Viral Video: ಬೀದಿ ಬದಿಯ 5 ರೂ.ಗಳಿಂದ ಹಿಡಿದು 5000 ರೂ. ಮೌಲ್ಯದ ಇಡ್ಲಿ ಸವಿದ ಭೂಪ; ಕೊನೆಗೆ ಹೀಗಾ ಹೇಳೋದು!
ವ್ಯಕ್ತಿಯೊಬ್ಬರು ಬೀದಿ ಬದಿಯ ಅಂಗಡಿಯ 5 ರೂ. ಇಡ್ಲಿಯನ್ನು ಸೇವಿಸುವುದರಿಂದ ಹಿಡಿದು ಪ್ಯಾಲೇಸ್‍ನಲ್ಲಿ ಚಿನ್ನದ ಲೇಪನದ ಐಷಾರಾಮಿ 5000 ರೂ. ಬೆಲೆಯ ಇಡ್ಲಿಯನ್ನೂ ಸೇವಿಸಿ ಕೊನೆಗೆ ರಸ್ತೆಬದಿಯ ಇಡ್ಲಿಗೆ ರೇಟಿಂಗ್ ಕೊಟ್ಟಿದ್ದಾರೆ. ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಖಾದ್ಯದ ಬೆಲೆ ಬದಲಾಗುವಾಗ ಅದರ ಪರಿಮಳ ಮತ್ತು ರುಚಿ ಕೂಡ ಬದಲಾಗುತ್ತದೆ. ಇದನ್ನು ಪರೀಕ್ಷಿಸುವುದಕ್ಕಾಗಿ ವ್ಯಕ್ತಿಯೊಬ್ಬರು ಬೀದಿ ಬದಿಯ ಅಂಗಡಿಯ 5 ರೂ. ಇಡ್ಲಿಯನ್ನು ಸೇವಿಸುವುದರಿಂದ ಹಿಡಿದು ಪ್ಯಾಲೇಸ್‍ನಲ್ಲಿ ಸಿಗುವ ಚಿನ್ನದ ಲೇಪನದ ಐಷಾರಾಮಿ 5000 ರೂ ಬೆಲೆಯ ಇಡ್ಲಿಯನ್ನು ಸೇವಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಇನ್‌ಸ್ಟಾಗ್ರಾಂ ಬಳಕೆದಾರ ಕ್ಯಾಸ್ಸಿ ಪಿರೇರಾ ಅವರು ವಿಡಿಯೊವನ್ನು ಹಂಚಿಕೊಂಡಿದ್ದು, "ನಾನು ಮೊದಲ ಬಾರಿಗೆ ಚಿನ್ನ ತಿನ್ನುತ್ತಿದ್ದೇನೆ" ಎಂದು ಬರೆದಿದ್ದಾರೆ. ಈ ವೈರಲ್ ವಿಡಿಯೊದಲ್ಲಿ ಅವರು ಮೊದಲು ರಸ್ತೆಬದಿಯ ಅಂಗಡಿಗೆ ಭೇಟಿ ನೀಡಿ 5 ರೂಪಾಯಿಯ ಇಡ್ಲಿಯನ್ನು ತಿಂದಿದ್ದಾರೆ. ನಂತರ ಅವರು ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ, 50 ರೂಪಾಯಿ ನೀಡಿ ಇಡ್ಲಿ ಸವಿದಿದ್ದಾರೆ. ಇದಾದ ಬಳಿಕ ತಾಜ್ ಹೋಟೆಲ್‍ಗೆ ಭೇಟಿ ನೀಡಿ 500 ರೂಪಾಯಿ ಕೊಟ್ಟು ಇಡ್ಲಿಯನ್ನು ತಿಂದಿದ್ದಾರೆ. ಕೊನೆಯದಾಗಿ ಅವರು ಐಷಾರಾಮಿ ಹೋಟೆಲ್‍ಗೆ ಹೋಗಿ 5000 ರೂಪಾಯಿ ತೆತ್ತು ಇಡ್ಲಿಯನ್ನು ತಿಂದಿದ್ದಾರೆ.
ಈ ಇಡ್ಲಿಯನ್ನು 23 ಕ್ಯಾರೆಟ್ ತಿನ್ನಬಹುದಾದಂತಹ ಚಿನ್ನದ ಲೇಪಿತ ಕಾಗದದಿಂದ ತಯಾರಿಸಲಾಗಿದೆಯಂತೆ. ರಸ್ತೆ ಬದಿಯಿಂದ ಹಿಡಿದು ಐಷಾರಾಮಿ ಹೋಟೆಲ್‌ವರಗಿನ ವಿವಿಧ ಬೆಲೆಯ ಇಡ್ಲಿಗಳ ರುಚಿ ನೋಡಿ ಅವರು ರೇಟಿಂಗ್ ನೀಡಿದ್ದಾರೆ. ಇದರಲ್ಲಿ ಬೀದಿ ಬದಿಯ ಇಡ್ಲಿಗೆ ಹೆಚ್ಚಿನ ರೇಟಿಂಗ್ ಸಿಕ್ಕಿದೆ.
ಈ ವಿಡಿಯೊವನ್ನು ನೋಡಿ ಹೆಚ್ಚಿನವರು ಕಾಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿಯು, "ರೂ.5ರ ಇಡ್ಲಿ ನಾನು ಸೇವಿಸಿದ ಅತ್ಯುತ್ತಮ ಇಡ್ಲಿ" ಎಂದಿದ್ದಾರೆ. ಇನ್ನೊಬ್ಬರು 5000 ರೂಪಾಯಿ ವ್ಯರ್ಥವಾಗಿದೆ" ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೈಲಿನಲ್ಲಿ 'ಗಾಂಜಾ' ಸೇದಿ ಯುವಕನ ಪುಂಡಾಟ- ವಿಡಿಯೊ ಫುಲ್ ವೈರಲ್
ಮೂರನೆಯವರು, " ಇಡ್ಲಿ, ದೋಸೆ, ಉಪ್ಪಿಟ್ಟು ಮುಂತಾದವುಗಳು ಯಾವಾಗಲೂ ರಸ್ತೆಬದಿಯ ಹೋಟೆಲ್‍ಗಳಲ್ಲಿ ರುಚಿಕರವಾಗಿರುತ್ತದೆ ಮತ್ತು ದೊಡ್ಡ ಹೋಟೆಲ್‍ಗಳಲ್ಲಿ ಕೆಟ್ಟದಾಗಿರುತ್ತವೆೆ ಎಂದಿದ್ದಾರೆ. ನಾಲ್ಕನೆಯವರು, "ಇದು ಸೆವೆನ್ ಸ್ಟಾರ್ ಹೋಟೆಲ್ ಆಗಿದ್ದರೂ ಸಹ 5000 ರೂ.ಗೆ ಇಡ್ಲಿಯನ್ನು ಮಾರಾಟ ಮಾಡುವುದು ಸಂಪೂರ್ಣ ಅಪರಾಧವಾಗಿದೆ" ಎಂದಿದ್ದಾರೆ.