟು ಸೆಳೆಯುತ್ತೆ, ಯಾರೆಲ್ಲ ಕಲಾವಿದರು ಕಾಣಿಸಿಕೊಳ್ತಾರೆ ಎಂಬ ಕೂತುಹಲಕ್ಕೆ ತೆರೆ ಬಿದ್ದಿದ್ದು, ಈ ಬಾರಿಯ ಮಜಾ ಟಾಕೀಸ್ನಲ್ಲಿ ಬಿಗ್ಬಾಸ್ ಖ್ಯಾತಿಯ ತುಕಾಲಿ ಸಂತೋಷ್, ವಿನೋದ್ ಗೊಬ್ರಗಾಲ, ಪ್ರಿಯಾಂಕಾ, ಕುರಿ ಪ್ರತಾಪ್, ಪಿಕೆ, ಶಿವು, ವಿಶ್ವಾಸ್, ಚಂದ್ರಪ್ರಭ ಮೊದಲಾದ ಕಲಾವಿದರಿದ್ದಾರೆ.
ಈ ಬಾರಿಯ ವಿಶೇಷ ಎಂಬಂತೆ ಅಗ್ನಿಸಾಕ್ಷಿ ಖ್ಯಾತಿಯ ಚಂದ್ರಿಕಾ ಅಲಿಯಾಸ್ ಪ್ರಿಯಾಂಕಾ ಕೂಡ ಮಜಾ ಟಾಕೀಸ್ಗೆ ಎಂಟ್ರಿ ಕೊಟ್ಟಿದ್ದು, ಸೀರಿಯಲ್ಗಳಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಇದೀಗ ಹಾಸ್ಯ ನಟಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಕುರಿ ಪ್ರತಾಪ್ ಕೂಡ ಶೋನಲ್ಲಿ ಇದ್ದಾರೆ. ಈ ಹಿಂದೆ ಬಿಗ್ಬಾಸ್ ಶೋನಲ್ಲಿ ಪ್ರಿಯಾಂಕಾ ಹಾಗೂ ಕುರಿ ಪ್ರತಾಪ್ ಜೋಡಿಯ ಕೆಮೆಸ್ಟ್ರಿ ವೀಕ್ಷಕರ ಮನಗೆದ್ದಿತ್ತು. ಇದೀಗ ಮತ್ತೊಮ್ಮೆ ನಗಿಸಲು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಅಚ್ಚರಿಯ ಚೇಂಜ್ ಓವರ್ ಎಂಬಂತೆ ಈ ಹಿಂದೆ ಮಜಾ ಟಾಕೀಸ್‌ನಲ್ಲಿದ್ದ ಇಂದ್ರಜಿತ್ ಲಂಕೇಶ್ ಅಲಂಕರಿಸುತ್ತಿದ್ದ ಸ್ಥಾನವನ್ನು ಹೊಸ ಸೀಸನ್‌ನಲ್ಲಿ ಯೋಗರಾಜ್ ಭಟ್ ಅವರು ತುಂಬಲಿದ್ದಾರೆ.
ಇದೆಲ್ಲದರ ನಡುವೆ ವರಲಕ್ಷ್ಮೀ ಅಲಿಯಾಸ್ ಕನ್ನಡದ ಅತ್ಯುತ್ತಮ ನಿರೂಪಕಿ, ಎಲ್ಲರ ಮನ ಮೆಚ್ಚಿನ ನಟಿ ಅಪರ್ಣಾ ಇಲ್ಲದಿರುವ ನೋವು ಕಾಡ್ತಿದೆ. ವರಲಕ್ಷ್ಮೀ ಇಲ್ಲದ ಮಜಾ ಟಾಕೀಸ್ ನೋಡೋದು ಕಷ್ಟ ಎಂದು ಫ್ಯಾನ್ಸ್ ತಮ್ಮ ನೋವು ತೋಡಿಕೊಂಡಿದ್ದಾರೆ. ಒನ್ ಆ್ಯಂಡ್ ಓನ್ಲಿ ವರಲಕ್ಷ್ಮೀ ಎಂದೇ ಅಪರ್ಣಾ ಪ್ರಸಿದ್ಧಿ ಪಡೆದಿದ್ದರು. ಜನರು ಅಪರ್ಣಾ ಅವರ ನಿರೂಪಣೆ, ಕನ್ನಡದ ಮೇಲಿನ ಪ್ರೀತಿ, ಮುತ್ತಿನಂತೆ ಕನ್ನಡ ಪದಗಳನ್ನು ಜೋಡಿಸುವ ಅವರ ಕಲೆಯನ್ನು ನೋಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಅಪರ್ಣಾ ಜೀವನದ ಕೆಲ ವಿಷ್ಯಗಳು ಅಭಿಮಾನಿಗಳಿಗೆ ತಿಳಿದಿತ್ತು. ಆದರೆ ಮಜಾ ಟಾಕೀಸ್, ಅಪರ್ಣಾ ಅವರನ್ನು ಭಿನ್ನವಾಗಿ ವೀಕ್ಷಕರಿಗೆ ತೋರಿಸಲು ಯಶಸ್ವಿಯಾಗಿತ್ತು. ಪ್ರತಿಯೊಂದು ಪಾತ್ರವನ್ನೂ ಅಚ್ಚುಕಟ್ಟಾಗಿ ಮಾಡ್ತಿದ್ದ ಅವರು, ಎಲ್ಲರನ್ನು ನಕ್ಕು ನಗಿಸುತ್ತಿದ್ದರು. ಆದ್ರೆ ಅಪರ್ಣಾ ನಮ್ಮ ಜತೆ ಈಗಿಲ್ಲ. ಅವರ ನೆನಪಿನಲ್ಲಿಯೇ ಮಜಾ ಟಾಕೀಸ್ ವೀಕ್ಷಣೆ ಮಾಡೋದು ಅಭಿಮಾನಿಗಳಿಗೆ ಅನಿವಾರ್ಯವಾಗಿದೆ.
2015ರಲ್ಲಿ ಶುರುವಾದ ಮಜಾ ಟಾಕೀಸ್, 10 ವರ್ಷ ಪೂರೈಸುವ ಸಂಭ್ರಮದಲ್ಲಿದೆ. ಸೃಜನ್ ಬೇರೆ ಶೋಗಳಲ್ಲಿ ನಿರತರಾಗಿದ್ದ ಕಾರಣ ಅವರು ಮಜಾ ಟಾಕೀಸ್ ಗೆ ಬ್ರೇಕ್ ನೀಡಿದ್ದರು. ಕೆಲವೇ ಕೆಲವು ಸೀಸನ್ ಮಾತ್ರ ಪ್ರಸಾರವಾಗಿದ್ರೂ ಜನರು ಮಜಾ ಟಾಕೀಸ್ ಮಜವನ್ನು ಮರೆತಿಲ್ಲ. ಈಗ್ಲೂ ಶೋ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ.